ಕೆಲವೇ ದಶಕಗಳ ಹಿಂದೆ ಕರ್ನಾಟಕದ ದೇಸೀಪಶು ಸಂಪತ್ತು ಹೇರಳ. ಅದರಲ್ಲೂ ಹಳ್ಳಿಕಾರ್, ಅಮೃತ್ ಮಹಲ್ ಮತ್ತು ಖಿಲಾರಿ ತಳಿ ರಾಸುಗಳು ಇಡೀ ದೇಶದಲ್ಲಿ ನಮ್ಮ ರಾಜ್ಯದ ಘನತೆಗೆ ಮತ್ತೊಂದು ಪ್ರತೀಕ. ಇದಕ್ಕೆ ಕಾರಣ ಹಲವು. ಇವುಗಳ ಬಿರುಸು, ಗತ್ತು-ಗಾಂಭೀರ್ಯ. ಚುರುಕುತನ, ಕಷ್ಟ ಸಹಿಷ್ಣುತೆ ಮತ್ತು ಅಪರಿಮಿತ ದುಡಿಮೆ ಅಪಾರ. ಉತ್ತರ ಪ್ರದೇಶದ ಸಿಂಧಿ, ಹರಿಯಾಣ, ಗೀರ್ ಮತ್ತು ಶಾಹಿವಾಲ್ ತಳಿಯ ರಾಸುಗಳು ಹೈನಿಗೆ ಹೆಸರುವಾಸಿಯಾದರೆ ಈ ರಾಸುಗಳು ವ್ಯವಸಾಯ ಮತ್ತು ಸಾರಿಗೆಗೆ ಪ್ರಖ್ಯಾತ.
ಹಳ್ಳಿಕಾರ್ ಎತ್ತುಗಳದೂ ಮತ್ತೂ ವೈಶಿಷ್ಟ. ಇವು ಷೋಕಿಗೆ ಎತ್ತು ಸಾಕುವವರಿಗೂ ಮತ್ತು ಶ್ರಮದ ದುಡಿಮೆಗೆ ಸಾಕುವವರಿಗೂ ಅಚ್ಚುಮೆಚ್ಚು. ಬರ ಪರಿಸ್ಥಿತಿಯಲ್ಲಿಯೂ ಇವುಗಳ ತಾಳಿಕೆ ಅಪಾರ. ಇದರೊಂದಿಗೆ ಹಳ್ಳಿಕಾರ್ ಎತ್ತುಗಳು ವಾತಾವರಣಕ್ಕೆ-ಹೊಸಬರಿಗೆ ಒಗ್ಗಿಕೊಳ್ಳುವುದೂ ಸೊಗಸು. ಈ ಎತ್ತುಗಳ ಪಾಲನೆ-ಪೋಷಣೆಯನ್ನೂ ಸಣ್ಣ ಮಕ್ಕಳೂ ಸರಾಗವಾಗಿ ಮಾಡುವಷ್ಟು ಮಟ್ಟದ ವರ್ತನೆ. ಇಂಥ ಅಪರೂಪದ ಗುಣದ ಎತ್ತುಗಳ ಪಾಲನೆ-ಪೋಷಣೆ ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿತ್ತು. ಇಲ್ಲೆಲ್ಲಾ ಹಳ್ಳಿಕಾರ್ ಎತ್ತುಗಳನ್ನೇ ವಿಶೇಷವಾಗಿ ಸಾಕಾಣಿಕೆ ಮಾಡುತ್ತಿದ್ದರ ಕಾರಣವೂ ಇದೆ.
