ಜಾನುವಾರು ಲಂಪಿರೋಗ ಲಕ್ಷಣ ಮತ್ತು ಚಿಕಿತ್ಸೆ

0
ಲೇಖಕರು: ಡಾ. ನಾಗರಾಜ ಪಾವಗಡ, ಪಶು ವೈದ್ಯಕೀಯ ಹಿರಿಯ ತಜ್ಞರು

(ಅಗ್ರಿಕಲ್ಚರ್ ಇಂಡಿಯಾ) ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳು ಸಂಕಷ್ಟವನ್ನು ಉಂಟುಮಾಡುವುದಲ್ಲದೇ ಹಲವು ಸಂದರ್ಭಗಳಲ್ಲಿ ಮರಣವನ್ನು ತಂದೊಡ್ಡಬಹುದು. ಉತ್ಪಾದನೆ ಕುಂಠಿತಗೊಳ್ಳುವ ಕಾರಣ ಪಶುಪಾಲಕರು ಆರ್ಥಿಕ ಸಂಕಷ್ಟಕ್ಕೂ ಗುರಿಯಾಗಬಹುದು.

ಇತ್ತಿಚಿನ ದಶಕಗಳಲ್ಲಿ ” ಕಾಲುಬಾಯಿ ಜ್ವರ” ಹೆಚ್ಚು ಪ್ರಚಲಿತವಾಗಿದ್ದು, ಇದರ ತೀವ್ರತೆ ಹಾಗೂ ಉಂಟಾಗುವ ಆರ್ಥಿಕ ನಷ್ಟ ದ ಕಾರಣ ಇದನ್ನು ಶತಮಾನದ ಮಹಾಮಾರಿ ಎಂದೇ ಬಣ್ಣಿಸಿರುತ್ತಾರೆ. ಹೀಗಾಗಿ ಪಶುಪಾಲಕರು ಸಾಂಕ್ರಾಮಿಕ ರೋಗಳು ಕಾಣಿಸಿಕೊಂಡಗಲೆಲ್ಲಾ ಹೆದರಿ ಕಂಗಾಲಾಗವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ.

ಲಂಪಿರೋಗ ಅಥವಾ ಚರ್ಮ ಗಂಟು ರೋಗ

ಇದೇ ರೀತಿಯ ಸಾಂಕ್ರಾಮಿಕ ರೋಗಗಳ ಸಾಲಿಗೆ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ರೋಗವೊಂದು ದನಕರುಗಳ ಪಾಲಿಗೆ ಸಮಸ್ಯೆ ಯಾಗಿ ಕಂಡುಬಂದಿದೆ, ಇದನ್ನೇ ಲಂಪಿರೋಗ ಅಥವಾ ಚರ್ಮ ಗಂಟು ರೋಗವೆಂದು ಕರೆಯಲಾಗಿದೆ.

ಆಫ್ರಿಕನ್ ದೇಶಗಳಲ್ಲಿ ಸಾಮಾನ್ಯವಾದ ಈ ರೋಗವು, 2018 ರಲ್ಲಿ ಪ್ರಪ್ರಥಮವಾಗಿ ದಕ್ಷಿಣ ಭಾರತದ ಕೆಲವೊಂದು ಕಡೆ ಅಲ್ಲಲ್ಲಿ ಕಾಣಿಸಿಕೊಂಡಿತು. ಈ ರೋಗದ ಬಗ್ಗೆ ಸಹಜವಾಗಿ ಹೆಚ್ಚಿನ ಮಾಹಿತಿ ಇರದ ಕಾರಣ ರೋಗವು ಹೆಚ್ಚು ಪ್ರಚಾರ ಪಡೆಯಲಿಲ್ಲ. 2020ರಲ್ಲಿ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮತ್ತೆ ರೋಗ ಲಕ್ಷಣಗಳು ಕಂಡುಬಂದಾಗ ತೀವ್ರ ಆತಂಕಕ್ಕೆ ಕಾರಣವಾಯಿತು.

