ನೂರಾರು ಮಂದಿ ಸೇರುವ ಸಮಾರಂಭವನ್ನೇ ಕುಂದುಕೊರತೆಗಳಿಲ್ಲದಂತೆ ನಡೆಸುವುದು ಕಷ್ಟ. ಹಾಗಿರುವಾಗ ಲಕ್ಷಾಂತರ ಮಂದಿ ಸೇರುವ ಮೇಳ ಯಶಸ್ಸು ಕಾಣಲು ಅದೆಷ್ಟು ಕಷ್ಟವಿರಬಹುದು. ಥಿಯರಿ ಹಂತದಲ್ಲಿ ಕಾಣಲಾರದ ಸಮಸ್ಯೆಗಳು ಪ್ರಾಯೋಗಿಕ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಏನೆಲ್ಲ ಸಮಸ್ಯೆ ಬರಬಹುದು, ಅವುಗಳು ಬಾರದಂತೆ ತಡೆಯಲು ಏನು ಮುಂಜಾಗ್ರತೆ ವಹಿಸಬೇಕು ಎಂಬುದೆನ್ನ ನಿಖರವಾಗಿ ಯೋಚಿಸಿ – ಯೋಜಿಸಿದ್ದರೆ, ನೂರಾರು ಮಂದಿ ಸಮನ್ವಯದಿಂದ ಕೆಲಸ ಮಾಡಿದರೆ ಬೃಹತ್ ಮೇಳವೊಂದು ಹೇಗೆ ಯಶಸ್ಸು ಕಾಣಬಹುದು ಎನ್ನುವುದಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿಮೇಳ – 2019 ಸಾಕ್ಷಿ.

