ಭೂಮಿಗೆ ಚುಚ್ಚುಮದ್ದು ಭಾರಿ ಇಳುವರಿ ಸದ್ದು

1
ಡಾ.ನಾಗರಾಜ್ ಅವರು ತಮ್ಮ ಗೆಳೆಯ ವಿಜಯಕುಮಾರ್ ಅವರೊಂದಿಗೆ ಟೊಮ್ಯಾಟೋ ಬೆಳೆ ಬಗ್ಗೆ ಚರ್ಚಿಸುತ್ತಿರುವುದು
ಲೇಖಕರು: ಡಾ. ನಾಗರಾಜ್, ಕೃಷಿಕರು, ಕೃಷಿತಜ್ಞರು, ಕೃಷಿಯಂತ್ರ ವಿನ್ಯಾಸಗಾರರು, ತಯಾರಕರು

ಕೃಷಿಗೆ ಸೂಕ್ಷ್ಮವಾದ ಬೆಳೆಗಳ ಸಾಲಿನಲ್ಲಿ ಟೊಮ್ಯಾಟೋ ಸೇರಿದೆ. ಸಾಮಾನ್ಯವಾಗಿ ಟೊಮ್ಯಾಟೋ ಸಸಿ ಬೆಳೆಯಲು ಆರಂಭಿಸಿದಾಗ ಸಾಲು ಕಂಭ, ಅಡ್ಡ ಕಡ್ಡಿ ಇಟ್ಟು ನೇತು ಹಾಕುತ್ತಾರೆ. ಇಲ್ಲದಿದ್ದರೆ ಅದು ಕೆಳಗೆ ಬೀಳುತ್ತದೆ. ಈ ಪ್ರಕ್ರಿಯೆ ಸಲುವಾಗಿ ತುಂಬ ಖರ್ಚು ತಗುಲುತ್ತದೆ. ಪ್ರತಿ ಹೊಸ ಬೆಳೆಗೂ ತುಂಬ ಖರ್ಚು-ವೆಚ್ಚ ಬರುತ್ತದೆ.

ಟೊಮ್ಯೊಟೋ ಬೆಳೆಯುವ ಆರಂಭದಿಂದ ಕಟಾವಿಗೆ ಬರುವ ತನಕ ಹಣ್ಣಿಮ ಹುಳು ಸೇರಿದಂತೆ ವಿವಿಧ ಕೀಟಗಳು, ರೋಗಗಳು ಬಾಧಿಸುತ್ತವೆ. ಇವುಗಳನ್ನು ತಡೆಯಲು ದುಬಾರಿ ಬೆಲೆಯ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಇದರ ಜೊತೆಗೆ ಗೊಬ್ಬರಕ್ಕಾಗಿ ಖರ್ಚು ಮಾಡುವ ವೆಚ್ಚವೂ ಅಪಾರ.  ಇವೆಲ್ಲ ಕಳೆದು  ಬೆಳೆಗಾರನಿಗೆ ಸಿಗುವ ಹಣ ಅತ್ಯಲ್ಪ ಕೆಲವೊಮ್ಮೆ ಪೂರ್ಣ ನಷ್ಟ !!

ಈ ದೃಷ್ಟಿಯಿಂದ ಖರ್ಚು ಕಡಿಮೆಯಾಗಬೇಕು, ಟೊಮ್ಯಾಟೋ ಬೆಳೆಗಾರರಿಗೆ ದೊರೆಯುವ ಲಾಭ ಹೆಚ್ಚಾಗಬೇಕು ಎಂದು ನಾನು ಯೋಚನೆ ಮಾಡಿದೆ. ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಅಂತಿಮವಾಗಿ ಭೂಮಿಗೆ ಚುಚ್ಚುಮದ್ದು, ಬುಟ್ಟಿ ಪದ್ಧತಿ ಮೂಲಕ ಅತ್ಯುತ್ತಮ ಇಳುವರಿ ಬರುವುದನ್ನು ಕಂಡು ಕೊಂಡಿದ್ದೇನೆ. ಈ ಪದ್ಧತಿಯಲ್ಲಿ ಪದೇಪದೇ ಟೊಮ್ಯಾಟೋ ಬೆಳೆದು ಯಶಸ್ವಿಯಾದ ನಂತರ ನನ್ನ ರೈತ ಬಾಂಧವರಿಗೂ ಇದನ್ನು ತಿಳಿಸುತ್ತಿದ್ದೇನೆ. ಏಕೆಂದರೆ ಒಂದು ಹೊಸ ಪದ್ಧತಿ ಯಶಸ್ವಿಯಾದ ನಂತರವೇ ತಿಳಿಸುವುದು ಸೂಕ್ತ !

