ಲೇಖಕರು: ಸೋಮು ಟಿ., ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ವೈನ್ ಬೋರ್ಡ್

ಕರ್ನಾಟಕ ರಾಜ್ಯದಲ್ಲಿ 2007ರಲ್ಲಿ ದ್ರಾಕ್ಷಾರಸ ನೀತಿ ಜಾರಿಗೆ ಬಂದಿದೆ. ಇದರ ನಂತರ ಕರ್ನಾಟಕ ವೈನ್ ಬೋರ್ಡ್ ಸ್ಥಾಪನೆಯಾಯಿತು. ಇದರ ಸ್ಥಾಪನೆಗೂ ಮೊದಲು ರಾಜ್ಯದಲ್ಲಿ ಕೇವಲ ಎರಡು ವೈನರಿಗಳಿದ್ದವು. ಪ್ರಸ್ತುತ 17 ವೈನರಿಗಳಾಗಿವೆ. ಇವುಗಳ ಸಂಖ್ಯೆ ಹೆಚ್ಚುವಂಥ ಸಕಾರಾತ್ಮಕ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಮೊದಲು 17 ಲಕ್ಷ ಲೀಟರ್ ದ್ರಾಕ್ಷಾರಸ ಉತ್ಪಾದನೆಯಾಗುತ್ತಿತ್ತು. ಅದರ ಪ್ರಮಾಣವೀಗ 80 ಲಕ್ಷ ಲೀಟರ್ ಆಗಿದೆ.

ಇತರ ನಗರಗಳಲ್ಲಿಯೂ ವೈನ್ ಉತ್ಸವ:

ಮೊದಲು ಬೆಂಗಳೂರು ಮಹಾನಗರದಲ್ಲಿ ಮಾತ್ರ ವೈನ್ ಫೆಸ್ಟಿವಲ್ ಮಾಡುವ ವಾತಾವರಣವಿತ್ತು. ಈಗ ರಾಜ್ಯದ ಇತರ ಪ್ರಮುಖ ನಗರಗಳಲ್ಲಿಯೂ ಆಯೋಜನೆಯಾಗುತ್ತಿದೆ. ಖರೀದಿ ಸಾಮರ್ಥ್ಯ ಇತರ ನಗರಗಳಲ್ಲಿಯೂ ಹೆಚ್ಚಿದೆ. ಹಿತಮಿತ ವೈನ್ ಸೇವನೆ ಆರೋಗ್ಯಕ್ಕೂ ಹಿತ ಎಂಬ ಗ್ರಹಿಕೆ ಹೆಚ್ಚಾಗಿದೆ.ಇದರಿಂದ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಮೊದಲೆಲ್ಲ ಮಧ್ಯಮವರ್ಗದವರಲ್ಲಿ ವೈನ್ ಸೇವನೆ ಕುರಿತು ತಪ್ಪು ಭಾವನೆಯಿತ್ತು. ಅದೀಗ ನಿವಾರಣೆಯಾಗಿದೆ.

ಸೇವನೆಯ ಸರಾಸರಿ ಪ್ರಮಾಣ:

ರಾಜ್ಯದಲ್ಲಿ ಈ ಮೊದಲು ದ್ರಾಕ್ಷಾರಸಕ್ಕೆ ಸೂಕ್ತವಾಗುವ ದ್ರಾಕ್ಷಿ ಉತ್ಪಾದನೆ ಕ್ಷೇತ್ರದ ಒಟ್ಟು ವಿಸ್ತೀರ್ಣ 500 ಎಕರೆಯಷ್ಟಿತ್ತು. ಈಗ ಅದರ ವಿಸ್ತೀರ್ಣ 2000 (ಎರಡು ಸಾವಿರ) ಎಕರೆಯಾಗಿದೆ. ಅದೂ ಅಲ್ಲದೇ ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ತಲಾವಾರು ವೈನ್ ಸೇವನೆ ಪ್ರಮಾಣ ಕೇವಲ 10 ಎಂ.ಎಲ್. ಯುರೋಪಿನಲ್ಲಿ ಇದರ ಪ್ರಮಾಣ 14 ಲೀಟರ್ ಇದೆ. ಇದು ಅಲ್ಲಿಯ ಓರ್ವ ವ್ಯಕ್ತಿ ವಾರ್ಷಿಕವಾಗಿ ವೈನ್ ಸೇವಿಸುವ ಸರಾಸರಿ ಪ್ರಮಾಣ.

