ರಾಜ್ಯದಲ್ಲಿ ಅಪಾರ ಸಂಖ್ಯೆಯ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಕೃಷಿ ಇಲ್ಲದೇ ಹೈನುಗಾರಿಕೆಯನ್ನೇ ಪ್ರಧಾನವಾಗಿ ಮಾಡುತ್ತಿರುವ ವ್ಯಕ್ತಿಗಳಿದ್ದಾರೆ. ಇವರ ಜೀವನ ನಿರ್ವಹಣೆ ಇದರಿಂದಲೇ ಸಾಗುತ್ತಿದೆ. ಆದ್ದರಿಂದ ಸುಸ್ಥಿರ ಮಾದರಿಯಲ್ಲಿ ಹೈನುಗಾರಿಕೆ ಮಾಡುವುದು ಅತ್ಯಂತ ಅವಶ್ಯಕ.
ಹೈನುಗಾರಿಕೆ ಎನ್ನುವುದು ಮೇಲ್ನೋಟ್ಟಕ್ಕೆ ಸರಳ, ಆಕರ್ಷಕ. ಈ ಭಾವನೆಯಿಂದಲೇ ಈ ಕ್ಷೇತ್ರಕ್ಕೆ ಬಂದು ನಷ್ಟಕ್ಕೀಡಾದವರು ಅನೇಕ. ಇದಕ್ಕೆ ಪ್ರಮುಖ ಕಾರಣ ಹೈನುಗಾರಿಕೆ ಬಗ್ಗೆ ಅವರಿಗೆ ಸೂಕ್ತವಾದ ಮಾಹಿತಿ, ತರಬೇತಿ ಇಲ್ಲದಿರುವುದೇ ಆಗಿದೆ. ಹಸು ಸಾಕಲು ತರಬೇತಿ ಬೇಕೆ ಎಂದು ಭಾವಿಸುವವರೂ ಇದ್ದಾರೆ. ಖಂಡಿತ ಬೇಕು. ಇದರಿಂದ ವೈಜ್ಞಾನಿಕ ಮಾದರಿಯಲ್ಲಿ ಹೈನುಗಾರಿಕೆ ಮಾಡುವುದು ಮತ್ತು ಲಾಭಾಂಶ ಪಡೆಯುವುದು ಸಾಧ್ಯವಾಗುತ್ತದೆ.
ಹೈನುಗಾರಿಕೆಯಲ್ಲಿ ಸಣ್ಣ, ಮಧ್ಯಮ ಮತ್ತು ದೊಡ್ಡ ಪ್ರಮಾಣ ಹೀಗೆ ಬೇರೆಬೇರೆ ಹಂತಗಳಿವೆ. ಹೀಗೆ ಮಾಡುವವರರಲ್ಲಿ ವಿದೇಶಿ ತಳಿಗಳಾದ ಜರ್ಸಿ, ಎಚ್.ಎಫ್ ಮತ್ತು ಮಿಶ್ರತಳಿ ಹಸುಗಳನ್ನು ಸಾಕುವವರೇ ಹೆಚ್ಚು. ಇದಕ್ಕೆ ಕಾರಣ ಇವುಗಳು ಅಧಿಕ ಪ್ರಮಾಣದ ಹಾಲು ನೀಡುತ್ತವೆ ಎನ್ನುವುದೇ ಆಗಿದೆ. ಇಂಥ ಹಸುಗಳು ಪಾಲನೆ-ಪೋಷಣೆ ನಾನಾ ಕಾರಣಗಳಿಂದ ಸೂಕ್ಷ್ಮವಾಗಿರುತ್ತವೆ. ಬಹಳ ಜಾಗರೂಕತೆಯಿಂದ ಅವುಗಳನ್ನು ಸಾಕಣೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ.
