ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ನ.30ರ ತನಕ ನೀರು

0
  • ರೈತರ ಹಿತಕಾಪಾಡುವ ದೃಷ್ಟಿಯಿಂದ ಈ ಹಿಂದಿನ‌ ಸಭೆಯಲ್ಲಿ ಕೈಗೊಂಡಿದ್ದ ನಿರ್ಧಾರ ಮುಂದುವರಿಕೆ
  • ನೀರಿನ‌ ಲಭ್ಯತೆಯ ಆಧಾರದ ಮೇರೆಗೆ ನೀರು ಹರಿಸಲು ತೀರ್ಮಾನ

ಬೆಂಗಳೂರು: ಅ.5 ತುಂಗಭದ್ರಾ ಜಲಾಯಶಯದಲ್ಲಿ ಪ್ರಸ್ತುತ 53 ಟಿಎಂಸಿ ನೀರಿನ ಲಭ್ಯತೆ ಇದ್ದು, ಎಡದಂಡೆ ಮುಖ್ಯಕಾಲುವೆಗೆ 4100 ಕ್ಯೂಸೆಕ್ ನಂತೆ ನ.30ರವರೆಗೆ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಳ ಕಲ್ಯಾಣ ಇಲಾಖೆ ಸಚಿವರೂ ಆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನ.10ರವರೆಗೆ 1000 ಕ್ಯೂಸೆಕ್ಸ್ ನಂತೆ(Including losses), ಜಲಾಶಯದ ನೀರಿನ ಮಟ್ಟ 1600ಅಡಿ ತಲುಪುವವರೆಗೆ ಲಭ್ಯತೆ ಅನುಸಾರ ಮುಂಬರುವ ಒಳಹರಿವಿನ ಪರಿಗಣಿಸಿ ಮುಂದುವರೆಸಲಾಗುವುದು ಎಂದು ಹೇಳಿದರು.

ಬಲದಂಡೆ ಕೆಳಮಟ್ಟದ‌ ಕಾಲುವೆಗೆ ನ.30ರವರೆಗೆ 850 ಕ್ಯೂಸೆಕ್ಸ್ ನ ಬದಲಾಗಿ 750 ಕ್ಯೂಸೆಕ್ಸ್ ನಂತೆ, ತುಂಗಭದ್ರಾ ಎಡದಂತೆ ಮೇಲ್ಮಟ್ಟದ ಕಾಲುವೆಗೆ ನ.30ವರೆಗೆ 23 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಉಳಿದಂತೆ ಇನ್ನು ರಾಯ ಬಸವಣ್ಣ ಕಾಲುವೆಗೆ ನ. 30ರವರೆಗೆ ಒಟ್ಟು ಕೊರತೆ ಬೀಳುವ ನೀರು 0.109 ಟಿಎಂಸಿ ಆಗಲಿದೆ. ಪ್ರಸ್ತುತ ಕಾಲುವೆಯಲ್ಲಿ ಕಾಮಗಾರಿ ಕೈಗೊಳ್ಳುವುದರಿಂದ ಡಿ.10ರಿಂದ ಫೆ.10ರತನಕ ನೀರು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.‌

ಜಲಾಶಯದಲ್ಲಿ ನೀರಿನ ಸಂಗ್ರಹ ಲಭ್ಯತೆ ಹಾಗೂ ರೈತರಿಗೆ ಈ ಹಿಂದೆ ತಾವು ನೀಡಿದ್ದ ಭರವಸೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ.‌ಪ್ರಸ್ತುತ ಡ್ಯಾಂ ನಲ್ಲಿ ಐದು ಟಿಎಂಸಿ‌ ನೀರು ಕೊರತೆ ಇದ್ದು, ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ.
ಆಂಧ್ರಕೋಟಾದಲ್ಲಿ ನೀಡಲಾಗುವ ನೀರನ್ನು ನಮಗೆ ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಈ‌‌ ಹಿಂದೆ 2018ರಲ್ಲಿ‌ ನೀರಿಗೆ ಸಮಸ್ಯೆಯಾದಾಗ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ ಅಲ್ಲಿನ‌ ಸರ್ಕಾರ ಅವರ ಪಾಲಿನ ಒಂದು ಟಿಎಂಸಿ ಯಷ್ಟು ನೀರು ನೀಡಿತ್ತು. ಪ್ರಸ್ತುತ ಅಲ್ಲಿನ‌ ಸರ್ಕಾರಕ್ಕೆ ಇಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು.‌

ರೈತರ ಹಿತ ಕಾಪಾಡಲು ಸರ್ಕಾರ ಬದ್ಧ: ಈ ಹಿಂದೆ ಆಗಸ್ಟ್ ನಲ್ಲಿ ಸಲಹಾ ಸಮಿತಿ ಸಭೆ ನಡೆಸಿದ ನಮಗೆ 11 ಟಿಎಂಸಿ ನೀರಿನ ಲಭ್ಯತೆ ಕೊರತೆ ಇತ್ತು. ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಭಾವಿಸಿದ್ದೆವು. ಸೂಕ್ತ ಮಳೆಯಾಗದ ಕಾರಣ ಇದೀಗ ನೀರಿಗೆ ಸಮಸ್ಯೆ ಎದುರಾಗಿದೆ. ತುಂಗಭದ್ರಾ ಎಡದಂಡೆಯ ರೈತರು ಪ್ರಸ್ತು ಐದು ಲಕ್ಷಕ್ಕಿಂತ ಹೆಚ್ಚು ಭತ್ತ ಬೆಳೆದಿದ್ದಾರೆ. ಒಟ್ಟು 2,300 ಕೋಟಿಯಷ್ಟು ಬೆಳೆ ಇದೆ. ಆ ಬೆಳೆಯನ್ನು ಉಳಿಸುವ ಕೆಲಸ ಮಾಡಬೇಕಿದ್ದು, ರೈತರ ಹಿತ ಕಾಪಾಡಲಾಗುವುದು ಎಂದರು.

ಸಭೆಯಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜ್, ಬಿ.ನಾಗೇಂದ್ರ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸನಗೌಡ ತುರುವಿಹಾಳ್, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಗಣೇಶ್, ರೈತ ಮುಖಂಡರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬಾಕ್ಸ್‌
ಆಂಧ್ರ ಕೋಟಾದ‌ ಒಂದು ಟಿಎಂಸಿ ಯಷ್ಟು ನೀರನ್ನು ಹೊಂದಾಣಿಕೆ ‌ಆಧಾರದ ಮೇಲೆ‌ ಪಡೆಯುವ ಸಲುವಾಗಿ ಅ.11ರಂದು ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.‌

LEAVE A REPLY

Please enter your comment!
Please enter your name here