ವೈರಾಣುಗಳಿಂದ ಉಂಟಾಗುವ ಈ ರೋಗವು ದನಗಳಲ್ಲಿ ತೀವ್ರ ಸ್ವರೂಪದ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ಎಮ್ಮೆಗಳಲ್ಲಿ ಈ ರೋಗ ಅತಿವಿರಳ. ಕ್ಯಾಪ್ರಿ ಪಾಕ್ಸ್ ಎಂಬ ಗುಂಪಿನ ವೈರಾಣು ಈ ರೋಗಕ್ಕೆ ಕಾರಣ. ರೋಗವು ಹರಡಲು ಸೊಳ್ಳೆ ಹಾಗೂ ಜಾನುವಾರುಗಳ ಮೈಮೇಲೆ ಇರುವ ಉಣ್ಣೆಗಳ ಕಡಿತವೇ ಪ್ರಮುಖ ಕಾರಣ . ಇವುಗಳು ರೋಗ ವಾಹಕಗಳಾಗಿ ವರ್ತಿಸುವ ಮೂಲಕ, ರೋಗಗ್ರಸ್ತ ರಾಸುವಿನಿಂದ ಆರೋಗ್ಯವಂತ ಪ್ರಾಣಿಯಲ್ಲಿ ರೋಗವನ್ನು ಉಂಟುಮಾಡುತ್ತದೆ.

ಜಾನುವಾರುಗಳ ನೇರ ಸಂಪರ್ಕದ ಮೂಲಕ ರೋಗ ಹರಡುವ ಸಾಧ್ಯತೆ ವಿರಳ. ಈ ರೋಗವು ಎಲ್ಲಾ ಮಯೋಮಾನದ ರಾಸುಗಳಲ್ಲಿ ಕಂಡುಬರುವುದಾದರೂ, ಮಿಶ್ರ ತಳಿ, ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವ ತಳಿಗಳು, ಹಾಲು ಹಿಂಡುವ ರಾಸುಗಳು, ಕೃಶವಾದ ರಾಸುಗಳಲ್ಲಿ ಇದರ ತೀವ್ರತೆ ಹೆಚ್ಚು.

ರೋಗದ ಪರಿಣಾಮ :
ರೋಗದ ಪರಿಣಾಮ ಮರಣದ ಸಂಭವ ಕಡಿಮೆ ಪ್ರಮಾಣದಲ್ಲಿ ಇದ್ದರೂ ಉತ್ಪಾದನೆ ಕುಂಠಿತಗೊಳ್ಳುವಿಕೆ, ಕೆಚ್ಚಲು ಬಾವು, ಬರಡುತನ , ಇವು ಅತಿ ಹೆಚ್ಚಿನ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಒಮ್ಮೆ ರೋಗಾಣು ಆರೋಗ್ಯವಂತ ರಾಸುವಿನ ದೇಹವನ್ನು ಸೇರಿದ ನಂತರ ರೋಗ ಲಕ್ಷಣಗಳು ಗೋಚರಿಸಲು 1-2 ವಾರಗಳು ಬೇಕಾಗಬಹುದು.

ರೋಗ ಲಕ್ಷಣಗಳು :
ಒಮ್ಮೆ ರೋಗ ಉಂಟಾದಲ್ಲಿ, ಸಹಜವಾಗಿ ಅತಿ ಹೆಚ್ಚಿನ ಜ್ವರ (105-106 ಡಿಗ್ರಿ ಫ್ಯಾರನ್ ಹೀಟ್) ಕಾಣಿಸಿಕೊಂಡು ರಾಸು ಬಳಲುತ್ತದೆ. ಕಣ್ಣಿನ ಸೊಂಕು, ಕಣ್ಣುಗಳಿಂದ ನೀರು ಸೋರುವಿಕೆ, ಮೂಗಿನಿಂದ ದ್ರವ ಸೋರುವಿಕೆ, ಹೊಳ್ಳೆಗಳ ಉರಿಊತ ಉಂಟಾಗುತ್ತದೆ.

