ಕುಟುಂಬಶ್ರೀ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಸಬಲೀಕರಣ

0

ಕೇಂದ್ರ ಸರ್ಕಾರದ ಡ್ರೋನ್ ದಿದಿ ಯೋಜನೆ ಸ್ವಸಹಾಯ ಮಹಿಳಾ ಗುಂಪುಗಳ, ಆಸಕ್ತ ಸದಸ್ಯೆಯರಿಗೆ ಡ್ರೋನ್ ಹಾರಾಟ – ನಿರ್ವಹಣೆ ಮಾಡುವ ತರಬೇತಿ ನೀಡುತ್ತಿದೆ. ಇದರ ಪ್ರಯೋಜನವನ್ನು ನಾನು ಪಡೆದಿದ್ದೇನೆ” ಎಂದು ಕೇರಳದ ರೈತ ಮಹಿಳೆ, ತ್ರಿಚೂರು ಜಿಲ್ಲೆಯ ಕುಜೂರ್ ಗ್ರಾಮ ಪಂಚಾಯತ್ ಸದಸ್ಯೆ 51 ವರ್ಷದ ಸುಧಾ ದೇವದಾಸ್ ಹೇಳಿದರು.
ಕೇಂದ್ರ ಸರ್ಕಾರದ “ಡ್ರೋನ್ ದಿದಿ” ಕಾರ್ಯಕ್ರಮದಡಿ ಕೃಷಿ ಬಳಕೆ ಉದ್ದೇಶದ ಡ್ರೋನ್ ಹಾರಾಟ – ನಿರ್ವಹಣೆ ಮಾಡುವುದರಲ್ಲಿ ತಮಿಳುನಾಡಿನ ಚೆನ್ನೈಯಲ್ಲಿ ತರಬೇತಾದ ಬೇರೆಬೇರೆ ಸ್ವಸಹಾಯ ಗುಂಪುಗಳ 49 ಮಹಿಳೆಯರಲ್ಲಿ ಸುಧಾ ದೇವದಾಸ್ ಕೂಡ ಒಬ್ಬರು. ಈ ಬಳಿಕ ಇದೇ ಕಾರ್ಯಕ್ರಮದಡಿ ಪ್ರತಿ ಒಂದು ಸ್ವಸಹಾಯ ಗುಂಪಿಗೆ 10 ಕೆಜಿ ಭಾರ ಹೊರುವ ಸಾಮರ್ಥ್ಯದ ಅಗ್ರಿ ಡ್ರೋನ್ ವಿತರಿಲಾಗಿದೆ. ಸುಧಾ ಅವರ “ಪ್ರಕೃತಿ” ಗುಂಪಿಗೂ ಒಂದು ಡ್ರೋನ್ ಬಂದಿದೆ.
ಡ್ರೋನ್ ತರಬೇತಿ ಬಳಿಕ ಕೇರಳ ಸರ್ಕಾರದ ಬಡತನಾ ನಿರ್ಮೂಲನಾ ಮಿಷನ್, ಕುಟುಂಬಶ್ರೀ ಯೋಜನೆಯಡಿ ತಿರುವಂತನಪುರದಲ್ಲಿ ಇರುವ “ಸೆಂಟ್ರಲ್ ಟ್ಯೂಬರ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟಿನಲ್ಲಿಯೂ ತರಬೇತು ನೀಡಲಾಗಿದೆ. ಇಲ್ಲಿ ಐದು ದಿನಗಳ ಅವಧಿಯಲ್ಲಿ ದ್ರವ ರಸಗೊಬ್ಬರಗಳು – ಕೀಟನಾಶಕಗಳ ಸಿಂಪಡಣೆ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಿಂದ ಇವುಗಳ ವೈಜ್ಞಾನಿಕ ಬಳಕೆ, ಸಿಂಪಡಣೆ ಮಾಡಬೇಕಾದ ಸಮಯ, ಬಳಸಬೇಕಾದ ಪ್ರಮಾಣದ ಬಗ್ಗೆ ಖಚಿತ ಮಾಹಿತಿ ದೊರಕಿದೆ.
“ಒಂದು ಎಕರೆ ವಿಸ್ತೀರ್ಣದಲ್ಲಿ ಆಧುನಿಕ ಸ್ಪ್ರೇಯರ್ ಕ್ಯಾನ್ ಗಳನ್ನು ಬಳಸಿ ರಸಗೊಬ್ಬರ ಸಿಂಪಡಿಸಲು ಒಂದು ತಾಸು ಸಮಯ ಬೇಕು. ಡ್ರೋನ್ ಬಳಸಿ ಸಿಂಪಡಣೆ ಮಾಡಿದಾಗ ಕೇವಲ 15 ನಿಮಿಷ ಸಾಕು. ಅಲ್ಲದೇ ಪರಿಣಾಮಕಾರಿಯಾಗಿ ಸಿಂಪಡಣೆಯಾಗುತ್ತದೆ. ಕಿಂಚಿತ್ತೂ ದ್ರವ ಗೊಬ್ಬರ ವ್ಯರ್ಥವಾಗುವುದಿಲ್ಲ. ಒಂದು ಎಕರೆಗೆ ಸಿಂಪಡಣೆ ಮಾಡಲು ರೂಪಾಯಿ 400 ಶುಲ್ಕ ಮಾತ್ರ ತೆಗೆದುಕೊಳ್ಳಲು ಕುಟುಂಬಶ್ರೀ ಸೂಚಿಸಿದೆ.” ಎಂದು ಸುಧಾ ದೇವದಾಸ್ ಹೇಳಿದರು.
