ಹುಣಸೆ ಹಣ್ಣು ಎಲ್ಲರ ಅಡುಗೆ ಮನೆಗಳಲ್ಲಿ ಒಂದು ಮಹತ್ವವಾದ ಸ್ಥಾನವನ್ನು ಪಡೆದಿರುತ್ತದೆ. ಟೊಮ್ಯಾಟೋಗೆ ಹೋಲಿಸಿದರೆ ಹುಣಸೆ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಸಿಹಿ ಹುಳಿ ಮಿಶ್ರಿತ 100 ಗ್ರಾಂ. ಹುಣಸೆಯಲ್ಲಿರುವ ಪೌಷ್ಟಿಕಾಂಶಗಳೆಂದರೆ ಶರ್ಕರಪಿಷ್ಟ-62.5ಮಿ.ಗ್ರಾಂ. ಪ್ರೊಟೀನ್-2.8 ಗ್ರಾಂ, ನಾರಿನಾಂಶ-5.1 ಗ್ರಾಂ,, ಸೋಡಿಯಂ-28 ಮಿ.ಗ್ರಾಂ, ಪೊಟ್ಯಾಷಿಯಂ-628 ಮಿ.ಗ್ರಾಂ, ಜಿವಸತ್ವ ’ಸಿ’ -4.2 ಮಿ.ಗ್ರಾಂ.
ಹುಣಸೇಹಣ್ಣಿನಲ್ಲಿರುವ ಟಾರ್ಟಾರಿಕ್ ಆಮ್ಲದಿಂದಾಗಿ ಹೆಚ್ಚಿನ ರುಚಿ ಒದಗುತ್ತದೆ. ಅಲ್ಲದೆ ಉತ್ತಮ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಆರೋಗ್ಯಕ್ಕೆ ಸಹಕಾರಿ. ಹುಣಸೆ ಹಣ್ಣಿನ ರಸ ಉತ್ತಮ ಜೀರ್ಣಕಾರಿ ಮತ್ತು ಉಪ್ಪಿನ ಜೊತೆ ಸೇವಿಸಿದಾಗ ಗಂಟಲು ನೋವು ನಿವಾರಣೆಯಾಗುತ್ತದೆ. ಶೀತಕ್ಕೆ ಹುಣಸೆ ಹಣ್ಣು ರಾಮಬಾಣ,
ಹುಣಸೆಹಣ್ಣಿನ ರಸಕ್ಕೆ ಸ್ವಲ್ಪ ಮೆಣಸು, ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ ಸೇವಿಸಬೇಕು ಹುಣಸೇ ಹಣ್ಣಿನ ತಿರುಳಿನಲ್ಲಿರುವ ನಾರಿನಾಂಶವು ಹೆಮಿಸಲ್ಯುಲೋಸ್ ಮತ್ತು ಮ್ಯೂಸಿಲೇಜ್‌ಗಳಿಂದ ಕೂಡಿದ್ದು ಕರುಳಿನ ಪಚನಕ್ರಿಯೆಯನ್ನು ಪ್ರಚೋದಿಸಿ ಮಲಬದ್ಧತೆಯನ್ನು ತಡೆಯುತ್ತದೆ.
ಹುಣಸೇಹಣ್ಣಿನಲ್ಲಿರುವ ಟಾರ್ಟಾರಿಕ್ ಆಮ್ಲ ದೇಹವನ್ನು ಹಾನಿಕಾರವಾದ ಫ್ರೀರಾಡಿಕಲ್ಸ್ಗಳಿಂದ ರಕ್ಷಿಸಲು ಸಹಕಾರಿಯಾಗುವುದರಿಂದ ಕ್ಯಾನ್ಸರ್ ನಂತಹ ರೋಗದಿಂದ ದೂರವಿರಬಹುದು.
ಹುಣಸೇ ಹಣ್ಣಿನಲ್ಲಿರುವ ಪೊಟ್ಯಾಷಿಯಂ ದೇಹದ ಜೀವಕೋಶ ದ್ರವಗಳ ಜೊತೆಗೂಡಿ ಹೃದಯ ಬಡಿತ, ರಕ್ತದೊತ್ತಡವನ್ನು ನಿಯಂತ್ರಿಸುವ ಜೊತೆಗೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ಸಹಕಾರಿಯಾಗಿದೆ.
ಹುಣಸೇಹಣ್ಣಿನಲ್ಲಿರುವ ಅಲ್ಫಾ-ಅಮೈಲೇಸ್ ಇನ್‌ಹಿಬಿಟರ್ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಹಿಡಿತದಲ್ಲಿರುವಂತೆ ಮಾಡುವುದರಿಂದ ಮಧುಮೇಹಿಗಳಿಗೂ ಸಹ ಉಪಯೋಗಕಾರಿ. ಜೀವಸತ್ವ ‘ಸಿ’ ಹೇರಳ ವಾಗಿರುವುದರಿಂದ ರೋಗ ನಿರೋಧಕ ಶಕ್ತಿಯ ಗುಣವನ್ನು ಹೊಂದಿದ್ದು ಜೊತೆಗೆ ತ್ವಚೆಯ ಸೌಂದರ್ಯವನ್ನು ಸಹ ಇಮ್ಮಡಿಸುತ್ತದೆ
ಹುಣಸೇಹಣ್ಣನ್ನು ಸಾಂಬಾರು, ರಸಂ, ತೊಕ್ಕು, ಗೊಜ್ಜು ಮತ್ತು ಸಂಸ್ಕರಿಸಿದ ಪೇಸ್ಟ್ (ತಿರುಳು) ಹಾಗೂ ಪೌಡರ್‌ಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ರುಚಿಯನ್ನು ಹೆಚ್ಚಿಸಬಹುದು.
ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಸ್ಥಳೀಯವಾಗಿ ಲಭ್ಯವಿರುವ ಹುಣಸೇ ಹಣ್ಣಿನ ಮಹತ್ವವನ್ನು ಅರಿತು ದಿನನಿತ್ಯದ ಅಡುಗೆಯಲ್ಲಿ ಬಳಸಿ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.