ಗಂಟುಗಳು
ಜೀರ್ಣಾಂಗ ವ್ಯೂಹದಲ್ಲಿ ಸೊಂಕು ಉಂಟಾಗುವ ಕಾರಣ ಉರಿಊತ ಉಂಟಾಗುತ್ತದೆ. ಇದರ ಪರಿಣಾಮವಾಗಿ ಆಹಾರ ಸೇವನೆ ಕಡಿಮೆಯಾಗುತ್ತದೆ. ಶ್ವಾಸಕಾಂಗ ವ್ಯೂಹದ ಸೊಂಕು ಸಹ ಕಾಣಿಸಿಕೊಳ್ಳಬಹುದು. ರೋಗದ ತೀವ್ರತೆ ಹೆಚ್ಚಾದಂತೆ, ಮೈಮೇಲೆ ಎಲ್ಲಾ ಸ್ಥಳಗಳಲ್ಲಿ ಬೊಬ್ಬೆ ಯು ರೂಪದಲ್ಲಿ ಗಂಟುಗಳು ಕಾಣಿಸಿಕೊಂಡು ತೀವ್ರ ನೋವುಂಟು ಮಾಡುತ್ತದೆ. ಭುಜ ಹಾಗೂ ಇನ್ನಿತರ ಭಾಗದ ಗ್ರಂಥಿಗಳಲ್ಲಿ ಊತ ಉಂಟಾಗುತ್ತದೆ.

ಹುಳುಗಳು

ಸಾಮಾನ್ಯವಾಗಿ ಚಿಕ್ಕ ಚಿಕ್ಕ ಗಂಟುಗಳು ತಾನಾಗಿಯೇ ಮಾಯವಾಗುತ್ತದೆ. ಆದರೆ ಮೈಮೇಲಿನ ದೊಡ್ಡ ದೊಡ್ಡ ಪ್ರಮಾಣದ ಗಂಟುಗಳಲ್ಲಿ ಬೊಕ್ಕೆಗಳು ಕಾಣಿಸಿಕೊಂಡು , ಅವು ವ್ರಣವಾಗಬಹುದು. ಇದರಿಂದ ಒಸರುವ ದ್ರವವು ನೊಣಗಳನ್ನು ಆಕರ್ಷಿಸುವ ಕಾರಣ, ನೊಣಗಳು ಮೊಟ್ಟೆ ಇಟ್ಟು ನಂತರ ಹುಳು ಉಂಟಾಗಿ, ಗಾಯದ ಪ್ರಮಾಣ ಹೆಚ್ಚಾಗುತ್ತದೆ.

ಗಾಯದ ಕಲೆಗಳು

ಒಂದೊಮ್ಮೆ ಗಾಯ ವಾಸಿಯಾದರೂ , ಅದರ ಪರಿಣಾಮ ಹಲವಾರು ತಿಂಗಳುಗಳ ವರೆಗೆ ಗಾಯದ ಕಲೆಗಳು ಉಳಿದುಕೊಳ್ಳುತ್ತದೆ. ಕುತ್ತಿಗೆಯ ಕೆಳಭಾಗ, ಗೊಂದೋಗಲು, ಹೊಟ್ಟೆಯ ಕೆಳಭಾಗ, ಈ ಜಾಗಗಳಲ್ಲಿ ನೀರು ಬಾವು ಸಹ ಕಾಣಿಸಿಕೊಳ್ಳಬಹುದು. ಮೂಗಿನ ಮೇಲೆ, ಕಣ್ಣಿನ ರೆಪ್ಪೆಯ ಸುತ್ತ, ಕೆಚ್ಚಲು, ಮೊಲೆಯ ಮೇಲೆ ಹುಣ್ಣು ಉಂಟಾಗಬಹುದು. ಕೆಲವೊಮ್ಮೆ ಗರ್ಭಧರಿಸಿದ ರಾಸುಗಳು ಕಂದು ಹಾಕಿಕೊಳ್ಳಬಹುದು. ರೋಗದ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ಇದರ ಪರಿಣಾಮವಾಗಿ ಬ್ಯಾಕ್ಟೀರಿಯಾ ಸೊಂಕು ಸಹ ಉಂಟಾಗಲೂಬಹುದು. ಗಂಟಲು ಬೇನೆ ಸೋಂಕು ತಗುಲಿದಲ್ಲಿ ಮರಣದ ಸಂಭವವೂ ಉಂಟು.

