ಶೋಭಾ ದಿನೇಶ್, ಲೇಖಕರು ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿ

ಹಸಿರೆಲೆ ಗೊಬ್ಬರಗಳು ಮಣ್ಣಿನ ಭೌತಿಕ ರಚನೆ ಹಾಗೂ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ಭೂಮಿಯ ಮೇಲೆ ಹೇರಳವಾಗಿ ಸ್ವಾಭಾವಿಕವಾಗಿ ಬೆಳೆದಿರುವ ಅನೇಕ ಜಾತಿಯ ಹಸಿರು ಗಿಡಗಳನ್ನು ಹಸಿರೆಲೆ ಗೊಬ್ಬರವಾಗಿ ಬಳಸಬಹುದಾಗಿದೆ. ಈ ಸಾಲಿಗೆ ಲ್ಯಾಂಟನಾ (ಲಂಟಾನ)ಕೂಡ ಸೇರ್ಪಡೆಯಾಗುತ್ತದೆ. ಇದರ ವೈಜ್ಞಾನಿಕ ಹೆಸರು Lantana camera 

ಲ್ಯಾಂಟನಾ ಸಸ್ಯ : ಗ್ರಾಮೀಣ ಪ್ರದೇಶಗಳಲ್ಲಿ ಲ್ಯಾಂಟನ ಪೊದೆಗಳನ್ನು ‘ರೋಜುವಾಳಿ’ ‘ಹುಣ್ಣಿ ಗಿಡ’ ಎಂಬ ಹೆಸರಿನಿಂದ ಕರೆಯುತ್ತಾರೆ. ಅತ್ಯಂತ ವೇಗವಾಗಿ ಬೆಳೆಯುವ ಈ ಸಸ್ಯ ಹೊಲ, ಗದ್ಧೆ, ಕಾಡು, ಒಣಭೂಮಿ ಹೀಗೆ ಎಲ್ಲೆಂದರಲ್ಲಿ ಕೃಷಿ ಹಾಗೂ ಕೃಷಿಯೇತರ ಭೂಮಿಯನ್ನು ಆವರಿಸಿಕೊಂಡು ಪೊದೆಗಳ ರೂಪದಲ್ಲಿ ಬೆಳೆಯುತ್ತದೆ. ಈ ಗಿಡಗಳು ಭಾರಿ ಹರಿತವಾದ ಮುಳ್ಳುಗಳನ್ನು ಹೊಂದಿದ್ದು ಜೊತೆಗೆ ವಿಷಪೂರಿತವಾಗಿರುವುದರಿಂದ ಜಾನುವಾರುಗಳ ಸಹ ಆಹಾರವಾಗಿ ಸ್ವೀಕರಿಸುವುದಿಲ್ಲ. ಆದರೆ ಅಧ್ಯಯನಗಳ ಪ್ರಕಾರ ಲ್ಯಾಂಟನಾ ಗಿಡಗಳನ್ನು ಅತ್ಯಂತ ಪರಿಣಾಮ ಕಾರಿಯಾಗಿ ಹಸಿರೆಲೆಗೊಬ್ಬರವಾಗಿ ಬಳಸಿಕೊಳ್ಳಬಹುದು.

ಈ ಸಸ್ಯಗಳು ಅತಿ ಹೆಚ್ಚು ಪೋಷಕಾಂಶಗಳನ್ನು  ಹೊಂದಿರುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅತ್ಯಂತ ಸಹಕಾರಿ ಅಷ್ಠೇ ಅಲ್ಲದೇ ಏರೆಹುಳು ಗೊಬ್ಬರದ ತಯಾರಿಕೆಯಲ್ಲೂ ಕೂಡಾ ಲ್ಯಾಂಟನಾ ಸಸ್ಯಗಳನ್ನು ಕಚ್ಚಾವಸ್ತುವಾಗಿ ಇತರ ಕಳಿತ ಸಾವಯವ ಪಧಾರ್ಧಗಳ ಜೊತೆ ಬಳಸಬಹುದಾಗಿದೆ.

