ಲೇಖಕರು: ಬಿ.ಸಿ. ಪಾಟೀಲ್, ಕೃಷಿ ಸಚಿವರು, ಕರ್ನಾಟಕ ಸರ್ಕಾರ

ರೈತಾಪಿ ಕುಟುಂಬದಿಂದ ಬಂದಿರುವ ಸ್ವತಃ ಕೃಷಿಕರು ಆಗಿರುವ ನಾನು, ಸ್ವತಃ ಕೃಷಿಯಲ್ಲಿನ ಅನುಭವದಿಂದ ಅನ್ನದಾತರ ಕಷ್ಟನಷ್ಟಗಳನ್ನು ಬಹಳ ಹತ್ತಿರದಿಂದ ಬಲ್ಲೆ. ಈ ಹಿನ್ನೆಲೆಯಲ್ಲಿ ಇವರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುವತ್ತ ಗಮನಹರಿಸಿದ್ದೇನೆ. ಕರ್ನಾಟಕ ರಾಜ್ಯ ಭೌಗೋಳಿಕವಾಗಿಯೂ – ಬೆಳೆ ವೈವಿಧ್ಯತೆಯಿಂದಲೂ ಕೂಡಿದೆ. ಆದ್ದರಿಂದ ಪ್ರತಿಜಿಲ್ಲೆ – ತಾಲ್ಲೂಕುಗಳ ರೈತಸಮಸ್ಯೆಗಳನ್ನು ಅರಿಯುವುದು ಅಗತ್ಯವಾಗಿದೆ. ಆದ್ದರಿಂದ ನನ್ನ ಜನ್ಮದಿನವಾದ ಅಕ್ಟೋಬರ್ 14 ರಿಂದ  “ರೈತರೊಂದಿಗೊಂದು ದಿನ” ಪರಿಕಲ್ಪನೆ ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇನೆ.

 “ರೈತರೊಂದಿಗೊಂದು ದಿನ” ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಿಂದ ಪ್ರಾರಂಭಿಸುತ್ತಿದ್ದೇನೆ. ಈ ಕಾರ್ಯಕ್ರಮವನ್ನು ನಿರಂತರವಾಗಿ ಪ್ರತಿ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕೃಷಿ ಅಧಿಕಾರಿಗಳ ಜೊತೆ ಪ್ರಗತಿಪರ ರೈತರನ್ನು ಭೇಟಿಮಾಡಿ ರೈತರ ನಿವಾಸದಲ್ಲಿ ವಾಸ್ತವ್ಯ ಹೂಡುವುದು, ರೈತರ ಜೊತೆಗೆ ಚರ್ಚೆ,  ಪ್ರಗತಿಪರ ರೈತರ ಸಾಧನೆಗಳನ್ನು ಇತರ ರೈತರಿಗೂ ಪ್ರೇರಣೆಯಾಗಿಸುವುದು ಸೇರಿದಂತರ ರೈತರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟನ್ನು ಸ್ಥಳದಲ್ಲಿಯೇ ಬಗೆಹರಿಸುವುದು ಉದ್ದೇಶವಾಗಿದೆ.

ಆರಂಭದಲ್ಲಿಯೇ ಮಂಡ್ಯವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೂ ಕಾರಣಗಳಿವೆ. ಇದು ಕನ್ನಂಬಾಡಿ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ ಸಮೃದ್ಧ ಜಿಲ್ಲೆ. ಕಬ್ಬು ಹಾಗೂ ಭತ್ತ ಪ್ರಮುಖ ಬೆಳೆಗಳು.  ಸಮಗ್ರ ಕೃಷಿ ಪದ್ದತಿಯನ್ನು ಕೋಲಾರ ಜಿಲ್ಲೆಯ ರೈತರಂತೆ ಈ ಜಿಲ್ಲೆಯ ರೈತರು ಅಳವಡಿಸಿಕೊಳ್ಳುವಂತೆ ಮಾಡುವುದು ನನ್ನ ಉದ್ದೇಶವಾಗಿದೆ.

ರಾಗಿಯೂ ಕೂಡ ಈ ಜಿಲ್ಲೆಯ ಪ್ರಮುಖ ಬೆಳೆ. ರಾಗಿ ಪಿತಾಮಹ ಎಂಬ ಖ್ಯಾತರಾದ   ಡಾ: ಲಕ್ಷ್ಮಯ್ಯ ಅವರು ಈ ಭಾಗದ ರೈತರ ಆದಾಯ ಹೆಚ್ಚಿಸಲು ಇಂಡಾಫ್ ರಾಗಿ ತಳಿಗಳನ್ನು ಅಭಿವೃದ್ಧಿಪಡಿಸಿದರು. ಇವರ ಹೆಸರಿನಲ್ಲಿ ಪ್ರಾರಂಭಿಸಿದ ರಾಗಿ ಲಕ್ಷ್ಮಯ್ಯ ಟ್ರಸ್ಟಿನ ಕಾರ್ಯ ಚಟುವಟಿಕೆಯನ್ನು ತಿಳಿದುಕೊಂಡು ಅದರ ಪದಾಧಿಕಾರಿಗಳನ್ನು ಭೇಟಿಯಾಗುವುದು ಕೂಡ ನನ್ನ ಆಶಯವಾಗಿದೆ.

ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಹೈಬ್ರಿಡ್ ಭತ್ತವನ್ನು ಅಭಿವೃದ್ಧಿ ಪಡಿಸಿದ ಕೀರ್ತಿಯೂ ಕೂಡ ಮಂಡ್ಯದ ವಿ.ಸಿ. ಫಾರ್ಮ್ನ ಭತ್ತದ ತಜ್ಞರಿಗೆ ಸಲ್ಲುತ್ತದೆ.  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮಂಡ್ಯದಲ್ಲಿರುವ ವಿ.ಸಿ. ಫಾರ್ಮ್ ತಜ್ಞರನ್ನು ಕರೆಸಿ ನೇರವಾಗಿ ರೈತರೊಡನೆ ಚರ್ಚೆಯಲ್ಲಿ ಭಾಗವಹಿಸಿ ರೈತರ ತಾಂತ್ರಿಕ ಪ್ರಶ್ನೆಗಳಿಗೆ ಪರಿಹಾರ ಒದಗಿಸುವುದು ಉದ್ದೇಶವಾಗಿದೆ.

ಕೋವಿಡ್-19 ಭಾಧಿತ ಅವಧಿಯಲ್ಲಿ ನಗರಗಳಿಗೆ ವಲಸೆ ಹೋಗಿದ್ದ ಆನೇಕ ಕುಟುಂಬಗಳು – ಯುವಕರು ಕೋವಿಡ್ 19 ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ಬಂದು ನೆಲೆಸುತ್ತಿದ್ದಾರೆ.  ಕೃಷಿಯಲ್ಲಿ ಆಸಕ್ತಿಯನ್ನೂ ತೋರಿಸುತ್ತಿದ್ದಾರೆ.  ನಗರವಾಸಿಗಳಾಗಿದ್ದವರು ಹಾಗೂ ಯುವಕರನ್ನು ಕೃಷಿ ಕಡೆಗೆ ಆಕರ್ಷಿಸಿ, ಕೃಷಿಯಲ್ಲಿ ನವೋದ್ಯಮಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲು ಕರೆ ಕೊಡುವುದು ನನ್ನ ಮೂಲ ಉದ್ದೇಶವಾಗಿದೆ.

ಕಬ್ಬು ಮತ್ತು ಭತ್ತಕ್ಕೆ ನೀರನ್ನು ಹೆಚ್ಚಾಗಿ ಬಳಸಿ ಕೃಷಿ ಮಾಡುತ್ತಿರುವುದನ್ನು ಗಮನಿಸಿ ಇದಕ್ಕೆ ಪರಿಹಾರವಾಗಿ ಆಧುನಿಕ ಕೃಷಿ ಪದ್ದತಿಯಲ್ಲಿ ಹಾಗೂ ಸೂಕ್ಷ್ಮ ನೀರಾವರಿ ಪದ್ದತಿಯಲ್ಲಿ ಬೆಳೆಯುವಂತೆ ಹಾಗೂ ಹೆಚ್ಚಿನ ಕ್ಷೇತ್ರದಲ್ಲಿ ಸಿರಿಧಾನ್ಯಗಳನ್ನು, ಸಾವಯವ ಕೃಷಿಯನ್ನು ಹಾಗೂ ಕೃಷಿಯ ಉಪ ಕಸುಬುಗಳಾದ ಹೈನುಗಾರಿಕೆ, ತೋಟಗಾರಿಕೆ ಹಾಗೂ ಮೀನುಗಾರಿಕೆ ಕೃಷಿಯನ್ನು ಸಮಗ್ರ ಕೃಷಿ ಪದ್ದತಿಯಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸುವುದು ಕೂಡ ಧೈಯವಾಗಿರುತ್ತದೆ.