ದೇಸೀ ತಳಿ ರಾಸುಗಳಿಗೆ ಭಾರತ ಹೆಸರುವಾಸಿ. ಇಲ್ಲಿನ ತಳಿಗಳು ಅಂತರರಾಷ್ಟ್ರೀಯ ಗಮನವನ್ನೂ ಸೆಳೆದಿವೆ. ಇದಕ್ಕೆ ಪ್ರಮುಖ ಕಾರಣ ಅವುಗಳಲ್ಲಿರುವ ರೋಗ ನಿರೋಧಕ ಶಕ್ತಿ. ಹಾಲಿನ ಗುಣಮಟ್ಟ. ಇವುಗಳ ಮತ್ತೊಂದು ವೈಶಿಷ್ಟ ಎಂದರೆ ವಿದೇಶಿ ತಳಿಗಳ ಹಾಗೆ ಇವು ಸೂಕ್ಷ್ಮ ದೇಹಸ್ಥಿತಿ ಹೊಂದಿರುವುದಿಲ್ಲ. ಎಂಥ ವಾತಾವರಣಕ್ಕೂ ಹೊಂದಿಕೊಳ್ಳುವ ಶಕ್ತಿ ಅವುಗಳಿಗಿರುತ್ತದೆ. ಅವುಗಳಿಗೆ ಮೌಲ್ಯವರ್ಧಿಸಿದ ಪಶು ಆಹಾರವನ್ನೇ ನೀಡಬೇಕು ಎಂದೇನೂ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಇವುಗಳ ಸಾಕಣೆ ವೆಚ್ಚ ಕಡಿಮೆ.
ಹೈನುಗಾರಿಕೆಗೆ ಮುಂದಾಗುವವರು ಮತ್ತು ಹೈನುಗಾರಿಕೆ ಮಾಡಬೇಕೆಂದು ಆಲೋಚಿಸುವವರು ಮೊದಲು ಮಾಡಬೇಕಾದ ಕೆಲಸ ಎಂದರೆ ಉತ್ತಮ ಆರೋಗ್ಯ ಇರುವ ಹಸುಗಳನ್ನು ಖರೀದಿ ಮಾಡುವುದು. ಈ ಹಂತದಲ್ಲಿ ಎಡವಿದರೆ ಮುಂದೆ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ. ಹಸುಗಳ ಆರೋಗ್ಯ ಉತ್ತಮವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ. ನುರಿತ ಹೈನುಗಾರರಿಗೆ ಮೇಲ್ನೋಟ್ಟದ ಕೆಲವು ಲಕ್ಷಣಗಳಿಂದಲೇ ಹಸು ಆರೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ. ಆದರೆ ಎಲ್ಲರಿಗೂ ಅಂಥ ಪರಿಣತಿ ಇರುವುದಿಲ್ಲ. ಆದ್ದರಿಂದ ನುರಿತ ಪಶುಪಾಲಕರು ಮತ್ತು ಪಶುವೈದ್ಯರ ನೆರವು ಪಡೆಯುವುದು ಸೂಕ್ತ.
ಕೆಲವರು ದೂರದೂರದ ಪ್ರದೇಶಗಳಿಂದಲೂ ಹಸುಗಳನ್ನು ತರುತ್ತಾರೆ. ಹೀಗೆ ತರುವಾಗ ಬಹಳ ಎಚ್ಚರಿಕೆ ವಹಿಸಬೇಕು. ಟೆಂಪೋ, ಲಾರಿಗಳಿಗೆ ಅವುಗಳನ್ನು ಆರಾಮವಾಗಿ ಹತ್ತಿಸಬೇಕು ಮತ್ತು ಇಳಿಸಬೇಕು. ಹೀಗೆ ಮಾಡದಿದ್ದರೆ ಅವುಗಳ ಕಾಲುಗಳಿಗೆ ತೊಂದರೆ ಉಂಟಾಗಬಹುದು. ಸಾರಿಗೆ ಖರ್ಚು ಉಳಿತಾಯದ ದೃಷ್ಟಿಯಿಂದ ಒಂದೇ ವಾಹನದಲ್ಲಿ ಅಧಿಕ ಸಂಖ್ಯೆಯ ರಾಸುಗಳನ್ನು ತುಂಬಬಾರದು. ಇದರಿಂದ ಅವುಗಳಿಗೆ ಉಸಿರುಗಟ್ಟಿದಂಥ ವಾತಾವರಣ ಉಂಟಾಗುತ್ತದೆ. ಅವುಗಳು ಆರಾಮವಾಗಿ ನಿಲ್ಲಲ್ಲು ಸ್ಥಳವಕಾಶ ಇರಬೇಕು.
