ಒಂದು ಹೆಬ್ಬಲಸಿನ ಮರದಲ್ಲಿ ಹಣ್ಣಾಗಲು ಶುರುವಾದರೆ ಹತ್ತು ಹದಿನೈದು ದಿನಗಳ ಕಾಲ ಮಂಗಗಳು ಅದರಲ್ಲಿ ಹಣ್ಣು ತಿನ್ನುತ್ತಾ ಇರ್ತವೆ. ಕಾಡು ಕಣಗಲು ಮರದಲ್ಲಿ ಹಣ್ಣಾದರೆ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನದಿ ಬತ್ತಿದರೂ ಈ ಹಣ್ಣು ತಿನ್ನುತ್ತಾ ನೀರು ಕುಡಿದ ತೃಪ್ತಿ ಅನುಭವಿಸಿ ಜಿಂಕೆ, ಮಂಗ ಬದುಕುತ್ತವೆ.
ಬನಾಟೆ ಎಳೆ ಕಾಯಿ, ತಾರಿಯ ಕಾಯಿ ತಿನ್ನುತ್ತಾ ರಾತ್ರಿ ಹಗಲು ವನ್ಯಜೀವಿಗಳು ಮರದ ಮೇಲೆ ನಲಿಯುತ್ತವೆ. ಹಲಸಿನ ಹಣ್ಣು, ನೇರಳೆ,ಮುರುಗಲು ಹೀಗೆ ಕಾಡಿನಲ್ಲಿ ಹಣ್ಣಿರುವ ಮರಗಳನ್ನು ನೋಡುತ್ತಾ ಹೋದರೆ ನಿಜವಾಗಿ ವನ್ಯ ಜೀವಿಗಳ ಸಂರಕ್ಷಣೆಗೆ ಯಾವುದು ಮುಖ್ಯ ಎಂಬುದು ತಿಳಿಯುತ್ತದೆ.
ಕಲo ಮರದ ಚಿಗುರು, ತೊಗಟೆ ಸಿಕ್ಕರೂ ಉರಿ ಬೇಸಿಗೆಯಲ್ಲಿ ಖುಷಿ ಪಡುವ ಜೀವಿಗಳು ಇವೆ.ಶಾಲ್ಮಲಿ, ತೂಬರು, ಕುಂಟಾಳೆ ಪಟ್ಟಿ ಮಾಡಿದರೆ ವನ್ಯ ಲೋಕ ಪೋಷಿಸುವ ನೂರಾರು ಸಸ್ಯ ಸಂಕುಲಳಿವೆ. ಆಲ, ಅತ್ತಿ, ಅರಳಿ ಕೊಡುಗೆಗಳು ಅಮೂಲ್ಯ.
ಉದ್ಯಮಗಳ ಅನುಕೂಲಕ್ಕೆ ವ್ಯಾಪಕ ಅರಣ್ಯೀಕರಣ ತೇಗ,ನೀಲಗಿರಿ,ಅಕೇಶಿಯಾ,ಕ್ಯಾಸುರಿನ, ಸಿಲ್ವರ್ ಓಕ್, ಫೈನಸ್ ನಂತಹ ಬೆರಳೆಣಿಕೆ ಸಸಿಗಳ ಸುತ್ತ ಓಡಿದೆ. ಹಣ್ಣಿನ ಮರಗಳ ಕೆಳಗೆ ಸುಮ್ಮನೆ ನಿಂತು ನೋಡಿ ಕಲಿಯುವ ಜಾಗೃತಿ ಉಂಟಾಗಬೇಕು.
ಇಂಥ ಜಾಗೃತಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಬಂದರೆ ಮಾತ್ರ ಅರಣ್ಯೀಕರಣ ಸ್ವರೂಪ ಬದಲಾದೀತು. ವನ್ಯ ಜೀವಿ ಕಾನೂನು ಬಿಗಿಗೊಳಿಸಿದ ಮಾತ್ರಕ್ಕೆ ಸಂರಕ್ಷಣೆ ಸಾಧ್ಯವಿಲ್ಲ. ಅವುಗಳ ಆಹಾರ, ಆವಾಸ ಸ್ಥಾನ ಕೂಡಾ ಮುಖ್ಯ.