ಹಳ್ಳಿಕಾರ್‌ ತಳಿ ರಾಸುಗಳ ಸಂವರ್ಧನೆ ಕಾಯಕ

0
ಸಿ. ಪಾಪಣ್ಣ, ನಿಕಟಪೂರ್ವ ಆಡಳಿತ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕೃಷಿಕ ಸಮಾಜ

ನಾನು ಮೂಲತಃ ತುಮಕೂರು ತಾಲ್ಲೂಕು ಚಿಕ್ಕಣದೇವರ ಹಟ್ಟಿ ಗ್ರಾಮದ ನಿವಾಸಿ.  ನಮ್ಮದು ಕೃಷಿಕ ಕುಟುಂಬ. ರಾಗಿ, ತೆಂಗು, ಅಡಿಕೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ತೊಗರಿ, ಅವರೆ ಇತ್ಯಾದಿ ಬೆಳೆಯುತ್ತೇವೆ.  ಹೈನುಗಾರಿಕೆ, ಜಾನುವಾರು ಸಾಕಣೆ, ತಳಿ ಸಂವರ್ಧನೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ.  ವೈಯಕ್ತಿಕವಾಗಿ ನನಗೆ ಹಳ್ಳಿಕಾರ್ ತಳಿ ರಾಸುಗಳನ್ನು ಸಾಕಣೆ ಮಾಡುವುದರಲ್ಲಿ ವಿಶೇಷ ಆಸಕ್ತಿ ಇದೆ.

ಉತ್ಕೃಷ್ಟ ಗುಣಮಟ್ಟದ ಹಳ್ಳಿಕಾರ್ ತಳಿ ರಾಸುಗಳನ್ನು ತರುತ್ತೇವೆ. ವಿಶೇಷವಾಗಿ ಎತ್ತುಗಳನ್ನು ಜೋಡಿ ಮಾಡುತ್ತೇವೆ. ಇದಕ್ಕಾಗಿ ವಿಶೇಷ ಪರಿಶ್ರಮ ವಹಿಸುತ್ತೇವೆ. ಇದು ಸುಲಭದ ಕೆಲಸವಲ್ಲ. ಒಂದಕ್ಕೊಂದು ಅನುರೂಪವಾದ ಎತ್ತುಗಳನ್ನು ಜೋಡಿ ಮಾಡಲು ಸಾಕಷ್ಟು ಹುಡುಕಾಡಬೇಕಾಗುತ್ತದೆ. ಅದೂ ಅಲ್ಲದೇ ಅವುಗಳು ಒಂದೇ ವಯಸ್ಸು, ಎತ್ತರ , ಬಣ್ಣ ಈ ಎಲ್ಲ ವಿಷಯಗಳಲ್ಲಿಯೂ ಹೊಂದಾಣಿಕೆ ಇರಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಸಣ್ಣ ವಯಸ್ಸಿನ ಹಳ್ಳಿಕಾರ್ ಒಂಟಿ ಎತ್ತನ್ನು ತರುತ್ತೇವೆ. ನಂತರ ಅದಕ್ಕೆ ಜೋಡಿ ಹುಡುಕಿ ತರುತ್ತೇವೆ. ಈ ಸಂದರ್ಭದಲ್ಲಿಯೂ ಅವುಗಳ ಸುಳಿಗಳನ್ನು ಗಮನಿಸಿ ತರುತ್ತೇವೆ. ಎರಡು ಎತ್ತುಗಳ ಸುಳಿ ಅನುರೂಪವಾಗಿದ್ದರೆ ಅದಕ್ಕೆ ಹೆಚ್ಚಿನ ಮೌಲ್ಯ ಇರುತ್ತದೆ. ಇವುಗಳು ಉತ್ತಮವಾದ ರೀತಿ ಬೆಳವಣಿಗೆ ಹೊಂದುವಂತೆ ಮಾಡುತ್ತೇವೆ.

