ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವ ರೀತಿ !

0
ಲೇಖಕರು: ಪ್ರಶಾಂತ್‌ ಜಯರಾಮ್

ಗಿಡ, ಬೆಳೆ ಬೆಳವಣಿಗೆ ಹೊಂದಲು 104 ಅಂಶಗಳು ಬೇಕಾಗುತ್ತದೆ. 04 ಅಂಶಗಳು ವಾತಾವರಣದಿಂದ ಮತ್ತು 100 ಅಂಶಗಳು ಭೂಮಿಯಿಂದ ಸಿಗುತ್ತದೆ.

ವಾತಾವರಣದಿಂದ ಸಿಗುವ ಅಂಶಗಳು :ಇಂಗಾಲ/Carbon(44%), ಆಮ್ಲಜನಕ/Oxygen (44%), ಸಾರಾಜನಕ/Nitrogen (2 ರಿಂದ 4%) ಮತ್ತು ಜಲಜನಕ/Hydrogen (6%),ಒಟ್ಟಾರೆ ಗಿಡದ ಬೆಳೆವಣೆಗೆಯಲ್ಲಿ ಶೇ 98% ಪಾತ್ರ ಈ 4 ಅಂಶಗಳಿಂದ ಆಗುತ್ತದೆ. ಉಳಿದ 2% ಬೆಳೆವಣಿಗೆ 100 ಅಂಶಗಳ ಮೂಲಕ ಆಗುತ್ತದೆ. ಈ 100 ಅಂಶಗಳು ಭೂಮಿ ಮೂಲಕ ಪಡೆಯುತ್ತದೆ.

ಈ 100 ಅಂಶಗಳು ಭೂಮಿಗೆ ಚಿಗುರೆಲೆ, ಬಲಿತ ಎಲೆ,ತರಗೆಲೆ,ಒಣಗಿದ ಎಲೆ,ಕಾಂಡ, ಬೇರು, ತೊಗಟೆ, ಹೂವು ಹೀಗೆ ಗಿಡದ ಬೆಳವಣಿಗೆ ಹಂತದಿಂದ ಗಿಡ ತನ್ನ ಜೀವಿತವಾಧಿ ಮುಕ್ತಾಯ ತನಕ ವಿವಿಧ ಹಂತಗಳಲ್ಲಿ ಉತ್ಪತ್ತಿಯಾಗುವ ಎಲ್ಲ ರೀತಿಯ ಎಲೆ, ಬೇರು, ಕಾಂಡ, ಹೂವುಗಳನ್ನು ಭೂಮಿಗೆ ಸೇರಿಸುವುದರಿಂದ 100 ಅಂಶಗಳನ್ನು ಪಡೆಯಬಹುದು.

ಗಿಡದ ಎಳೆ ಭಾಗಗಳಲ್ಲಿ ಬೋರನ್, ಸತು, ರಂಜಕವಿರುತ್ತದೆ. ಬಲಿತ ಹಸಿರೆಲೆಗಳು ಸಾರಜನಕ, ಮಗ್ನೇಶಿಯಂ, ತಾಮ್ರ, ಕಬ್ಬಿಣ, ಗಂಧಕ ಮತ್ತು ಪೊಟಾಷ್ ಒದಗಿಸುತ್ತದೆ. ತರಗೆಲೆಯಲ್ಲಿ ಕ್ಯಾಲ್ಸಿಯಂ, ಸಿಲಿಕಾ, ಬೋರನ್ ಮತ್ತು ಮ್ಯಾಂಗನೀಸ್ ಇರುತ್ತವೆ. ಈ ಪೋಷಕಾಂಶಗಳನ್ನು ವಿವಿಧ ವಿಧಾನಗಳ ಮೂಲಕ ಮಣ್ಣಿಗೆ ಸೇರಿಸಿದಾಗ ಗಿಡಕ್ಕೆ ಬೇಕಾದ 100 ಅಂಶಗಳು ದೊರೆಯುತ್ತದೆ.