ಐದು ತಿಂಗಳು ಮುಂಚಿನ ಮುಂದಾಲೋಚನೆ:
ಕೃಷಿಮೇಳವನ್ನು ಹೇಗೆ ನಡೆಸಬೇಕು, ಅದರ ಥೀಮ್ ಏನಾಗಿರಬೇಕು, ಯಾವೆಲ್ಲ ಸಂಗತಿಗಳು ಅಡಕವಾಗಿರಬೇಕು, ಯಾವಯಾವ ಬೆಳೆಗಳ ಪ್ರಾತ್ಯಕ್ಷಿಕೆಗಳು ಇರಬೇಕು ಎಂಬುದೆಲ್ಲ ಐದು ತಿಂಗಳು ಮುಂಚಿನಿಂದಲೇ ಚರ್ಚಸಿ – ಯೋಜಿಸಲಾಗಿತ್ತು. ಇದಕ್ಕಾಗಿ ಬೇರೆಬೇರೆ ಸಮಿತಿಗಳನ್ನು ಮಾಡಲಾಯಿತು. ಒಟ್ಟು ಹದಿನಾರು ಸಮಿತಿಗಳಿಗೆ ವಿವಿಧ ಕೆಲಸಗಳನ್ನು ನಿರ್ವಹಿಸುವ ಹೊಣೆಗಾರಿಕೆ ನೀಡಲಾಯಿತು ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ತಿಳಿಸಿದರು.
ವಿವಿಧ ಸಮಿತಿಗಳು
1. ಚಾಲನಾ ಸಮಿತಿ, 2. ಸಂಘಟನಾ ಸಮಿತಿ, 3. ಮಾಧ್ಯಮ ಸಮಿತಿ, 4. ಕ್ಷೇತ್ರ ಪ್ರಾತ್ಯಕ್ಷಿಕೆ ಸಮಿತಿ, 5. ನೋಂದಣಿ ಸಮಿತಿ, 6. ವಸ್ತು ಪ್ರದರ್ಶನ ಸಮಿತಿ, 7. ಪ್ರಾಣಿ ವಿಜ್ಞಾನ ಸಮಿತಿ, 8. ಗಣ್ಯವ್ಯಕ್ತಿಗಳ ಸ್ವಾಗತ ಸಮಿತಿ, 9. ಸಲಹಾ ಸಮಿತಿ, 10. ಭೋಜನಾ ಸಮಿತಿ, 11. ಸಂಚಾರ ನಿಯಂತ್ರಣ – ವಾಹನ ನಿಲುಗಡೆ ಸಮಿತಿ, 12. ಭದ್ರತೆ – ಸುರಕ್ಷತಾ ಸಮಿತಿ, 13. ಸ್ವಚ್ಚತಾ ನಿಗಾ ಸಮಿತಿ – 14. ಪ್ರಥಮ ಚಿಕಿತ್ಸೆ ಸಮಿತಿ, 15. ನಿಧಿ ಸಂಗ್ರಹಣಾ ಸಮಿತಿ, 16. ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ,
ಪ್ರತಿಯೊಂದು ಸಮಿತಿಗೂ ಅಧ್ಯಕ್ಷ, ಸಂಚಾಲಕ, ಸದಸ್ಯರುಗಳ ನೇಮಕ. ಪ್ರತಿಯೊಂದು ಸಮಿತಿಗಳ ಸಭೆಗಳನ್ನು ಪ್ರತ್ಯೇಕವಾಗಿ ಮಾಡಿ ಇವರು ನಿರ್ವಹಿಸಬೇಕಾದ ಹೊಣೆಗಾರಿಕೆಗಳನ್ನು ತಿಳಿಸಲಾಯಿತು. ನಂತರ ಎಲ್ಲ ಸಮಿತಿಗಳನ್ನು ಒಟ್ಟಿಗೆ ಸೇರಿಸಿ ಸಭೆ ಮಾಡಿಯೂ ಅವರು ನಿರ್ವಹಿಸಬೇಕಾದ ಕೆಲಸಗಳನ್ನು ಮತ್ತೆ ಹೇಳಲಾಯಿತು. ಇದರಿಂದ ಎಲ್ಲಿಯೂ ಗೊಂದಲವಾಗದಂತೆ ನೋಡಿಕೊಂಡಿದ್ದು ಗಮನಾರ್ಹ
ಸಮಿತಿಗಳ ನೇತೃತ್ವ:
ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಎಲ್ಲ ಸಮಿತಿಗಳ ನೇತೃತ್ವ ವಹಿಸಿದ್ದರು. ಇವರಿಗೆ ವಿಸ್ತರಣಾ ನಿರ್ದೇಶಕ ಡಾ. ಎಂ.ಎಸ್. ನಟರಾಜು, ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಕ್ಷರಿ ಸಹಕಾರಿಯಾಗಿದ್ದರು. ಬೃಹತ್ ವಸ್ತುಪ್ರದರ್ಶನಗಳ ಸಮಿತಿ ಹೊಣೆಗಾರಿಕೆ ವಿಸ್ತರಣಾ ನಿರ್ದೇಶಕರದ್ದಾಗಿದ್ದರೆ, ಬೆಳೆ ಪ್ರಾತ್ಯಕ್ಷಿಕೆಗಳ ನಿರ್ವಹಣೆ ಸಂಶೋಧನಾ ನಿರ್ದೇಶಕರದಾಗಿತ್ತು. ಹೀಗೆ ಒಟ್ಟು 200ಕ್ಕೂ ಅಧಿಕ ಮಂದಿ ಪರಿಶ್ರಮ ಪಡತೊಡಗಿದ್ದರು. ಅಗತ್ಯವಿರುವ ಸಮಿತಿಗಳಿಗೆ ಉದಾಹರಣೆಗೆ ಸಾರಿಗೆ- ವಾಹನ ನಿಲುಗಡೆ, ಭೋಜನಾ ಸಮಿತಿಗಳ ನಿರ್ವಹಣೆಗೆ ವಿದ್ಯಾರ್ಥಿಗಳನ್ನು ಸಹ ಸ್ವಯಂಸೇವಕರನ್ನಾಗಿ ತೊಡಗಿಸಲಾಗಿತ್ತು. ಇವರುಗಳಿಗೆ ಬಿಳಿ ಟೀ ಶರ್ಟ್, ಕ್ಯಾಪ್ ಗಳನ್ನು ನೀಡಲಾಗಿತ್ತು.
ಕರ್ನಾಟಕ ಸರ್ಕಾರದ ನೆರವು:
ಬೃಹತ್ ಕೃಷಿಮೇಳ ನಿರ್ವಹಿಸುವುದೆಂದರೆ ಬೃಹತ್ ಖರ್ಚು. ಇದಕ್ಕಾಗಿ ಕರ್ನಾಟಕ ಸರ್ಕಾರವೂ ಧನಸಹಾಯ ನೀಡಿತ್ತು. ವ್ಯಾಪಾರಿ ಮಳಿಗೆಗಳಿಗೆ ಶುಲ್ಕ ವಿಧಿಸಲಾಗಿತ್ತು. ಮಳೆಗಾಳಿಯಿಂದ ತೊಂದರೆಯಾಗದಂತೆ, ತಂದಿದ್ದ ವಸ್ತುಗಳು ನೆನೆಯದಂತೆ ಸುರಕ್ಷತೆ ನೀಡುವ ಮಳಿಗೆಗಳ ನಿರ್ಮಾಣ ಮಾಡಲಾಗಿತ್ತು. ಜನರ ಸುರಕ್ಷತೆಗೆ ಅತೀಹೆಚ್ಚಿನ ಆದ್ಯತೆ ನೀಡಲಾಗಿತ್ತು. ಎಲ್ಲಿಯೂ ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿತ್ತು ಎಂದು ವಿಸ್ತರಣಾ ವಿಭಾಗದವರು ಹೇಳುತ್ತಾರೆ.
ಭಾರಿ ಸಂಖ್ಯೆಯ ಮಳಿಗೆಗಳು:
ಏಳುನೂರು ಐವತ್ತಕ್ಕೂ ಹೆಚ್ಚಿನ ಮಳಿಗೆಗಳನ್ನು ಹಾಕಲಾಗಿತ್ತು. ಕೃಷಿಕ್ಷೇತ್ರದ ವಿವಿಧ ವಿಭಾಗಗಳವರು ತಮ್ಮತಮ್ಮ ವಿಭಾಗಗಳಿಗೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸಿ ವಿವರಣೆ ನೀಡಿದರು. ಮಾರಾಟಕ್ಕೂ ಅವಕಾಶ ನೀಡಲಾಗಿತ್ತು. ಮೇಳವೆಂದರೆ ಅದೊಂದು ಉತ್ಸಾಹಪೂರ್ಣ ಜಾತ್ರೆ ಮಾದರಿ. ಜಾತ್ರೆಯಲ್ಲಿ ಹೇಗೆ ವಿವಿಧ ರೀತಿಯ ವಸ್ತುಗಳ ಮಾರಾಟಕ್ಕೆ ಅವಕಾಶವಿರುತ್ತದೆಯೋ ಅದೇ ರೀತಿ “ಊರು –ಕೇರಿ” ಪರಿಕಲ್ಪನೆಯಡಿ ಕೃಷಿಯೇತರ ವಸ್ತುಗಳ ಪ್ರದರ್ಶನ ಮಾರಾಟಕ್ಕೂ ಅವಕಾಶ ನೀಡಿದ್ದು ವಿಶೇಷ. ಬೆಂಗಳೂರು ವಿಶ್ವವಿದ್ಯಾಲಯ ಈ ಪರಿಕಲ್ಪನೆಯನ್ನು ಕೆಲವು ವರ್ಷಗಳ ಹಿಂದಿನಿಂದಲೇ ಅಳವಡಿಸಿಕೊಂಡಿದೆ. ಇದರಿಂದ ವಿಶೇಷವಾಗಿ ಮಹಿಳಾ ಸ್ವಸಹಾಯ ಗುಂಪುಗಳು ಮಾಡಿದ ವಸ್ತುಗಳು, ತಿನಿಸುಗಳ ಮಾರಾಟಕ್ಕೆ ಸಹಕಾರಿಯಾಗಿದೆ.

