ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

0
  • ಕೃಷಿ ವಿವಿ ಕೇವಲ ಕೃಷಿ ಪದವೀಧರರ ತಯಾರು ಮಾಡುವ ಸಂಸ್ಥೆಯಲ್ಲ

ಬೆಂಗಳೂರು: ನವೆಂಬರ್ 17: ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕು. ಇದಾಗಬೇಕಾದರೆ ಹೊಸ ತಳಿಗಳು, ಹೊಸ ಔಷಧ, ಮಣ್ಣಿನ ಫಲವತ್ತತೆ, ತಂತ್ರಜ್ಞಾನ, ರೈತರಿಗೆ ನ್ಯಾಯಯುತ ಬೆಲೆ, ಆಹಾರ ಸಂಗ್ರಹಣೆಗೆ ಗೋದಾಮುಗಳು ಆಗಬೇಕು ಇದ್ದಾಗ ಮಾತ್ರ ಸುಸ್ಥಿರವಾದ ಕೃಷಿ ಬೆಳವಣಿಗೆ ಆಗುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಉದ್ಘಾಟಿಸಿ ಕೃಷಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ಕೃಷಿವಿಶ್ವವಿದ್ಯಾಲಯ. 6 ದಶಕಗಳಿಂದ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರಾಜ್ಯದ ರೈತರಿಗೆ ಕೃಷಿಯಲ್ಲಿ ಆಗಿರುವ ಆವಿಷ್ಕಾರ ಹಾಗೂ ಬೆಳವಣಿಗೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.

ಕೃಷಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ

ಕೃಷಿಕರಿಗೆ ವಿಶ್ವವಿದ್ಯಾಲಯದಲ್ಲಿ ಆಗುವ ತಂತ್ರಜ್ಞಾನದ ಅಭಿವೃದ್ಧಿ, ಹೊಸ ತಳಿಗಳು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮುಂತಾದವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಕೃಷಿ ವಿದ್ಯಾಲಯ ಕೇವಲ ಕೃಷಿ ಪದವೀಧರರನ್ನು ತಯಾರು ಮಾಡುವ ಸಂಸ್ಥೆಯಲ್ಲ. ಕೃಷಿ ವಿದ್ಯಾರ್ಥಿಗಳನ್ನು ತಯಾರಿಸುವ ಜೊತೆಗೆ ಸಂಶೋಧನೆಗಳಿಗೆ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.

ನಮ್ಮ ರಾಜ್ಯ ಇಡೀ ದೇಶದಲ್ಲಿ ರಾಜಸ್ತಾನವನ್ನು ಬಿಟ್ಟರೆ ಹೆಚ್ಚು ಒಣ ಭೂಮಿ ಇರುವ ರಾಜ್ಯ. ಹೆಚ್ಚು ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ನಾವು ಎಲ್ಲಾ ರೈತರೂ ಕೃಷಿಯನ್ನು ಬಿಡದಂತೆ ಮಾಡಬೇಕಾದರೆ, ಕೃಷಿ ಲಾಭದಾಯಕವಾಗಬೇಕು. ಕೃಷಿ ಲಾಭದಾಯಕವಾಗದೇ ಇದ್ದರೆ ಬಹಳಷ್ಟು ಜನ ರೈತರು ಕೃಷಿಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬಹಳಷ್ಟು ಜನ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಮಾಡಿ ಬದುಕಬಹುದು ಎಂಬ ಪರಿಸ್ಥಿತಿ ನಿರ್ಮಿಸುವತ್ತ ಕೃಷಿ ವಿವಿಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ಅಧ್ಯಾಪಕರು ಹೆಚ್ಚು ಒತ್ತು ನೀಡಬೇಕು ಎಂದರು.

ಕಡಿಮೆ ನೀರಿನಲ್ಲಿಯೂ ಬೆಳೆಯುವಂಥ ತಳಿಗಳು ಅಗತ್ಯ
ಕೃಷಿ ವಿವಿ 5 ಹೊಸ ತಳಿಗಳನ್ನು ಬಿಡುಗಡೆ ಮಾಡಿರುವುದು ಸಂತೋಷ. ತಳಿಗಳು ನೀರು ಕಡಿಮೆಯಿದ್ದಾಗಲೂ ಬೆಳೆಯುವುದು ಸಾಧ್ಯವಿರಬೇಕು. ರೋಗನಿರೋಧಕಕ ಶಕ್ತಿ ಇರುವಂತೆ ಆಗಬೇಕು ಬಹಳಷ್ಟು ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ, ಬೆಳೆ ಇಲ್ಲದೇ, ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಷ್ಟದಲ್ಲಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಇದೆ. ಕೃಷಿ ಇದ್ದಲೆಲ್ಲಾ ಬರಗಾಲ ಉಂಟಾಗಿದೆ. ಮೊದಲು 4-5 ವರ್ಷಗಳಿಗೊಮ್ಮೆ ಬರಗಾಲ ಬರುತ್ತಿತ್ತು. ಕೆಲವೊಮ್ಮೆ ಭೀಕರ ಬರಗಾಲ ಬರುತ್ತದೆ. ಈ ಬಾರಿ 223 ತಾಲ್ಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲಾಗಿದೆ. ಹೆಚ್ಚು ಕಡಿಮೆ ಶೇ 90 ರಷ್ಟು ಬರಗಾಲ ಉಂಟಾಗಿದೆ ಎಂದು ವಿವರಿಸಿದರು.