ತುಮಕೂರು ತಾಲ್ಲೂಕಿನಲ್ಲಿ ಶಿವರಾತ್ರಿ ಸಮಯದಲ್ಲಿ ಸಿದ್ದಗಂಗೆ ಜಾತ್ರೆ ಆಗುತ್ತದೆ.  ಈ ಸಂದರ್ಭದಲ್ಲಿ ನಾವು ಸಾಕಿರುವ ಹಳ್ಳಿಕಾರ್ ತಳಿ ಎತ್ತುಗಳನ್ನು ಮೆರವಣಿಗೆ ಮೂಲಕ ಜಾತ್ರೆಗೆ ಕರೆದುಕೊಂಡು ಕಟ್ಟುತ್ತೇವೆ. ಇವುಗಳಿಗಾಗಿ ವಿಶೇಷ ಪೆಂಡಾಲ್ ಕಟ್ಟಿ ಕೆಳಗೆ ಸೂಕ್ತವಾದ ಹಾಸು ಹಾಕುತ್ತೇವೆ. ಹೇಗೆಂದರೆ ಹಾಗೆ ಕಲ್ಲು ಮುಳ್ಳಿನ ಮೇಲೆ ಅವುಗಳು ಕೂರಲು ಬಿಡುವುದಿಲ್ಲ.

ಜಾತ್ರೆಗೆ ಬರುವ ಲಕ್ಷಾಂತರ ಮಂದಿ ನಾವು ಕಟ್ಟಿದ ಎತ್ತುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅನೇಕರು ಮಾಹಿತಿ ಪಡೆಯುತ್ತಾರೆ. ಇವರಲ್ಲಿ ಕೆಲವರಾದರೂ ಅಮೂಲ್ಯ ಹಳ್ಳಿಕಾರ್‌ ತಳಿ ಸಂವರ್ಧನೆಗೆ ಮುಂದಾದರೆ ಅದು ನಮಗೂ ಸಂತೋಷದ ಸಂಗತಿ

ಹಳ್ಳಿಕಾರ್‌ ಎತ್ತುಗಳಲ್ಲಿ ಕ್ರಮವಾಗಿ  ಹಾಲು ಹಲ್ಲಿನ ಕರು,ಎರಡು ಹಲ್ಲಿನ ಎತ್ತು, ನಾಲ್ಕು ಹಲ್ಲಿನ ಎತ್ತು, ಆರು ಹಲ್ಲಿನ ಎತ್ತು ಅಂತ ಇರುತ್ತವೆ. ಮೆರವಣಿಗೆ ಆಗಿ ಪೆಂಡಾಲಿನಲ್ಲಿ ಕಟ್ಟಿದ ಬಳಿಕ ಪಶುವೈದ್ಯರು ಈ ರೀತಿ ಕಟ್ಟಿದ ಹಳ್ಳಿಕಾರ್ ಎತ್ತುಗಳು‌, ಹೋರಿಗಳನ್ನು  ಸವಿವರವಾಗಿ ಪರೀಕ್ಷಿಸುತ್ತಾರೆ. ಬಳಿಕ ಆಯ್ಕೆ ಮಾಡುತ್ತಾರೆ.

ಈ ರೀತಿ ಆಯ್ಕೆ ಆದ ಹಳ್ಳಿಕಾರ್‌ ಹಸು, ಎತ್ತು, ಹೋರಿಗಳಿಗೆ ಜಾತ್ರಾ ಸಮಿತಿಯವರು ಉತ್ತಮವಾದ ಪ್ರಶಸ್ತಿ ಜೊತೆಗೆ ನಗದು ಪುರಸ್ಕಾರ ನೀಡುತ್ತಾರೆ.   ಹಳ್ಳಿಕಾರ್‌ ತಳಿಯ ಎಲ್ಲ ಹಲ್ಲುಗಳ ವಿಭಾಗಗಳಲ್ಲಿಯೂ ನಾವು ಸಾಕಿದ ರಾಸುಗಳನ್ನು ಸ್ಪರ್ಧೆಗಾಗಿ ಸಜ್ಜುಗೊಳಿಸಿರುತ್ತೇವೆ. ಕಳೆದ ಬಾರಿಯ ಜಾತ್ರೆಯಲ್ಲಿ ನಾವು ಸಾಕಣೆ ಮಾಡಿದ ಒಂದು ಜೋಡಿ ಹಳ್ಳಿಕಾರ್‌ ಎತ್ತು 6 ಲಕ್ಷದ 35 ಸಾವಿರ ರೂಪಾಯಿಗೆ ಮಾರಾಟವಾಯಿತು. ಇದು ದಾಖಲೆಯ ಬೆಲೆ.

