ಬಂಜರು ಭೂಮಿ ನಂದನವನ ಆಯ್ತು

1
ಪುತ್ತೂರು ಬಲ್ನಾಡು ಸುರೇಶ್ Puttur Balnadu Suresh
ಚಿತ್ರ-ಲೇಖನ: ನರೇಂದ್ರ ರೈ ದೇರ್ಲ

ತೋಟ ನೋಡುವುದಕ್ಕೊಂದು ಕ್ರಮ ಇದೆಯಾ ಗೊತ್ತಿಲ್ಲ. ಹೇಗೆ ನೋಡಿದ್ರು ಎಲ್ಲಿಂದ ನೋಡಿದ್ರು ತೋಟ ತೋಟವೇ. ಆದರೆ ಸೂಕ್ಷ್ಮ ಕೃಷಿಕ ಮಾತ್ರ ತಾನು ನೋಡುವ ಹೊಸ ತೋಟದ ಬೇರಿಗಿಳಿಯಬಲ್ಲ. ತಾನು ನೆಟ್ಟ ಗಿಡ ಸತ್ತಾಗ, ಏರಿಸಿದ ಬಳ್ಳಿ ಜಾರಿದಾಗ, ಫಲ ಬಿಡುವ ಗಿಡದ ಗೆಲ್ಲು ಮುರಿದಾಗ ಅನುಭವಿಸಿದ ವೇದನೆ ನಷ್ಟ ಕಷ್ಟಗಳ ಜೀವನಾನುಭವ ಅವನ ಒಳಗಡೆ ಇರುತ್ತದೆ.

ಆ ದೃಷ್ಟಿಯಿಂದಲೇ ಹೊಸ ತೋಟವನ್ನು ದರ್ಶಿಸುವಾಗಲೆಲ್ಲ ಆತ ತನ್ನ ಹಸಿರು ಕಷ್ಟಗಳನ್ನೆಲ್ಲ ಅದರೊಂದಿಗೆ ಇಟ್ಟು ಅವಲೋಕಿಸುತ್ತಾನೆ.ಲಾಭ ಸುಸ್ಥಿರತೆ ಭವಿಷ್ಯದ ಯೋಜನೆಗಳೆಲ್ಲ ಆ ಸಂದರ್ಭದಲ್ಲಿ ಲೆಕ್ಕಕ್ಕೆ ಬರುತ್ತವೆ. ಹೊಸ ತೋಟದ ಯಜಮಾನನ ಶ್ರಮ, ಬೆವರು, ಪ್ರಯೋಗ ಪ್ರಯತ್ನಗಳ ಜೊತೆಗೆ ತನ್ನದನ್ನು ಸೇರಿಸಿ ತೌಲನಿಕವಾಗಿ ಒಂದು ತೀರ್ಮಾನಕ್ಕೆ ಬರುತ್ತಾನೆ. ಆ ಅನುಭವಗಳನ್ನು ಹೊತ್ತುಕೊಂಡೇ ತನ್ನ ನೆಲಕ್ಕೆ ಬಂದು ಪ್ರಯೋಗಕ್ಕೆಳಿಯುತ್ತಾನೆ.

ರಜಾ ದಿನಗಳಲ್ಲಿ ತೀರ್ಥಯಾತ್ರೆಗೆ ಹೋಗದೆ ಪ್ರವಾಸಿ ಕೇಂದ್ರಗಳಿಗೆ ಜಾರದೆ ತೋಟಗಳನ್ನು ನೋಡುವುದು ನನ್ನ ಹುಚ್ಚು. ಸಿಕ್ಕಿದ ಎಡೆಕಾಲದಲ್ಲಿ ಗುರುತು ಹಾಕಿಕೊಂಡು ಸ್ನೇಹಿತರ ತೋಟಗಳನ್ನು ಭೇಟಿ ಮಾಡುವೆ. ಹಾಗೆ ಕಳೆದ ವಾರ ರಾಯಚೂರಿನ ಕವಿತಾಳದ ಕವಿತಾ ಮಿಶ್ರ ಅವರ ಸಿರಿಗಂಧ, ಕೊಪ್ಪಳದ ಕಾಮನೂರಿನ ಪ್ಯಾಟಿ ತೋಟ ಎಲ್ಲ ನೋಡಿ ಬಂದಾಯ್ತು.