ಕೃಷಿ ಇಲಾಖೆ ಸಹಕಾರ:
ಪ್ರತಿವರ್ಷಂತೆ ಈ ವರ್ಷವೂ ಕೃಷಿ ಇಲಾಖೆ ಸಹಕಾರ ನೀಡಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿದ 10 ಜಿಲ್ಲೆಗಳಲ್ಲದೇ ದಾವಣಗೆರೆ ಜಿಲ್ಲೆಯಿಂದಲೂ ಆಸಕ್ತ ರೈತರನ್ನು ಇಲಾಖೆ ಕರೆದುಕೊಂಡು ಬಂದು ಕೃಷಿಮೇಳ ವೀಕ್ಷಿಸುವ ಅವಕಾಶ ಒದಗಿಸಿತ್ತು. ರಾಜ್ಯ ಸರ್ಕಾರದ ಅಭಿವೃದ್ಧಿ ಇಲಾಖೆಗಳು ಕೂಡ ಮಳಿಗೆಗಳನ್ನು ತೆರೆದು ತಾವು ಮಾಡುತ್ತಿರುವ ಕಾರ್ಯಗಳ ಪರಿಚಯ ಮಾಡಿಕೊಟ್ಟರು. ಇದಲ್ಲದೇ ರಾಜ್ಯದ ಬೇರೆಬೇರೆ ಕೃಷಿ ವಿಶ್ವವಿದ್ಯಾಲಯಗಳು ಕೂಡ ಮಳಿಗೆಗಳನ್ನು ತೆರೆದು ತಮ್ಮತಮ್ಮ ಸಾಧನೆಗಳ ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ವಿಸ್ತರಣಾ ವಿಭಾಗದವರು ವಿವರಿಸಿದರು.

