ಆಹಾರದ ಮೂಲ ಕಡಿಮೆಯಾಯ್ತು – ಪ್ರಕೃತಿ ಸಮತೋಲನವೂ ಏರು ಪೇರು

ಈಗಲೂ ಕೂಡಾ ಇಂತಹ ಬೆಳೆಗಳು ಹಸಿವನ್ನು ನೀಗಿಸುವಲ್ಲಿ ದೊಡ್ಡ ಪಾತ್ರ ವಹಿಸಬಲ್ಲದು. ಅದಕ್ಕಾಗಿ ಒಂದಷ್ಟು ಫಸಲನ್ನು ಗಿಡದಲ್ಲಿಯೇ ಬಿಡಬೇಕು. ನಗರಗಳ ಪಾರ್ಕುಗಳಲ್ಲಿ ಕೂಡಾ ಹಲಸಿನಂತಹ ಹಣ್ಣಿನ ಮರಗಳನ್ನು ನೆಡುವುದು ಉತ್ತಮ. ಮನುಷ್ಯರಾಗಲಿ ಪ್ರಾಣಿಗಳಾಗಲಿ ಯಾರಾದರೂ ತಿನ್ನಲಿ, ಇದು ಆಹಾರದ ಪ್ರಶ್ನೆ. ಇಂತಹ ಹಲವಾರು ಸಂಗತಿಗಳಿವೆ. ಪ್ರತಿ ಪ್ರದೇಶಕ್ಕೂ ಭಿನ್ನವಾದ ಸಾಧ್ಯತೆಗಳಿವು. ಹುಡುಕುತ್ತ ಹೋದರೆ ದಟ್ಟಾರಣ್ಯದಲ್ಲೂ ಹಲವು ಕಾಲು ಹಾದಿಗಳಿವೆ. ಮನುಷ್ಯ ತಾನೊಬ್ಬನೇ ಬದುಕಲು ಸಾಧ್ಯವಿಲ್ಲ ಎಂದು ಪ್ರಕೃತಿ ಮತ್ತೆ ಮತ್ತೆ ಎಚ್ಚರಿಸುತ್ತಲೇ ಇದೆ. ಇನ್ನಾದರೂ ಎಚ್ಚರಾಗೋಣ.

1
ಲೇಖಕರು: ಪ್ರಸಾದ್ ರಕ್ಷಿದಿ, ರಂಗಭೂಮಿ ತಜ್ಞರು, ಕಾಫಿ ಬೆಳೆಗಾರರು

ನಾವೆಲ್ಲ ಚಿಕ್ಕವರಿದ್ದಾಗ ಹಲಸಿನ ಹಂಗಾಮು ಬಂತೆಂದರೆ ಖುಷಿಯೋ ಖುಷಿ. ಇದಕ್ಕೆ ಮುಖ್ಯ ಕಾರಣ ಹೊಟ್ಟೆ ತುಂಬುವಷ್ಟು ಹಣ್ಣು ತಿನ್ನಬಹುದು ಎಂಬುದೇ ಆಗಿತ್ತು. ತೋಟಗಳಲ್ಲಿ ಕಾರ್ಮಿಕರಿಗೆ ಹಲಸಿನ ಕಾಯಿ (ಹಣ್ಣಲ್ಲ, ಬಲಿತ ಕಾಯಿ) ತೊಳೆಗಳೇ ಮಧ್ಯಾಹ್ನದ ಊಟ. ಜೊತೆಗೆ ಹಲಸಿನ ಬೀಜಗಳು ಮಳೆಗಾಲಕ್ಕೆಂದು ಸಂಗ್ರಹ. ಪ್ರತಿದಿನ ತಮ್ಮ ಸಂಗ್ರಹ ಎಷ್ಟಾಯಿತೆಂದು ಪರಸ್ಪರ ಲೆಕ್ಕ ವಿನಿಮಯ.