ಈ ಭಾನುವಾರ ಅರ್ಧ ದಿನ ನಾನು ವ್ಯಯಿಸಿದ ಕಾಲ ಬಹಳ ಮಹತ್ವದ್ದು. ಪುತ್ತೂರಿನ ಬಲ್ನಾಡು ಸುರೇಶ್ ಅವರ ತೋಟ – ನಾನು ಇತ್ತೀಚಿಗೆ ನೋಡಿದ ಕೃಷಿ-ತೋಟಗಳ ಪೈಕಿ ಅತ್ಯಂತ ಪರಿಣಾಮಕಾರಿ. ಪುತ್ತೂರಿನಿಂದ 6 ಕಿ.ಮೀ ದೂರದಲ್ಲಿರುವ ಬಲ್ಲಾಡು ಸುರೇಶರ ತೋಟ ನನಗೆ ಆಕರ್ಷಕವಾಗಿ ಕಾಣುವುದು ಕೇವಲ ಆ ತೋಟದ ಪ್ರದರ್ಶನ ಭಾಗಕ್ಕೆ ಅಲ್ಲ.

ಪುತ್ತೂರು ಬಲ್ನಾಡು ಸುರೇಶ್ ತೋಟ

ಕೃಷಿ ಮಾಡಲಿಕ್ಕೆ ಸಾಧ್ಯವೇ ಇಲ್ಲದ ನಿರ್ಲಕ್ಷಿತ ತುಂಡುಭೂಮಿಯನ್ನು ಕೃಷಿ ಯೋಗ್ಯವನ್ನಾಗಿ ಮಾಡಿದ ಅವರ ಅಪಾರ ಪರಿಶ್ರಮಕ್ಕೆ ಯಾರೇ ಆಗಲಿ ತಲೆಬಾಗಲೇಬೇಕು. ಅಬ್ಬಬ್ಬಾ ಅಂದರೆ ಹತ್ತು ಹನ್ನೆರಡು ಎಕರೆ ಇರುವ ಅಷ್ಟೊ ಜಾಗವೂ ಸುಲಭ ಕೃಷಿಕನ ಪ್ರಕಾರ ರಿಜೆಕ್ಟೆಡ್ ಭೂಮಿ ! ಕೊಡಗು ಚಿಕ್ಕಮಗಳೂರನ್ನು ನೆನಪಿಸುವ ಇಳಿಜಾರಿನ ಬೆಟ್ಟ ಕೊರಕಲಿನ ಆ ಜಾಗವನ್ನು ಅಡಿಕೆ ತೆಂಗು ಮೆಣಸು ಸಾಗುವಾನಿ ರಬ್ಬರ್ ಮೂಲಕ ಅಂಗೈಯಗಲ ಖಾಲಿ ಬಿಡದಂತೆ ಕೃಷಿ ಯೋಗ್ಯ ಮಾಡಿದ ಸುರೇಶರ ತಪಸ್ಸು ಅದ್ಭುತ.

ಪುತ್ತೂರು ಬಲ್ನಾಡು ಸುರೇಶ್

ಎರಡು ಕಾರಣಗಳಿಗಾಗಿ ಈ ಜಾಗವನ್ನು ಬೇರೆಯವರು ನಿರ್ಲಕ್ಷಿಸುವುದಷ್ಟೇ ಅಲ್ಲ ಊರು ಬಿಟ್ಟು ಓಡುವ ಕಾರಣವೂ ಇತ್ತು . 10 – 12 ಬೋರು ತೋಡಿದರೂ ಹನಿ ನೀರು ಸಿಗದೇ ಇರುವ ಅಥವಾ ಇದ್ದ ನೀರು ನಾಪತ್ತೆಯಾದ ಒಂದು ಪ್ರಕರಣ. ಎರಡು : ಎಲ್ಲಡೆ ಕಲ್ಲು ಶಿಲೆ ಬಂಡೆಗಳೇ ಅವಿತು ಕೂತು ಸಾರಮಣ್ಣಿಗೆ ಕೊರತೆಯಾದ ಕಾರಣ . ಅಷ್ಟೇ ಅಲ್ಲ ಮನುಷ್ಯ ನಡೆಯುವುದಕ್ಕೂ ಅಸಾಧ್ಯ ವಾಗುವ ಇಳಿಜಾರಿನ ಕಾರಣ. ಬೇರೆಯವರು ಬಿಟ್ಟು ಹೋಗಬಹುದಾದ ಜಾಗವನ್ನು ಜಾಣ್ಮೆಯಿಂದ ಸ್ವರೂಪ ಬದಲಾಯಿಸದೆ ಕೃಷಿ ಯೋಗ್ಯಗೊಳಿಸಿದವರು ಸುರೇಶರು . 64ರ ಹರೆಯದ ಇವರು ಈ ತೋಟಕ್ಕೊಂದು ಸುತ್ತು ಬಂದರೆ ಸಾಕು ವ್ಯಾಯಾಮಕ್ಕಾಗಿ ಬೇರೆ ಯಾವುದೂ ಅಗತ್ಯವಿಲ್ಲ.