ಮುಖ್ಯವಾಗಿ ಇಲ್ಲಿ ಗಮನಿಸಬೇಕಾಗಿರುವುದು ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಕೇರಳ ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸಿರುವುದು. ಇವುಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳಿಗೆ ರೈತ ಉತ್ಪಾದಕಾ ಕಂಪನಿಗಳನ್ನು ನಡೆಸಲು ತರಬೇತಿ ಕೊಡುವುದು, ಉತ್ಪಾದಕಾ ಕಂಪನಿಗಳನ್ನು ಮುನ್ನಡೆಸಲು ಅಗತ್ಯವಾದ ಕೌಶಲ್ಯ ನೀಡುವುದು. ಈ ಯೋಜನೆಯ ಮುಖಾಂತರವೇ ಸ್ವ ಸಹಾಯ ಸಂಘಗಳ ಆಸಕ್ತ ಸದಸ್ಯೆಯರು ಡ್ರೋನ್ ಹಾರಾಟ – ನಿರ್ವಹಣೆ ತರಬೇತಿ ಪಡೆಯಲು ಸಾಧ್ಯವಾಗಿದೆ.
ಕೇರಳ ಸರ್ಕಾರದ ಯೋಜನೆಗಳ ನೆರವಿನಿಂದ ಮಹಿಳಾ ಸ್ವಸಹಾಯ ಗುಂಪುಗಳು ನಡೆಸುತ್ತಿರುವ ಕಂಪನಿಗಳು ಉತ್ತಮ ಸ್ಥಿತಿಯಲ್ಲಿ ಸಾಗುತ್ತಿವೆ. ನಾನು ಸದಸ್ಯೆಯಾಗಿರುವ “ಪ್ರಕೃತಿ” ಸ್ವಸಹಾಯ ಗುಂಪು ನಡೆಸುತ್ತಿರುವ “ರೈಸ್ ಪ್ರೊಡ್ಯೂಸರ್ಸ್ ಕಂಪನಿ” ಲಾಭದಾಯಕವಾಗಿ ನಡೆಯುತ್ತಿದೆ. ಇದರಿಂದ ಬಂದ ಲಾಭದ ಹಣದಲ್ಲಿ ನಮ್ಮನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮನೆ ನಿರ್ಮಿಸುವುದು, ಮಕ್ಕಳ ಮದುವೆಯನ್ನು ಉತ್ತಮ ರೀತಿಯಲ್ಲಿ ಮಾಡುವುದು ಸಾಧ್ಯವಾಗಿದೆ. ನನ್ನ ಹಿರಿಯ ಮಗ ಎಂ.ಟೆಕ್ ಪದವೀಧರ, ಕಿರಿಯ ಮಗ ಬಿ.ಟೆಕ್ ಪದವೀಧರ ಆಗಿದ್ದಾರೆ. ಹಿರಿಯ ಮಗ ಪೊಲೆಂಡ್ ದೇಶದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದ್ದಾನೆ. ಇವರ ಶೈಕ್ಷಣಿಕ ಖರ್ಚುವೆಚ್ಚಗಳನ್ನು ಅಕ್ಕಿ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದ ಹಣದಿಂದ ನಿರ್ವಹಿಸುತ್ತಿದ್ದೇನೆ. ನನ್ನಂತೆಯೇ ಉಳಿದ ಸದಸ್ಯೆಯರು ಉತ್ತಮ ಬದುಕು ಕಟ್ಟಿಕೊಳ್ಳಲು ಈ ಯೋಜನೆಗಳು ನೆರವಾಗಿವೆ” ಎಂದು ಸುಧಾ ವಿವರಿಸಿದರು.

LEAVE A REPLY

Please enter your comment!
Please enter your name here