ಈಗ ಸದ್ಯಕ್ಕೆ ನಮ್ಮ ಮನೆಯಲ್ಲಿ ಆರು ಜೊತೆ ಅಂದರೆ ಹನ್ನೆರಡು ಹಳ್ಳಿಕಾರ್‌ ರಾಸುಗಳಿವೆ. ಅವುಗಳನ್ನು ಬಹಳ ಮುತುವರ್ಜಿಯಿಂದ ಪಾಲನೆ ಪೋಷಣೆ ಮಾಡುತ್ತೇವೆ. ಮನೆ ಮಕ್ಕಳಿಗಿಂತಲೂ ಮಿಗಿಲಾಗಿ ಅವುಗಳ ಪೋಷಣೆ ಮಾಡುತ್ತೇವೆ. ಅವುಗಳು ಸಹ ಅದೇ ರೀತಿಯ ಪ್ರೀತಿ ವಿಶ್ವಾಸವನ್ನು ನಮ್ಮ ಮೇಲೆ ತೋರುತ್ತವೆ.

ನಾವು ಸಾಮಾನ್ಯವಾಗಿ ರಾಗಿ ಬೆಳೆಯತ್ತ ಹೆಚ್ಚು ಗಮನ ನೀಡುತ್ತೇವೆ.  ಸುಮಾರು 25 ಎಕರೆಯಲ್ಲಿ ಬೆಳೆಯುತ್ತೇವೆ. ಸುಮಾರು 550 ಚೀಲದಷ್ಟು ರಾಗಿ ದೊರೆಯುತ್ತದೆ. ಇದರಿಂದ ನಮಗೆ ರಾಗಿ, ರಾಸುಗಳಿಗೆ ಉತ್ತಮ ಸತ್ವ ಇರುವ ರಾಗಿಹುಲ್ಲು ದೊರೆಯುತ್ತದೆ. ಹಳ್ಳಿಕಾರ್‌ ರಾಸುಗಳಲ್ಲದೇ ಇತರ ನಾಟಿ ಹಸುಗಳನ್ನು ಸಾಕಣೆ ಮಾಡುತ್ತಿದ್ದೇವೆ. ಇವುಗಳಿಗೂ ಉತ್ತಮ ಮೇವು ದೊರೆಯುತ್ತದೆ.  

ಹಲವಾರು ವರ್ಷಗಳಿಂದ ನಮ್ಮ ಕುಟುಂಬದಲ್ಲಿ ಹಳ್ಳಿಕಾರ್‌ ತಳಿ ಹಸುಗಳ ಹಾಲನ್ನೇ ಬಳಕೆ ಮಾಡುತ್ತಿದ್ದೇವೆ… ಮೊಸರು, ಮಜ್ಜಿಗೆ, ತುಪ್ಪ ಸಹ ಇದರದೇ ಆಗಿದೆ. ಮನೆಯಲ್ಲಿ ಮಾಡುವ ಎಲ್ಲ ಬಗೆಯ ಖಾದ್ಯ ಪದಾರ್ಥಗಳಿಗೂ ಹಳ್ಳಿಕಾರ್‌ ಹಸುಗಳ ತುಪ್ಪ ಬಳಕೆ ಮಾಡಲಾಗುತ್ತದೆ. ಒಮ್ಮೆ ಇದಕ್ಕೆ ಒಗ್ಗಿಕೊಂಡರೇ ಬೇರೆ ಖಾದ್ಯ ತೈಲಗಳನ್ನು ಬಳಸಲು ಮನಸಾಗುವುದಿಲ್ಲ. ಮುಖ್ಯವಾಗಿ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಮೊದಲೆಲ್ಲ‌ ಮೈಸೂರು, ಮಂಡ್ಯ, ಹಾಸನ, ಕೋಲಾರ, ತುಮಕೂರು ಬೆಂಗಳೂರು ಜಿಲ್ಲೆಗಳ ಎಲ್ಲ ಹಳ್ಳಿಗಳಲ್ಲಿಯೂ ಹಳ್ಳಿಕಾರ್ ಹಸುಗಳು ಸಾಮಾನ್ಯವಾಗಿದ್ದವು. ಆದರೀಗ ಅವುಗಳನ್ನು ಹುಡುಕುವಂಥ ಪರಿಸ್ಥಿತಿ ಉಂಟಾಗಿದೆ. ಜೆರ್ಸಿ, ಹೆಚ್. ಎಫ್.‌ ಹಸುಗಳನ್ನು ಸಾಕಣೆ ಮಾಡಲಿ, ಬೇಡ ಎಂದು ಹೇಳುವುದಿಲ್ಲ. ಇವುಗಳ ಜೊತೆಗೆ ಪ್ರತಿ ರೈತರ ಮನೆಗಳಲ್ಲಿ ಒಂದಾದರೂ ಹಳ್ಳಿಕಾರ್‌ ತಳಿಯ ಹಸು ಇರಬೇಕು ಎಂಬುದು ನನ್ನ ಸಲಹೆ. ಸಾಧ್ಯವಾದರೆ ಹೈಬ್ರೀಡ್‌ ಹಸುಗಳ ಸಾಕಣೆ ಬಿಟ್ಟು ನಾಟಿ ತಳಿಗಳ ಹಸುಗಳನ್ನೇ ಸಾಕಣೆ ಮಾಡಬಹುದು.