ಪುತ್ತೂರು ಬಲ್ನಾಡು ಸುರೇಶ್ ಅವರ ತೋಟದಲ್ಲಿರುವ ಕೃಷಿ ಹೊಂಡ

ನೀರಿಲ್ಲದ ಕಡೆ ಇಷ್ಟೊಂದು ಸಮೃದ್ಧಿಯ ಕೃಷಿಯನ್ನು ಇವರು ಹೇಗೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಅತ್ಯಂತ ಸಹಜ. ಸಹಜ ನೀರಿನ ಹರಿವನ್ನೇ ಕೃತಕ ತೊಟ್ಟಿಗಳಲ್ಲಿ ತುಂಬಿಸಿ ಕಾಪಾಡಿಟ್ಟುಕೊಳ್ಳುವುದು; ಮಳೆಗಾಲ ಪೂರ ಸಹಜ ಹರಿಯುವ ನೀರಿನಲ್ಲಿ ಕರೆಂಟ್ ಉತ್ಪಾದಿಸುವುದು ಇವರ ಮತ್ತಷ್ಟು ಜಾಣ ನಡೆಗಳು. ಬೇರೆ ಕೃಷಿಕರು ಕಲಿಯಬೇಕಾದ ಪಾಠಗಳು.

ಪ್ರತಿ ರಬ್ಬರ್ ತೆಂಗು ಅಡಿಕೆಯ ಮರಗಳಿಗೂ ಕಾಳು ಮೆಣಸಿನ ಬಳ್ಳಿ ಏರಿಸಿದ್ದು; ರೋಗವಿಲ್ಲದೆ ಅವುಗಳನ್ನು ಕಾಪಾಡಿಕೊಂಡದ್ದು, ಗರಿಷ್ಠ ಆದಾಯದ ಮೂಲವನ್ನಾಗಿಸಿದ್ದು ಈ ಭಾಗದಲ್ಲಿ ದೊಡ್ಡ ಸಾಹಸವೇ. ಬಂಡೆ ಬಂಡೆಗಳ ಕಠಿಣ ಜಾಗದ ನಡುವೆ ಎಲ್ಲಿಂದಲೂ ಮಣ್ಣು ತಂದು ಸುರಿದು ಹಸಿರು ಹಚ್ಚಿದ ಇವರ ಪ್ರಯೋಗ ಕೃಷಿಕರಿಗೊಂದು ಮಾದರಿ .ಇಡೀ ತೋಟದ ಸ್ವಚ್ಛತೆ – ನಿರ್ವಹಣೆಗೆ ನಾನು ತಲೆಬಾಗಿದೆ.

ಆಧುನಿಕ ಸಲಕರಣೆಯನ್ನ ಕೃಷಿ ತುಂಬ ಪಸರಿಸಿ ಸುಲಭಗೊಳಿಸಿದ ಇವರ ಪ್ರಯತ್ನದ ಹಿಂದೆ ಹೊಸ ತಲೆಮಾರಿನ ಮಗನ ಬೆಂಬಲವಿದೆ .ನಾವು ಅವರ ತೋಟದಲ್ಲಿ ಇರುವಾಗಲೇ ಕುಂದಾಪುರದ ಮರವಂತೆಯಲ್ಲಿದ್ದ ಮಗ ಅಲ್ಲಿಂದಲೇ ಪಂಪ್ ಆನ್ ಮಾಡಿದ. ಅಂಗಳದ ಕಾರಂಜಿ ಒಮ್ಮೆಲೆ ಚಿಮ್ಮಿತು. ಅಡಿಕೆಯ ಬುಡಬುಡಗಳಿಗೆ ನೀರು ಜಿನುಗಿತು. ಮನೆ ಒಳಗಡೆಯಿಂದಲೇ ಬೇಕಾದಷ್ಟು ಹೊತ್ತು ಬೇಕಾದ ಕಡೆಗೆ ನೀರು ಹರಿಸುವ ಆಧುನಿಕ ತಂತ್ರಜ್ಞಾನ ಅವರದ್ದು.

ಸುರೇಶ್ ಬಲ್ಲಾಡು ಅವರ ಇಡೀ ತೋಟ ಕೃಷಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಒಂದು ಅಲ್ಲಿಯ ಭೂಮಿಯ ವಿನ್ಯಾಸ.ಬೇಸಿಗೆಯಲ್ಲಿ ನೀರಿಗೆ ಕಠಿಣ ಕೊರತೆ ಇದ್ದರೂ ಮಳೆಗಾಲದಲ್ಲಿ ಇವರ ತೋಟದ ಒಳಗಡೆ ಹರಿಯುವ ನೀರಿನ ಪುಟ್ಟ ಪುಟ್ಟ ತೊರೆ ಜಲಪಾತಗಳು ಸಹಜ ಕಾಡು ಇವೆಲ್ಲವೂ ನೋಡುಗರಿಗೆ ಆಕರ್ಷಕವಾಗಿದೆ.