ಹೆಚ್ಚಿದ ಬೆಲೆ:

ಈಗ ಭಾರತದಲ್ಲಿ ತಲಾವಾರು ವೈನ್ ಸೇವನೆ ಪ್ರಮಾಣ 10 ಎಂ.ಎಲ್. ಇರುವುದು ದ್ವಿಗುಣಗೊಂಡರೂ ವೈನ್ ದ್ರಾಕ್ಷಿ ಬೆಳೆಸುವ ಪ್ರಮಾಣ ಹೆಚ್ಚುತ್ತದೆ. ಅಷ್ಟು ಪ್ರಮಾಣದಲ್ಲಿ ವೈನ್ ಗ್ರೈಪ್ಸ್ ಅತ್ಯವಶ್ಯಕವಾಗುತ್ತದೆ. ಮೊದಲು ವೈನ್ ಗ್ರೈಪ್ ಪ್ರತಿಕೆಜಿಗೆ ಸರಾಸರಿ 30 ರೂಪಾಯಿಗಳಿತ್ತು. ಅದರ ಮೌಲ್ಯವೀಗ ಸರಾಸರಿ 60 ರೂಪಾಯಿಗಳಾಗಿದೆ. ಬೆಂಗಳೂರು ಸುತ್ತಮುತ್ತಲೂ ಸುಮಾರು 3 ಸಾವಿರ ಎಕರೆ ಪ್ರದೇಶದಲ್ಲಿ ‘ಬೆಂಗಳೂರು ಬ್ಲೂ’ ತಳಿಯ ದ್ರಾಕ್ಷಿ ಬೆಳೆಸಲಾಗುತ್ತಿದೆ. ಇದನ್ನು ಜಿಐ ಕ್ರಾಪ್ ಎಂದೂ ಕರೆಯಲಾಗುತ್ತದೆ. ಮೊದಲು ಇದು ಟೇಬಲ್ ಉದ್ದೇಶಕ್ಕೆ ಹೋಗುತ್ತಿತ್ತು. ಆದರೆ ಉತ್ಪಾದನೆಯಾಗುತ್ತಿರುವ ಬೆಂಗಳೂರು ಬ್ಲೂ ದ್ರಾಕ್ಷಿಯಲ್ಲಿ ಶೇಕಡ 25ಕ್ಕೂ ಹೆಚ್ಚು ಪ್ರಮಾಣ ವೈನ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಮೊದಲು ಮಾರುಕಟ್ಟೆಯಲ್ಲಿ ಈ ದ್ರಾಕ್ಷಿ ಬೆಲೆ ಪ್ರತಿಕೆಜಿಗೆ ಸರಾಸರಿ 6 ರೂಪಾಯಿಗಳಿತ್ತು. ಅದರ ಮೌಲ್ಯವೀಗ ಸರಾಸರಿ 25 ರಿಂದ 30 ರೂಪಾಯಿಗಳಾಗಿದೆ. ಇದಕ್ಕೆ ಕಾರಣ ವೈನ್ ಉತ್ಪಾದನೆಗೆ ಬಳಸುತ್ತಿರುವುದೇ ಆಗಿದೆ.

ಎರಡೂ ಕ್ಷೇತ್ರಗಳಿಗೂ ಗಮನ:

ಕರ್ನಾಟಕ ವೈನ್ ಬೋರ್ಡ್, ದ್ರಾಕ್ಷಿ ಬೆಳೆಗಾರರು ಮತ್ತು ವೈನ್ ಉದ್ದಿಮೆ ಈ ಎರಡರ ಬೆಳವಣಿಗೆಯನ್ನೂ ಗಮನದಲ್ಲಿಟ್ಟುಕೊಂಡಿದೆ. ವೈನ್ ಉದ್ಯಮದ ಸಾಧಕ – ಬಾಧಕಗಳನ್ನು ಗಮನಿಸಿ ಅದಕ್ಕೆ ಉತ್ತೇಜನ ನೀಡಲಾಗುತ್ತಿದೆ. ಬೋರ್ಡ್ ಸ್ಥಾಪನೆಯಾದ ಮೇಲೆ ಉದ್ದಿಮೆ ವೃದ್ಧಿ ಗಮನದಲ್ಲಿಟ್ಟುಕೊಂಡು ಲೈಸನ್ಸ್ ದರವನ್ನು ನಿಗದಿಪಡಿಸಲಾಗಿದೆ.

ಅರಿವು ಅಭಿಯಾನ:

ಈಗ ರಾಜ್ಯದಲ್ಲಿ 190 ವೈನ್ ಟಾವರಿನ್ , 40ಕ್ಕೂ ಹೆಚ್ಚು ವೈನ್ ಬೋಟಿಕ್ ಸ್ಥಾಪನೆಯಾಗಿವೆ. ಇಂಥ ಬೆಳವಣಿಗೆ ವೈನ್ ಬೋರ್ಡ್ ಸ್ಥಾಪನೆಯಾದ ಮೇಲೆ ಆಗಿರುವುದು ಎಂಬುದು ಗಮನಾರ್ಹ. ವೈನ್ ಕುರಿತ ತಪ್ಪು ತಿಳಿವಳಿಕೆಗಳು, ವೈನ್ ಸೇವನೆಯಿಂದಾಗುವ ಆರೋಗ್ಯ ಲಾಭಗಳ ಕುರಿತು ಬೋರ್ಡ್ ನಡೆಸುತ್ತಿರುವ ಅರಿವು ಅಭಿಯಾನವೂ ಇದಕ್ಕೆ ಕಾರಣ ಎನ್ನಬಹುದು.

