ರಾಸಾಯನಿಕ ಕೃಷಿಯಿಂದ ಪರಿಸರದ ಮೇಲೆ ಆಗುತ್ತಿರುವ ಅನಾಹುತಗಳನ್ನು ಅರಿತು ಪರಿಸರ ಸ್ನೇಹಿ ಕೃಷಿ ಕಡೆಗೆ ಒಲವು ತೋರುತ್ತಿರುವವರ ಸಂಖ್ಯೆ ವೃದ್ಧಿಯಾಗುತ್ತ ಹೋಗುತ್ತಿರುವುದು ಸಂತಸದ ವಿಚಾರವೇ ಸರಿ.ಸಹಜ/ನೈಸರ್ಗಿಕ/ಸಾವಯವ ಜೈವಿಕ… ಹೀಗೆ ವಿವಿಧ ಹೆಸರುಗಳು ಮೂಲಕ ಕರೆಯಲ್ಪಡುತ್ತಿದ್ದರು, ಅಂತಿಮವಾಗಿ ಕೃತಕ ರಾಸಾಯನಿಕ ಗೊಬ್ಬರ/ಕಳೆನಾಶಕ/ಕೀಟನಾಶಕ/ಕಳೆನಾಶಕ ಬಳಸದೇ ಪರಿಸರಕ್ಕೆ ಮತ್ತು ಜೀವ ಸಂಕುಲಕ್ಕೆ ಹಾನಿಯಾಗದ ರೀತಿ ಮಾಡುವ ಕೃಷಿಯನ್ನು ರಾಸಾಯನಿಕ ಮುಕ್ತ ಕೃಷಿ ಎಂದು ಕರೆಯುವುದು ಸೂಕ್ತವೆನಿಸುತ್ತದೆ.
ಭೂಮಿಗೆ ಗೊಬ್ಬರ ಪೂರೈಸಲು ಹಸು/ಎಮ್ಮೆಗಳೇ ಬೇಕು ಎಂಬ ತಪ್ಪು ಕಲ್ಪನೆಯಿಂದ ರಸಗೊಬ್ಬರ ಬಳಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಅದೇ ರೀತಿ ರಾಸಾಯನಿಕ ಮುಕ್ತ ಕೃಷಿ ಮಾಡಲು ಹಸು ಖರೀದಿಗೆ ಮತ್ತು ಕೊಟ್ಟಿಗೆ ನಿರ್ಮಾಣಕ್ಕೆ ಹೊಂದಿಸಬೇಕಾಗುವ ಹಣ,ಪಾಲನೆ,ಪೋಷಣೆಗೆ ಬೇಕಾಗುವ ಸಮಯ,ಮೇವು ಬೆಳೆಯಲು ಮತ್ತು ಖರೀದಿ ಮಾಡಲು ಇರುವ ತೊಂದರೆ ಇವುಗಳಿಂದ ಹಲವರು ರಾಸಾಯನಿಕ ಮುಕ್ತ ಕೃಷಿ ಮಾಡಲು ಇಚ್ಛೆ ಇದ್ದರು ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ.
ಹಲವರಿಗೆ ತಮ್ಮ ಉದ್ಯೋಗ/ವೃತ್ತಿ ನಡುವೆ ವಾರದಲ್ಲಿ ಒಂದು ದಿನ ಇನ್ನು ಕೆಲವರಿಗೆ ತಿಂಗಳಲ್ಲಿ ಒಂದೆರೆಡು ದಿನ ಲಭ್ಯವಾಗುವುದರಿಂದ, ಹಸು ನಿರ್ವಹಣೆ ಮಾಡುವುದು ಸಾಧ್ಯವಿಲ್ಲವೆಂದು ಮತ್ತು ಕೃಷಿ ಮಾಡಲಾಗುವುದಿಲ್ಲ ಎಂಬ ಭಾವನೆಯಿದೆ.
ಹಸು ಹೊರತುಪಡಿಸಿ ಕೂಡ ಇತರ ಮೂಲದಿಂದ ರಾಸಾಯನಿಕ ಮುಕ್ತ ಕೃಷಿ ಸಾಧ್ಯವೆಂಬುದನ್ನು ತೋರಿಸದೆ ತೀರಾ ಮೂಲಭೂತವಾದ ಮತ್ತು ಮಡಿವಂತಿಕೆ ಮಾಡುತ್ತ ಹೋದರೆ ನಾವೇ ಬಂಧಿಸಿಕೊಂಡು,ವಿಶಾಲವಾಗಿ ಬೆಳೆವಣಿಗೆ ಹೊಂದುವುದನ್ನು ಒಂದು ಚೌಕಟ್ಟಿನ ಒಳಗೆ ಕಟ್ಟಿ ಹಾಕಿದಂತೆ ಆಗುತ್ತದೆ.