ಈ ಭಾಗದ ಕೆಂಪುಮಿಶ್ರಿತ ಮಣ್ಣುಗಳು ದೀರ್ಘಕಾಲ ತೇವಾಂಶ ಹಿಡಿದಿಡುವುದಿಲ್ಲ. ಒಂದೆರಡು ಹದ ಮಳೆ ಬಿದ್ದ ಕೂಡಲೇ ಭೂಮಿ ಉಳುಮೆ ಮಾಡಬೇಕು. ಉಳುಮೆ ಮಾಡುವುದು ತಡವಾದರೆ ಹಸಿ ಆರಿಹೋಗುತ್ತದೆ. ಉಳುಮೆ ಸರಾಗವಾಗಿ ಆಗುವುದಿಲ್ಲ. ಶೀಘ್ರವಾಗಿ ಉಳುಮೆ ಮಾಡಿ ಮುಗಿಸಲು ಹಳ್ಳಿಕಾರ್ ರಾಸುಗಳ ಚುರುಕುತನ, ಶ್ರಮ ಸಹಾಯಕ. ಮಳೆಯಾಶ್ರಿತ ಅಥವಾ ನೀರಾವರಿ ಆಶ್ರಿತ ಭೂಮಿಯಾಗಲಿ ಇವುಗಳ ಉಳುಮೆ-ದುಡಿಮೆ ಸಲೀಸು.
ಸರಕು ಸಾಗಿಸುವಲ್ಲಿಯೂ ಹಳ್ಳಿಕಾರ್ ರಾಸುಗಳದ್ದು ವೈಶಿಷ್ಟ್ಯತೆ. ಭರ್ತಿ ಹೊರೆ ಇರುವ ಗಾಡಿಗಳನ್ನು ಎಳೆದುಕೊಂಡು ಒಂದೇ ದಿನದಲ್ಲಿ 30 ಮೈಲುಗಳಿಗೂ ಹೆಚ್ಚು ನಡಿಯುವ ಸಾಮರ್ಥ್ಯ. ಆದ್ದರಿಂದಲೇ ಈ ಭಾಗದ ರೈತರಿಗೂ ಹಿಂದೆ ಇದ್ದ ರಾಜ-ಮಹಾರಾಜರಿಗೂ ಹಳ್ಳಿಕಾರ್ ಅಚ್ಚುಮೆಚ್ಚಿನ ರಾಸುಗಳು. ಮೈಸೂರು ಸೀಮೆಯ ಮತ್ತು ಉತ್ತರ ತಮಿಳುನಾಡಿನ ಅರಸರು ಹಳ್ಳಿಕಾರ್ ಎತ್ತುಗಳ ಸಾಕಾಣಿಕೆಗೆ ವಿಶೇಷ ಮುತುವರ್ಜಿ ವಹಿಸಿದ್ದರು. ತಳಿ ಶುದ್ದತೆ ಕಾಪಾಡಲು ಗಮನ ಕೊಟ್ಟಿದ್ದರು. ಸಾಮಾನ್ಯ ಸಂದರ್ಭಗಳಂತೆಯೇ ಯುದ್ದಕಾಲದಲ್ಲಿಯೂ ಸಾರಿಗೆಗೆ, ಸರಕು ಸಾಗಾಣಿಕೆಗೆ ಬಳಸುತ್ತಿದ್ದರು. ಅತಿಭಾರವಾದ ಫಿರಂಗಿ ಗಾಡಿಗಳನ್ನೂ, ಮದ್ದು-ಗುಂಡು ತುಂಬಿದ ಗಾಡಿಗಳನ್ನು ಸರಾಗವಾಗಿ ಎಳೆದೊಯ್ಯುತ್ತಿದ್ದವು. ಗಾಡಿ ಹೊಡೆಯುವಾತ ಮೈ ಮರೆತು ನಿದ್ದೆ ಮಾಡಿದರೂ ಅಪಘಾತ ಸಂಭವಿಸದಂತೆ ಜಾಗರೂಕತೆಯಿಂದ ಗಾಡಿಗಳನ್ನು ಸೇರಬೇಕಾದ ಪರಿಚಿತ ಗಮ್ಯ ಸೇರಿಸುವುದರಲ್ಲಿಯೂ ಇವು ಹೆಸರುವಾಸಿ.