ವಾರದಲ್ಲಿ ಮೂರು ದಿನ ಹಲಸಿನ ಬಡುಕಿನ ಸಾರು.ಪಲ್ಯ. ಹಣ್ಣು ದೊರೆಯಲು ಪ್ರಾರಂಭದ ನಂತರ ವಾರದಲ್ಲಿ ಎರಡು ದಿನವಾದರೂ ಹಣ್ಣಿಟ್ಟು (ಕಡುಬು) ಒಂದು ಪಾವಕ್ಕಿ ಇಬ್ಬರ ಹೊಟ್ಟೆ ತುಂಬಿಸುತ್ತಿದ್ದರೆ ಅದೇ ಅಕ್ಕಿಯೊಂದಿಗೆ ಹಲಸಿನ ಹಣ್ಣು ಸೇರಿಸಿ ಕಡುಬು ಮಾಡಿದರು ನಾಲ್ವರ ಹೊಟ್ಟೆ ಗೆ ಸಾಕು. ನಮ್ಮ ಮನೆಯಲ್ಲಿ ಅಮ್ಮ ಹಲಸಿನ ತೊಳೆಯ ಉಪ್ಪಿಟ್ಟನ್ನೂ ಮಾಡುತ್ತಿದ್ದಳು.

ಹಲಸಿನ ಕಾಲ ಬಂತೆಂದರೆ ಲಾಚಾರಾದ ನಾಯಿಗಳು ಮೈತುಂಬಿಕೊಳ್ಳುತ್ತಿದ್ದವು. ಹಲಸಿನ ಕಾಯಿಯ ಎಲ್ಲಾ ತ್ಯಾಜ್ಯವೂ ದನಗಳಿಗೆ ಆಹಾರ. ಹಾಗೇ ನೂರಾರು ಪ್ರಾಣಿ ಪಕ್ಷಿಗಳಿಗೂ., ಮಲೆನಾಡಿನಲ್ಲಿ ತೋಟಗಳು ಮತ್ತು ಕಾಡಿನ ತುಂಬ ಹಲಸಿನಮರಗಳಿದ್ದವು. ನಿಧಾನವಾಗಿ ಟಿಂಬರ್ ವ್ಯಾಪಾರ ಹೆಚ್ಚುತ್ತಿದ್ದಂತೆ, ಹಲಸಿನ ಮರಗಳ ಸಂಖ್ಯೆ ಕಡಿಮೆಯಾಗತೊಡಗಿತು. .ತೋಟಗಳಲ್ಲಿ ಸಿಲ್ವರ್ ಓಕ್ ನಂತಹ ಮರಗಳು ತುಂಬಿದವು. ಇದರಲ್ಲಿ ಅರಣ್ಯ ಇಲಾಖೆಯ ಪಾಲೂ ದೊಡ್ಡದು. ಅರಣ್ಯ ಇಲಾಖೆ ಪ್ರತಿ ವರ್ಷವೂ ಲಕ್ಷಾಂತರ ಸಿಲ್ವರ್ ಓಕ್ ಗಿಡಗಳನ್ನು ಹಂಚತೊಡಗಿತು. ನೂರಾರು ಖಾಸಗಿ ನರ್ಸರಿಗಳೂ ಸಿಲ್ವರ್ ಓಕ್ ಗಿಡಗಳನ್ನು ಮಾಡಿ ಮಾರತೊಡಗಿದರು.

ಇದರಿಂದಾಗಿ ಒಂದು ಆಹಾರದ ಮೂಲ ಕಡಿಮೆಯಾದದ್ದಷ್ಟೇ ಅಲ್ಲ ಪ್ರಕೃತಿ ಸಮತೋಲನವೂ ಏರು ಪೇರಾಯಿತು. ಹಲಸಿನ ಮರದ ಎಲೆಗಳು ಉದುರಿ ಭೂ ಫಲವತ್ತತೆಯನ್ನು ಹೆಚ್ಚಿಸಿದರೆ. ಸಿಲ್ ಓಕ್ ಎಲೆಗಳಲ್ಲಿ ಆ ಗುಣ ಇಲ್ಲ ಒಲೆಯಲ್ಲಿ ಬೆಂಕಿ ಹಚ್ಚಲು ಬಳಸಬಹುದು ಎಣ್ಣೆ ಯ ಅಂಶ ಇರುವುದರಿಂದ ಚೆನ್ನಾಗಿ ಉರಿಯುತ್ತದೆ. ಆದರೆ ಸಿಲ್ವರ್ ಓಕ್ ಆಗಾಗ ಕಡಿದು ಮಾರುವ ಮೂಲಕ ಕೃಷಿಕರಿಗೆ ಒಂದಷ್ಟು ಉಪ ಆದಾಯಕ್ಕೆ ದಾರಿಯಾಯಿತು.

