ಬೆಂಗಳೂರು: ಕೃಷಿಕರಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಅವರಿಗೆ ಆರೋಗ್ಯ ವಿಮೆ ಮೂಲಕ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುವ ಯಶಸ್ವಿನಿ ಯೋಜನೆ ಮರು ಅನುಸ್ಠಾನಗೊಂಡಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ ಸೂಚನೆಯಂತೆ ಸಹಕಾರ ಇಲಾಖೆಯ ಸಚಿವಾಲಯ ಇಂದು ಅಂದರೆ ಅಕ್ಟೋಬರ್ 12, 2022ರಂದು ಆದೇಶ ಹೊರಡಿಸಿದೆ. ಇದರಿಂದ ಅಪಾರ ಸಂಖ್ಯೆಯ ಕೃಷಿಕರಿಗೆ ನೆರವಾಗಲಿದೆ.
ಈ ಆದೇಶದಂತೆ ಯಶಶ್ವಿನಿ ಯೋಜನೆ ನವೆಂಬರ್ 01, 2022ರಿಂದ ಅನುಷ್ಠಾನಗೊಳ್ಳಲಿದೆ. 2022 – 2023ನೇ ಸಾಲಿನ ಬಜೆಟ್ ನಲ್ಲಿ ಯಶಸ್ವಿನಿ ಯೋಜನೆ ಮರು ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ ಯೋಜನೆಯನ್ನು ಪರಿಷ್ಕರಣಗೊಳಿಸಿ ಮರುಜಾರಿಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ಈ ಹಿಂದೆ ರಾಜ್ಯ ಸರ್ಕಾರದ ಆದೇಶದಂತೆ ಸಹಕಾರ ಇಲಾಖೆ 2003ರಲ್ಲಿ ಯಶಸ್ವಿನಿ ಯೋಜನೆ ಜಾರಿಗೊಳಿಸಿತ್ತು. ಇದೇ ಇಲಾಖೆಯಡಿ 2018ರ ತನಕ ಯೋಜನೆ ಜಾರಿಯಲ್ಲಿತ್ತು. ಬಳಿಕ ಯೋಜನೆ ಆರೋಗ್ಯ ಇಲಾಖೆಗೆ ವರ್ಗಾವಣೆಗೊಂಡು ಸ್ವಲ್ಪ ಸಮಯ ಸ್ಥಗಿತಗೊಂಡಿತ್ತು. ಈ ನಂತರ ಜೂನ್ 01, 2018ರಲ್ಲಿ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಂಡಿತು..
ಯಶಸ್ವಿನಿ ಯೋಜನೆ ಮರು ಜಾರಿಗೆ ರಾಜ್ಯದ ಸಹಕಾರಿ ಸಂಸ್ಥೆಗಳ ಸದಸ್ಯರು, ರೈತರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಮರು ಜಾರಿಗೊಳಿಸಿದೆ. ಇದಕ್ಕಾಗಿ ಬಜೆಟಿನಲ್ಲಿ 300 ಕೋಟಿ ಅನುದಾನ ಒದಗಿಸಲಾಗಿದೆ.
ಮುಖ್ಯವಾಗಿ ಈ ಯೋಜನೆ ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ರಚಿತವಾಗಿದೆ. ಹಾಲು ಮಹಾ ಮಂಡಳಿಗೆ ಹಾಲು ಪೂರೈಕೆ ಮಾಡುವ ಹೈನುಗಾರರು, ಸಹಕಾರ ಸಂಘಗಳ ಸದಸ್ಯರಾಗಿರುವ ರೈತರಿಗೂ ಇದರ ಪ್ರಯೋಜನ ದೊರೆಯಲಿದೆ. ಈ ಯೋಜನೆ ಜಾರಿಗಾಗಿ “ಯಶಸ್ವಿನಿ ಸಹಕಾರ ಸದಸ್ಯರ ಆರೋಗ್ಯ ಟ್ರಸ್ಟ್ ರಚಿತಗೊಂಡಿದೆ.. ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿರುತ್ತಾರೆ. ಸದಸ್ಯತ್ವ ನೋಂದಣಿ ಪ್ರಕ್ರಿಯೆ ಇದೇ ನವೆಂಬರ್ 1ನೇ ತಾರೀಖಿನಿಂದ ಆರಂಭವಾಗಲಿದೆ.