ಮೈಸೂರು ಸೀಮೆಯಲ್ಲಿ ರಾಸು ಸಾಕಾಣಿಕೆಯನ್ನೇ ಜೀವನೋಪಾಯಕ್ಕೆ ಕಸುಬು ಮಾಡಿಕೊಂಡವರ ಸಂಖ್ಯೆ ಹೆಚ್ಚಾಗಿತ್ತು. ಇವರು ತಮ್ಮ ರಾಸುಗಳನ್ನು ಒಂದೆಡೆ ಇರಿಸುತ್ತಿದ್ದ ಸ್ಥಳಗಳಿಗೆ ಹಟ್ಟಿ ಎನ್ನುತ್ತಿದ್ದರು. (ಇಂದಿಗೂ ಮೈಸೂರು ಸೀಮೆಯಲ್ಲಿ ಈ ಪದ ಬಳಕೆಯಲ್ಲಿದೆ) ಈ ದನಗಾಹಿಗಳಿಗೆ ಹಟ್ಟಿಕಾರರೆಂದು ಹೆಸರು ಬಂತು. ಇವರು ನಿರ್ವಹಣೆ ಮಾಡುತ್ತಿದ್ದ ರಾಸುಗಳಿಗೂ ಹಟ್ಟಿಕಾರ್ ದನದಿಂದ ಹಳ್ಳಿಕಾರ್ ದನ ಎಂಬ ಹೆಸರು ಬಂದಿರಬಹುದು.
ಟಿಪ್ಪು ಸುಲ್ತಾನ್ ಆಳ್ವಿಕೆ ಸಂದರ್ಭದಲ್ಲಿಯೂ ಹಳ್ಳಿಕಾರ್ ಎತ್ತುಗಳ ಪಾಲನೆ-ಪೋಷಣೆಗೆ ಮತ್ತಷ್ಟು ಗಮನ ನೀಡಲಾಯಿತು. ಈತನ ಸೈನ್ಯಕ್ಕೆ ಸೇರಿದ ಹಟ್ಟಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಳ್ಳಿಕಾರ್ ಎತ್ತುಗಳಿದ್ದವು. ಈ ಎತ್ತುಗಳು ಯುದ್ದ ಸಂದರ್ಭಗಳಲ್ಲಿ ಸರಕು ಸಾಗಾಣಿಕೆಗೆ ಬಳಕೆಯಾಗುತ್ತಿದ್ದವು. ಇವುಗಳ ಚುರುಕುತನ ಗಮನಿಸಿದ್ದ ಟಿಪ್ಪು ಈ ಎತ್ತುಗಳ ನಿರ್ವಹಣೆಗೆ ವಿಶೇಷ ಗಮನ ನೀಡಿದ್ದ ಎನ್ನಲಾಗುತ್ತದೆ.