========================

ಡಾ.ಎಸ್. ರಾಜೇಂದ್ರಪ್ರಸಾದ್, ಕುಲಪತಿ
ನಿಖರಕೃಷಿಗೆ ಒತ್ತು:
ವರ್ಷಗಳು ಕಳೆದಂತೆ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಪೋಷಕಾಂಶಗಳ ಕೊರತೆ ಉಂಟಾಗುತ್ತಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿಯ ಕೃಷಿಮೇಳದಲ್ಲಿ “ನಿಖರಕೃಷಿ – ಸುಸ್ಥಿರ ಅಭಿವೃದ್ಧಿ” ಪರಿಕಲ್ಪನೆಗೆ ಆದ್ಯತೆ ನೀಡಲಾಯಿತು. ಇದರಲ್ಲಿ ನೀರು, ಪೋಷಕಾಂಶ ಪೋಲಾಗುವ ಮಾತೇ ಇಲ್ಲ. ಬೆಳೆಗಳು ಕೇಳಿದಾಗ ಅಂದರೆ ಅತಿಸೂಕ್ಷ್ಮ ಸೆನ್ಸಾರ್ ಸಾಧನದ ಅಳವಡಿಕೆಯಿಂದ ಬೆಳೆಗಳು ಕೇಳಿದಾಗ ಅಂದರೆ ಅವಶ್ಯಕತೆ ಇರುವಾಗ ಮಾತ್ರ ನೀರು, ಪೋಷಕಾಂಶ ನೀಡಲಾಗುತ್ತದೆ. ಇದರಲ್ಲಿ ಪೋಷಕಾಂಶ ನೀಡುವುದಕ್ಕೆ “ರಸಾವರಿ” ಮಾದರಿ ಅಳವಡಿಸಲಾಗಿದೆ. ನೀರಿನ ಜೊತೆ ದ್ರವಾಂಶ ರೂಪದ ಪೋಷಕಾಂಶ ಕೂಡ ಪೂರೈಕೆಯಾಗುತ್ತದೆ. ಇವೆಲ್ಲದರಿಂದ ಖರ್ಚು ಕಡಿಮೆಯಾಗುತ್ತದೆ, ಲಾಭಾಂಶ ಹೆಚ್ಚಾಗುತ್ತದೆ. ಕೃಷಿಕರು ಈ ಮಾದರಿಯನ್ನು ಉತ್ಸಾಹದಿಂದ ವೀಕ್ಷಿಸಿದ್ದಾರೆ, ಕೃಷಿವಿಜ್ಞಾನಿಗಳೊಂದಿಗೆ ಚರ್ಚಿಸಿದ್ದಾರೆ. ಸದ್ಯದಲ್ಲಿ ಎಲ್ಲೆಡೆ ಈ ಮಾದರಿ ಅಳವಡಿಕೆ ಹೆಚ್ಚು ಪ್ರಮಾಣದಲ್ಲಿ ನಡೆಯಲಿದೆ ಎಂದು ಕುಲಪತಿ ಡಾ. ರಾಜೇಂದ್ರಪ್ರಸಾದ್ ವಿವರಿಸುತ್ತಾರೆ.