ಈಗ ಅದೇ ಸಿಲ್ವರ್ ಓಕ್ ದೊಡ್ಡ ಪ್ರಮಾಣದ ಭೂ ಕುಸಿತಕ್ಕೂ ಕಾರಣ ವಾಗುತ್ತಿರುವುದು ಅರಿವಿಗೆ ಬರುತ್ತಿದೆ. ಇದೇ ಸಾಲಿಗೆ ಅಕೇಶಿಯ, ಮಾಂಜಿಯಂ, ಮೈಸಾಫ್ಸಾ…ದಂತಹ ಮರಗಳು ಸೇರುತ್ತವೆ. ಮಲೆನಾಡಿನಲ್ಲಿ ಇದೊಂದೇ ಅಲ್ಲ ಬಾಳೆಯೂ ಆಹಾರ ಒಂದು ಮುಖ್ಯ ಭಾಗವಾಗಿತ್ತು. ಕೇರಳದಲ್ಲಿ ನೇಂದ್ರವಿದ್ದರೆ. ನಮ್ಮಲ್ಲಿ ದೈ ಬಾಳೆಕಾಯಿ (ಸಾರಿನ ಬಾಳೆ) ಸಾರು ಪಲ್ಯ ಮಾತ್ರ ವಲ್ಲ ಕಾಯಿಯನ್ನು ಬೇಯಿಸಿ ಮಾಡಿದ ಉಪ್ಪಿಟ್ಡು ಬೆಳಗಿನ ತಿಂಡಿಯಾಗಿರುತ್ತಿತ್ತು.

ಸೀ ಕುಂಬಳ ಸೌತೆಕಾಯಿ ಸೇರಿದಂತೆ ಹಲವು ತರಕಾರಿಗಳು ಕಡಬಿನ ಭಾಗವಾಗಿರುತ್ತಿದ್ದವು. ಇದರಿಂದ ಅಕ್ಕಿಯ ಬಳಕೆ ಸ್ವಲ್ಪ ಕಡಿಮೆಯಾಗಿ ಆಹಾರ ದ ಕೊರತೆಯನ್ನು ನೀಗಿಸಿಕೊಳ್ಳಲು ಸಹಾಯವಾಗುತ್ತಿತ್ತು. ಮಲೆನಾಡಿನಲ್ಲಿ ಇಂತಹ ಬೆಳೆಗಳು ಕಡಿಮೆಯಾಗಲು ಪ್ರಾಣಿಗಳ ಕಾಟವೂ ಕಾರಣವಾಗಿದೆ. ಆನೆ ಮಂಗಗಳ ಕಾಟ ಹೆಚ್ಚಾದಂತೆ ಜನ ಹಲಸು ಬಾಳೆ ನೆಡುವುದನ್ನು ಕಡಿಮೆ ಮಾಡಿದರು. ಹಲಸಿನ ಮರಗಳು ಇದ್ದರೂ ಪ್ರಾಣಿಗಳು ಬಾರದಿರಲೆಂದು ಹಲಸಿನ ಕಾಯಿ ಎಳೆಯದಿದ್ದಾಗಲೇ ತೆಗೆಸಿಹಾಕತೊಡಗಿದರು. ಇದರಿಂದಾಗಿ ಪ್ರಾಣಿಗಳ ಆಹಾರ ಸರಪಳಿಯೂ ತುಂಡಾಗಿ ಅವು ಬೇರೆ ಬೆಳೆಗಳನ್ನು ನಾಶ ಮಾಡತೊಡಗಿದವು.