ಬುಟ್ಟಿ ಪದ್ಧತಿ

ಬುಟ್ಟಿ ಪದ್ದತಿ

ಕಡಿಮೆ ಬೆಲೆಯಲ್ಲಿ ದೊರೆಯುವ ಕಡ್ಡಿಗಳನ್ನು ಬಳಸಿ ನೆಲಮಟ್ಟದಿಂದ ಸುಮಾರು ನಾಲ್ಕು ಅಡಿ ಇರುವ ಕಬ್ಬಿಣದ ಬುಟ್ಟಿಗಳನ್ನು ಸ್ವತಃ ನಾನೇ ರೂಪಿಸಿದ್ದೇನೆ. ಇದು ಒಂದು ಬಾರಿಯ ಖರ್ಚು. ಇವುಗಳಿಗೆ ಬಣ್ಣ ಬಳಿದರೆ ತುಕ್ಕು ಹಿಡಿಯದೇ ಸುಮಾರು ವರ್ಷ ಬಾಳಿಕೆ ಬರುತ್ತದೆ. ಇದರಿಂದ ಬೆಳೆಗಾರನಿಗೆ ಆಗುವ ಉಳಿತಾಯ ಅಪಾರ !! ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ತುಂಬ ಬೇಡಿಕೆ ಇದ್ದರೆ ಒಂದೇ ಬೆಳೆಯಲ್ಲಿ ಇದಕ್ಕೆ ಮಾಡಿದ ಖರ್ಚು ಹಿಂದಿರುಗುತ್ತದೆ.

ಸಸಿಗಳ ಬೆಳವಣಿಗೆ ಹಂತದಲ್ಲಿ ಬುಟ್ಟಿಗಳನ್ನು ಇರಿಸುತ್ತೇನೆ. ಇದರಿಂದ ಅವು ವಾಲುವುದಿಲ್ಲ. ಅವುಗಳ ಚಾಚುಗಳು ಕೆಳಗೆ ಜೋತು ಬೀಳುವುದಿಲ್ಲ. ಹಣ್ಣುಗಳ ಗೊಂಚಲು ಎಷ್ಟೇ ಭಾರವಾದರೂ ಟೊಮ್ಯಾಟೋ ಗಿಡ ಕೆಳಗೆ ಜೋಲುವುದಿಲ್ಲ. ಸಸಿಗಳ ನಡುವೆ ಅಂತರ ಕೊಟ್ಟಿರುವುದರಿಂದ ಅವುಗಳು ಪರಸ್ಪರ ಪೈಪೋಟಿ ಇಲ್ಲದೇ ಬೆಳವಣಿಗೆಯಾಗುತ್ತವೆ.

ಆರೋಗ್ಯದಿಂದ ನಳನಳಿಸುತ್ತಿರುವ ಟೊಮ್ಯಾಟೋ ಸಸಿಗಳು

ಭೂಮಿಗೆ ಚುಚ್ಚುದ್ದು

ಟೊಮ್ಯಾಟೋಗೆ ಪೋಷಕಾಂಶ ನೀಡಲು ಬೇರೆಬೇರೆ ಪದ್ದತಿಗಳನ್ನು ಅನುಸರಿಲಾಗುತ್ತದೆ. ಆದರೆ ನಾನು ಚುಚ್ಚುಮದ್ದ ಪದ್ದತಿ ಅನುಸರಿಸುತ್ತಿದ್ದೇನೆ. ಸಸಿಯ ಬುಡದಿಂದ ಮುಕ್ಕಾಲು ಅಡಿ ಅಂತರದಲ್ಲಿ ಮೂರು ಇಂಚು ಸುತ್ತಳತೆಯ ರಾಡ್ ಬಳಸಿ ಗುಳಿ ಮಾಡಿದ್ದೇನೆ. ಇದರ ಮೂಲಕ ನಿಯಮಿತವಾಗಿ ಜೈವಿಕ ದ್ರವ ಗೊಬ್ಬರ ಪೂರೈಕೆ, ಜೀವಾಮೃತ ಪೂರೈಕೆ ಮಾಡುತ್ತೇನೆ. ಇದರಿಂದ ಪೋಷಕಾಂಶ ವ್ಯರ್ಥವಾಗದೇ ನೇರ ಗಿಡದ ಬೇರುಗಳಿಗೆ ದೊರೆಯುತ್ತದೆ.

