ರಾಜ್ಯದಲ್ಲಿ ವೈವಿಧ್ಯಮಯ ಮಾವು ತಳಿಗಳಿವೆ. ಬೆಳೆಗಾರರು ಇದನ್ನು ಶ್ರಮ-ಸಮಯ-ಹಣ ತೊಡಗಿಸಿ ಬೆಳೆಯುತ್ತಿದ್ದಾರೆ. ಇವರ ಪರಿಶ್ರಮಕ್ಕೆ ತಕ್ಕಮೌಲ್ಯ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳು ಲಭ್ಯವಾಗುವಂತೆ ಮಾಡಲು ರಾಜ್ಯ ಮಾವು ಮಂಡಳಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ಬಗ್ಗೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜ್ ಅವರು “ಅಗ್ರಿಕಲ್ಚರ್ ಇಂಡಿಯಾ”ಕ್ಕೆ ವಿವರಿಸಿದ್ದಾರೆ.

ಡಾ. ನಾಗರಾಜ್

ಅಂತರ್ಜಾಲದ ಬಳಕೆ: ಮಾವು ಮಾರಾಟಕ್ಕಾಗಿ ಆನ್ ಲೈನ್ ಪೋರ್ಟಲ್ ಶುರು ಮಾಡಿದ್ದೇವೆ.  ಆನ್ ಲೈನ್ನಲ್ಲಿ ಸಾಕಷ್ಟು ಮಂದಿ ಮಾವು ಬೆಳೆಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ ಆರ್ಡರ್ ಗಳು ಬರಲು ಶುರುವಾಗಿವೆ. ಆದರೆ ಇದರಲ್ಲಿ ಕೊಂಚ ತಾಂತ್ರಿಕ ಸಮಸ್ಯೆಯಾಗಿದೆ. ಬೇರೆಬೇರೆ ಪ್ರದೇಶಗಳಿಂದಲೂ ಆರ್ಡರ್ ಗಳು ಬರುತ್ತಿವೆ. ಅವುಗಳೆಲ್ಲವನ್ನೂ ನಿರ್ವಹಣೆ ಮಾಡಲು ಆಗುವುದಿಲ್ಲ. ಆದ್ದರಿಂದ ಇದನ್ನು ಅಪ್ಡೇಟ್ ಮಾಡಲಾಗುತ್ತಿದೆ. ಇನ್ನು ಒಂದೆರಡು ದಿನದಲ್ಲಿ ಬಳಕೆಗೆ ದೊರೆಯುತ್ತದೆ.

ಮಾವು ಕೋರಿಕೆಯ ಬಹುತೇಕ ಬೇಡಿಕೆಗಳು ರೈತರಿಗೆ ನೇರವಾಗಿ ತಲುಪುತ್ತವೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಬೆಳೆಗಾರರಿಗೆ ಅಧಿಕ ಸಂಖ್ಯೆಯಲ್ಲಿ ಬರುವ ಬೇಡಿಕೆಗಳ ನಿರ್ವಹಣೆ ಕಷ್ಟವಾಗಬಹುದು. ಇದನ್ನು ಪರಿಹರಿಸುವ ದೃಷ್ಟಿಯಿಂದಲೂ ಕೆಲಸ ಮಾಡಲಾಗುತ್ತಿದೆ. ಪೋರ್ಟಲ್ ಅಪ್ಡೇಟ್ ಆದರೆ ಇಂಥ ಚಿಕ್ಕಚಿಕ್ಕ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಹೆಚ್ಚಿಗೆ ಬರುವ ಆರ್ಡರ್ಗಳನ್ನು ಸನಿಹದ ಇತರ ಬೆಳೆಗಾರರಿಗೂ ಹಂಚಿಕೆ ಮಾಡಬಹುದು.