ಬೆಳೆಗೆ ಉತ್ತಮ ಕಾಂಪೋಸ್ಟ್ ತಯಾರು ಮಾಡಲು ಬಹಳ ಕಡಿಮೆ ಪ್ರಮಾಣದ ಯಾವುದೇ ಪ್ರಾಣಿ /ಪಕ್ಷಿಗಳ ಮಲ/ಹಿಕ್ಕೆ ಸಾಕು.ಮಲ/ಹಿಕ್ಕೆ /ಸಗಣಿ ಕಾಂಪೋಸ್ಟ್ ಗೊಬ್ಬರ ಮಾಡಲು ಬೇಕಾದ ಕಚ್ಚಾವಸ್ತು ಮತ್ತು ಆಕ್ಟಿವೇಟರ್, ಪ್ರಮೋಟರ್, ಕ್ಯಾಟಲಿಸ್ಟ್ ಮಾತ್ರ ಎಂಬುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು.
ಕಾಂಪೋಸ್ಟ್ ಗೊಬ್ಬರ ಸಸ್ಯಗಳ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಒದಗಿಸುವುದು.ಯಾವುದೇ ಬೆಳೆಗೆ ಪ್ರತಿ 100 ಚದರಡಿ ಪ್ರದೇಶಕ್ಕೆ 20 ಕೆಜಿ ಕಾಂಪೋಸ್ಟ್ ಗೊಬ್ಬರ ಹಾಕಿ ಉತ್ತಮ ಬೆಳವಣಿಗೆ ಕಾಣಬಹುದು.
33’*33’=1089 ಚದರಡಿ =01 ಗುಂಟೆ =200 ಕೆಜಿ
01 ಎಕರೆಗೆ 40 ಗುಂಟೆ ಪ್ರದೇಶಕ್ಕೆ 08 ಟನ್ ಕಾಂಪೋಸ್ಟ್ ಬಳಕೆ ಮಾಡುವುದರಿಂದ ಸಾರಜನಕ(N):120 ಕೆಜಿ.
ರಂಜಕ(P):50 ಕೆಜಿ.
ಪೊಟಾಷ್(K):80 ಕೆಜಿ ಒದಗಿಸಬಹುದು.
08 ಟನ್ ಕಾಂಪೋಸ್ಟ್ ತಯಾರಿಕೆಗೆ ಬೇಕಾಗುವ ಸಗಣಿ/ಮಲ /ಹಿಕ್ಕೆ ಪ್ರಮಾಣ ಕೇವಲ 400 ಕೆಜಿ.ಯಾವುದೇ ಪ್ರಾಣಿ/ಪಕ್ಷಿಗಳ ಸಗಣಿ/ಹಿಕ್ಕೆ ಬಳಸಬಹುದು.ರೈತರು ಹೆಚ್ಚಾಗಿ ಹಸು ಸಾಕಾಣಿಕೆ ಮಾಡುವುದರಿಂದ ಹಸುವಿನ ಸಗಣಿ ಬಳಕೆ ರೂಢಿಯಲ್ಲಿದೆ ಅಷ್ಟೇ.
ಹಸು ಹೊರತುಪಡಿಸಿ ಇತರ ಸಾಧ್ಯತೆ ಬಗ್ಗೆ ನೋಡೋಣ ಬನ್ನಿ.ಕೋಳಿ,ಕುರಿ ಹಿಕ್ಕೆ ಬಳಕೆ ಮಾಡಿ ಸಹ ಕಂಪೋಸ್ಟ್ ಗೊಬ್ಬರ ತಯಾರು ಮಾಡಬಹುದು.
ಕೋಳಿ/ಕುರಿ/ಹಸು ಇವುಗಳಿಗೆ ನೀಡುವ ಮೇವಿನ ರೀತಿ ಅದರ ವಿಸರ್ಜನೆ ಇರುತ್ತದೆಯೇ ಹೊರತು ಅದರಲ್ಲಿ ಕನಿಷ್ಠ ಅಥವಾ ಶ್ರೇಷ್ಠ ಎಂಬುವುದು ಇಲ್ಲ.
ಕೋಳಿ ಮತ್ತು ಹಸು ಹಿಕ್ಕೆ/ಸಗಣಿಯಲ್ಲಿ ದೊರೆಯುವ ಪೋಷಕಾಂಶಗಳು.