ಈ ರೀತಿಯಾಗಿ ಸಮಗ್ರವಾದ ಪೋಷಕಾಂಶ ಮಣ್ಣಿಗೆ ಸೇರಿಸಿದಾಗ ಅದು ಬೆಳೆಗಳ ಮೂಲಕ ಆಹಾರಕ್ಕೆ ಸೇರುತ್ತದೆ. ಇಂತಹ ಆಹಾರವನ್ನು ಸೇವಿಸಿದಾಗ ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶ ದೊರೆತು ಉತ್ತಮ ಆರೋಗ್ಯ ನಮ್ಮದಾಗುತ್ತದೆ. ನಮ್ಮ ಆರೋಗ್ಯದ ಮೂಲವೇ ಮಣ್ಣು.  ಈ ರೀತಿಯ ಮಣ್ಣು ನಿರ್ಮಾಣ ಮಾಡುವ ಬಗ್ಗೆ ಗಮನ ನೀಡೋಣ.

ಎಲ್ಲ ಜೀವರಾಶಿಯ ಶಕ್ತಿಯ ಮೂಲ ಸೂರ್ಯ. ಹೆಚ್ಚೆಚ್ಚು ಹಸಿರೆಲೆಗಳ ಮೂಲಕ ಬಿಸಿಲನ್ನು ಸುಗ್ಗಿ ಮಾಡಿ ಸೂರ್ಯನ ಶಕ್ತಿಯನ್ನು ಎಲೆಗಳಲ್ಲಿ ಬಂಧಿಸುವುದು. ಎಲೆಗಳಲ್ಲಿ ಬಂಧಿಸಲಾಗಿರುವ ಶಕ್ತಿಯನ್ನು ಭೂಮಿಗೆ ಸೇರಿಸಿದಾಗ ಭೂಮಿ ಶಕ್ತಿಯುತ್ತವಾಗುತ್ತದೆ.

ಏಕದಳ, ದ್ವಿದಳ, ಹಸಿರೆಲೆ ಗೊಬ್ಬರ, ಎಣ್ಣೆಕಾಳುಗಳು, ಸಾಂಬಾರ್ ಪದಾರ್ಥಗಳ ಬೀಜಗಳನ್ನು ಮಿಶ್ರ ಮಾಡಿ ಭೂಮಿಯಲ್ಲಿ ಬಿತ್ತನೆ ಮಾಡಿ, ಚೆನ್ನಾಗಿ ಬೆಳೆಸಿ ಅವುಗಳನ್ನು 60 ದಿನಗಳ ನಂತರ ಭೂಮಿಗೆ ಸೇರಿಸುವುದು.ಈ ರೀತಿಯಾಗಿ ಒಟ್ಟು 06 ತಿಂಗಳಲ್ಲಿ (180 ದಿನಗಳು ) 03 ಬಾರಿ ಬಿತ್ತನೆ ಮಾಡಿ ಭೂಮಿಗೆ ಸೇರಿಸಬೇಕು.ಭೂಮಿಗೆ ಸೇರಿಸುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು, ತೇವಾಂಶವಿದ್ದಾಗ ಕಳೆಯುವಿಕೆಯು ತ್ವರಿತವಾಗುತ್ತದೆ,2-3 ವಾರಗಳಲ್ಲಿ ಕಳೆತು ಗೊಬ್ಬರವಾಗುತ್ತದೆ.