ದೀರ್ಘ ಪಯಣವಿದ್ದಾಗ ವಾಹನದಲ್ಲಿ ಸೂಕ್ತ ಪ್ರಮಾಣದ ಮೇವು ಮತ್ತು ನೀರಿನ ಸಂಗ್ರಹಣೆ ಇರಬೇಕು. ದಾರಿಯಲ್ಲಿ ಸಿಗುವ ಹೊಂಡಗಳಲ್ಲಿ ಇರುವ ನೀರನ್ನು ಕುಡಿಸಬಾರದು. ಏಕೆಂದರೆ ಆ ನೀರು ಕಲುಷಿತವಾಗಿರುವ ಸಾಧ್ಯತೆ ಇರುತ್ತದೆ. ಜಾನುವಾರುಗಳಿಗೂ ನೀರಿನಿಂದ ಬರುವ ತೊಂದರೆಗಳು ಅನೇಕ. ನೀರು ಕಲುಷಿತವಾಗಿದ್ದರೆ ಅವುಗಳಿಗೆ ಬೇಧಿ ಉಂಟಾಗಬಹುದು. ಹೊಟ್ಟೆಯಲ್ಲಿ ಹುಳುಗಳ ಸಮಸ್ಯೆ ಉದ್ಬವಿಸಬಹುದು. ಆದ್ದರಿಂದ ಪಯಣದ ವೇಳೆ ಶುದ್ಧ ನೀರನ್ನು ಒದಗಿಸುವುದು ಅತ್ಯವಶ್ಯಕ.
ಹಸುಗಳನ್ನು ತಂದ ನಂತರ ಮೊದಲು ಮಾಡಬೇಕಾದ ಕೆಲಸವೆಂದರೆ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸುವುದು. ಕೆಲವೊಂದು ಪ್ರದೇಶಗಳಲ್ಲಿ ಜಾನುವಾರುಗಳ ಸಾಂಕ್ರಾಮಿಕ ರೋಗಗಳು ಹೆಚ್ಚಿರುತ್ತವೆ. ಅಂಥಲ್ಲಿ ಭಾರಿ ಮುಂಜಾಗ್ರತೆ ವಹಿಸಬೇಕು. ಸಾಂಕ್ರಮಿಕ ರೋಗಗಳಿಂದ ರಕ್ಷಣೆ ನೀಡುವಂಥ ಲಸಿಕೆಗಳನ್ನು ಹಾಕಿಸಬೇಕು. ಇದಕ್ಕಾಗಿ ಪಶುಪಾಲನಾ ನೋಟ್ ಬುಕ್ ನಿರ್ವಹಣೆ ಮಾಡಬೇಕು. ಅದರಲ್ಲಿ ಹಸುಗಳ ಆರೋಗ್ಯದ ವಿವರಗಳನ್ನು ಬರೆದಿಡಬೇಕು. ಲಸಿಕೆಗಳನ್ನು ಹಾಕಿಸಿದ ದಿನಾಂಕ ಮತ್ತು ಹಾಕಿಸಿದ ಲಸಿಕೆ ಯಾವುದು ಎಂಬ ವಿವರ ನಮೂದಿಸಬೇಕು.
