
ಕೊರೊನಾ ತಂದಿಟ್ಟಿರುವ ಸಂಕಷ್ಟಗಳು ಹಲವು. ಬೇಕೆಂದಾಗ ಮಾರುಕಟ್ಟೆಗೆ ಹೋಗುವ ಹಾಗಿಲ್ಲ. ಹೋದಾಗ ಬೇಕಾದ್ದನ್ನು ತರುವುದರ ಜೊತೆಗೆ ಅತ್ಯವಶ್ಯಕವಾಗಿ ಬೇಕಾದ್ದನ್ನು ಮರೆತು ಬರುವುದೇ ಹೆಚ್ಚು. “ಮನೆಯಲ್ಲಿರಿ – ಸುರಕ್ಷಿತವಾಗಿರಿ” ಎಂದು ಸರ್ಕಾರ ಹೇಳುತ್ತಿರುವುದನ್ನು ನಮ್ಮೆಲ್ಲರ ಕ್ಷೇಮದ ದೃಷ್ಟಿಯಿಂದ ಪಾಲಿಸುವುದು ಸೂಕ್ತವಾಗಿದೆ.
ಇಂಥ ಕೊರೊನಾ ಕಠೋರ ದಿನಗಳಲ್ಲಿ ನನ್ನಮ್ಮ ನನ್ನಜ್ಜಿ ತುಂಬ ಅಂದರೆ ತುಂಬ ನೆನಪಾಗುತ್ತಿದ್ದಾರೆ .ಅವರ ನೆನಪಿಸಿಕೊಳ್ತಾ ನಾನು ಅವ್ರಿಗೆ ಅದೆಷ್ಟು ಕೃತಜ್ಞತೆ ಹೇಳ್ತೇನೋ ಲೆಕ್ಕವೇ ಇಲ್ಲ. ಏನೇನೂ ಇಲ್ಲದಾಗಲೂ ಮನೆಯನ್ನ ಮನೆಯವರನ್ನ ಸುಧಾರಿಸಿ ಬದುಕು ದೂಡಿದವರವರು. ಚಾಪೆ ಇದ್ದಷ್ಟು ಕಾಲು ಚಾಚಿ ಇದ್ದ ಸ್ವಲ್ಪದರಲ್ಲೇ ದಿನವನ್ನ ಚಂದವಾಗಿ ನೂಕಿದವರು ಅವರು. ಜೊತೆಗೆ ನಾವೆಲ್ಲ ಅವುಗಳನ್ನು ಅವರು ಕಲಿಸದೇ ಕಲಿತವರು. ಇಂಥದ್ದನ್ನು ಕಲಿ ಎಂದು ಬಲವಂತ ಮಾಡದೇ ಮೌನವಾಗಿ ಜೀವನದ ನೆಮ್ಮದಿಗೆ ಬೇಕಾದುದ್ದನ್ನು ಕಲಿಸಿದ ಮನೆಯೊಳಗಿನ ಮಹಾನ್ ಶಿಕ್ಷಕರವರು.
ನಿತ್ಯ ಅನ್ನ ಮಾಡೋಕೆ ಅಕ್ಕಿ ಅಳೆದು ತೆಗೆದು ಅದರಲ್ಲಿ ಒಂದು ಮುಷ್ಠಿಯನ್ನ ವಾಪಸ್ ಅಕ್ಕಿಯ ಡಬ್ಬಿಗೆ ಸುರಿದು ಮಿತವ್ಯಯ ಮಾಡಿದವ್ರು ಅವ್ರು. ಬಾಲ್ಯದಲ್ಲಿ ಅದೆಲ್ಲ ಅರ್ಥವಾಗದಿದ್ದರೂ ಬೆಳೆಯುತ್ತಾ ಅವರ ಮುಂದಾಲೋಚನೆ ಅರ್ಥವಾಗತೊಡಗಿತ್ತು. ಹುಳಿ ಸಾಂಬಾರ್ ಮಾಡಲು ಬೇಳೆ ಬೇಯಿಸಿದಾಗ ಅದರ ಮೇಲಿನ ಬೇಳೆಕಟ್ಟನ್ನ ತೆಗೆದು ಜಜ್ಜಿದ ಶುಂಠಿ, ಹಸಿಮೆಣಸು, ನಿಂಬೆ ರಸ, ಹಾಕಿ ಬಾಯಿಗೆ ರುಚಿ ಕೊಡುವ ಸಾರು ಮಾಡಿದವರು ಅವ್ರು. ಈ ರುಚಿ ಹುಡುಕಿದರೂ ಯಾವ ಪಂಚತಾರಾ ಹೋಟೆಲುಗಳಲ್ಲಿಯೂ ಸಿಗುವ ಸಾಧ್ಯತೆಯೇ ಇಲ್ಲ.
ತರಕಾರಿ ಇದ್ದಾಗ ಅದನ್ನ ಚೂರೂ ಹಾಳು ಮಾಡದೆ ಮಿತವ್ಯಯವಾಗಿ ಹೇಗೆ ಬಳಸಬೇಕು ಅನ್ನೋದು ಅವರಿಗೆ ಕರಗತವಾಗಿತ್ತು. ಅದೆಷ್ಟು ಬಗೆಯ ಸಾರು, ತಂಬುಳಿ ಗೊಜ್ಜು ಚಟ್ನಿಗಳು ಅವರ ಬತ್ತಳಿಕೆಯಲ್ಲಿ ಇರುತ್ತಿದ್ದವು…ಸೆಖೆಗಾಲದಲ್ಲಿ ತಯಾರಿಸಿ ಇಟ್ಟಿದ್ದ ಹಪ್ಪಳ ಸೆಂಡಿಗೆ ಇದ್ದರಂತೂ ಅದರಿಂದಲೂ ಸಾಸ್ಮಿ. ಹುಳಿಗಳನ್ನ ಮಾಡಿ ಬಡಿಸಿದವ್ರು ಅವ್ರು.