ಮಂಡ್ಯ ಜಿಲ್ಲೆಯಲ್ಲಿಯೂ ಕೋಲಾರದ ರೈತರಂತೆ ಜಮೀನಿನಲ್ಲಿ ಕೃಷಿಬೆಳೆಗಳು, ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂವುಗಳನ್ನು ಹಾಗೂ ಹೈನುಗಾರಿಕೆಯನ್ನು ಸಮಗ್ರವಾಗಿ ಕೈಗೊಳ್ಳುವಂತೆ ಪ್ರೋತ್ಸಾಹಿಸುವುದರೊಂದಿಗೆ ಬೇಸಾಯ ವೆಚ್ಚ ಕಡಿತಗೊಳಿಸಬೇಕಾಗಿದೆ. ಇವರ ಆದಾಯವನ್ನು ಹೆಚ್ಚಿಸುವಲ್ಲಿ ಅರಿವು ಮೂಡಿಸುವುದು ಹಾಗೂ ರೈತರ ಮನೋಬಲವನ್ನು ವೃದ್ಧಿಸಿ ಆತ್ಮಹತ್ಯೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಕಾರ್ಯಕ್ರಮ ರೂಪಿಸುವುದು ಮುಖ್ಯ ಗುರಿಗಳಾಗಿವೆ.

ದಿನಾಂಕ 13.11.2020 ರಂದು ಶುಕ್ರವಾರ ಸಾಯಂಕಾಲ ಮಾಜಿ ಲೋಕಸಭಾ ಸದಸ್ಯರು ಹಾಗೂ ಕಾವೇರಿ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ. ಮಾದೇಗೌಡ ಇವರ ನಿವಾಸಕ್ಕೆ ಬೇಟಿ ನೀಡಿ ಸನ್ಮಾನಿಸಿ ಅವರ ಅನುಭವವನ್ನು ಪಡೆದುಕೊಳ್ಳಲಿದ್ದೇನೆ.

ದಿನಾಂಕ 14.11.2020 ರಂದು ಶನಿವಾರ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿ ಆಧುನಿಕ ಕೃಷಿ ಮಾಡುತ್ತಿರುವ ಕೆ.ಆರ್.ಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ಲಕ್ಷ್ಮೀದೇವಮ್ಮ ಹಾಗೂ ದೊಡ್ಡಯಾಚೇನಹಳ್ಳಿ ಗ್ರಾಮದ ಶ್ಮೋಹನ್ ಇವರುಗಳ ತಾಕಿಗೆ ಬೇಟಿ ನೀಡಿ ಅವರು ಕೈಗೊಂಡಿರುವ ಕೃಷಿ ಚಟುವಟಿಕೆಗಳನ್ನು ವೀಕ್ಷಿಸುತ್ತೇನೆ. ಇದಲ್ಲದೇ ಈ ಕೆಳಗೆ ನಮೂದಿಸಿದ ಕೃಷಿ ಚಟುವಟಿಕೆಗಳನ್ನು ರೈತರ ಹೊಲಗಳಲ್ಲಿ ಕೃಷಿ ಸಚಿವರಿಂದಲೇ ಪ್ರಾರಂಭಿಸುವ ಕಾರ್ಯಕ್ರಮ ಹಾಕಿಕೊಂಡಿದ್ದೇನೆ.

ಭತ್ತದ ಬೆಳೆಗೆ ವೈಜ್ಞಾನಿಕವಾಗಿ ಯೂರಿಯಾ ಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡುವ ಪ್ರಾತ್ಯಕ್ಷಿಕೆ ತೋರಿಸುವುದು – ರಾಗಿ ಬಿತ್ತನೆಯಲ್ಲಿ ಭಾಗವಹಿಸುವುದು ಹಾಗೂ ಈಗಾಗಲೇ ಬಿತ್ತನೆಯಾದ ರಾಗಿ ಕ್ಷೇತ್ರದಲ್ಲಿ ಎಡೆಗುಂಟೆ ಹೊಡೆಯುವ ರೈತರೊಂದಿಗೆ ಭಾಗಿಯಾಗುವುದು – ‘ಡಯಂಚ’ ಹಸಿರೆಲೆ ಗೊಬ್ಬರವನ್ನು ಟ್ರಾಕ್ಟರ್ ಚಾಲಿತ ರೋಟೋವೇಟರ್ನಿಂದ ಮಣ್ಣಿನಲ್ಲಿ ಬೆರೆಸುವ ಪ್ರಾತ್ಯಕ್ಷಿಕೆ ತೋರಿಸುವುದು- ಕಬ್ಬಿನ ರವದಿ ಸುಡುವ ಬದಲಾಗಿ ಜೈವಿಕ ಗೊಬ್ಬರ ಬಳಸಿ ಕಬ್ಬಿನಲ್ಲಿ ತರಗು ನಿರ್ವಹಣೆ ಮಾಡುವುದು ಹಾಗೂ ಸ್ಥಳದಲ್ಲಿಯೇ ಕಬ್ಬಿನ ತ್ಯಾಜ್ಯ ಕೊಳೆಯುವಂತೆ ಮಾಡುವ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸುವುದು.- ಕೂಡಲೇ ಕಳೆಯದೇ ಇರುವ ತೆಂಗಿನ ಗರಿಗಳನ್ನು ಯಂತ್ರೋಪಕರಣ ಬಳಸಿ ಪುಡಿಮಾಡಿ / ಕತ್ತರಿಸಿ ವಿಘಟನೆ ಮಾಡುವ ಸೂಕ್ಷ್ಮ ಜೀವಿಗಳಿಂದ ಉಪಚರಿಸಿ ಉತ್ಕೃಷ್ಟ ಸಾವಯವ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆ ಕೈಗೊಳ್ಳುವುದು.