ಸರ್ಕಾರ ಸಹಾಯಧನ ಕೊಟ್ಟರೂ  ಬೆಳೆಯ ನಷ್ಟವನ್ನು ತುಂಬಿಕೊಡಲು ಸಾಧ್ಯವಾಗುವುದಿಲ್ಲ. ನಷ್ಟ ಭರಿಸುತ್ತೇವೆ ಎಂದರೆ ಅದು ರೈತರನ್ನು ತಪ್ಪು ದಾರಿಗೆ ಎಳೆದಂತಗುತ್ತದೆ. ಸುಮಾರು 33 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಎನ್.ಡಿ.ಆರ್‍ಎಫ್ ಮಾರ್ಗಸೂಚಿಯ ಪ್ರಕಾರ ಸರ್ಕಾರ 17900 ಕೋಟಿ ರೂ.ಗಳ ಪರಿಹಾರ ಕೇಳಿದೆ. 16 ಸಾವಿರ ಕೋಟಿಯಷ್ಟು ರೈತರಿಗೆ ನಷ್ಟವಾಗುತ್ತದೆ. ಬೆಳೆವಿಮೆ ಮಾಡಿದ್ದರೂ ಪೂರ್ಣ ನಷ್ಟ ಭರಿಸಲು ಸಾಧ್ಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ರೈತರನ್ನು ಕಾಪಾಡುವುದು ಸರ್ಕಾರದ ಹಾಗೂ ವಿವಿಗಳ ಜವಾಬ್ದಾರಿ. ಕೃಷಿ ವಿವಿಗಳ ಪಾತ್ರ ಮಹತ್ವದ್ದು. ದೇಶದಲ್ಲಿ ಕೃಷಿ ಕ್ಷೇತ್ರ್ರದ ಮೇಲೆ ಆಹಾರಕ್ಕಾಗಿ ಅವಲಂಬನೆಯಾಗಿರುತ್ತಾರೆ. ಅವರಿಗೆ ಆಹಾರದ ಉತ್ಪಾದನೆಯಾಗಬೇಕು ಎಂದರು.

ರೈತರು ಬಹುಬೆಳೆಗಳನ್ನು ಬೆಳೆಯಬೇಕು:

ಕೃಷಿಯ ಹಿನ್ನಲೆಯಿಂದ ಬಂದ ನನಗೆ ರೈತರ ಕಷ್ಟ ತಿಳಿದಿದೆ. ರೈತರು ವರ್ಷಪೂರ್ತಿ ಜಮೀನಿನಲ್ಲಿ ದುಡಿಯುತ್ತಾರೆ. ಈ ಶ್ರಮಜೀವಿಗಳ ಜೀವನವನ್ನು ಹಸನುಗೊಳಿಸಲು, ಕೃಷಿ ವಿವಿಗಳು ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಪದವೀಧರರನ್ನು ತಯಾರು ಮಾಡುವ ಜೊತೆಗೆ ಸಂಶೋಧನೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಮರು ಪ್ರತಿಪಾದಿಸಿದರು.

ಸಿರಿಧಾನ್ಯಗಳು, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳಿಗೆ ಆರೋಗ್ಯದೃಷ್ಟಿಯಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹೆಚ್ಚಿನ ಬೇಡಿಕೆ ಇರುವ ಸಿರಿಧಾನ್ಯಗಳನ್ನು ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತರ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ವ್ಯವಸ್ಥೆಯನ್ನು ಪೂರೈಸಬೇಕು. ನಮ್ಮ ಸರ್ಕಾರ ರೈತರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ. ಕೃಷಿ ವಿವಿಗಳು ಹೊಸ ತಳಿಗಳು, ಹೊಸ ಸಂಶೋಧನೆಗಳನ್ನು ನಡೆಸಲು ಹೆಚ್ಚಿನ ಹಣವನ್ನೂ ಸರ್ಕಾರ ನೀಡಲು ಸಿದ್ಧವಿದೆ. ನಮ್ಮ ಸರ್ಕಾರ ಕೃಷಿ ಭಾಗ್ಯ ಯೋಜನೆ ಪುನ: ಜಾರಿ ಮಾಡಿದೆ. ಹೊಸ ತಳಿಗಳನ್ನು ಬೆಳೆಯುವ ಮೂಲಕ ರೈತರಿಗೆ ಹೆಚ್ಚಿನ ಫಸಲು ದೊರೆಯುತ್ತದೆ. ಬಹುಬೆಳೆಗಳನ್ನು ಬೆಳೆಯುವ ಪ್ರವೃತ್ತಿಯನ್ನು ರೈತರು ಬೆಳೆಸಿಕೊಳ್ಳಬೇಕು. ಇಂದು ಪುರಸ್ಕೃತರಾಗಿರುವ ರೈತ ಸಾಧಕರ ಸಾಧನೆಗಳು ರೈತರಿಗೆ ಮಾದರಿಯಾಗಬೇಕು ಎಂದರು.

LEAVE A REPLY

Please enter your comment!
Please enter your name here