ಈ ವಿಚಾರದಲ್ಲಿ ಕೃಷಿಕರನ್ನು ದೂರುವವರಿಗೆ ಒಂದುಮಾತು, ಕೃಷಿಯನ್ನೇ ನಂಬಿ ಬದುಕುವ ರೈತ ತನ್ನ ಕಣ್ಣೆದುರೇ ಬೆಳೆ ನಾಶವಾಗುವುದನ್ನು ಕಂಡು ತಡೆಯಲಾರ. ಅವನಿಗೆ ತನ್ನ ಬದುಕೂ ಅಷ್ಟೇ ಮುಖ್ಯ. ಉದಾಹರಣೆಗೆ ಬೇರೆ ಯಾವ ಪ್ರಾಣಿಗಳ ಕಾಟವನ್ನೂ ಸಹಿಸಬಹುದು ನಮ್ಮ ಹತ್ತಿರದ ಸಂಬಂಧಿಗಳಾದ ಕಪಿಗಳ ಕಾಟ ಅಸಾಧ್ಯವೆಂಬುದು ಎಲ್ಲ ರೈತರ ಅನುಭವ. ಅವು ತಿನ್ನುವುದಕ್ಕಿಂತ ಹಾಳು ಮಾಡುವುದೇ ಹೆಚ್ಚು. ಗಿಡಗಳನ್ನೂ ನಾಶ ಮಾಡಿಬಿಡುತ್ತವೆ. ಹಾಗಾಗಿ ಇತರ ಎಲ್ಲಾ ಪ್ರಾಣಿಗಳಿಗಿಂತ ಮಂಗನ ಕಾಟ ರೈತ ಕೃಷಿಯನ್ನೇ ತೊರೆಯುವಂತೆ ಮಾಡಿಬಿಡುತ್ತದೆ.

ಕೃಷಿಯ ಅನುಭವ ಇಲ್ಲದ ಕೆಲವರು ಪತ್ರಿಕೆಗಳಲ್ಲಿ ಕೊಡುವ ಸಲಹೆಗಳನ್ನು ನೋಡಿ ರೈತರು ಸಿಟ್ಟಿಗೇಳುವುದು ಸಹಜ. ಯಾಕೆಂದರೆ ರೈತ ಅದನ್ನು ಅನುಭವಿಸುವುದು ತನ್ನ ತಪ್ಪಿನಿಂದಲ್ಲ; ಬದಲಿಗೆ ಅಭಿವೃದ್ಧಿ ತಂದ ಅನಾಹುತಗಳಿಂದ.. ಈ ಆಧುನಿಕತೆ, ಹಳ್ಳಿಗಳಲ್ಲಿಯೂ ಹಲವು ಬದಲಾವಣೆ ತಂದಿತು. ಹಲಸು ತಿಂದರೆ ಗ್ಯಾಸ್ಟ್ರಿಕ್ ಆಗುತ್ತದೆ. ಅಯ್ಯೋ ಬಾಳೆಕಾಯಿ ಉಪ್ಪಿಟ್ಟೇ ?! ಹುರುಳಿಕಾಳು ಉಸಲಿಯೇ ಥೂ… ಎಂಬ ಮಾತು ಕೇಳುತ್ತ. ಬೆಳಗಿನ ತಿಂಡಿಗೆ ವರ್ಮಿಸೆಲಿ, ಸಂಜೆಗೆ ನೂಡಲ್ಸ್, ಚಾಟ್ ಐಟಮ್ಸ್ ಬಂದವು.

ಮೊನ್ನೆ ಒಂದು ಘಟನೆ ನಡೆಯಿತು. ನನ್ನ ಪರಿಚಯದವರೊಬ್ಬರು. ಅತಿ ಸಣ್ಣ ಸ್ವಂತ ಉದ್ಯೋಗ ಮಾಡುತ್ತಾರೆ. ಬಿ.ಪಿ.ಎಲ್ ಕಾರ್ಡ್ ಇದೆ. ಕೆಲಸ ಇಲ್ಲದೆ. ಎರಡು ವಾರ ಆಯಿತು. ಮೊನ್ನೆ ರಾತ್ರಿ ಊಟಕ್ಕೆಂದು ಮಾಡಿದ ಮೀನು ಸಾರು ಅನ್ನಕ್ಕೆ ಬೆರೆಸಿದ ಮೇಲೆ ಅದು ಕೆಟ್ಟು ಹೋಗಿತ್ತೆಂದು ಗೊತ್ತಾಗಿ ಇಡೀ ಊಟ ಹಾಳಾಯಿತು. ಮತ್ತೆ ಅಡಿಗೆ ಅವರು ಮಾಡಲಿಲ್ಲ. ಮನೆಯಲ್ಲಿಯೇ ಬೆಳೆದ ಪಪ್ಪಾಯಿ ಹಣ್ಣಿತ್ತು ಅದನ್ನೇ ತಿಂದು ಮಲಗಿದರು. ಇದು ಮುಂದಾಲೋಚನಾ ಕ್ರಮ. ಸಾಮಾನ್ಯ ದಿನಗಳಲ್ಲಿ ನಾವು ಪಪ್ಪಾಯಿಯನ್ನು ಒಂದು ಆಹಾರವೆಂದು ಪರಿಗಣಿಸುವುದು ಕಡಿಮೆ.