ಹಿಂದೆ ಪ್ರತಿಯೊಬ್ಬ ರೈತರ ಮನೆಗಳಲ್ಲಿ ನಾಟಿ ಹಸು, ಎತ್ತುಗಳಿದ್ದವು. ಅವುಗಳ ಸಗಣಿಯಿಂದ ಉತ್ಕೃಷ್ಟ ಗೊಬ್ಬರ ಸಿದ್ದ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರೈತರ ಮನೆಗಳಲ್ಲಿ ಹಸು, ಎತ್ತುಗಳಿಲ್ಲ. ಸಾವಯವ ಗೊಬ್ಬರದ ಬದಲಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಲಾಗುತ್ತಿದೆ. ಇದರಿಂದ ಕೃಷಿಭೂಮಿಯ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಫಸಲಿನ ಗುಣಮಟ್ಟವೂ ಕಡಿಮೆಯಾಗಿದೆ. ಸೇವನೆ ಮಾಡುವವರ ಆರೋಗ್ಯದ ಮೇಲೆಯೂ ದುಷ್ಪರಿಣಾಮವಾಗುತ್ತದೆ. ಇದೆಲ್ಲ ಒಂದಕ್ಕೊಂದು ಲಿಂಕ್.‌ ಆದ್ದರಿಂದ ಪ್ರತಿಯೋರ್ವ ರೈತರು ಹಸು, ಎತ್ತುಗಳ ಸಾಕಣೆ ಮಾಡುವುದು ಸಾವಯವ ಕೃಷಿಗೆ ಸಹಕಾರಿ.

ನಮ್ಮ ಕುಟುಂಬದವರು ಸಾವಯವ ಕೃಷಿ ಪದ್ಧತಿಯಲ್ಲಿಯೇ ಸಾಗುವಳಿ ಮಾಡುತ್ತಿದ್ದೇವೆ.  ಸಗಣಿ, ಕೃಷಿತ್ಯಾಜ್ಯಗಳನ್ನು ಬಳಸಿ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ತಯಾರಿಸುತ್ತಿದ್ದೇವೆ. ರಾಸಾಯನಿಕ ಕೀಟನಾಶಕಗಳ ಬಳಕೆ ಇಲ್ಲದ ಕಾರಣ ನಮ್ಮ ಜಮೀನಿನ ಮಣ್ಣಿನ ಫಲವತ್ತೆಯೂ ಉತ್ಕೃಷ್ಟವಾಗಿದೆ. ಬೆಳೆಗಳ ಫಸಲು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9448334054

ನಿರೂಪಣೆ: ಕುಮಾರ ರೈತ

LEAVE A REPLY

Please enter your comment!
Please enter your name here