ಮಣ್ಣಿನ ಸಾವಯವ ಇಂಗಾಲ ಹೆಚ್ಚಳಕ್ಕೆ ಸಲಹೆಗಳು

0
ಲೇಖಕರು: ಸಾಯಿಲ್‌ ವಾಸು

ಏರುಪೇರಿನ ಹವಾಮಾನವನ್ನು ಹತೋಟಿಗೆ ತರಲು ಹಾಗೂ ಪೌಷ್ಟಿಕ ಆಹಾರ ಭದ್ರತೆ ಪಡೆಯಲು ಮಣ್ಣಲ್ಲಿನ ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಬೇಕು. ಇದಕ್ಕಾಗಿ ಎಂಟು ಕ್ರಮಗಳನ್ನು ಅಳವಡಿಸಿಕೊಳ್ಳಲು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
೧. ಮಣ್ಣಲ್ಲಿ ಈಗಿರುವ ಸಾವಯವ ಇಂಗಾಲಾಂಶ ನಾಶವಾಗದಂತೆ ತಡೆಯುವುದು. ಅಂದರೆ ನಮ್ಮ ಹೊಲ – ತೋಟಗಳಲ್ಲಿನ ಮಣ್ಣು ಸವೆಯದಂತೆ – ನಾಶವಾಗದಂತೆ ಸಂರಕ್ಷಿಸುವುದು ಹಾಗೂ ಹೊಲ – ತೋಟಗಳಲ್ಲಿನ ಗಿಡ-ಗಂಟೆಗಳನ್ನು ಕಳೆಗಿಡಗಳನ್ನು, ಬೆಳೆಯುಳಿಕೆಗಳನ್ನು ಸುಡದೇ ಇರುವುದು. ಜೊತೆಗೆ ಹೊಲ – ತೋಟಗಳನ್ನು ಬೀಳು ಬಿಡದೆ ಒಂದಿಲ್ಲೊಂದು ಗಿಡಗಳು – ಮರಗಳು ಇರುವಂತೆ ನೋಡಿಕೊಳ್ಳುವುದು.

೨. ಮಣ್ಣಲ್ಲಿ ಹೆಚ್ಚು ಪ್ರಮಾಣದಲ್ಲಿ ಇಂಗಾಲಾಂಶ ಸೇರುವಂತೆ ಮಾಡುವುದು. ಅಂದರೆ ಸ್ಥಳೀಯ ಹವಾಮಾನ – ವಾಯುಗುಣ – ಮಣ್ಣುಗುಣಕ್ಕೆ ಹೊಂದಿಕೊಳ್ಳುವಂತಹ ಪೂರಕ ಕ್ರಮ – ಪದ್ಧತಿಗಳಾಗಿರುವುದನ್ನು ಗುರುತಿಸಿ ಅದನ್ನು ಉತ್ತೇಜಿಸುವಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವುದು .

ಉದಾಹರಣೆಗೆ ಬೆಳೆಯುಳಿಕೆಗಳನ್ನು ಮಣ್ಣಿಗೆ ಬೆರೆಸುವುದು – ಬಹುಬೆಳೆಗಳನ್ನು ಬೆಳೆಯುವುದು – ಬೆಳೆಗಳೊಂದಿಗೆ ಮರಗಳನ್ನೂ ಬೆಳೆಸುವುದು – ಸಮಪಾತಳಿ ಬದುಗಳಾಗಿಯೇ ಬೆಳೆಗಳನ್ನು ಬೆಳೆಸುವುದು – ಮಣ್ಣಿಗೇ ಸಾರಜನಕವನ್ನು ಒದಗಿಸುವ ಬೆಳೆಗಳನ್ನು ಬೆಳೆಯುವುದು ಹಾಗೂ ಮಣ್ಣಲ್ಲಿ ತೇವಾಂಶ ಸದಾಕಾಲ ಇರುವಂತೆ ಮಾಡುವುದು.

೩. ಈ ಕ್ರಮಗಳು ಮಾಡುವ ಪರಿಣಾಮಗಳ ಕುರಿತು ನಿಗಾವಹಿಸಿ ಆಳವಾಗಿ ಗಮನಿಸುವುದು – ಅದನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಪರಿಶೀಲಿಸಿ – ಪರಾಮರ್ಶಿಸಿ ದಾಖಲಿಸುವುದು.

೪. ಮಣ್ಣಲ್ಲಿ ಇಂಗಾಲಾಂಶ ಒದಗಿಸುವ ಕ್ರಮಗಳು ವೇಗವಾಗಿ, ನಿಖರವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಆಗುವಂತಹ ಪ್ರಕೃತಿಪೂರಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು.