ಹಳ್ಳಿಕಾರ್ ತಳಿಯ ಹಸುಗಳ ಹಾಲು ವಿಶೇಷ ವೈದ್ಯಕೀಯ ಗುಣ ಹೊಂದಿದೆ ಎಂದು ಆಯುರ್ವೇದ ಪಂಡಿತರು ಅಭಿಪ್ರಾಯಪಡುತ್ತಾರೆ. ಈ ಹಸುಗಳ ಹಾಲನ್ನು ಕುಡಿದು ಬೆಳೆದವರು ಚುರುಕಾಗಿ ಬಲಿಷ್ಟವಾಗಿ ಬೆಳೆಯುತ್ತಾರೆ ಎಂಬ ಭಾವನೆ ಇತ್ತು. ಇದರಿಂದಲೇ ಹಳ್ಳಿಗರು ಈ ತಳಿಯ ಹಸುಗಳನ್ನು ಸಾಕಲು ಮುತುವರ್ಜಿ ತೋರಿಸುತ್ತಿದ್ದರು. ಹಳ್ಳಿಕಾರ್ ಹಸುಗಳ ಹಾಲಿನಿಂದ ಮಾಡಿದ ಮೊಸರು-ಮಜ್ಜಿಗೆ-ತುಪ್ಪಕ್ಕೆ ವಿಶಿಷ್ಟ ಸ್ವಾದ ಮತ್ತು ರುಚಿ. ಇವುಗಳ ತುಪ್ಪದಿಂದ ತಯಾರಿಸಿದ ತಿಂಡಿಗಳನ್ನು ಹೆಚ್ಚುದಿನ ಇಡಬಹುದು. ಇಂಥ ಹಳ್ಳಿಕಾರ್ ಎತ್ತುಗಳ ಹಾಲು-ಮೊಸರು-ಮಜ್ಜಿಗೆ ಕುಡಿದು ಬೆಳೆದವರಲ್ಲಿ ರೋಗನಿರೋಧಕತೆ ಹೆಚ್ಚು ಎನ್ನುವುದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಈ ಹಸುಗಳು ಹಾಲು ನೀಡುವುದರೊಂದಿಗೆ ಉಳುಮೆಗೂ-ಸಾರಿಗೆಗೂ ಸೈ.
ಜಾತ್ರೆ: ಎರಡೇ ಎರಡು ದಶಕಗಳ ಹಿಂದೆ ಹಳ್ಳಿಕಾರ್ ಎತ್ತುಗಳೇ ವಿಶೇಷವಾಗಿ ಇರುತ್ತಿದ್ದ ದನದಜಾತ್ರೆ ವೈಭವದಿಂದ ನಡೆಯುತ್ತಿದ್ದವು. ಇಂಥ ಸಂದರ್ಭಗಳಲ್ಲಿ ಈ ತಳಿಯ ರಾಸುಗಳನ್ನು ನೋಡಲು-ಕೊಳ್ಳಲು ಅವಕಾಶ. ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ನಂಜನಗೂಡು, ಮೈಸೂರು, ಹಳ್ಳಿ ಮೈಸೂರು, ಕೃಷ್ಣರಾಜನಗರ, ಸಾಲಿಗ್ರಾಮ, ಪಿರಿಯಾಪಟ್ಟಣ, ಬೆಟ್ಟದಪುರ, ಹುಣಸೂರು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಮದ್ದೂರು, ಮಳವಳ್ಳಿ, ಕೃಷ್ಣರಾಜಪೇಟೆ, ಹಾಸನ ಮತ್ತು ಸುತ್ತಮುತ್ತಲಿನ ತಾಲೂಕುಗಳು, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೈತರು ಹಳ್ಳಿಕಾರ್ ಎತ್ತುಗಳ ಜಾತ್ರೆಗಾಗಿಯೇ ನಿರೀಕ್ಷಿಸುತಿದ್ದರು.
ಅಯ್ಯನಗುಡಿ(ಕೆಂಗಲ್), ಘಾಟಿ ಸುಬ್ರಮಣ್ಯ, ಚುಂಚನಕಟ್ಟೆ, ಹಾಸನ, ದೇವರಗುಡ್ಡ, ರಾಮನಾಥಪುರ, ರಾಮಪುರ ಜಾತ್ರೆಗಳು ಬಹಳ ಪ್ರಸಿದ್ದಿ. ಇವು ನಡೆಯುವ ಸ್ಥಳಗಳಲ್ಲಿ ಮೈಲುಗಟ್ಟಲೇ ದೂರಕ್ಕೆ ಜಾತ್ರೆ ವಿಸ್ತರಿಸುತ್ತಿತ್ತು. ರೈತಾಪಿಗಳ ಪಾಲಿಗೆ ಅದೊಂದು ದೊಡ್ಡ ಸಂಭ್ರಮ. ವಿಶೇಷವಾಗಿ ಸಾಕಿದ ರಾಸುಗಳಿಗೆ ಬಹುಮಾನ ನೀಡಲಾಗುತ್ತಿತ್ತು. ಜೊತೆಗೆ ಇಂಥ ರಾಸುಗಳ ಪಾಲಕ ರೈತರಿಗೂ ಸನ್ಮಾನ. ಇಂಥ ಸನ್ಮಾನ ಪಡೆಯುವುದು ರೈತಾಪಿ ವರ್ಗದಲ್ಲಿ ಹೆಮ್ಮೆಯ ಸಂಗತಿ.