ರೋಗ ಪತ್ತೆ ಹಚ್ಚುವ ಕ್ರಮಗಳು:
ರೊಗ ಲಕ್ಷಣಗಳ ಆಧಾರದ ಮೇರೆಗೆ ಪತ್ತೆ ಹಚ್ಚುವುದು. ರೋಗ ಪೀಡಿತ ಜಾನುವಾರುವಿನಿಂದ ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗ ಶಾಲೆಯಲ್ಲಿ ತಪಾಸಣೆಗೆ ಒಳಪಡಿಸುವ ಮೂಲಕ ರೋಗವನ್ನು ದೃಢೀಕರಣ ಮಾಡುವುದು

ಚಿಕಿತ್ಸೆ :

ಇದು ವೈರಾಣು ವಿನಿಂದ ಉಂಟಾಗುವ ರೋಗವಾದ ಕಾರಣ, ನಿರ್ದಿಷ್ಟ ರೀತಿಯ ಚಿಕಿತ್ಸೆ ಇಲ್ಲ. ಆದರೂ ಸಹ ರೋಗ ಲಕ್ಷಣಗಳನ್ನು ಆಧರಿಸಿ ಸಂಬಂಧಿಸಿದ ಚಿಕಿತ್ಸೆ ನೀಡುವ ಮೂಲಕ ರೋಗವನ್ನು ಗುಣಪಡಿಸುವ ಸಾಧ್ಯತೆ ಇದೆ.
ಬ್ಯಾಕ್ಟೀರಿಯಾ ಸೊಂಕು ತಡೆಗಟ್ಟಲು ಆಂಟಿಬಯೋಟಿಕ್ ಇಂಜೆಕ್ಷನ್ , ಜ್ವರದ ತಾಪ ಕಡಿಮೆ ಮಾಡಲು ಹಾಗೂ ನೋವು ನಿವಾರಣೆಗೆ ಜ್ವರ ಹಾಗೂ ನೋವು ನಿವಾರಕ ಇಂಜೆಕ್ಷನ್ ನೀಡಬೇಕು. ಗಂಟುಗಳ ತೀವ್ರತೆ ಹಾಗೂ ಉರಿಯೂತ ಕಡಿಮೆ ಮಾಡಲು ಉರಿಯೂತ ನಿವಾರಕ ಇಂಜೆಕ್ಷನ್ ನೀಡಬೇಕು. ನೀರೂತ ತಹಬಂದಿಗೆ ತರಲು ನೀರೂತ ನಿವಾರಕ ಇಂಜೆಕ್ಷನ್ ನೀಡಬೇಕು ದೇಹದ ರೋಗನಿರೋಧಕ ಶಕ್ತಿ ವೃದ್ಧಿಸಲು ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಹಾಗೂ ಇ ಇಂಜೆಕ್ಷನ್ ನೀಡಬೇಕು.

ದ್ರವರೂಪದ ಸೆಲೈನ್

ನೀರು ಸೇವನೆಯಿಂದ ಉಂಟಾದ ದೇಹದ ನೀರಿನ ಕೊರತೆ ನಿವಾರಣೆಗೆ ದ್ರವರೂಪದ ಸೆಲೈನ್ ಹಾಕಬೇಕು. ಮೈಮೇಲೆ ಉಂಟಾದ ಗಾಯಗಳನ್ನು ಗುಣಪಡಿಸಲು, ಸಮರ್ಥವಾಗಿ ಗಾಯದ ನಿರ್ವಹಣೆ ಕೈಗೊಳ್ಳಬೇಕು. ಗಾಯವನ್ನು ಪೊಟ್ಯಾಷಿಯಂ ಪರ್ಮಾಂಗನೇಟ್ ದ್ರಾವಣದಲ್ಲಿ ಶುಚಿಗೊಳಿಸಬೇಕು. ನಂಜು ನಿವಾರಕ ಆಯಿಂಟ್ಮೆಂಟ್ ಸವರಬೇಕು. ಹುಳು ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕಾಗಿ ಗಾಯಕ್ಕೆ ಬೇವಿನ ಎಣ್ಣೆ ಹಚ್ಚಬಹುದು. ಮೈಮೇಲೆ ಉಂಟಾದ ಗುಳ್ಳೆಗಳನ್ನು ನಿಯಂತ್ರಿಸಲು, ಬೇವಿನ ಎಲೆಯ ರಸ, ಅರಿಶಿನ ಪುಡಿ, ಬೆಳ್ಳುಳ್ಳಿ, ತುಳಸಿ ರಸ, ಇವುಗಳ ಮಿಶ್ರಣವನ್ನು ಪ್ರತಿದಿನವೂ ಮೈಮೇಲೆ ಸವರಬೇಕು. ರೋಗ ಪೀಡಿತ ಜಾನುವಾರುವನ್ನು ಪ್ರತ್ಯೇಕವಾಗಿ ಇರಿಸಿ ಆರೈಕೆ ಮಾಡಬೇಕು.