ತರಬೇತಿ: ಮಾವು ಕಟಾವಿಗೆ ಬರುವ ಬಹುಪೂರ್ವದಲ್ಲಿಯೇ ಬೆಳೆಗಾರರಿಗೆ ತರಬೇತಿ ನೀಡಲಾಗಿದೆ. ಕೆಲವೆಡೆ ಹುಣಿಸೇಹಣ್ಣಿನ ರೀತಿ ಕೋಲಿನಿಂದ ಬಡಿದು ಮಾವು ಉದುರಿಸಲಾಗುತ್ತಿತ್ತು. ಹೀಗೆ ಮಾಡುವುದರಿಂದ ಹಣ್ಣುಗಳಿಗೆ ಘಾಸಿಯಾಗುತ್ತದೆ. ಮಾರುಕಟ್ಟೆ ಮೌಲ್ಯ ಕಡಿಮೆಯಾಗುತ್ತದೆ. ಹೆಚ್ಚುದಿನ ಇರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಸಕ್ತ ಬೆಳೆಗಾರೆಲ್ಲರಿಗೂ ಹೇಗೆ ಕೊಯ್ಲು ಮಾಡಬೇಕು, ಸಹಜವಾಗಿ ಮಾಗಿಸುವ ವಿಧಾನಗಳು, ಪ್ಯಾಕಿಂಗ್ ಮಾದರಿ, ಸಾಗಣೆ ರೀತಿ ಇವೆಲ್ಲದರ ಬಗ್ಗೆಯೂ ತರಬೇತಿ ನೀಡಲಾಗಿದೆ.

ಮಾವುಕೃಷಿ: ಹಣ್ಣಿನ ಬೆಳೆಗಳ ಕೃಷಿ ಸವಾಲಿನ ಕೆಲಸ. ಮುಖ್ಯವಾಗಿ ಕೀಟ-ರೋಗ ಬಾಧೆಗಳನ್ನು ನಿಯಂತ್ರಣ ಮಾಡಬೇಕು. ಇದನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವುದು ಹೇಗೆಂದು ತರಬೇತಿ ನೀಡಲಾಗುತ್ತದೆ. ಹಣ್ಣುಗಳಲ್ಲಿ ರಾಸಾಯನಿಕ ಕೀಟನಾಶಕದ ಶೇಷಾಂಶಗಳು ಇದ್ದರೆ ವಿದೇಶದ ಮಾರುಕಟ್ಟೆ ವಿಸ್ತರಣ ಸಾಧ್ಯವಾಗುವುದಿಲ್ಲ. ಆದ್ದರಿಂದ ಕೀಟಗಳನ್ನು ನಿಯಂತ್ರಿಸಲು ಫೆರಮೋನ್ ಟ್ರ್ಯಾಪ್ ಗಳು ಪರಿಣಾಮಕಾರಿ. ಕೀಟನಾಶಕಗಳ ಬಳಕೆ ಇಲ್ಲದೇ ಹಣ್ಣಿನ ನೊಣಗಳನ್ನು ನಿಯಂತ್ರಿಸಬಹುದು. ಇದನ್ನು ಅಗತ್ಯವಿರುಷ್ಟು ಸಂಖ್ಯೆಯಲ್ಲಿ ಬಳಸುವಂತೆ ಹೇಳಲಾಗಿದೆ. ಇಂಥ ಟ್ರ್ಯಾಪ್ ಬಳಸಿದಾಗ ಗುಣಮಟ್ಟದ ಹಣ್ಣುಗಳು ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ.