ಅನ್ನ ಬಾಗಿದ ಮೇಲೆ ಸಿಗೋ ತಿಳಿಯಿಂದಲೂ ರುಚಿಕಟ್ಟಾದ ಸಾರು ಮಾಡಿ ಕುಡಿಸಿದವರು ಅವ್ರು. ಯಾವುದೂ ಉಪಯೋಗಕ್ಕೆ ಬಾರದು ಎಂಬುದಂತೂ ಅವರ ಕೋಶದಲ್ಲೇ ಇರಲಿಲ್ಲ. ಸೊಪ್ಪು ತರಕಾರಿ ಇದ್ದರಂತೂ ಅದರ ಉಪಯೋಗ ಮುಗಿಯದ್ದು. ತರಕಾರಿಯ ಯಾವ ಭಾಗವೂ ಬಿಸಾಕಲು ಸಿಗವು. .ತೊಟ್ಟು, ಸಿಪ್ಪೆ….ತಿರುಳು… ಬೀಜ ಎಲ್ಲದರಿಂದಲೂ ರುಚಿಯಾದ ಅಡುಗೆ ತಯಾರಿ ಮಾಡುತ್ತಿದ್ರು. ಅದೆಷ್ಟು ರುಚಿಕಟ್ಟಾದ ಪದಾರ್ಥಗಳು….!!!
ಇಷ್ಟೆಲ್ಲಾ ಇವತ್ತು ನಾ ಅಡುಗೆ ಮಾಡಬೇಕಾದರೆ ನೆನಪಿಗೆ ಬಂತು….ಇವತ್ತು ಉಳಿದಿದ್ದು ಎರಡೇ ತರಕಾರಿ. ಒಂದು ಸೋರೆಕಾಯಿ ಮತ್ತು ನಿನ್ನೆ ಪಲ್ಯ ಮಾಡಿದಾಗ ತೆಗೆದಿಟ್ಟ ಬೆಂಡೆ ತೊಟ್ಟುಗಳು. ಎಳೆಯ ಸೋರೆಕಾಯಿಯದ್ದಂತೂ ಮೂರು ಬಗೆ ಅಡುಗೆ ತಯಾರಾದವು. ಅದರ ಸಿಪ್ಪೆಯ ಚಟ್ನಿ, ಮುಕ್ಕಾಲು ಭಾಗ ಹೋಳುಗಳು ಸಾಂಬಾರಾದರೆ….ಕಾಲುವಾಸಿ ಹೋಳುಗಳು ಸಣ್ಣಗೆ ಹೆಚ್ಚಿಕೊಂಡು ಸೀ ಅಥ್ವಾ ಕಲ್ಸು ಅನ್ನೋ ಹೊಟ್ಟೆಗೆ ತಂಪಾದ ವ್ಯಂಜನವಾಯ್ತು….ಇನ್ನು ಬೆಂಡೆಯ ತೊಟ್ಟನ್ನ ಹಾಗೆ ಸ್ವಲ್ಪ ತೆಂಗಿನ ಎಣ್ಣೆಯಲ್ಲಿ ಕರುಕುರು ಹುರಿದು ಉಪ್ಪು , ಖಾರದ ಪುಡಿ ಸೇರಿಸಿದ್ದೇ ಬಾಯಿಗೆ ರುಚಿಯಾದ ಫ್ರೈ ತಯಾರು….!!!
ಎಲ್ಲ ಇದ್ದಾಗ ಏನನ್ನೂ ಬಿಸಾಕದೆ..ಏನೂ ಇಲ್ಲದಾಗಲೂ ಇದ್ದುದರಲ್ಲೇ ಜಾಣ್ಮೆಯಿಂದ ರುಚಿರುಚಿಯಾಗಿ ಅಡುಗೆ ಅಟ್ಟಿ ಹೊಟ್ಟೆಗೂ ಮನಸ್ಸಿಗೂ ಖುಷಿಯನ್ನ… ಸಂತೃಪ್ತಿಯನ್ನು ತಂದ ಅಮ್ಮ ಅಜ್ಜಿಯರ ಜಾಣ್ಮೆಯ .ಮಿತವ್ಯಯದ ಅಡುಗೆಮನೆಯ ಅರ್ಥಶಾಸ್ತ್ರವನ್ನ ಇಂದು ನಾವು ಅದೆಷ್ಟು ನೆನೆದರೂ ಕಮ್ಮಿಯೇ. .ಅವರುಗಳಿಂದಾಗಿಯೇ ಇಂದಿನ ಈ ಗೃಹಬಂಧನದ ಸಮಯದಲ್ಲೂ ನಿರಾಳವಾಗಿ ಇರಲು ಸಾಧ್ಯವಾಗಿದ್ದು. .ಊಟದ ತಟ್ಟೆಯಲ್ಲಿ ಬಗೆಬಗೆ ವ್ಯಂಜನಗಳು ಕಾಣುವಂತಾಗಿದ್ದು…..!!!