ಪ್ರಯಾಣದ ವೇಳೆ ಅನಾರೋಗ್ಯಕ್ಕೀಡಾದ ಹಸು ಇದ್ದರೆ ಅದನ್ನು ಕೊಟ್ಟಿಗೆಯಲ್ಲಿ ಎಲ್ಲ ಹಸುಗಳ ಜೊತೆ ಕಟ್ಟಬಾರದು. ಈಗಾಗಲೇ ಕೊಟ್ಟಿಗೆಯಲ್ಲಿ ಹಸುಗಳಿದ್ದು ಅವುಗಳಲ್ಲಿ ರೋಗಪೀಡಿದ ಹಸುಗಳು ಇದ್ದರೆ ಅಂಥವುಗಳ ಜೊತೆಯೂ ಕಟ್ಟಬಾರದು. ಕೆಲದಿನ ಪ್ರತ್ಯೇಕವಾಗಿ ಕಟ್ಟಬೇಕು. ಪಶುವೈದ್ಯರಿಂದ ತಪಾಸಣೆಗೊಳಸಪಡಿಸಬೇಕು. ಇದರಿಂದ ಹಸುವಿಗೆ ಉಂಟಾಗಿರುವ ತೊಂದರೆ ಏನು ಎಂಬುದು ತಿಳಿಯುತ್ತದೆ. ಅವುಗಳಿಗೆ ಪಶುವೈದ್ಯರು ಶಿಫಾರಸು ಮಾಡಿದ ಔಷಧಗಳನ್ನೇ ಅವರು ಸೂಚಿಸಿದ ಪ್ರಮಾಣದಲ್ಲಿ ನೀಡಬೇಕು. ನಿಖರ ಮಾಹಿತಿ, ಪರಿಣತಿ ಇಲ್ಲದೇ ತಾವೇ ತಿಳಿದ ಔಷಧ ನೀಡಲು ಹೋಗಬಾರದು. ಅದು ಹಸುಗಳಿಗೆ ಮಾರಣಾಂತಿವಾಗಿ ಪರಿಣಮಿಸಬಹುದು.
ಹಸುಗಳನ್ನು ಸಾಕಣೆ ಮಾಡುವ ಪದ್ಧತಿಗಳು:
ಹಸುಗಳ ಸಾಕಣೆಯಲ್ಲಿ ಕಟ್ಟು ಸಾಕುವ ಅಥವಾ ಬಿಟ್ಟು ಸಾಕುವ ಪದ್ಧತಿಗಳಿವೆ. ಕಟ್ಟು ಸಾಕಣೆ ಎಂದರೆ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ನೀಡುವುದು. ಬಿಟ್ಟು ಸಾಕಣೆ ಎಂದರೆ ಮೇವಿಗಾಗಿ ಹೊರಗಡೆ ಕರೆದುಕೊಂಡು ಹೋಗುವುದು. ಗೋಮಾಳ, ಕಾಡುಗಳಲ್ಲಿ ಮೇವು ಮೇಯ್ದ ಹಸುಗಳನ್ನು ಸಂಜೆ ನಂತರ ವಾಪ್ಪಸ್ಸು ತಂದು ದೊಡ್ಡಿಯಲ್ಲಿ ಕಟ್ಟುವುದು. ಎರಡನೇ ಮಾದರಿ ಅನುಸರಿಸಿದಾಗ ಅವುಗಳ ಆರೋಗ್ಯದ ಬಗ್ಗೆ ಭಾರಿ ಗಮನ ನೀಡುವುದು ಅವಶ್ಯಕ.
ಬಿಟ್ಟು ಸಾಕಣೆ ಮಾದರಿ ಅನುಸರಿಸುತ್ತಿರುವ ಹೈನುಗಾರರು ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಮಾದರಿ ಅನುಸರಿಸಿದಾಗ ಹಸುಗಳು ಇತರರು ಸಾಕಣೆ ಮಾಡುತ್ತಿರುವ ರಾಸುಗಳೊಂದಿಗೆ ಕೂಡಿ ಮೇಯುತ್ತವೆ. ಈ ವೇಳೆ ಸಾಂಕ್ರಮಿಕ ರೋಗ ತಗುಲುವ ಸಾಧ್ಯತೆ ಅಪಾರ. ಇದಲ್ಲದೇ ಮತ್ತೊಂದು ಅಪಾಯವೂ ಇದೆ ಅದು ರೇಬಿಸ್.