========================

ಒಂದೇ ಕೃಷಿಭೂಮಿಯಲ್ಲಿ ಏಕ ಪ್ರಕಾರದ ಫಲವತ್ತತೆ ಇರುವುದಿಲ್ಲ. ನಿಖರ ಕೃಷಿಯಿಂದ ಕಡಿಮೆ ಫಲವತ್ತತೆ ಇರುವಲ್ಲಿಗೆ ಹೆಚ್ಚಿನ ಪೋಷಕಾಂಶ, ಹೆಚ್ಚು ಪೋಷಕಾಂಶ ಇರುವಲ್ಲಿಗೆ ಕಡಿಮೆ ಪೋಷಕಾಂಶ ಪೂರೈಸಲಾಗುತ್ತದೆ. ಕ್ಷೇತ್ರಬೆಳೆಗಳಾದ ಕಬ್ಬು, ಭತ್ತ, ಜೋಳ ಇತ್ಯಾದಿ ಬೆಳೆಗಳಿಗೂ ಹನಿ ನೀರಾವರಿ ಅಳವಡಿಸಲಾಗುತ್ತದೆ. ಇದರಿಂದ ಸಮಪ್ರಮಾಣದ ಬೆಳವಣಿಗೆ, ಅಧಿಕ ಫಸಲು ಪಡೆಯುವುದು ಸಾಧ್ಯವಾಗುತ್ತದೆ ಎಂದು ಕೃಷಿ ಸಂಶೋಧನಾ ವಿಭಾಗದವರು ಹೇಳುತ್ತಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಾಕುಗಳಲ್ಲಿದ್ದ ವಿವಿಧ ರೀತಿಯ ಬೆಳೆಗಳ ಮಾದರಿ, ಉತ್ಕೃಷ್ಟತೆ, ಫಸಲುಗಳನ್ನು ನೋಡಿದ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇದರ ಹಿಂದೆ ಕೃಷಿ ಸಂಶೋಧನಾ ವಿಭಾಗದವರ ತಿಂಗಳುಗಟ್ಟಲೇ ಶ್ರಮ, ನಿರಂತರ ತೊಡಗಿಸಿಕೊಳ್ಳುವಿಕೆ ಇತ್ತು ಎಂಬುದು ನಿಚ್ಚಳವಾಗಿ ತಿಳಿಯುತ್ತಿದ್ದ ಸಂಗತಿ.