(N/P/K/Ca/Mg)
ಕೋಳಿ:2.17/2.0/4.2/2.68/1.39
ಹಸು :
1.74/1.7/0.60/0.37/0.53
ಕೋಳಿ ಮತ್ತು ಕುರಿ ಗೊಬ್ಬರದ ಬಗ್ಗೆ ಪ್ರಸಿದ್ಧ ಪುಸ್ತಕದಲ್ಲಿರುವ ವಿಚಾರ ಹೀಗಿದೆ:
‘ಭೂಮಿಯಲ್ಲಿ ಯಾವುದಾದರು ಪ್ರಾಣಿ/ಪಕ್ಷಿ ಮಲ ಅಥವಾ ಹಿಕ್ಕೆ ಬೀಳುವ ವ್ಯವಸ್ಥೆ ಮಾಡಿದಲ್ಲಿ ಹಸುವಿನ ಸಗಣಿ ಇಲ್ಲದೆಯು ಸಹ ಯಾವುದೇ ಬೆಳೆಯ ಉತ್ಪಾದನೆಯನ್ನು ಅವಶ್ಯಕವಾಗಿ ಪಡೆಯಲು ಸಾಧ್ಯ.
ಜಪಾನ್ ದೇಶದ ನೈಸರ್ಗಿಕ ಕೃಷಿ ತಜ್ಞ ಮಸೊನೊಬ ಪುಕುವೂಕ ಅವರು ಸಗಣಿ ಇಲ್ಲದೆ ನೈಸರ್ಗಿಕ ಕೃಷಿ ಮಾಡುತ್ತಾರೆ ಹಾಗು ಉತ್ತಮ ಮಟ್ಟದ ಇಳುವರಿ ಪಡೆಯುತ್ತಾರೆ.ಅವರು ಆಕಳು, ಎತ್ತುಗಳನ್ನು ಸಾಕುವುದಿಲ್ಲ ಆದರೆ ದೇಶಿ ಕೋಳಿಗಳನ್ನು ಸಾಕುತ್ತಾರೆ’
‘ಆಡು ಕುರಿಗಳಿಂದ ದೊರೆಯುವ ಹಿಕ್ಕೆ ಗೊಬ್ಬರದ ದರ್ಜೆ ಆಕಳ,ಎಮ್ಮೆಗಳ ಸಗಣಿ ಗೊಬ್ಬರಕ್ಕಿಂತಲೂ ಉತ್ತಮವಾದುದ್ದಾಗಿರುತ್ತದೆ. ಕುರಿಗಳ ತಾಜಾ ಹಿಕ್ಕೆಗಳು ಎಲ್ಲಾ ತರದ ಅನ್ನ ದ್ರವ್ಯಗಳಿಂದ ಸಂತೃಪ್ತವಾಗಿರುತ್ತದೆ’
‘ದೇಶಿ ಕೋಳಿಯ ಮಲದ ಗೊಬ್ಬರ ಉತ್ತಮ ಗೊಬ್ಬರವಾಗಿದೆ.ಕೋಳಿ ಮಲದ ಮಹತ್ವದ ವೈಶಿಸ್ಟ್ಯವೆಂದರೇ ಅದು ಭೂಮಿಗೆ ನೀಡಿದಲ್ಲಿ ಬಹುಬೇಗನೆ ಕಳಿಯುತ್ತದೆ ಹಾಗು ಇದರಿಂದಾಗಿ ಅದರಲ್ಲಿ ಹಿಡಿದಿಟ್ಟಿರುವ ಅನ್ನ ದ್ರವ್ಯಗಳು ಬಹುಬೇಗ ಬೆಳೆಗಳಿಗೆ ಉಪಲಬ್ದವಾಗುತ್ತವೆ’
(ಶ್ರೀ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ತೋಟಗಾರಿಕೆ ಬೆಳೆಗಳ ಪೋಷಣೆ ಶಾಸ್ತ್ರಭಾಗ -02,ಪುಸ್ತಕದ ಪುಟ ಸಂಖ್ಯೆ 198,259,260 ರ ಉಲ್ಲೇಖ)
‘ಎಣ್ಣೆಹಿಂಡಿ ಮತ್ತು ಧಾನ್ಯವನ್ನು ಆಹಾರವಾಗಿ ಸೇವಿಸುವ ಕೋಳಿಯ ಹಿಕ್ಕೆಯಲ್ಲಿ ಎಲ್ಲಾ ಪೋಷಕಾಂಶಗಳೂ ದಟ್ಟವಾಗಿರುತ್ತದೆ’
(ಶ್ರೀಪಾದ ದಬೋಳ್ಕರ್ ಸಾವಯವ ಕೃಷಿಗೆ ಸಜೀವ ಮಣ್ಣು ಪುಸ್ತಕದ ಪುಟ್ಟ ಸಂಖ್ಯೆ 47 ರ ಉಲ್ಲೇಖ)
*ಪ್ರತಿ ಕೋಳಿ ಮತ್ತು ಕುರಿಯಿಂದ ದೊರೆಯುವ ಹಿಕ್ಕೆ ಪ್ರಮಾಣ ಇಂತಿದೆ:
ಕೋಳಿ:20 ಕೆಜಿ/ವರ್ಷ
ಕುರಿ :400 ಕೆಜಿ /ವರ್ಷ
ಈ ಪ್ರಕಾರ ಒಂದು ಎಕರೆಗೆ ಗೊಬ್ಬರ ಮಾಡಲು:
ಕೋಳಿ :20 ಸಂಖ್ಯೆ.
