- – ಕರ್ನಾಟಕ ಕೆರೆ ಬಳಕೆದಾರರ ಸಂಘಗಳ ರಾಜ್ಯ ಒಕ್ಕೂಟದ ಅಧ್ಯಕ್ಷರಾದ ಜಿ ನಾಗರಾಜಯ್ಯ ಅವರ ನೇತೃತ್ವದ ನಿಯೋಗದ ಜೊತೆ ಸಭೆ
- – ಕೆರೆಗಳ ಸಂರಕ್ಷಣೆಯ ಬಗ್ಗೆ ಮಹತ್ವದ ಚರ್ಚೆ
ಬೆಂಗಳೂರು ಸೆಪ್ಟೆಂಬರ್ 14: ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳಿಗೆ ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಚಿಂತನೆ ನಡೆಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಅವರು ಭರವಸೆ ನೀಡಿದರು.
ಇಂದು ವಿಕಾಸಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಕರ್ನಾಟಕ ಕೆರೆ ಬಳಕೆದಾರರ ಸಂಘಗಳ ರಾಜ್ಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಮತ್ತು ಕೆರೆ ಅಭಿವೃದ್ದಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಇಲಾಖೆಗಳ ಮಧ್ಯೆ ಹಂಚಿಹೋಗಿರುವ ಕೆರೆಗಳನ್ನು ಆಯಾ ಸ್ಥಳೀಯ ಕೆರೆ ಸಂಘಗಳ ವ್ಯಾಪ್ತಿಗೆ ತರಬೇಕಾಗಿದೆ. ಈ ಹಿಂದೆ ಇದ್ದಂತಹ ಇದ್ದಂತಹ ಕೆರೆ ಸಂಘಗಳ ಆರ್ಥಿಕ ಸಬಲೀಕರಣವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೆರೆ ಬಳಕೆದಾರರ ಸಂಘಗಳ ರಾಜ್ಯ ಒಕ್ಕೂಟದ ಪದಾಧಿಕಾರಿಗಳು ಸಲಹೆ ನೀಡಿದರು.
ಈ ನಂತರ ಸಚಿವರು ಮಾತನಾಡಿ, ರಾಜ್ಯದ ಕರೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಲಾಗಿದೆ. ಇದರ ಮೂಲಕ ಇನ್ನಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮುಖ್ಯಮಂತ್ರಿ ಅವರು ಈ ನಿಟ್ಟಿನಲ್ಲಿ ಈಗಾಗಲೇ ತಮ್ಮ ಆಯವ್ಯಯದಲ್ಲಿ ಕೆರೆಗಳ ಸುತ್ತ ಜೀವ ಪರಿಸರವನ್ನು ಉಳಿಸಿಕೊಂಡು ಅವುಗಳ ಪುನರುಜ್ಜೀವನಗೊಳಿಸುವುದಕ್ಕಾಗಿ ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೆ ಕ್ರಮ ಕೈಗೊಂಡಿದ್ದಾರೆ ಎಂದರು.
ಕೆರೆ ಅಭಿವೃದ್ದಿಗೆ ಪಾಲುದಾರರನ್ನಾಗಿ ಮಾಡಿ ಜಲಬಳಕೆ ಮಾಡಲು ಅರ್ಥಪೂರ್ಣ ಕ್ರಿಯಾಯೋಜನೆ ಸಿದ್ದಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಯೋಜನೆಗಳನ್ನು ರೂಪಿಸಲು ಸೂಚನೆ ನೀಡಲಾಗಿದೆ . ಕರ್ನಾಟಕ ಕೆರೆ ಬಳಕೆದಾರರ ಸಂಘಗಳ ರಾಜ್ಯ ಒಕ್ಕೂಟ ನೀಡಿದ ಸಲಹೆಗಳನ್ನು ಪರಿಗಣಿಸಲಾಗುವುದು ಎಂದರು
ಸಭೆಯಲ್ಲಿ ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಎಚ್ ಆಂಜನೇಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.