ಮಾಧ್ಯಮಗಳ ಸಹಕಾರ:
ಕೃಷಿಮೇಳದಲ್ಲಿರುವ ವಿಶೇಷತೆಗಳು, ನಡೆಯುವ ದಿನಾಂಕ ಇವೆಲ್ಲವನ್ನು ಜನತೆಗೆ ಮತ್ತೆಮತ್ತೆ ಹೇಳಿ ಅವರುಗಳು ಆಸಕ್ತಿಯಿಂದ ಮೇಳಕ್ಕೆ ಬರುವಂತೆ ಮಾಡಿರುವುದರಲ್ಲಿ ಮಾಧ್ಯಮಗಳ ಪಾತ್ರ ಅಪಾರ. ಮುದ್ರಣ ಮಾಧ್ಯಮಗಳು, ಟಿವಿ ಮಾಧ್ಯಮಗಳು, ವೆಬ್ ಮಾಧ್ಯಮಗಳು ಸಹಕಾರ ನೀಡಿವೆ. ಪ್ರತಿಯೊಂದು ವಿಶೇಷ ಸಂಗತಿಗಳನ್ನು ಮುತುವರ್ಜಿಯಿಂದ ವರದಿ ಮಾಡಿವೆ ಎಂದು ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವರಾಮು ಶ್ಲಾಘಿಸುತ್ತಾರೆ.

ಪೌಷ್ಟಿಕಾಂಶದ ಆಹಾರ:
ಮೇಳಕ್ಕೆ ಬಂದವರ ಮೆಚ್ಚುಗೆಗೆ ಅಲ್ಲಿನ ಭೋಜನಾಗೃಹದ ಆಹಾರವೂ ಪಾತ್ರವಾಯಿತು. ಪ್ರತಿನಿತ್ಯವೂ ಬೇರೆಬೇರೆ ಸಿಹಿತಿನಿಸುಗಳೊಂದಿಗೆ ಮುದ್ದೆ, ಅವರೇಕಾಳು, ತರಕಾರಿ ಸಂಬಾರ್, ಪಲ್ಯ, ಮೊಸರನ್ನ ಇದ್ದವು. ರುಚಿ ಜೊತೆಗೆ ಶುಚಿತ್ವವೂ ಇದ್ದಿದ್ದು ಗಮನಾರ್ಹ. ನಾಲ್ಕುದಿನಗಳಲ್ಲಿ ಈ ಭೋಜನ ಸವಿದವರ ಸಂಖ್ಯೆ 32 ಸಾವಿರಕ್ಕೂ ಹೆಚ್ಚು ಎಂದು ಅಂಕಿಅಂಶಗಳು ಹೇಳುತ್ತವೆ.

ಭೋಜನಾಲಯದಲ್ಲಿ ಊಟ ಸವಿಯುತ್ತಿರುವವರ ಅಭಿಪ್ರಾಯ ಕೇಳುತ್ತಿರುವ ಕುಲಪತಿ ಡಾ. ರಾಜೇಂದ್ರಪ್ರಸಾದ್, ಮಾಧ್ಯಮ ಸಂಪರ್ಕ ವಿಭಾಗದ ಮುಖ್ಯಸ್ಥ ಡಾ. ಶಿವರಾಮ್

ವ್ಯಾಪಾರವೂ ಭರ್ಜರಿ:
ಕೃಷಿಕ್ಷೇತ್ರದ ವಿವಿಧ ವಿಭಾಗಗಳ ಯಂತ್ರೋಪಕರಗಳು, ಪರಿಕರಗಳು, ಪೋಷಕಾಂಶಗಳ ತಯಾರಿ, ಮಾರಾಟ ಮಾಡುವ ಸಂಸ್ಥೆಗಳಿಗೂ ನಿರಾಶೆಯಾಗಲಿಲ್ಲ ಎಂದು ಮಳಿಗೆ ತೆರೆದಿದ್ದ ಕಂಪನಿಯೊಂದರ ವ್ಯವಸ್ಥಾಪಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಾರಿ ನಾಲ್ಕುದಿನಗಳ ಅವಧಿಯಲ್ಲಿ 5 ಕೋಟಿ 75 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ ಎಂದು ಹೇಳಲಾಗಿದೆ.