ಖಾಯಿಷ್ ಅಂದರೆ ಖುಷಿಗೆ-ಷೋಕಿಗೆ ಹಳ್ಳಿಕಾರ್ ಎತ್ತುಗಳನ್ನು ಸಾಕುವವರು ಇದಕ್ಕಾಗಿಯೇ ಸಾವಿರಾರು ರುಪಾಯಿಗಳನ್ನು ವ್ಯಯಿಸುತ್ತಿದ್ದರು. ಮಾಮೂಲಿಯಾಗಿ ನೀಡುವ ಭತ್ತದ ಹುಲ್ಲು-ರಾಗಿಹುಲ್ಲು ಜೊತೆಗೆ ಬೂಸಾ-ಹಿಂಡಿ, ಕಾಯಿ-ಕೊಬ್ಬರಿ-ಪುರಿ ಇತ್ಯಾದಿಗಳನ್ನು ನೀಡುತ್ತಿದ್ದರು. ತುಪ್ಪದಲ್ಲಿ ನೆನಸಿದ ರೊಟ್ಟಿಗಳನ್ನು ಪ್ರೀತಿಯಿಂದ ತಿನ್ನಿಸುತ್ತಿದ್ದರು. ಜೊತೆಗೆ ಇದರದೇ ತಳಿಯ ಹೈನುರಾಸುಗಳ ಸೇರುಗಟ್ಟಲೇ ಹಾಲು ಕುಡಿಸುತ್ತಿದ್ದರು. ಈ ರಾಸುಗಳಿಗೆ ಮಲಗಲು ವಿಶೇಷವಾದ ಹಾಸಿಗೆಗಳನ್ನು ಮಾಡಿಸುತ್ತಿದ್ದರು. ಒಟ್ಟಾರೆ ಇದು ಹಳ್ಳಿಕಾರ್ ರಾಸುಗಳ ಅತ್ಯಂತ ವೈಭವದ ದಿನಗಳು. ಇಂಥ ದಿನಗಳು ರೈತರ ಸಮೃದ್ದಿಯನ್ನೂ ತೋರಿಸುತ್ತಿದ್ದವು.
ವಿಶೇಷ ದಿನಗಳಲ್ಲಿ ಹಳ್ಳಿಕಾರ್ ರಾಸುಗಳಿಗಾಗಿಯೇ ಮಕ್ಮಲ್ ಬಟ್ಟೆಯಿಂದ ಗೌಸು ಹೊಲಿಸಿ ಹೊದಿಸುತ್ತಿದ್ದರು. ಎರಡೂ ಕೊಂಬುಗಳಿಗೂ ಬೆಳ್ಳಿ ಅಣಸು ಹಾಕುತ್ತಿದ್ದರು. ಚಿನ್ನದ ಅಣಸು ಹಾಕುವಂಥವರೂ ಇದ್ದರು. ಚಿನ್ನದ ಅಭರಣಗಳಿಂದ ರಾಸುಗಳ ಹಣೆ ಅಲಂಕರಿಸುತ್ತಿದ್ದರು. ಬಾಲಕ್ಕೆ ಕುಚ್ಚು. ಇದಾದ ನಂತರ ದೃಷ್ಟಿ ತಾಕದಿರಲೆಂದು ರಾಸುಗಳ ಕುತ್ತಿಗೆಗೆ ಕರಿಹುರಿ ಕಟ್ಟುತ್ತಿದ್ದರು. ರೈತಾಪಿಗಳು ತಾವು ಸಾಕಿದ ಹಳ್ಳಿಕಾರ್ ರಾಸುಗಳನ್ನು ವಿಧವಿಧವಾಗಿ ಅಲಂಕರಿಸಿ ಖುಷಿಪಡುತ್ತಿದ್ದರು. ಮೆರವಣಿಗೆಯಿಂದ ಬಂದ ರಾಸುಗಳನ್ನು ಹೆಂಗಳೆಯರು ಆರತ್ತಿ ಎತ್ತಿ ಸ್ವಾಗತ್ತಿಸುದ್ದರು. ಈ ರಾಸುಗಳು ಮನೆಯ ಸಂಪತ್ತು ಎಂದು ರೈತರು ತಿಳಿದಿದ್ದರಿಂದಲೇ ಈ ಎಲ್ಲ ಸಂಭ್ರಮ.