ಯಾಂತ್ರೀಕೃತ ಕಬ್ಬು ನಾಟಿ ಮಾಡುವ ವಿಧಾನದ ನೂತನ ತಾಂತ್ರಿಕತೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುವುದು- ಕೃಷಿ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕೆ-ಕಿಸಾನ್ ಮುಖಾಂತರ ಕೃಷಿ ಯಂತ್ರೋಪಕರಣಗಳನ್ನು ಹಾಗೂ ಕಿಟ್ ವಿತರಣೆ ಮಾಡುವುದು.

ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿ ತಾಲ್ಲೂಕಿನ ಪ್ರಗತಿಪರ ರೈತ ದಂಪತಿಗಳಿಗೆ ಸನ್ಮಾನ ಹಾಗೂ ರಾಗಿ ಮತ್ತು ಭತ್ತದ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಅಭಿನಂದನಾ ಪತ್ರ ವಿತರಣೆ ಮಾಡಲಿದ್ದೇನೆ. ಇದರ ಜೊತೆಗೆ ಕೃಷಿಯಲ್ಲಿ ವಿವಿಧ ತಾಂತ್ರಿಕತೆಯುಳ್ಳ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡುವುದು. ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಮಹಿಳೆ ಶ್ರೀಮತಿ ಕವಿತಾ ಮಿಶ್ರ ಇವರಿಂದ ಶ್ರೀಗಂಧ ಬೆಳೆ ಕುರಿತು ಹಾಗೂ ಅವರ ಕೃಷಿ ಅನುಭವವನ್ನು ರೈತರೊಂದಿಗೆ ಹಂಚಿಕೊಳ್ಳುವುದು.ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿಯ ರೈತರೊಂದಿಗೆ ಗೂಗಲ್ ಮೀಟ್ ನಡೆಸಿ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುವುದು. ಕೃಷಿ ಇಲಾಖೆಯ ವಿವಿಧ ಯೋಜನೆಗಳಾದ ಬೆಳೆ ಸಮೀಕ್ಷೆ, ಪಿ.ಎಂ. ಕಿಸಾನ್, ಮೆಕ್ಕಜೋಳ ಪರಿಹಾರದ ನೇರ ವರ್ಗಾವಣೆ ಇನ್ನಿತರ ಯೋಜನೆಗಳ ಕುರಿತು ಕಿರು ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಇದಲ್ಲದೇ ಕರ್ನಾಟಕ ಹೇಗೆ ಭೌಗೋಳಿಕವಾಗಿ ವೈವಿಧ್ಯ ಹೊಂದಿದೆಯೋ ಹಾಗೇ ಆಹಾರದಲ್ಲಿಯೂ ವೈಶಿಷ್ಟ – ವೈವಿಧ್ಯ ಹೊಂದಿದೆ. ಮಂಡ್ಯದ ರಾಗಿಮುದ್ದೆ – ಉಪ್ಸಾರು – ಕಾರ – ಬಸ್ಸಾರು ಹೇಗೆ ಪ್ರಸಿದ್ಧವೋ ಹಾಗೆ ಉತ್ತರ ಕರ್ನಾಟಕದ ರೊಟ್ಟಿ – ಎಣ್ಣೆಗಾಯಿ ಬದನೆಕಾಯಿ – ವಿವಿಧ ಚಟ್ನಿಪುಡಿಗಳು – ಹುಗ್ಗಿ – ಶೇಂಗಾ ಹೋಳಿಗೆ ಖ್ಯಾತಿ ಪಡೆದಿವೆ. ಇದನ್ನು  ಇವುಗಳನ್ನು ಸ್ಥಳೀಯ ರೈತರೊಂದಿಗೆ ಕುಳಿತು ಸೇವಿಸುವುದರ ಮೂಲಕ ಇದಕ್ಕೆ ಆಹಾರ ವಿನಿಮಯ – ಸಾಂಸ್ಕೃತಿಕ ವಿನಿಮಯದ ಸ್ಪರ್ಶವನ್ನೂ ಕೊಡುವ ಉದ್ದೇಶವಿದೆ.

2 COMMENTS

    • ಸಾಧಕ – ಬಾಧಕಗಳು ಎಲ್ಲಕಡೆ ಇವೆ. ಅವರು ಮಾತನಾಡಿರುವ ಧ್ವನಿಯಲ್ಲಿ ಇರುವ ರೈತರ್ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಕಾಳಜಿ ನೋಡಬೇಕು

LEAVE A REPLY

Please enter your comment!
Please enter your name here