ಹಣದ ದಾರಿಯಲ್ಲಿ ನಗರ ಸೇರಿದ ಮಂದಿಗೆ ಇಲ್ಲೊಂದು ನಾಲ್ಕು ಕುಟೀರ ಕಟ್ಟಿಕೊಟ್ಟರೆ ,ಹೋಂ ಸ್ಟೇ ವ್ಯವಸ್ಥೆ ಇದ್ದರೆ ಖಂಡಿತ ಪ್ರವಾಸಿಗರನ್ನು ನಿತ್ಯ ಆಕರ್ಷಿಸಬಹುದು .ಆದರೆ ಸುರೇಶರೂ ಸೇರಿ ಇದು ನಿಜವಾದ ನೆಲದವರಿಗೆ ಕಷ್ಟದ ಕೆಲಸ.ಹಾಗಂತ ಸುರೇಶರ ತೋಟ ನೋಡಲು ಬರುವರ ಸಂಖ್ಯೆಯೇನೂ ಕಡಿಮೆ ಇಲ್ಲ. ನಾನು ಹೋದ ದಿನ 15- 20 ಮಂದಿ ತೋಟ ನೋಡಲು ಬಂದಿದ್ದರು.

ಪುತ್ತೂರು ಬಲ್ನಾಡು ಸುರೇಶ್ ಅವರ ತೋಟ ನೋಡಲು ಬಂದ ಸಂದರ್ಶಕರು

ಎಲ್ಲವನ್ನು ನೋಡಿ ಹೊರಡುವ ಹೊತ್ತಿಗೆ ಸುರೇಶರನನ್ನು ಹೃದಯ ತುಂಬಿ ಅಭಿನಂದಿಸುವ ಕೆಲಸ ನನ್ನದಾಗಿತ್ತು. ಅವರು ಹೇಳಿದ ಒಂದು ಮಾತು ಎಲ್ಲಾ ಕೃಷಿಕರಿಗೆ ಅನ್ವಯಿಸಲೇಬೇಕು. “ನಾವು ನಾಲ್ಕೈದು ಮಂದಿ ಸಹೋದರರು. ಎಲ್ಲರೂ ಉನ್ನತ ಶಿಕ್ಷಣ ಪಡೆದು ನಗರ ಕೇಂದ್ರಿತರು. ಉದ್ಯಮಿಗಳು. ಉದ್ಯೋಗಸ್ಥರು. ಎಲ್ಲಿ ಯಾವಾಗ ನಾನು ಕೃಷಿಯ ದಾರಿಯಲ್ಲಿ ಲೋಕ ನಿರ್ಲಕ್ಷಕ್ಕೆ ಒಳಗಾಗುತ್ತೇನೋ ಎನ್ನುವ ಸಂಕುಚಿತತೆ ಇತ್ತು. ಈಗ ಈ ಕೃಷಿ ನನ್ನಲ್ಲೂ ಭರವಸೆ ಮೂಡಿಸಿದೆ. ಹತ್ತಾರು ಜನ ತೋಟ ನೋಡಲು ಬರುವಾಗ ಧನ್ಯತೆಯ ಭಾವನೆ ಮೂಡುತ್ತದೆ. ”

ಅಂದ ಹಾಗೆ, ನೋಡುಗ ಕೃಷಿಕರಿಗೊಂದು ಚಿಕ್ಕ ಸೂಚನೆ. ಸುರೇಶ ಬಲ್ನಾಡು ಅವರ ಕೈಯಲ್ಲಿರುವ ಎಲ್ಲ ಸಮಯ ಬರೀ ಬಂದವರಿಗೆ ತೋಟ ತೋರಿಸುವುದಕ್ಕೆ ಮುಗಿದು ಹೋಗಬಾರದು. ದಿನವಹಿ ಅವರ ಸಮಯವನ್ನು ನಾವು ಕಸಿದುಕೊಳ್ಳಬಾರದು. ಫೋನ್ ಮಾಡಿ ಸಮಯ ನಿಗದಿ ಮಾಡಿದ ಮೇಲೆ ಹೋಗಲೇಬೇಕು ಸಂಚಾರಿ ವಾಣಿ” 9901146078

1 COMMENT

LEAVE A REPLY

Please enter your comment!
Please enter your name here