ಪ್ರಸ್ತುತ ಪರಿಸ್ಥಿತಿ: ಕಳೆದೆರಡು ದಶಕಗಳಿಂದ ಹಳ್ಳಿಗಳಲ್ಲಿ ಹಳ್ಳಿಕಾರ್ ರಾಸುಗಳ ಚಿತ್ರಣ ಬಹುತೇಕ ಬದಲಾಗಿದೆ. ಬಹುತೇಕ ರೈತರ ಹಟ್ಟಿಗಳಿಂದ ಈ ರಾಸುಗಳು ನಿರ್ಗಮಿಸಿವೆ. ಉಳುಮೆಗೆ-ಸರಕು ಸಾಗಾಣಿಕೆಗೆ ಟ್ರಾಕ್ಟರ್-ಟಿಲ್ಲರ್ಗಳನ್ನೇ ಅವಲಂಬಿಸಲಾಗಿದೆ. ಇದು ಅನಿವಾರ್ಯ ಇರಬಹುದು. ಆದರೆ ಕೊಟ್ಟಿಗೆ ಗೊಬ್ಬರಕ್ಕಾಗಿಯೂ ರಾಸುಗಳನ್ನು ಅವಲಂಬಿಸುವಂಥ ಮನಸ್ಥಿತಿ ಭಾರಿ ಕಡಿಮೆಯಾಗಿದೆ. ರಸಗೊಬ್ಬರಗಳನ್ನೇ ಅವಲಂಬಿಸಿದ್ದಾರೆ. ಇನ್ನು ಹಾಲಿಗಾಗಿ ಈ ತಳಿಯ ಹೈನುರಾಸುಗಳನ್ನು ಸಾಕಾಣಿಕೆ ಮಾಡುವ ಪ್ರವೃತ್ತಿ ಕಣ್ಮರೆಯಾಗಿದೆ. ಇದರೊಂದಿಗೆ ಹಳ್ಳಿಕಾರ್ ಎತ್ತುಗಳನ್ನು ಸಾಕಿರುವಂಥವರಲ್ಲಿ ಬಹುತೇಕರು ಇದರ ತಳಿ ಶುದ್ದತೆಗೂ ಗಮನ ನೀಡುತ್ತಿಲ್ಲ.ಇವೆಲ್ಲದರ ಪರಿಣಾಮ ಹಳ್ಳಿಗಳಲ್ಲಿ ಹಳ್ಳಿಕಾರ್ ಎತ್ತುಗಳ ಸಂಖ್ಯೆ ಕ್ಷೀಣಿಸಿದೆ. ಇದೇ ಪ್ರವೃತ್ತಿ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಚಿತ್ರಗಳಲ್ಲಿ ಮಾತ್ರ ಹಳ್ಳಿಕಾರ್ ರಾಸು ಕಾಣುವಂಥ ಪರಿಸ್ಥಿತಿ ಉದ್ಬವಿಸಬಹುದು.