ನಗರ ಮಾರುಕಟ್ಟೆ: ಇಲ್ಲಿ ರಿಲೇಯನ್ಸ್, ಮೋರ್, ಬಿಗ್ ಬಾಸ್ಕೆಟ್ ಇತ್ಯಾದಿ ಮೆಗಾಸ್ಟೋರ್ಗಳು ಕಾರ್ಯಾಚರಿಸುತ್ತಿವೆ. ಇವರೆಲ್ಲ ಆಯಾ ಸೀಸನ್ ಹಣ್ಣುಗಳನ್ನು ವಿಶೇಷವಾಗಿ ಮಾವಿನಹಣ್ಣುಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಾರೆ. ಇವರ ಮಾರುಕಟ್ಟೆ ಜಾಲವನ್ನು ಬೆಳೆಗಾರರ ಜೊತೆ ಕನೆಕ್ಟ್ ಮಾಡವ ಕೆಲಸವನ್ನೂ ಮಾಡಲಾಗುತ್ತಿದೆ. ಬಿಡಿಬಿಡಿ ಗ್ರಾಹಕರು, ಸಗಟು ಖರೀದಿದಾರರಿಂದ ಹೆಚ್ಚೆಚ್ಚು ಬೇಡಿಕೆ ಬರುವುದರಿಂದ ಬೆಳೆಗಾರರಲ್ಲಿರುವ ದಾಸ್ತಾನು ಕೂಡ ಬೇಗನೆ ಖಾಲಿಯಾಗುತ್ತದೆ. ಉತ್ತಮ ಬೆಲೆಯೂ ದೊರೆಯುತ್ತದೆ.

ಗಿಪ್ಟ್ ಬಾಕ್ಸ್: ಹಣ್ಣುಗಳನ್ನು ಆಕರ್ಷಕ ಪ್ಯಾಕಿಂಗ್ ಮಾಡಿಸಿ, ಗಿಫ್ಟ್ ಬಾಕ್ಸ್ ಆಗಿ ಕೊಡುವ ಪರಿಪಾಠ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿದೆ. ಕೆಲವೊಂದು ಐಟಿ ಕಂಪನಿಗಳು ವೈವಿಧ್ಯಮಯ ತಳಿಗಳ ಹಣ್ಣುಗಳನ್ನು ಈ ರೀತಿ ಪ್ಯಾಕ್ ಮಾಡಿಸಿ ಕೊಡಲು ಕೇಳಿದ್ದಾರೆ. ಅಂಥ ಬೇಡಿಕೆಗಳನ್ನು ಆಸಕ್ತ ಬೆಳೆಗಾರರಿಗೆ ವರ್ಗಾಯಿಸಲಾಗುತ್ತಿದೆ. ಹೀಗೆ ಮಾಡುವುದರಿಂದಲೂ ಬೆಳೆಗಾರರ ಶ್ರಮಕ್ಕೆ ಹೆಚ್ಚು ಮನ್ನಣೆ , ಮೌಲ್ಯ ದೊರಕಿದಂತೆ ಆಗುತ್ತದೆ. ರಾಜ್ಯ ಮಾವುಮಂಡಳಿ, ಬಿಗ್ ಬಾಸ್ಕೆಟ್ ಆನ್ ಲೈನ್ ಮಾರಾಟಗಾರರ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಈಗಾಗಲೇ ಅವರು ಬೆಳೆಗಾರರಿಂದ ನೇರವಾಗಿ ಖರೀದಿ ಪ್ರಾರಂಭ ಮಾಡಿದ್ದಾರೆ.

ಬೆಂಗಳೂರು ಬೇಡಿಕೆ: ಇತರ ಮಾರಾಟ ಕೇಂದ್ರಗಳಿಗೆ ಹೋಲಿಸಿದರೆ ಮಾವಿಗೆ ಬೆಂಗಳೂರು ಕೇಂದ್ರದಿಂದ ಅತ್ಯಧಿಕ ಬೇಡಿಕೆ ವ್ಯಕ್ತವಾಗುತ್ತದೆ. ಮಂಡಳಿ ಕಾರ್ಯಗಳು ದೊಡ್ಡದೊಡ್ಡ ಕಂಪನಿಗಳ ಗಮನವನ್ನೂ ಸೆಳೆದಿದೆ. ಈ ಬಾರಿ ಐಟಿ ಕಂಪನಿಗಳವರು ತಮ್ಮತಮ್ಮ ಕ್ಯಾಂಪಸ್ಸುಗಳ ಆವರಣದಲ್ಲಿ ಮಂಡಳಿಯಿಂದ ಮಾವು ಮಾರಾಟ ಕೇಂದ್ರಗಳನ್ನು ತೆರೆಯಲು ಆಹ್ವಾನಿಸಿದ್ದಾರೆ. ಇದೊಂದು ಖುಷಿಯ ವಿಚಾರ. ಇದು ಕೂಡ ದೊಡ್ಡರೀತಿಯಲ್ಲಿ ಮಾವು ಮಾರುಕಟ್ಟೆ ವಿಸ್ತರಣೆಗೆ ಸಹಾಯಕ.