ಹಿಂದಿನ ಕಾಲದಲ್ಲಿ ಹಿರಿಯರು ತೋಟಗಳಲ್ಲಿ ಮದ್ಯೆ ಮದ್ಯೆ ಹಣ್ಣಿನ ಗಿಡಗಳನ್ನು ನೆಡಬೇಕೆಂದು ಹೇಳುತ್ತಿದ್ದುದರಲ್ಲಿ ಹಲವು ಸಂಗತಿಗಳಿವೆ. ಕೆಲಸ ಮಾಡುವವರಿಗೆ ಹಸಿವಾದಾಗ ಹಸಿವು ನೀಗಿಸುವುದು ಮಾತ್ರವಲ್ಲ; ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ಒದಗಿಸುವ ಮೂಲಕ ಅವು ಬೇರೆ ಬೆಳೆಯ ಕಡೆಗೆ ಬರುವುದು ಕಡಿಮೆಯಾಗುತ್ತದೆ.

ಈಗಲೂ ಕೂಡಾ ಇಂತಹ ಬೆಳೆಗಳು ಹಸಿವನ್ನು ನೀಗಿಸುವಲ್ಲಿ ದೊಡ್ಡ ಪಾತ್ರ ವಹಿಸಬಲ್ಲದು. ಅದಕ್ಕಾಗಿ ಒಂದಷ್ಟು ಫಸಲನ್ನು ಗಿಡದಲ್ಲಿಯೇ ಬಿಡಬೇಕು. ನಗರಗಳ ಪಾರ್ಕುಗಳಲ್ಲಿ ಕೂಡಾ ಹಲಸಿನಂತಹ ಹಣ್ಣಿನ ಮರಗಳನ್ನು ನೆಡುವುದು ಉತ್ತಮ. ಮನುಷ್ಯರಾಗಲಿ ಪ್ರಾಣಿಗಳಾಗಲಿ ಯಾರಾದರೂ ತಿನ್ನಲಿ, ಇದು ಆಹಾರದ ಪ್ರಶ್ನೆ. ಇಂತಹ ಹಲವಾರು ಸಂಗತಿಗಳಿವೆ. ಪ್ರತಿ ಪ್ರದೇಶಕ್ಕೂ ಭಿನ್ನವಾದ ಸಾಧ್ಯತೆಗಳಿವು. ಹುಡುಕುತ್ತ ಹೋದರೆ ದಟ್ಟಾರಣ್ಯದಲ್ಲೂ ಹಲವು ಕಾಲು ಹಾದಿಗಳಿವೆ. ಮನುಷ್ಯ ತಾನೊಬ್ಬನೇ ಬದುಕಲು ಸಾಧ್ಯವಿಲ್ಲ ಎಂದು ಪ್ರಕೃತಿ ಮತ್ತೆ ಮತ್ತೆ ಎಚ್ಚರಿಸುತ್ತಲೇ ಇದೆ. ಇನ್ನಾದರೂ ಎಚ್ಚರಾಗೋಣ.

1 COMMENT

  1. ಸಹಜ, ಪಾಶ್ಚಿಮಾತ್ಯ ನಾಗರಿಕತೆ ನಮ್ಮಲ್ಲಿ ಆಳವಾಗಿ ಬೇರೂರಿ ನಮ್ಮತನವನ್ನೆ ನಾಸಮಾಡಿಕೊಂಡಿದ್ದೆವೆ (ಹಲಸು, ನೇರಳೆ, ಹತ್ತಿ ಹೋಗಿ ಸಿಲ್ವರ್, ಅಕೇಶಿಯ,.. ಬಂದತೆ).
    ನಿಜ, ಕರೋನಾ ನಮಗೆ ಈಗ ಒಂದು ಅವಕಾಶ ಕೊಟ್ಟಿದೆ ನಮ್ಮ ಪುರಾತನರು ನಿಸರ್ಗದೊಡನೆ ಒಡನಾಟವಿಟ್ಟುಕೊಂಡಿದ್ದರ ಅರಿವು ಮಾಡಿಕೊಂಡು, ಅದನ್ನು ಬಳಸಿದರಷ್ಟೆ ಬದುಕು ಸುಸ್ಥಿರ.

LEAVE A REPLY

Please enter your comment!
Please enter your name here