========================

ಬಂದವರೂ ಅಪಾರ: ನಾಲ್ಕುದಿನಗಳ ಅವಧಿಯಲ್ಲಿ ಬಂದವರ ಸಂಖ್ಯೆಯೂ ಅಪಾರ. ಮೊದಲ ದಿನ ಅಂದರೆ ಅಕ್ಟೋಬರ್ 24 ರಂದು ಒಂದೂವರೆ ಲಕ್ಷ, 25ರಂದು ಮೂರುವರೆ ಲಕ್ಷ, 26ರಂದು ಆರು ಲಕ್ಷ, 27ರಂದು ಮೂರುವರೆ ಲಕ್ಷ ಜನ ಬಂದಿದ್ದರು. ಎಲ್ಲಿಯೂ ತಳ್ಳಾಟಕ್ಕೆ ಆಸ್ಪದವಾಗದಂತೆ, ಬಂದವರೆಲ್ಲರೂ ಎಲ್ಲ ಮಳಿಗಳನ್ನು ನೋಡಿ, ತಿಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು ಎಂದು ವಿಸ್ತರಣಾ ನಿರ್ದೇಶನಾಲಯದ ಮುಖ್ಯಸ್ಥರಾದ ಡಾ. ಎಂ.ಎಸ್. ನಟರಾಜು ಹೇಳುತ್ತಾರೆ.

========================

ರಾಜ್ಯದಲ್ಲಿ ಮಳೆಯಾಶ್ರಿತ ಕೃಷಿಪ್ರದೇಶದ ವಿಸ್ತೀರ್ಣ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು 62 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜೊತೆಗೆ ಸಾರ್ವಜನಿಕ – ಖಾಸಗಿ ಸಂಸ್ಥೆಗಳು ಸಹಭಾಗಿತ್ವದಲ್ಲಿ ಕೃಷಿಕರಿಗೆ ಹೆಚ್ಚಿನ ತಂತ್ರಜ್ಞಾನ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎನ್ನುವ ಕುಲಪತಿ ಡಾ. ರಾಜೇಂದ್ರಪ್ರಸಾದ್, ಕೃಷಿಮೇಳದ ಯಶಸ್ಸಿಗೆ ವಿಶ್ವವಿದ್ಯಾಲಯದ ಎಲ್ಲ ಬೋಧಕ – ಬೋಧಕೇತರ ಸಿಬ್ಬಂದಿ ಪರಿಶ್ರಮದ ಜೊತೆ ರಾಜ್ಯ ಸರ್ಕಾರ, ಅದರ ವಿವಿಧ ಇಲಾಖೆಗಳ ಸಹಕಾರ ವಿಶೇಷವಾಗಿ ಕೃಷಿ, ಪೊಲೀಸ್ ಇಲಾಖೆ ಸಹಕಾರವನ್ನು ನೆನೆಯುತ್ತಾರೆ.

ಯುವಜನತೆಗೆ ಆದ್ಯತೆ:
ಕೃಷಿ ವಿಶ್ವವಿದ್ಯಾಲಯಗಳಿಂದ ಪ್ರಶಸ್ತಿಗಳನ್ನು ಪಡೆಯಬೇಕೆಂದರೆ 60 ವರ್ಷ ಮೀರಿರಬೇಕೆನೋ ಎಂಬ ಅಲಿಖಿತ ಸಂಪ್ರದಾಯ ನಡೆಯುತ್ತಾ ಬಂದಿತ್ತು. ಈ ಬಾರಿ ಹಿರಿಯರಿಗೂ ಪ್ರಶಸ್ತಿ ನೀಡುವುದರ ಜೊತೆಗೆ ಗಮನಾರ್ಹ ಸಾಧನೆ ಮಾಡುತ್ತಿರುವ ಯುವಕೃಷಿಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರಲ್ಲಿ ಇವರಿಗೆ ಆದ್ಯತೆ ನೀಡಿದ್ದು ಗಮನಾರ್ಹ. ಇದು ಯುವಜನತೆಯನ್ನು ಕೃಷಿಯತ್ತ ಹೆಚ್ಚೆಚ್ಚು ಸೆಳೆಯಲು ಸಹಕಾರಿ.

