ಲೇಖಕರು: ಕುಮಾರ ರೈತ, ಪತ್ರಕರ್ತರು

ಉತ್ತರ ಕರ್ನಾಟಕದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕುರಿ ತರುಬಿಸುವಿಕೆ ಕ್ರಮ ಇಳಿಮುಖವಾಗುತ್ತಿದೆ. ರೈತರು ರಾಸಾಯನಿಕ ಗೊಬ್ಬರದ ಹಿಂದೆ ಬಿದ್ದಿರುವುದರಿಂದ ಈ ಪದ್ಧತಿ ಮರೆತಂತಿದೆ. ಇನ್ನಿತರೆ ಭಾಗಗಳಲ್ಲಿ ಕುರಿಗೊಬ್ಬರವನ್ನೇ ಬಳಸುತ್ತಾರಾದರೂ ಅದು ಹೆಚ್ಚು ಪರಿಣಾಮಕಾರಿಯಲ್ಲ.

ಮಣ್ಣಿನ ಫಲವತ್ತತೆ ಹೆಚ್ಚಿಸಲು ಕುರಿ ಸಹಾಯಕ. ತರುಬಿಸುವಿಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. (ತರುಬಿಸುವಿಕೆ ಎಂದರೆ ಕುರಿಯ ಹಿಂಡನ್ನು ಜಮೀನಿನಲ್ಲಿ ಬಿಟ್ಟು ಹಿಕ್ಕೆ ಹಾಗೂ ಮೂತ್ರವನ್ನು ವಿಸರ್ಜಿಸುವಂತೆ ಮಾಡುವುದು) ಹಿಕ್ಕೆ ಪೌಷ್ಟಿಕ ಗೊಬ್ಬರವಾಗಿ, ಮೂತ್ರ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 16 ಬಗೆಯ ಪೋಷಕಾಂಶಗಳಿವೆ. ನೇಪಾಳದ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ ಪ್ರಯೋಗದಿಂದ ಇದು ಖಾತರಿಯಾಗಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂದೂ ಹೇಳಿದೆ.

ತರುಬಿಸುವಿಕೆ ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರದಲ್ಲೆಲ್ಲಾ ಚಾಲ್ತಿ ಇದೆ. ಆದರೆ ತೀರಾ ಕಡಿಮೆ. ಇಲ್ಲೆಲ್ಲಾ ಕುರಿ ಹಿಂಡು ಬಿಡುವುದು ಎನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ತರುಬಿಸುವಿಕೆ ಎನ್ನುವ ಹೆಸರಿದೆ. ಅಲೆಮಾರಿ ಕುರಿಗಾಹಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಜತೆಗೆ,  ರಸಗೊಬ್ಬರಗಳ ಪರಿಣಾಮ ಹೆಚ್ಚಿದೆ. ಇದು ಬದಲಾಗಿರುವ ಬಹುತೇಕ ರೈತರ ಮನೋಭಾವದ ನಿದರ್ಶನ ಕೂಡ. ಬೆಳೆ ಇಳುವರಿ ಕುಸಿದಿದೆ. ಅಂತರ್ಜಲ ಕಲುಷಿತವಾಗಿದೆ. ಕೀಟಬಾಧೆ ಹೆಚ್ಚಿದೆ. ಕೃಷಿಯ ವೆಚ್ಚ ಮಿತಿ ಮೀರಿದೆ. ಇಂಥ ಸಂದರ್ಭದಲ್ಲಿ ಕಾರಣಗಳಿಗೆ ತರುಬಿಸುವಿಕೆ ಪ್ರಾಮುಖ್ಯತೆ ಹೆಚ್ಚಿದೆ.