ಗೊಬ್ಬರದ ತಯಾರಿಕೆ: ಚೆನ್ನಾಗಿ ಬೆಳೆದ ಲಂಟಾನ ಪೊದೆಗಳನ್ನು ಸಣ್ಣದಾಗಿ ಕತ್ತರಿಸಿ ಹೊಲ, ಗದ್ದೆಗಳಲ್ಲಿ ಸಮನಾಗಿ ಹರಡಬೇಕು. ನಾಟಿ ಅಥವಾ ಬಿತ್ತನೆ ಮಾಡುವ ಹದಿನೈದು ದಿನಗಳಿಗೆ ಮುಂಚಿತವಾಗಿ ಉಳುಮೆಯ ಮೂಲಕ ಮಣ್ಣಿನಲ್ಲಿ ಮುಚ್ಚಬೇಕು. ಈ ರೀತಿ ಮುಚ್ಚಲ್ಪಟ್ಟ ಸಸ್ಯಗಳು ಮಣ್ಣಿನಲ್ಲಿ ಚೆನ್ನಾಗಿ ಕೊಳೆತು ಪೋಷಾಕಾಂಶಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಭೂಮಿಯ ಫಲವತ್ತತೆ ಹೆಚ್ಚುವುದಲ್ಲದೆ ಇಳುವರಿಯಲ್ಲೂ ಕೂಡ ಹೆಚ್ಚಳ ಕಂಡುಬಂದಿರುವುದು ಧೃಡಪಟ್ಟಿದೆ.

  1. ಎರೆಹುಳು ಗೊಬ್ಬರದ ತಯಾರಿಕೆಯಲ್ಲೂ ಸಹ ಲ್ಯಾಂಟನಾ ಸಸ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಹೂ ಬಿಡುವ ಮೊದಲೇ ಲ್ಯಾಂಟನಾ ಸಸ್ಯದ ಏಲೆ ಮತ್ತು ಕಾಂಡಗಳನ್ನು ಸಣ್ಣದಾಗಿ ಕತ್ತರಿಸಿ ಸೆಗಣಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಏರೆಹುಳು ಹಾಗೂ ಇತರೆ ಸಾವಯವ ಪಧಾರ್ಥಗಳ ಜೊತೆ 6-7 ವಾರಗಳ ವರೆಗೆ ಕಳಿಯಲು ಬಿಡಬೇಕು. ಆಗ ಕಡು ಕಂದು ಬಣ್ಣದ ವಾಸನೆಯಿಲ್ಲದ, ಉದುರು ಉದುರಾದ ಗೊಬ್ಬರ ಬಳಸಲು ಸಿದ್ಧವಾಗುತ್ತದೆ. ಲ್ಯಾಂಟನಾ ಸಸ್ಯದಿಂದ ತಯಾರಿಸಿದ ಗೊಬ್ಬರ ಕೊಟ್ಟಿಗೆ ಗೊಬ್ಬರಕ್ಕಿಂತ ಅತ್ಯಧಿಕ ಪೋಷಾಕಾಂಶಗಳನ್ನು ಹೊಂದಿರುತ್ತದೆ. ಇದರಲ್ಲಿ ಅಧಿಕ ಸಾರಜನಕ (25%) ರಂಜಕ (0.9%) ಹಾಗೂ ಪೊಟಾಷ್ (1.21%) ಮತ್ತು ಶೇ 0.68 ರಷ್ಟು ಕಬ್ಬಿಣಾಂಶ ಕಂಡು ಬರುತ್ತದೆ.

ಹಿಮಾಚಲ ಪ್ರದೇಶದ ಪಾಲಂಪೊರ ಕೃಷಿ ವಿಶ್ವವಿದ್ಯಾನಿಲಯವು ಜೋಳ ಮತ್ತು ಗೋಧಿ ಬೆಳೆಗಳಲ್ಲಿ ಲ್ಯಾಂಟನಾ ಹಸಿರು ಗೊಬ್ಬರದ ಪರಿಣಾಮದ ಕುರಿತು  ಕಾರಿಫ್ ಹಾಗೂ  ರಾಬಿ ಬೆಳೆಗಳಲ್ಲಿ ಸಂಶೋಧನೆ ಕೈಗೊಂಡಿತ್ತು. ಕತ್ತರಿಸಿದ ಲ್ಯಾಂಟನಾ ಹಸಿರೆಲೆಗಳ ಜೊತೆ ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ನೀಡಿದ ಪ್ರದೇಶಗಳಲ್ಲಿ ರಾಗಿ ಮತ್ತು ಜೋಳ ಇಳುವರಿಯಲ್ಲಿ ಉತ್ತಮ ಫಲಿತಾಂಶ ಕಂಡುಬಂದಿರುವುದನ್ನು ದಾಖಲಿಸಲಾಗಿದೆ.