ಸಂಸ್ಕರಣಾ ಘಟಕಗಳು: ರಾಜ್ಯ ಮತ್ತು ಹೊರರಾಜ್ಯಗಳಲ್ಲಿರುವ ಮಾವು ಸಂಸ್ಕರಣ ಘಟಕಗಳ ಜೊತೆಯೂ ಬೆಳೆಗಾರರ ಒಕ್ಕೂಟಗಳನ್ನು ಸಂಪರ್ಕಿಸುವ ಕಾರ್ಯ ಮಾಡಲಾಗಿದೆ. ಮಧ್ಯವರ್ತಿಗಳಿಲ್ಲದೇ ಖರೀದಿ ನಡೆಯುವುದರಿಂದ ಸಹಜವಾಗಿ ಬೆಳೆಗಾರರಿಗೆ ದೊರೆಯುವ ಲಾಭಾಂಶ ಹೆಚ್ಚಾಗುತ್ತದೆ.

ಮಾವುಮೇಳಗಳು: ಜಿಲ್ಲಾಕೇಂದ್ರಗಳಲ್ಲಿಯೂ ಮಾವುಮೇಳಗಳು ನಡೆಯುತ್ತವೆ. ವಾರಾಂತ್ಯ ದಿನಗಳಲ್ಲಿ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚು. ಆದ್ದರಿಂದ ಹೆದ್ದಾರಿಗಳಲ್ಲಿರುವ ಖ್ಯಾತ ಹೋಟೆಲುಗಳ ಬಳಿ ಮಾವು ಮಾರಾಟ ಕೇಂದ್ರಗಳನ್ನು ತೆರೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಮಾರುಕಟ್ಟೆ ವಿಸ್ತರಣೆಗೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಸಹ ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ.

ವಾಟ್ಸಪ್ ಗ್ರೂಪ್: ಮಾರುಕಟ್ಟೆಯಲ್ಲಿ ಏರಿಳಿತವಾಗುವ ಮಾವು ಬೆಲೆ, ಬೇಡಿಕೆ, ಖರೀದಿ ಇತ್ಯಾದಿ ವಿಷಯಗಳು ತಕ್ಷಣ ತಿಳಿಯಬೇಕು. ಈ ನಿಟ್ಟಿನಲ್ಲಿ ಬೆಳೆಗಾರರ ವಾಟ್ಸಪ್ ಗ್ರೂಪ್ ಗಳನ್ನು ಮಾಡಿದ್ದೇವೆ. ಇದರಲ್ಲಿ ಖರೀದಿದಾರರು ಇರುತ್ತಾರೆ. ಬೆಲೆಯ ಬಗ್ಗೆ ಅವರು ಮತ್ತು ಬೆಳೆಗಾರರ ಜೊತೆ ಮಾತುಕತೆಯಾಗುತ್ತದೆ. ಬಹುಶೀಘ್ರವಾಗಿ ಹಣ್ಣುಗಳು ಮಾರಾಟವಾಗುವುದರ ಜೊತೆಗೆ ಉತ್ತಮ ಲಾಭಾಂಶದ ಹಣವೂ ದೊರೆಯುತ್ತದೆ.