ಬಲು ಮಹತ್ವ: ಕುರಿ ತರುಬಿಸುವವರು ಸಾಮಾನ್ಯವಾಗಿ ಸಮುದಾಯದವರು. ಇವರ ಮುಖ್ಯ ಕಾಯಕ ಕುರಿ ಸಾಕಾಣಿಕೆ.  ಮೊದಲೆಲ್ಲಾ ಉತ್ತರ ಕರ್ನಾಟಕದಲ್ಲಿ ಹೊಲಗಳಿಗೆ ಕುರಿ ತರುಬಿಸಲು ರೈತರಲ್ಲೇ ಭಾರಿ ಪೈಪೋಟಿಯಿತ್ತು. ಹೊಲಗಳಲ್ಲಿ ಕುರಿ ಮಂದೆ ಬಿಡಲು ದವಸ-ಧಾನ್ಯಗಳನ್ನು  ಸಂಭಾವನೆ ನೀಡುತ್ತಿದ್ದರು. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಹೊಸ ವಸ್ತ್ರಗಳನ್ನು ನೀಡುವ ಪದ್ಧತಿ ಕೆಲವು ಕಡೆ ಇತ್ತು.

ಹಿಂಡಿನಲ್ಲಿ ಕನಿಷ್ಠ ಐನೂರರಿಂದ ಸಾವಿರದ ತನಕ ಕುರಿಗಳಿರುತ್ತವೆ. ಜೊತೆಗೆ ಸಾಕಣೆದಾರರರು ಸಂಸಾರ ಸಮೇತರಾಗಿ ಹಿಂಡಿನೊಂದಿಗೆ ಸಂಚರಿಸುತ್ತಾರೆ. ತೋಳ, ನರಿಗಳಿಂದ ರಕ್ಷಿಸಲು ಬಲಿಷ್ಠ ನಾಯಿಗಳು ಇರುತ್ತವೆ. ಕುರಿಗಾಹಿಗಳು ಹಿಂಡನ್ನು ಮೇವು-ನೀರು-ನೆರಳು ಜೊತೆಗೆ ರಕ್ಷಣೆ ಇರುವ ಕಡೆಗಳಲ್ಲಿ ಮಾತ್ರ ಬಿಡುತ್ತಾರೆ.

ಉತ್ತರ ಕರ್ನಾಟಕದಲ್ಲಿ ಮುಂಗಾರು ಹಂಗಾಮಿಗಿಂತಲೂ ಹಿಂಗಾರು ಹಂಗಾಮು ಜೋರು. ಇಲ್ಲಿನ ಆಳ ಕಪ್ಪುಮಣ್ಣಿನಲ್ಲಿ ಕುರಿಹಿಂಡು ತರುಬಿಸಲು ರೈತರ ಆಸಕ್ತಿ ಹೆಚ್ಚು. ಹೊಲದ ವಿಸ್ತೀರ್ಣಕ್ಕೆ ತಕ್ಕಂತೆ ತರುಬಿಸಬೇಕು. ವಿಸ್ತಾರವಾದ ಜಮೀನಿನಲ್ಲಿ ಒಂದೇ ಕಡೆ ಕುರಿ ತರುಬಿಸದೇ ಬೇರೆ ಬೇರೆ ಕಡೆ ಕುರಿ ಹಿಂಡು ನಿಲ್ಲಿಸುತ್ತಾರೆ. ಕುರಿ ಹಿಂಡು ತೆರಳಿದ ಬಳಿಕ ಹೊಲವನ್ನು ಹರಗಿ ಕುರಿ ಹಿಕ್ಕೆ ಮತ್ತು ಮೂತ್ರವನ್ನು ಮಣ್ಣಿನೊಂದಿಗೆ ಸೇರಿಸಲಾಗುತ್ತದೆ. ಕುರಿಗಳು ಮಲಗುವ ಮೊದಲು ಹಿಕ್ಕೆ, ಮೂತ್ರ ಹೊಯ್ಯುತ್ತವೆ. ಇದರಿಂದ ಫಸಲು ಅತ್ಯುತ್ತಮವಾಗಿ ಬಂದು ರೈತರು ಲಾಭಗಳಿಸಲು ನೆರವಾಗುತ್ತದೆ.