ರೇಬಿಸ್ ಎನ್ನುವುದು ಬಿಸಿರಕ್ತದ ಪ್ರಾಣಿಗಳಿಗೆ ಬರುವಂತಹ ಕಾಯಿಲೆ. ಇದು ಮಾರಣಾಂತಿಕ. ವೈರಸ್ ಸೋಂಕಿನಿಂದ ಉಂಟಾಗಿ ನರಮಂಡಲದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇದು ಈಗಾಗಲೇ ಇಂಥ ತೀವ್ರ ತೊಂದರೆಯಿಂದ ನರಳುತ್ತಿರುವ ಪ್ರಾಣಿಯ ಜೊಲ್ಲಿನಿಂದ ಅದರ ಸಂಪರ್ಕಕ್ಕೆ ಬಂದ ಇತರ ಪ್ರಾಣಿಗಳಿಗೂ ಹರುಡುತ್ತದೆ. ಪಶುಪಾಲಕರು ಅಪಾರ ಜಾಗ್ರತೆ ವಹಿಸಬೇಕು.
ರೇಬಿಸ್ ಎಂದರೆ ಅದು ಕೇವಲ ನಾಯಿಗಳಿಗೆ ಮಾತ್ರ ಬರುವ ಕಾಯಿಲೆ. ಅಂಥ ಬಾಧೆಗೊಳಗಾದ ನಾಯಿ ಜೊಲ್ಲು ಸುರಿಸಿಕೊಂಡು ದಾರಿಯಲ್ಲಿ ಸಿಗುವ ಪ್ರಾಣಿಗಳು, ಮನುಷ್ಯರನ್ನು ಕಚ್ಚುತ್ತವೆ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ರೇಬಿಸ್ ಎಂಬ ಮಾರಣಾಂತಿಕ ಕಾಯಿಲೆ ಹಸುಗಳನ್ನು ಬಾಧಿಸಬಹುದು ಎಂಬ ಸಂಗತಿ ಅನೇಕ ಪಶುಪಾಲಕರಿಗೆ ತಿಳಿದಿರುವುದಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಉಂಟಾಗುವ ದುಷ್ಪರಿಣಾಮ ಅಪಾರ.
ರೇಬಿಸ್ ನಿಂದ ಹಸು ಬಳಲುತ್ತಿದ್ದರೆ ಅದರ ಕಾರಣ ಗೊತ್ತಿಲ್ಲದ ಪಶುಪಾಲರು ಜೊಲ್ಲು ಸುರಿಸುತ್ತಿರುವ ಹಸುಗಳ ಬಾಯಿಯೊಳಗೆ ಕೈ ಹಾಕಿ ಪರೀಕ್ಷೆ ನಡೆಸುತ್ತಾರೆ. ಏನೋ ಸಾಮಾನ್ಯ ತೊಂದರೆ ಇರಬೇಕು, ಕೆಮ್ಮಿರಬಹುದು ಎಂದು ಭಾವಿಸಿ ತಮಗೆ ತಿಳಿದ ವೈದ್ಯಕೀಯ ಮಾಡುವ ಸಾಧ್ಯತೆಗಳಿವೆ. ಹೈನುರಾಸುಗಳಿಗೆ ಕೆಲವೊಂದು ಉಸಿರಾಟದ ಸಮಸ್ಯೆಗಳು ಉಂಟಾದಾಗ ಇಂಥ ಲಕ್ಷಣಗಳೇ ಮೇಲ್ನೋಟಕ್ಕೆ ಕಾಣುವುದರಿಂದ ಕೆಲವೊಮ್ಮೆ ಪಶುವೈದ್ಯರು ಅಂಥ ಸಮಸ್ಯೆಗೆ ನೀಡುವ ಔಷಧೋಪಚಾರವನ್ನೇ ಮಾಡುವ ಸಾಧ್ಯತೆಗಳೂ ಇವೆ.