ರೋಗ ನಿಯಂತ್ರಣಾ ಕ್ರಮಗಳು :
ರೋಗ ನಿಯಂತ್ರಣ ದೃಷ್ಟಿಯಿಂದ ಸೊಳ್ಳೆ ಹಾಗೂ ಉಣ್ಣೆ ಗಳ ನಿಯಂತ್ರಣ ಕೈಗೊಳ್ಳಬೇಕು. ಕೊಟ್ಟಿಗೆಯನ್ನು ಶುಚಿಯಾಗಿರಿಸಬೇಕು. ರಾಸುಗಳಿಗೆ ಪಶುವೈದ್ಯರ ಸಲಹೆಯ ಮೇರೆಗೆ ಹೊರ ಪರೋಪಜೀವಿ ನಾಶಕ ಔಷಧಿ ಹಚ್ಚಿ ನಿಯಂತ್ರಣ ಮಾಡಬೇಕು. ಕೊಟ್ಟಿಗೆಯಲ್ಲಿ ಹೊರ ಪರೋಪಜೀವಿಗಳ ನಾಶಕ ಸ್ಪ್ರೇ ಮಾಡಬೇಕು.

ರೋಗ ನಿರೋಧಕ ಲಸಿಕೆ

ಮುಂಚಿತವಾಗಿಯೇ ರೋಗ ನಿರೋಧಕ ಲಸಿಕೆಯನ್ನು ವರ್ಷಕ್ಕೊಮ್ಮೆ ಹಾಕಿಸಬೇಕು. ರೋಗ ಕಾಣಿಸಿಕೊಂಡ ನಂತರ ಲಸಿಕೆ ಹಾಕಿಸುವುದು ರಿಂದ ಯಾವುದೇ ಪ್ರಯೋಜನವಿಲ್ಲ. ಕಾರಣ ರೋಗ ನಿರೋಧಕ ಲಸಿಕೆಯನ್ನು ನೀಡಿದ 25-30 ದಿನಗಳ ನಂತರ ರೋಗ ನಿರೋಧಕ ಶಕ್ತಿ ಒದಗುವ ಸಾಧ್ಯತೆ ಹೆಚ್ಚು. ಎಲ್ಲಾ ವಯಸ್ಸಿನ ರಾಸುಗಳಿಗೆ ವರ್ಷಕ್ಕೊಮ್ಮೆ ಲಸಿಕೆ ಹಾಕಿಸಬೇಕು. ಹೊಸದಾಗಿ ರಾಸುವನ್ನು ಖರೀದಿಸಿ ತಂದಿದ್ದಲ್ಲಿ ಮತ್ತೊಮ್ಮೆ ಲಸಿಕೆ ಹಾಕಿಸಬೇಕು. ರಾಸು ಗರ್ಭಧರಿಸಿದ್ದರೂ ಸಹ ಲಸಿಕೆಯನ್ನು ಹಾಕಿಸಬಹುದು. ಪ್ರತಿಯೊಂದು ರಾಸುವಿಗೂ ಹೊಸ ಸೂಜಿ ಮತ್ತು ಸಿರಿಂಜ್ ಉಪಯೋಗಿಸುವುದು ಸೂಕ್ತ. ರೋಗೋದ್ರೇಕ ಉಂಟಾದ ನಂತರ ಲಸಿಕೆ ಹಾಕಿಸುವುದರಿಂದ ನಿರೀಕ್ಷಿತ ಫಲಿತಾಂಶ ದೊರೆಯಲಾರದು.

LEAVE A REPLY

Please enter your comment!
Please enter your name here