ವಿವೇಚನೆಗೆ ಬಿಟ್ಟದ್ದು: ಸಾಮಾನ್ಯವಾಗಿ ಹತ್ತಿ ಬೆಳೆಯುವ ಮುನ್ನ ಹೊಲದಲ್ಲಿ ಕುರಿ ತರುಬಿಸುತ್ತಾರೆ. ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಮಾತ್ರ. ಪ್ರತಿ ಹಂಗಾಮಿಗೂ ಕುರಿ ತರುಬಿಸುವುದರ ಬದಲು ನಿರ್ದಿಷ್ಟ ಅಂತರಕೊಟ್ಟು ತರುಬಿಸುವುದು ಉತ್ತಮವೆಂಬುದು ರೈತರ ಅನುಭವದ ಮಾತು.

ಕುರಿ ತರುಬಿಸುವುದಕ್ಕೂ ಮೊದಲು ಧಾನ್ಯದ ಬೆಳೆಗಳನ್ನು ಬೆಳೆಯಲಾಗಿರುತ್ತದೆ. ಬೆಳೆಯ ತ್ಯಾಜ್ಯವನ್ನು ಕೊಂಚ ಹೆಚ್ಚಾಗಿ ಬಿಡುವುದು ರೈತರು ಬೆಳೆ ಯೋಜನೆ ಮಾಡಿದ್ದಾರೆ ಎನ್ನುವುದಕ್ಕೆ ಉದಾಹರಣೆ. ಈ ತ್ಯಾಜ್ಯವನ್ನು ಕುರಿಗಳ ಮೇವಿಗೆ ಬಿಡುತ್ತಾರೆ. ಬೆಳೆ ಪರಿವರ್ತನೆ ಪದ್ಧತಿಯಲ್ಲಿ ಧಾನ್ಯದ ಬೆಳೆಗಳನ್ನು ಬೆಳೆಯುವುದಕ್ಕೂ ಮೊದಲು ಕೂಡ ಕುರಿ ತರುಬಿಸುವ ರೂಢಿಯಿದೆ. ಯಾವ ಬೆಳೆಗೆ ಕುರಿ ತರುಬಿಸಬೇಕು ಎಂಬುದು ರೈತರ ವಿವೇಚನೆಗೆ ಬಿಟ್ಟದ್ದು.

ಹೊಲದ ಮಣ್ಣಿನ ಫಲವತ್ತತೆ ಅನುಸಾರ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಹಟ್ಟಿಗೊಬ್ಬರ ಒದಗಿಸಲಾಗುತ್ತದೆ. ಆದರೆ ಕುರಿ ತರುಬಿಸಿದಾಗ ಇದರ ಜೊತೆ ಹಟ್ಟಿಗೊಬ್ಬರವನ್ನು ನೀಡುವ ಪದ್ಧತಿ ವಿರಳ. ಸಾಮಾನ್ಯವಾಗಿ ಈ ಎರಡೂ ಗೊಬ್ಬರಗಳನ್ನು ಭೂಮಿಗೆ ನೀಡುವುದಿಲ್ಲ. ರೈತರ ಅನುಭವದಲ್ಲಿ ಹಟ್ಟಿಗೊಬ್ಬರ ನೀಡುವುದಕ್ಕಿಂತಲೂ ಕುರಿ ತರುಬಿಸುವುದು ಹೆಚ್ಚು ಪರಿಣಾಮಕಾರಿ.ಕಾಂಪೋಸ್ಟ್‌ ಮಾಡಿದ ಕುರಿ ಗೊಬ್ಬರಕ್ಕಿಂತಲೂ ಹಿಂಡು ತರುಬಿಸಿದಾಗ ನೇರವಾಗಿ ಹೊಲದಲ್ಲಿಯೇ ಲಭ್ಯವಾಗುವ ಕುರಿ ಗೊಬ್ಬರ ಹೆಚ್ಚು ಸತ್ವಯುತ.

1 COMMENT

LEAVE A REPLY

Please enter your comment!
Please enter your name here