ಹಸು ನಿರಂತರವಾಗಿ ಜೊಲ್ಲು ಸುರಿಸುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಅವುಗಳ ಬಾಯಿಯೊಳಗೆ ಕೈ ಹಾಕಿ ಪರೀಕ್ಷಿಸಲು ಹೋಗಬಾರದು. ಇದು ಭಾರಿ ಅಪಾಯಕಾರಿ. ಮೊದಲು ಮಾಡಬೇಕಾದ ಕಾರ್ಯ ಏನೆಂದರೆ ಅಂಥ ಹಸುವನ್ನು ಹಿಂಡಿನಿಂದ ಬೇರ್ಪಡಿಸಿ ದೂರ ಕಟ್ಟುವುದು. ಈ ಕಾಯಿಲೆಗೆ ಪ್ರಸ್ತುತ ಸಂದರ್ಭದಲ್ಲಿ ಸೂಕ್ತ ಮದ್ದು ಇಲ್ಲ. ಇಂಥ ತೊಂದರೆ ಎಮ್ಮೆ, ಮೇಕೆ ಹಾಗೂ ಕುರಿಗಳಿಗೂ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ರೇಬಿಸ್ ನಿಂದ ಬಳಲುತ್ತಿರುವ ಪ್ರಾಣಿ ಕಚ್ಚುವುದರಿಂದ ಇಂಥ ಭೀಕರ ಸಮಸ್ಯೆ ಉಂಟಾಗುತ್ತದೆ. ಮೈ ಮೇಲೆ ಗಾಯಗಳಿದ್ದಾಗ ಜೊಲ್ಲಿನ ಸಂಪರ್ಕದಿಂದಲೂ ಈ ಕಾಯಿಕೆ ಹರಡುತ್ತದೆ. ಆದ್ದರಿಂದ ಈ ಬಗ್ಗೆ ಸದಾ ಜಾಗ್ರತೆ ವಹಿಸಬೇಕು. ಪಶುವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು. ಸೂಕ್ತ ಪರೀಕ್ಷೆಗಳ ನಂತರ ಅಂಥ ತೊಂದರೆಗೆ ನಿಖರ ಕಾರಣಗಳು ಏನು ಎಂದು ತಿಳಿಯುತ್ತದೆ. ನಂತರ ವೈದ್ಯರು ಹೇಳಿದ ಸಲಹೆ ಅನುಸರಿಸಬೇಕು.
ಹೈನುರಾಸುಗಳಿಗೆ ಕಾಯಿಲೆಗಳು ಬಾರದಂತೆ ಗಮನವಿಟ್ಟು ನೋಡಿಕೊಳಬೇಕು. ಒಂದು ರಾಸುವಿಗೆ ಕಾಯಿಲೆ ತಗುಲಿದರೂ ಅದು ಇತರ ರಾಸುಗಳಿಗೂ ಬೇಗನೆ ಹರಡುತ್ತದೆ. ಆದ್ದರಿಂದ ಸಾಂಕ್ರಾಮಿಕ ಕಾಯಿಲೆಗಳ ಗುಣಲಕ್ಷಗಳನ್ನು ಸಾಕಣೆದಾರ ತಿಳಿದಿರಬೇಕು.ಪಶುವೈದ್ಯರು ನಿಯಮಿತವಾಗಿ ಬಂದು ಪರೀಕ್ಷೆ ಮಾಡಿಸುವ ವ್ಯವಸ್ಥೆ ಮಾಡಿರಬೇಕು. ಇಲ್ಲದಿದ್ದರೆ ನಷ್ಟ ಉಂಟಾಗುತ್ತದೆ. ಈ ಕಾರಣದಿಂದಲೇ ಅನೇಕರು ಹೈನುಗಾರಿಕೆ ಎಂದರೆ ಹಿಂಜರಿಯುತ್ತಾರೆ
ಮುಂದುವರಿಯುತ್ತದೆ…