ಕುರಿ :01ಸಂಖ್ಯೆ, ಈ ರೀತಿ ಅವರ ಹಿಡುವಳಿಗೆ ತಕ್ಕಂತೆ ಸಾಕಾಣಿಕೆ ಮಾಡಿಕೊಳ್ಳಬಹುದು ಅಥವಾ ಬೇರೆಯವರಿಂದ ಪಡೆಯಬಹುದು.
ಹಸು/ಕೋಳಿ /ಕುರಿ ಸಾಕಾಣಿಕೆ ಮಾಡಲಾಗದವರು ಕೂಡ ಸಾಕಾಣಿಕೆ ಮಾಡುವವರಿಂದ ಪಡೆಯುವುದು ಅಥವಾ ಕೃಷಿ ವಿವಿ ಯಲ್ಲಿ ಪ್ರಾಣಿಗಳ ಮಲ-ಮೂತ್ರದಿಂದ ಸಂಗ್ರಹಿಸಿ ಸಿದ್ದಪಡಿಸಿ ಮಾರಾಟ ಮಾಡುವ ಜೈವಿಕ ಪುಡಿ/ದ್ರಾವಣ ಬಳಸಿ ಕೃಷಿ ತ್ಯಾಜ್ಯವನ್ನು ಗೊಬ್ಬರ ಮಾಡಿಕೊಳ್ಳಬಹುದು.
ಪ್ರತಿ ಟನ್ ಗೊಬ್ಬರ ಮಾಡಲು ಸಾಮಾನ್ಯವಾಗಿ 01 ಕೆಜಿ ಜೈವಿಕ ಪುಡಿ ಶಿಫಾರಸ್ಸು ಮಾಡಿರುತ್ತಾರೆ,ಅದರ ಬೆಲೆ ಸುಮಾರು ರೂ 100-150/ಕೆಜಿ. ಹೀಗೆ ಸಾಧ್ಯವಿರುವ ಅವಕಾಶಗಳನ್ನು ಬಳಕೆ ಮಾಡಿಕೊಂಡಾಗ ಅದು ರೈತರಿಗೂ ಸುಲಭವಾಗುತ್ತದೆ ಮತ್ತು ರಾಸಾಯನಿಕ ಮುಕ್ತ ಕೃಷಿ ಮಾಡಲು ಹೆಚ್ಚಿನ ಜನರಿಗೆ ಸಹಾಯಕವಾಗುತ್ತದೆ.
ಹೀಗೆ ಹಂದಿ,ಮೀನು,ಕೆರೆ ಹೂಳು,ಕಬ್ಬಿನ ಕಾರ್ಖಾನೆಯಲ್ಲಿ ದೊರೆಯುವ ಪ್ರೆಸ್ ಮಡ್,ಸಿಟಿ ಕಾಂಪೋಸ್ಟ್ ಇತರ ಸಾಧ್ಯತೆಗಳ ಬಗ್ಗೆ ಗಮನ ಕೊಟ್ಟು ಬಳಸಿಕೊಳ್ಳಬೇಕು,ಬರೀ ಹಸುವಿನಿಂದ ಮಾತ್ರ ರಾಸಾಯನಿಕ ಮುಕ್ತ ಕೃಷಿ ಸಾಧ್ಯ ಎಂದು ಬಿಂಬಿತವಾಗುತ್ತಿರುವುದು ಸಮಂಜಸವಲ್ಲ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9342434530