2.ಹೆಕ್ಟೀರಿಗೆ 10 ಟನ್ ಲ್ಯಾಂಟನಾ ಸಸ್ಯದ ಗೊಬ್ಬರವನ್ನು ಉಪಯೋಗಿಸುವುದರಿಂದ ಶೇ. 25-50 ರಷ್ಟು ಸಾರಜನಕ ಗೊಬ್ಬರದ ಬಳಕೆಯನ್ನು ಕಡಿಮೆಗೊಳಿಸಬಹುದು. ಅಲ್ಲದೇ ಶೇ 5-10 ರಷ್ಟು ಇಳುವರಿಯಲ್ಲೂ ಹೆಚ್ಚಳ ಕಂಡು ಬರುತ್ತದೆ.

  1. ಲ್ಯಾಂಟನಾ ಸಸ್ಯದ ಗೊಬ್ಬರ ಮಣ್ಣಿಗೆ ಸಾವಯವ ಪದಾರ್ಧಗಳನ್ನು ಒದಗಿಸುವುದಲ್ಲದೆ, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.
  2. ಸಸ್ಯಗಳಿಗೆ ಯಥೇಚ್ಚವಾಗಿ ಸಾರಜನಕ, ರಂಜಕ, ಪೊಟಾಷ್, ಕ್ಯಾಲ್ಸಿಯಂ ಹಾಗೂ ಮೇಗ್ನಿಷಿಯಂ ದೊರೆಯುತ್ತದೆ.
  3. ಇದು ಸುಲಭವಾಗಿ ಎಲ್ಲ ಕಡೆ ಬೆಳೆಯುವುದರಿಂದ ಇತರ ಹಸಿರೆಲೆ ಗೊಬ್ಬರದ ಸಸ್ಯಗಳಂತೆ ಸಾಗುವಳಿ ಮಾಡಬೇಕಾದ ಅಗತ್ಯವಿಲ್ಲ.
  4. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಅನುಪಯುಕ್ತ ಹಾಗೂ ಅಪಾಯಾಕಾರಿ ಕಳೆಯನ್ನು ಗೊಬ್ಬರವಾಗಿ ಬಳಸುವುದರಿಂದ ಪರಿಸರದ ಮೇಲುಂಟಾಗುವ ಹಾನಿಯನ್ನು ತಡೆಗಟ್ಟಬಹುದಾಗಿದೆ.
  5. ಕೀಟನಾಶಕವಾಗಿ ಲ್ಯಾಂಟನಾ ಸಸ್ಯದ ಬಳಕೆ : FAOUN (Food and Agriculture Organization of the United Nations) ಸಂಸ್ಥೆಯ ವರದಿಯ ಪ್ರಕಾರ ಲ್ಯಾಂಟನಾ ಸಸ್ಯದ ಎಲೆಗಳನ್ನು ಕೀಟನಾಶಕವಾಗಿಯೂ ಬಳಸಿಕೊಳ್ಳ ಬಹುದಾಗಿದೆ. ಲ್ಯಾಂಟನಾ ಸಸ್ಯದ ಎಲೆಯ ರಸದೊಂದಿಗೆ ಪಪ್ಪಾಯ ಎಲೆಗಳ ರಸವನ್ನು ಮಿಶ್ರಣ ಮಾಡಿ ಸೋಪಿನ ಪೌಡರ್ ನೊಂದಿಗೆ ಬೆರೆಸಿ ಟೋಮೆಟೊ ಬೆಳೆಗಳಿಗೆ ಸಿಂಪಡಿಸುವುದರಿಂದ ಬ್ಯಾಕ್ಟಿರಿಯ ಹಾಗೂ ವೈರಸ್ ಗಳಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಬಹುದು. ಲ್ಯಾಂಟನಾ ಎಲೆಗಳಿಂದ ತೆಗೆದ ಎಣ್ಣೆಯಿಂದ ಬಿಟಲ್ಸ್ ಹಾಗೂ ಟಮರಿಡ್ಸ್ ಗಳನ್ನು ನಿವಾರಿಸಬಹುದು

2 COMMENTS

    • ಧನ್ಯವಾದ, ಈ ಮಾಹಿತಿಗಳನ್ನು ನಿಮ್ಮ ಕೃಷಿಕ ಬಂಧುಮಿತ್ರರಿಗೂ ಶೇರ್ ಮಾಡಲು ಕೋರಿಕೆ. ಸುಸ್ಥಿರ ಕೃಷಿಮಾಹಿತಿಗಳನ್ನು ಎಲ್ಲೆಡೆ ಹಂಚೋಣ…

LEAVE A REPLY

Please enter your comment!
Please enter your name here