ಅಧ್ಯಯನ:

ವಿದೇಶಗಳಲ್ಲಿ ವೈನ್ ದ್ರಾಕ್ಷಿ ವೆಳೆ ಕ್ಷೇತ್ರ ಭಾರಿ ವಿಸ್ತಾರವಾಗಿದೆ. ವೈನ್ ಉದ್ದಿಮೆಯೂ ಅಪಾರವಾಗಿ ಬೆಳವಣಿಗೆಯಾಗಿದೆ. ಇಲ್ಲಿ ವೈನ್ ಬೆಳೆಯಲು, ತಯಾರಿಲು ಅತ್ಯಾಧುನಿಕ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅವುಗಳನ್ನು ಅಧ್ಯಯನ ಮಾಡಿ ಇಲ್ಲಿಯೂ ಅಳವಡಿಸಿಕೊಳ್ಳುವಂತೆ ಮಾಡಲು ವೈನ್ ಬೋರ್ಡ್ ಸದಸ್ಯರು ಫ್ರಾನ್ಸ್, ಸ್ಪೈನ್ ಇತ್ಯಾದಿ ಕಡೆ ಪ್ರವಾಸ ಹೋಗಿ ಬಂದಿದ್ದಾರೆ. ಇದರ ಪ್ರಯೋಜನವೂ ಆಗುತ್ತಿದೆ.

ಜಿಯಾಗ್ರಪಿಕಲ್ ಇಂಡಿಕೇಶನ್:

ವಿದೇಶಗಳಲ್ಲಿ ಜಿಯಾಗ್ರಪಿಕಲ್ ಇಂಡಿಕೇಶನ್ ಬ್ರಾಂಡೆಡ್ ಇರುವ ವೈನ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರತಿಯೊಂದು ಪ್ರದೇಶದ ಮಣ್ಣಿಗೂ ಕೂಡ ತಮ್ಮದೇ ಆದ ವಿಶಿಷ್ಟತೆ ಇರುತ್ತದೆ. ಇದರ ವೈಶಿಷ್ಟತೆ ಅಲ್ಲಿ ಬೆಳೆಯುವ ದ್ರಾಕ್ಷಿಗೂ ಬಂದಿರುತ್ತದೆ. ಇದನ್ನನುಸರಿಸಿ ಆಯಾ ಪ್ರದೇಶದ ವೈನ್ ದ್ರಾಕ್ಷಿ ಬಳಸಿ ಉತ್ಪಾದಿಸುವ ದ್ರಾಕ್ಷಿಗೆ ಆ ಪ್ರದೇಶದ ಹೆಸರನ್ನು ಟ್ಯಾಗ್ ಆಗಿ ಬಳಸುವ ರೂಢಿಯಿದೆ. ಪ್ರಸ್ತುತ ಕರ್ನಾಟಕದಲ್ಲಿಯೂ ನಾವು ಜಿಯಾಗ್ರಪಿಕಲ್ ಇಂಡಿಕೇಶನ್ ಗುರುತಿಸಿದ್ದೇವೆ. ಅವುಗಳೆಂದರೆ ಕಾವೇರಿ ವ್ಯಾಲಿ, ನಂದಿ ವ್ಯಾಲಿ, ಕೃಷ್ಣಾ ವ್ಯಾಲಿ ಮತ್ತು ಹಂಪೆ ವ್ಯಾಲಿ.

ದ್ರಾಕ್ಷಾರಸ ತಳಿ ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ:

ರಾಜ್ಯ ತೋಟಗಾರಿಕೆ ಇಲಾಖೆಯು ದ್ರಾಕ್ಷಾರಸ ಮಂಡಳಿಯ ಮಾತೃ ಇಲಾಖೆ. ತೋಟಗಾರಿಕೆ ಬೆಳೆಗಳ ಕೃಷಿ ಪ್ರೋತ್ಸಾಯಿಸಲು ಇಲಾಖೆ ಬೇರೆಬೇರೆ ಯೋಜನೆಗಳನ್ನು ಹೊಂದಿದೆ. ಇದಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸಹಕಾರವೂ ಇದೆ. ಕರ್ನಾಟಕದಲ್ಲಿ ದ್ರಾಕ್ಷಾರಸ ತಳಿ ದ್ರಾಕ್ಷಿ ಬೆಳೆಸಲು ಸಹಾಯಧನ ನೀಡಲಾಗುತ್ತಿದೆ. ಇದಲ್ಲದೇ ಆಸಕ್ತ ರೈತರಿಗೆ ಅಗತ್ಯವಾದ ತಾಂತ್ರಿಕ ಮಾರ್ಗದರ್ಶನವೂ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080 – 2234 1237

LEAVE A REPLY

Please enter your comment!
Please enter your name here