ಏಕದಳ, ದ್ವಿದಳ, ಹಸಿರೆಲೆ ಗೊಬ್ಬರ, ಎಣ್ಣೆಕಾಳು ಸಾಂಬಾರು ಪದಾರ್ಥಗಳ ಒಟ್ಟು ಎಲ್ಲ ಸೇರಿ ಒಂದು ಎಕರೆಗೆ 25  ಕೆಜಿ ಬೀಜವನ್ನು ಕೆಳಕಂಡ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ದಪ್ಪಗಿರುವ ಬೀಜಗಳ ತೂಕ ಜಾಸ್ತಿ -ಬೀಜಗಳ ಸಂಖ್ಯೆ ಕಡಿಮೆ,ಸಣ್ಣದಾಗಿರುವ ಬೀಜಗಳ ತೂಕ ಕಡಿಮೆ-ಬೀಜಗಳ ಸಂಖ್ಯೆ ಜಾಸ್ತಿ. ಈ ಆಧಾರದಲ್ಲಿ ಬೀಜಗಳ ಪ್ರಮಾಣ ನಿರ್ಧರಿಸಲಾಗುತ್ತದೆ.

1)ಏಕದಳ ಧಾನ್ಯಗಳು :05 ಕೆಜಿ (ಉದಾಹರಣೆ:01 ಕೆಜಿ ಜೋಳ,01 ಕೆಜಿ ರಾಗಿ,ತಲಾ 500 ಗ್ರಾಂ :ಸಾಮೆ, ಸಜ್ಜೆ, ನವಣೆ, ಅರ್ಕ, ಉದಲು, ಕೊರಲೆ ಇತ್ಯಾದಿ )

2)ದ್ವಿದಳ ಧಾನ್ಯಗಳು:05 ಕೆಜಿ(ಉದಾಹರಣೆ:ತಲಾ 01ಕೆಜಿ :ಹಸಿರು ಕಾಳು, ತೊಗರಿ, ಉದ್ದು, ಕಡ್ಲೆಕಾಳು, ಅಲಸಂದೆ ಇತ್ಯಾದಿ )

3)ಹಸಿರೆಲೆ ಗೊಬ್ಬರ ಬೀಜಗಳು:05 ಕೆಜಿ (ಉದಾಹರಣೆ:ತಲಾ 02 ಕೆಜಿ ಸೆಣಬು,ಚಂಬೆ(Dhaincha, Sunhemp),01 ಕೆಜಿ ಹುರಳಿ ಇತ್ಯಾದಿ)

4)ಎಣ್ಣೆಕಾಳುಗಳು:05 ಕೆಜಿ (ಉದಾಹರಣೆ:ತಲಾ 02 ಕೆಜಿ ಕಡ್ಲೆಕಾಯಿ, ಹರಳು, ಸೂರ್ಯಕಾಂತಿ, 01ಕೆಜಿ ಎಳ್ಳು ಇತ್ಯಾದಿ )

5)ಸಾಂಬಾರ್ ಬೀಜಗಳು :05 ಕೆಜಿ(ತಲಾ 01 ಕೆಜಿ ಕೊತ್ತಂಬರಿ, ಸಾಸಿವೆ, ಮೆಂತ್ಯ, ಮೆಣಸಿನಕಾಯಿ, ಓಂಕಾಳು ಇತ್ಯಾದಿ)

