ಪದೇಪದೇ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಇದರಿಂದ ಬೆಳೆಗಳು ನಾಶವಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಪ್ರವಾಹ ಪರಿಸ್ಥಿತಿಯಲ್ಲಿಯೂ ಬದುಕುಳಿಯುವಂಥ ಬೆಳೆತಳಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ನದಿಗಳು ಹರಿದು ಹೋಗುವ ಪ್ರದೇಶದ ಆಸುಪಾಸಿನಲ್ಲಿ ಸವಳು – ಜವಳು ಹೆಚ್ಚಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರವನ್ನು ಅನ್ವೇಷಿಸುವ ಜವಾಬ್ದಾರಿ ಕೃಷಿವಿಜ್ಞಾನಿಗಳ ಸಮುದಾಯದ ಮೇಲಿದೆ ಎಂದು ಉಪ ಮುಖ್ಯಮಂತ್ರಿ, ಕೃಷಿ ಇಲಾಖೆ ಸಚಿವರೂ ಆದ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಬೆಂಗಳೂರು ಕೃಷಿವಿಶ್ವವಿದ್ಯಾಲಯದ 54ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪುರುಷ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ಮಹಿಳಾ ಸಬಲೀಕರಣ ದೃಷ್ಟಿಯಿಂದ ಇದು ಮಹತ್ವದ ಸಂಗತಿ. ಪ್ರಾಯೋಗಿಕ ಕೃಷಿಕ್ಷೇತ್ರದಲ್ಲಿಯೂ ರೈತಮಹಿಳೆಯರ ಸಂಖ್ಯೆ ಹೆಚ್ಚು. ಕೃಷಿಕಾರ್ಯಕ್ಕೆ ಇವರ ಕೊಡುಗೆ ಅಪಾರ ಎಂದರು.
ಕರ್ನಾಟಕದ ಜಿಡಿಪಿಯಲ್ಲಿ ಕೃಷಿಕ್ಷೇತ್ರದ ಪ್ರಮಾಣ 14.5 % ರಷ್ಟಿದೆ. ಇದು ಇನ್ನಷ್ಟೂ ಬೆಳವಣಿಗೆ ಹೊಂದುವ ಹಾಗೆ ಕೃಷಿಕ್ಷೇತ್ರಕ್ಕೆ ಸಂಬಂಧಿಸಿದವರೆಲ್ಲರೂ ಶ್ರಮಿಸಬೇಕಾದ ಅತ್ಯಗತ್ಯವಿದೆ. ಕೃಷಿವಿಜ್ಞಾನಿಗಳ ಮಾತು ಸಂಶೋಧನೆಯಷ್ಟೇ ಆಗಿರಬಾರದು; ಸಂಶೋಧನೆಗಳೇ ಮಾತಾಗಬೇಕು ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಮಾತನಾಡಿದರು. ರಾಜ್ಯದ ಇತರ ಕೃಷಿ ವಿಶ್ವವಿದ್ಯಾಲಯಗಳಿಗೆ ಹಿರಿಯ ವಿವಿಯಾಗಿದೆ. ಇಂಥ ಮಹತ್ವದ ಸಂಸ್ಥೆ ಸ್ಥಾಪನೆಯಾಗಿ 54 ವರ್ಷವಾಗಿದೆ. ಇಷ್ಟು ವರ್ಷದ ಹೆಜ್ಜೆಗಳಲ್ಲಿ ಗಮಾನಾರ್ಹ ಸಾಧನೆಗಳನ್ನು ವಿಶ್ವವಿದ್ಯಾಲಯ ಮಾಡಿದೆ ಎಂದರು.
ಸಮಾರಂಭದಲ್ಲಿ ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಡಾ. ಎಂ.ಎಲ್. ಕೃಷ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಕಾಳಯ್ಯ ಕೃಷ್ಣಮೂರ್ತಿ, ರಾಷ್ಟ್ರೀಯ ಅತ್ಯುತ್ತಮ ಕೃಷಿ ಸಂಶೋಧನಾ ಪ್ರಶಸ್ತಿ, ನಾಗಮ್ಮ ದತ್ತಾತ್ರೇಯ ರಾವ್ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಮೆ|| ಜವಾರಿ ಇಂಡಸ್ಟ್ರೀಸ್ ಲಿಮಿಟೆಡ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ಮತ್ತು ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.