೫. ಮಣ್ಣಿಗೆ ಇಂಗಾಲಾಂಶ ಸೇರಿಸುವಲ್ಲಿ ಸ್ಥಳೀಯ ಪರಿಸ್ಥಿತಿಗೆ ಒಗ್ಗುವಂತಹ ವಿವಿಧ ಬಗೆಯ ಮಾದರೀ ಕ್ರಮಗಳತ್ತ ತಂತ್ರೋಪಾಯಗಳನ್ನು ರೂಪಿಸುವುದು.

೬. ಸಮುದಾಯದ ಜನರನ್ನು ಈ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದರ ಮೂಲಕ, ಅಂದರೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಮಣ್ಣಲ್ಲಿ ಇಂಗಾಲಾಂಶ ಹೆಚ್ಚಾಗುವ ವಿಧಾನಗಳ ಕುರಿತು ಅವರಿಗೆ ಮಾಹಿತಿ ನೀಡಿ, ಇಂಗಾಲಾಂಶ ಮಣ್ಣಲ್ಲಿ ಹೆಚ್ಚಾಗುತ್ತಿರುವ ವಿದ್ಯಮಾನಗಳನ್ನು ಕ್ರಮಬದ್ಧವಾಗಿ ದಾಖಲಿಸುವಂತಹ ಜವಾಬ್ದಾರಿ ನೀಡುವುದು.

ರೈತ ಸಮುದಾಯವನ್ನು ಪ್ರೋತ್ಸಾಹಿಸಿ, ಮಣ್ಣಲ್ಲಿ ಇಂಗಾಲಾಂಶ ಹೆಚ್ಚಿಸುವ ಕ್ರಮಗಳನ್ನು ತಮ್ಮ ಹೊಲ – ತೋಟಗಳಲ್ಲಿ ಅಳವಡಿಸಿಕೊಳ್ಳುವತ್ತ ಉತ್ತೇಜಿಸುವುದು. ಹೀಗೆ ಪ್ರೇರಿತಗೊಂಡ ರೈತರು ಹಾಗೂ ವಿದ್ಯಾರ್ಥಿಗಳು ತಾವು ಕಂಡುಕೊಂಡ ವಿಧಾನ ವಿವರಗಳನ್ನು, ಅದರಿಂದಾಗುತ್ತಿರುವ ಪ್ರಯೋಜನಗಳನ್ನು ಸಾರ್ವಜನಿಕ ಸಭೆಗಳಲ್ಲಿ ಹಂಚಿಕೊಳ್ಳುವಂತೆ ಮಾಡುವುದು.

೭. ಸಜೀವಿ ಮಣ್ಣು ಮತ್ತು ಹವಾಮಾನ ಕುರಿತು ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಜವಾಬ್ದಾರಿ ಹೊತ್ತಿರುವ ಇಲಾಖೆಗಳು – ಸಂಸ್ಥೆಗಳು – ಸಂಶೋಧನಾ ಕೇಂದ್ರಗಳು ಇತ್ಯಾದಿ ಗುಂಪುಗಳೊಡನೆ ಜೊತೆಯಾಗಿ , ಮಣ್ಣಲ್ಲಿ ಇಂಗಾಲಾಂಶ ಪೂರೈಕೆಗೆ ಅಗತ್ಯವಾದ ಪೂರಕ ನೀತಿ – ನಿಯಮಗಳನ್ನು ಆಡಳಿತವು ಜಾರಿಗೊಳಿಸುವತ್ತ ಕಾರ್ಯ ನಿರ್ವಹಿಸುವುದು .

೮. ಮಣ್ಣಲ್ಲಿ ಇಂಗಾಲಾಂಶ ಸೇರಿಸುವತ್ತ ರೂಪಿಸುವ ಕಾರ್ಯಯೋಜನೆಗಳು ಇನ್ನಷ್ಟು ವ್ಯಾಪಕವಾಗಿ ಹರಡುವಂತಾಗಲು ಅಗತ್ಯವಾದ ತಾಂತ್ರಿಕ ನೆರವು, ನೀಡಬೇಕು. ರೈತರಿಗೆ ಪ್ರೋತ್ಸಾಹ ಧನ, ದಾಖಲಾತಿ ಪ್ರಕ್ರಿಯೆ ಕಗೊಳ್ಳುವುದು. ಮಣ್ಣಲ್ಲಿ ಸಾವಯವ ಇಂಗಾಲಾಂಶ ಹೆಚ್ಚಾಗುವಂತಹ ಕ್ರಮಗಳನ್ನು ಅಳವಡಿಸಿಕೊಂಡವರಿಗೆ ಬಹುಮಾನ ನೀಡಿ ಗೌರವಿಸುವಂತಹ ಕಾರ್ಯಕ್ರಮಗಳನ್ನು ಬೆಂಬಲಿಸುವುದು .

LEAVE A REPLY

Please enter your comment!
Please enter your name here