3 COMMENTS

  1. 2019ರ ಕೃಷಿಮೇಳಕ್ಕೆ ನಾನು ಸ್ನೇಹಿತರೊಂದಿಗೆ 25ರಂದು ಮತ್ತು 27ರಂದು ಭೇಟಿ ಕೊಟ್ಟಿದ್ದೆ. ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಯಾವುದೇ ರೀತಿಯ ಲೋಪ ನಮ್ಮ ಗಮನಕ್ಕೆ ಬರಲಿಲ್ಲ. ಮಳೆ ನಮ್ಮೆಲ್ಲರನ್ನು ಕಾಡದೆ, ಬಿಸಿಲು ಇಲ್ಲದೆ, ಹದವಾದ ವಾತಾವರಣ ಇದ್ದುದು ನಮ್ಮೆಲ್ಲರ ಸೌಭಾಗ್ಯ. ರಾಜ್ಯ ಸರ್ಕಾರದ ಅನೇಕ ಇಲಾಖೆಗಳು, ಕೃಷಿ ವಿಶ್ವವಿದ್ಯಾನಿಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿವಿಧ ವ್ಯಾಪಾರಸ್ಥರು, ಎಲ್ಲರ ಪರಿಶ್ರಮ, ಭಾಗವಹಿಸುವಿಕೆ ಶ್ಲಾಘನೀಯ. ಈ ಕೃಷಿಮೇಳಕ್ಕೆ ಧಾವಿಸಿದ ಜನಸ್ತೋಮವನ್ನು ನೋಡಿ ನಾವು ಅನೇಕರು ಅಕ್ಷರಶಹ ಬೆರಗಾಗಿದ್ದೇವೆ. ಕೃಷಿ ಮೇಳವು ನಮ್ಮೆಲ್ಲರಿಗೆ ಮನರಂಜನೆ, ಮಾಹಿತಿ ಮತ್ತು ವಿದ್ಯೆ ಇವುಗಳನ್ನು ದಯಪಾಲಿಸಿದೆ. ಶುಚಿ-ರುಚಿಯಾದ ಇನ್ನಿತರ ಖಾದ್ಯಗಳು ನಮ್ಮನ್ನು ಸೂರೆಗೊಂಡಿವೆ.

    ಇನ್ನು ಮುಂದೆಯೂ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಜರುಗುವ ಕೃಷಿ ಮೇಳಗಳು ಜನಪರವಾಗಿ, ಜನತೆಯ ಶ್ಲಾಘನೆಗೆ ಪಾತ್ರವಾಗುತ್ತದೆ ಎಂಬ ಆಶಯದೊಂದಿಗೆ.. ಶ್ರಮವಹಿಸಿ ದ ಎಲ್ಲರನ್ನೂ ವಂದಿಸುತ್ತಾ, ನನ್ನ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ..

    ಜೆ ರಾಜ್

    • ಬಹಳ ಸರಿಯಾಗಿ ಬರೆದಿದ್ದೀರಿ. ನನ್ನ ಅನುಭವವೂ ಅದೇ. ಇನ್ನು ಮುಂದೆಯೂ ಹೀಗೇ ನಡೆಯಲೆಂದು ಆಶಿಸುತ್ತೇನೆ.
      … ರಘು

LEAVE A REPLY

Please enter your comment!
Please enter your name here