ಎನ್.ಇ.ಎಂ.ಎಲ್: ಮಾವು ಮಾರುಕಟ್ಟೆ ವಿಸ್ತರಣೆಗೆ ಎನ್.ಇ.ಎಂ.ಎಲ್. ಕೂಡ ಸಹಾಯಕವಾಗಿದೆ. ಇವರು ಬೇರೆಬೇರೆ ರಾಜ್ಯಗಳಲ್ಲಿಯೂ ಮಾವು ಮಾರುಕಟ್ಟೆ ಜಾಲಗಳನ್ನು ಹೊಂದಿದ್ದಾರೆ. ಇವರ ಜೊತೆಗೆ ಬೆಳೆಗಾರರಿಗೆ ಸಂಪರ್ಕ ಕಲ್ಪಿಸಲಾಗಿದೆ. ಇವರು ನಿಯಮಿತವಾಗಿ ತಮಗೆ ಮಾವು ಪೂರೈಸುವ ಬೆಳೆಗಾರರ ಗುಂಪುಗಳೊಂದಿಗೆ ವ್ಯವಹರಿತ್ತಾರೆ.

ವಿದೇಶಿ ಮಾರುಕಟ್ಟೆ: ದೇಶೀಯ ಮಾರುಕಟ್ಟೆ ಜೊತೆಗೆ ವಿದೇಶದ ಮಾರುಕಟ್ಟೆ ಜೊತೆಗೂ ಬೆಳೆಗಾರರು ಸಂಪರ್ಕ ಹೊಂದಿರುವಂತೆ ಮಾಡಲಾಗುತ್ತಿದೆ. ಈ ದಿಶೆಯಲ್ಲಿ ಆಸಕ್ತ ಮಾವು ಬೆಳೆಗಾರರು ತರಬೇತಿ ಹೊಂದಿದ್ದಾರೆ. ಈಗಾಗಲೇ ನಾಸಿಕ್ ಮುಖಾಂತರ ಒಂದು ಬ್ಯಾಚ್ ಪ್ರೂಟ್ಸ್ ವಿದೇಶಿ ಮಾರುಕಟ್ಟೆಗೆ ರವಾನೆಯಾಗಿದೆ. ಕೆಲವಾರು ಬೆಳೆಗಾರರು ನೇರವಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮಾರುಕಟ್ಟೆಗಳ ವರ್ತಕರೊಂದಿಗೂ ಮಾತನಾಡಿದ್ದಾರೆ. ಬೆಳೆಗಾರರು ಬಹುಪರಿಶ್ರಮದಿಂದ ಬೆಳದ ಮಾವಿಗೆ ಸಾಧ್ಯವಿರುವಷ್ಟು ಮಾರುಕಟ್ಟೆಯ ದಾರಿಗಳನ್ನು ಕಲ್ಪಿಸಲಾಗುತ್ತಿದೆ. ಇವೆಲ್ಲವೂ ಸುಸ್ಥಿರ ಮಾವು ಮಾರುಕಟ್ಟೆಗೆ ಸಹಾಯಕ.

ಸಂಪರ್ಕಸಭೆ: ಈಗಾಗಲೇ ರಾಮನಗರದಲ್ಲಿ ಬೆಳೆಗಾರರು ಮತ್ತು ಖರೀದಿದಾರರ ಸಂಪರ್ಕ ಸಭೆ ಮಾಡಲಾಗಿದೆ. ಇದರಲ್ಲಿ ವಿವಿಧ ರಾಜ್ಯಗಳ ಖರೀದಿದಾರರು ಭಾಗವಹಿಸಿದ್ದರು. ಮಧ್ಯಮ, ದೊಡ್ಡ ಪ್ರಮಾಣದ ಖರೀದಿದಾರರ ವಿವರಗಳಿರುವ ಕೈಪಿಡಿಗಳನ್ನು ವಿತರಿಸಲಾಯಿತು. ಇದರಿಂದ ಸಾಕಷ್ಟು ಮಂದಿ ಬೆಳೆಗಾರರು, ಖರೀದಿದಾರರ ಜೊತೆ ನೇರ ಸಂಪರ್ಕ ಹೊಂದಿ ಯಶಸ್ವಿಯಾಗಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