ನೀರು

ಬುಟ್ಟಿ ಮತ್ತು ಭೂಮಿಗೆ ಚುಚ್ಚುಮದ್ದು ಪದ್ಧತಿ ಮೂಲಕ ಟೊಮ್ಯಾಟೋ ಬೆಳೆದಾಗ ಅದಕ್ಕೆ ಪೂರೈಸುವ ನೀರಿನ ಪ್ರಮಾಣವೂ ಅತ್ತಲ್ಪ. ನಾನು ಬೇರೆಬೇರೆ ಋತುಮಾನಗಳಲ್ಲಿ ಟೊಮ್ಯಾಟೋ ಬೆಳೆದಿದ್ದೇನೆ. ಈಗ ಮಳೆಗಾಲದಲ್ಲಿಯೂ ಬೆಳೆಯುತ್ತಿದ್ದೇನೆ. ಈ ಅವಧಿಯಲ್ಲಿ ಮಳೆನೀರೇ ಟೊಮ್ಯಾಟೋ ಸಸಿಗಳಿಗೆ ಆಸರೆಯಾಗಿದೆ. ನೇರ ಮಳೆನೀರು ಬಳಸಿ ಬೆಳೆದಾಗ ಟೊಮ್ಯಟೋ ಇಳುವರಿ ದುಪ್ಪಟ್ಟಾಗುತ್ತದೆ. ಇದಕ್ಕೆ ಕಾರಣ ಮಳೆನೀರಿನಲ್ಲಿರುವ ಪೋಷಕಾಂಶ

ಜೀವಿತಾವಧಿ ಹೆಚ್ಚು

ಚುಚ್ಚುಮದ್ದು, ಬುಟ್ಟಿ ಪದ್ಧತಿಯಲ್ಲಿ ಬೆಳೆದಾಗ ಹಣ್ಣುಗಳ ಗಾತ್ರ ಹೆಚ್ಚು. ಸಿಮ್ಲಾ ಆ್ಯಪಲ್ ಮಾದರಿಯಲ್ಲಿ ಕಾಣುತ್ತವೆ. ಇದಲ್ಲದೇ ಅವುಗಳು ಬೇಗ ಕೊಳೆಯುವುದಿಲ್ಲ. ಫ್ರಿಜ್ ನಲ್ಲಿ ಇಡದೇ ಇದ್ದರೂ ಹಣ್ಣುಗಳ ಬಾಳಿಕೆ ಅವಧಿ ಹೆಚ್ಚಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಜೈವಿಕ ದ್ರವ ಗೊಬ್ಬರ ಬಳಸಿರುವುದೇ ಆಗಿದೆ ಎಂದು ನನ್ನ ಅನುಭವ.

ಹೆಚ್ಚಿನ ಮಾಹಿತಿಗೆ ಆಸಕ್ತರು ನನ್ನನ್ನು ಸಂಪರ್ಕಿಸಬಹುದು, ಫೀಲ್ಡಿಗೂ ಬಂದು ಪ್ರಾತ್ಯಕ್ಷಿಕೆ ನೋಡಬಹುದು.

ವಿಳಾಸ: ಡಾ. ಎನ್. ನಾಗರಾಜ್, ಮಾರುತಿ ಉದ್ಯೋಗ್ ಲಿಮಿಟೆಡ್, ಕೆರೆಕೋಡಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ 562 123

ಮೊಬೈಲ್:  8618693986

1 COMMENT

LEAVE A REPLY

Please enter your comment!
Please enter your name here