ಬದಲಾಗುತ್ತಿರುವ ಹವಾಮಾನ ಆವರ್ತನ; ಮುಂಗಾರು – ಲಾ ನಿನಾ ಸಂಧಿ ಸಾಧ್ಯತೆ ಕಡಿಮೆ

0

ಹವಾಮಾನ ಆವರ್ತನಗಳು ನಿರಂತರವಾಗಿ ಬದಲಾಗುತ್ತಿವೆ. ಹಿಂದಿನ ಮುನ್ಸೂಚನೆಗಳಂತೆ ಆಗಸ್ಟ್ ನಲ್ಲಿ ಲಾ ನಿನಾ ಆಗಮನ ಸಾಧ‍್ಯತೆ ಅಂದಾಜಿಸಲಾಗಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಬರಬಹುದೆಂಬ ನಿರೀಕ್ಷೆ ಇತ್ತು. ಇವೆರಡೂ ತಿಂಗಳುಗಳಲ್ಲಿಯೂ ನೈರುತ್ಯ ಮುಂಗಾರು ಅವಧಿಗೆ ಬರುತ್ತದೆ. ಆದ್ದರಿಂದ ಲಾ ನಿನಾ ಸಂಗಮದಿಂದ ಮಳೆ ಆರ್ಭಟ ಮತ್ತಷ್ಟೂ ಹೆಚ್ಚಾಗಬಹುದೆಂದು ಭಾವಿಸಲಾಗಿತ್ತು.

ಇತ್ತೀಚಿನ ಹವಾಮಾನ ಮುನ್ಸೂಚನೆಗಳ ಪ್ರಕಾರ ಮುಂಗಾರು ಅವಧಿ ಕಳೆದ ನಂತರ ಲಾ ನಿನಾ ಆಗಮನದ ಸಾಧ್ಯತೆ ಇದೆ. ಆಗ ಭಾರತದ ಕೆಲವು ಪ್ರದೇಶಗಳು ಹಿಂಗಾರು ಮಾರುತಗಳ ಪರಿಧಿಗೆ ಒಳಪಟ್ಟಿರುತ್ತವೆ.

ಲಾ ನಿನಾ ನವೆಂಬರ್‌ನಲ್ಲಿ  ಆಗಮಿಸಬಹುದು ಎಂದು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಬುಲೆಟಿನ್ ಹೇಳಿದೆ. ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಲಾ ನಿನಾ ಹವಾಮಾನ ಮಾದರಿಯ ಸಾಧ್ಯತೆಯ ಆರಂಭಿಕ ಚಿಹ್ನೆಗಳು ಸ್ಪಷ್ಟವಾಗಿವೆ,.

“ಎಲ್ ನಿನೊ ತಟಸ್ಥ ಪರಿಸ್ಥಿತಿಗಳು ಪಶ್ಚಿಮ ಪೆಸಿಫಿಕ್ನಲ್ಲಿ ಸ್ವಲ್ಪ ಸಮಯದವರೆಗೆ ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಇದು ಮುಂದುವರಿಯುವ ನಿರೀಕ್ಷೆಯಿದೆ.  ವರ್ಷದ ಕೊನೆಯ ತಿಂಗಳುಗಳಲ್ಲಿ  ಲಾ ನಿನಾ ಹೊರಹೊಮ್ಮುವ ಸಾಧ್ಯತೆಗಳು  ಶೇಕಡ  55%  ಆಗಿರುತ್ತದೆ.

 ಪೂರ್ವ ಪೆಸಿಫಿಕ್‌ ಮಹಾಸಾಗರದಲ್ಲಿ  ಸೌಮ್ಯ, ತಂಪು ಹವಾಮಾನವಿದೆ.  ಆದರೆ ನಾವು ಅದನ್ನು ಈಗಲೇ ಲಾ ನಿನಾ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸಾಗರ ಅಧ‍್ಯಯನ ವಿಜ್ಞಾನಿಗಳು ಹೇಳಿದ್ದಾರೆ.

ಭಾರತದ ಹೆಚ್ಚಿನ ಪ್ರದೇಶಗಳು ವಾರ್ಷಿಕ ಮಳೆಯ ಶೇಕಡ  90ರಷ್ಟನ್ನು  ನೈಋತ್ಯ ಮುಂಗಾರು ಮಾರುತಗಳಿಂದ ಪಡೆಯುತ್ತದೆ. ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಚಾಲ್ತಿಯಲ್ಲಿರುವ ಹಿಂಗಾರು ಮಾರುತಗಳು  ಸಾಮಾನ್ಯವಾಗಿ ದೇಶದ ಆಗ್ನೇಯ ಭಾಗಗಳನ್ನು ಹೊರತುಪಡಿಸಿ ಕಡಿಮೆ ಮಳೆಯನ್ನು ತರುತ್ತವೆ.

ಜುಲೈ-ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಲಾ ನಿನಾ ವಿಕಸನಗೊಂಡಿದ್ದರೆ ನೈರುತ್ಯ ಮುಂಗಾರು ಇನ್ನೂ ಬಲಯುತವಾಗಿರುತ್ತಿತ್ತು. ಲಾ ನಿನಾ ಪ್ರಭಾವದಿಂದ ಹಿಂಗಾರು ಅವಧಿಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗುವುದನ್ನು ಹಲವು   ಅಧ್ಯಯನಗಳು  ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ  ಈ ವರ್ಷದ ನಂತರ ಲಾ ನಿನಾ ಮತ್ತೆ ಭಾರೀ ಮಳೆಯನ್ನು ತರಬಹುದು  ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ.

LEAVE A REPLY

Please enter your comment!
Please enter your name here