ಮೇಲ್ಕಂಡ ಮಿಶ್ರ ಬೀಜಗಳನ್ನು ಬಿತ್ತಿ ಚೆನ್ನಾಗಿ ಬೆಳಸಬೇಕು,ಮೇಲಿನ ಬೆಳೆಗಳ ಬೆಳವಣಿಗೆ ಅವಧಿ ಬೇರೆ ಬೇರೆಯಾಗಿರುತ್ತದೆ ಮತ್ತು ಅದರ ಹೂವು ಬಿಡುವ,ಕಾಯಿ ಕಚ್ಚುವ ಮತ್ತು ಬೇರುಗಳ ರಚನೆ ವಿಭಿನ್ನವಾಗಿರುವುದರಿಂದ ಎಲ್ಲಾ ರೀತಿಯ ಪೋಷಕಾಂಶ ದೊರೆಯುತ್ತದೆ. ಜೀವಿತವಾಧಿ ಮುಗಿಸುವಾಗ ಗಿಡದ ಕಾಂಡದಲ್ಲಿ ಲಿಗ್ನಿನ್ ಮತ್ತು ಪೆಕ್ಟಿನ್(Lignin and Pectin)ಅಂಶಗಳು ಹೆಚ್ಚಿರುತ್ತದೆ, ಗಿಡಗಳು ಬಲಿತಾಗ ನಾರಿನ ಅಂಶ ಹೆಚ್ಚಿರುತ್ತದೆ ಮತ್ತು ಅದರಲ್ಲಿ ಮಣ್ಣಿಗೆ ಸ್ಥಿರವಾದ ಸಾವಯವ ಇಂಗಾಲ ರಚನೆಗೊಳ್ಳಲು ನೆರವಾಗುವ ಲಿಗ್ನಿನ್ ಮತ್ತು ಪೆಕ್ಟಿನ್ ಹೆಚ್ಚಿರುತ್ತದೆ.ಈ ಅವಧಿಯಲ್ಲಿ ಗಿಡಗಳನ್ನು ಭೂಮಿಗೆ ಸೇರಿಸಿದಾಗ ಮಣ್ಣಿಗೆ ಸ್ಥಿರವಾದ ಕಾಯ ದೊರೆಯುತ್ತದೆ.

ಸಾಮಾನ್ಯವಾಗಿ ಹಸಿರೆಲೆ ಗೊಬ್ಬರವನ್ನು ಹೂವು ಬಿಡುವ ಮುನ್ನ ಭೂಮಿಗೆ ಸೇರಿಸಲಾಗುತ್ತಿದೆ.ಈ ರೀತಿ ಮಾಡಿದಾಗ ಕೆಲವು ಪೋಷಕಾಂಶ ಮಾತ್ರ ಸೇರಿಸಬಹುದು, ಅದರಲ್ಲಿ ಮುಖ್ಯವಾಗಿ ಸಾರಾಜನಕ ಅಂಶ ಮಾತ್ರ ಇರುತ್ತದೆ.ಮಣ್ಣಿಗೆ ಸಾವಯವ ಇಂಗಾಲ ಮತ್ತು ಮಣ್ಣಿಗೆ ಸ್ಥಿರವಾದ ರಚನೆಕೊಡಲಾಗುವುದಿಲ್ಲ.

ಮುಂದಿನ ಬೆಳೆಗೆ ಸಾರಾಜನಕ ಪೂರೈಕೆ ಮಾಡುವ ಉದ್ದೇಶದಿಂದ ಮಾತ್ರ ಹಸಿರೆಲೆ ಬೆಳೆಯುವುದು ರೂಢಿಯಾಗಿದೆ.ಈ ಸಂಪ್ರದಾಯವನ್ನು ಸರಿಪಡಿಸಿಕೊಳ್ಳುವ ಅಗತ್ಯತೆ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ.

ಮೇಲೆ ಹೇಳಿದ ರೀತಿ ಪ್ರಾರಂಭದಲ್ಲಿ ಒಮ್ಮೆ ಮಾತ್ರ ಮಿಶ್ರ ಬೆಳೆ ಬೆಳಸಿ, ಭೂಮಿಗೆ ಸೇರಿಸುವುದರಿಂದ ಫಲವತ್ತತೆಯಿಲ್ಲದ ಭೂಮಿಯ ಮಣ್ಣನ್ನು ಫಲವತ್ತತೆಗೊಳಿಸಲು ಸಾಧ್ಯ. ಈ ರೀತಿ ಮಣ್ಣನ್ನು ಸಿದ್ದಪಡಿಸಿದ ನಂತರ ಉತ್ತಮ ಬೆಳೆ ಮತ್ತು ಇಳುವರಿ ಪಡೆಯಬಹುದು.

(ಮಾಹಿತಿ ಮೂಲ:Dhabolkar method of Green manuring)

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530

LEAVE A REPLY

Please enter your comment!
Please enter your name here