 ಆವಕ: ಮಾವು ಮಂಡಳಿ ನಡೆಸಿರುವ ತರಬೇತಿ ಕಾರ್ಯಾಗಾರಗಳಿಂದ ಹಿಂದಿಗಿಂತಲೂ ಉತ್ತಮ ರೀತಿಯಲ್ಲಿ ಮಾವುಕೃಷಿ ನಡೆದಿದೆ. ಕೊಯ್ಲು ಸಹ ವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ ನಷ್ಟವಾಗುತ್ತಿದ್ದ ಹಣ್ಣುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಬಾರಿ ಮಾರುಕಟ್ಟೆಗೆ 8 ಲಕ್ಷ ಮೆಟ್ರಿಕ್ ಟನ್ ಮಾವು ಆವಕವಾಗಬಹುದು. ಇದು ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ  ಡಾ. ಹಿತ್ತಲಮನಿ ಅವರು ನಡೆಸಿದ ಸರ್ವೇಯ ಅಂದಾಜು ಅಂಕಿಅಂಶ.

ಈ ಬಾರಿ ಬಾದಾಮಿ ತಳಿಯ ಹಣ್ಣುಗಳ ಪ್ರಮಾಣ ತಗ್ಗಿದೆ. ಕಳೆದ ವರ್ಷ ಈ ತಳಿ ಏರು ಹಂಗಾಮು ಕಂಡಿತು. ಉಳಿದ ತಳಿಗಳ ಹಣ್ಣುಗಳ ಪ್ರಮಾಣವೂ ತಗ್ಗಿದೆ. ಇದಕ್ಕೆ ಮುಖ್ಯವಾಗಿ ಸಕಾಲದಲ್ಲಿ ಮಳೆಯಾಗದೇ ಇದ್ದಿದ್ದು ಪ್ರಮುಖ ಕಾರಣ. ನೀರಿನ ಕೊರತೆಯಿಂದಾಗಿ ಉಂಟಾದ ಶುಷ್ಕ ವಾತಾವರಣದಿಂದಲೂ ಇಳುವರಿ ಪ್ರಮಾಣ ತಗ್ಗಿದೆ. ಆದರೆ ನೀರಾವರಿ ಸೌಲಭ್ಯ ಇರುವ ಬೆಳೆಗಾರರು ಇರುವ  ನೀರನ್ನೇ ವೈಜ್ಞಾನಿಕ ವಿಧಾನಗಳಿಂದ ಮಿತವಾಗಿ ಬಳಸಿಕೊಂಡಿದ್ದಾರೆ. ಇಳುವರಿ ಕುಗ್ಗಲು ಅವಕಾಶ ಮಾಡಿಕೊಟ್ಟಿಲ್ಲ. ಇತ್ತೀಚೆಗೆ ಕೋಲಾರದಲ್ಲಿಯೂ ಮಳೆಯಾಗಿದೆ. ಇದು ಕೂಡ ಮಾವಿನ ಗಾತ್ರ  ಉತ್ತಮವಾಗಿರಲು ಪೂರಕವಾಗಿದೆ.

ಮೌಲ್ಯವರ್ಧನೆ: ಹಣ್ಣಿನ ಬೆಳೆಗಳನ್ನು ಮೌಲ್ಯವರ್ಧನೆ ಮಾಡುವುದು ಅತ್ಯಂತ ಅಗತ್ಯದ ಕಾರ್ಯ. ಈ ಬಗ್ಗೆ ಮಾವು ಮಂಡಳಿ ಸಾಕಷ್ಟು ಗಮನ ಹರಿಸುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 7 ಮೌಲ್ಯವರ್ಧಿತ ಘಟಕಗಳಿವೆ. ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆ ಪ್ರಮಾಣಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ ಸಂಖ್ಯೆ. ಮಾವಿಗೆ ನಾಲ್ಕು ತಿಂಗಳು ಮಾತ್ರ ಸೀಸನ್. ಉಳಿಕೆ ಅವಧಿಯಲ್ಲಿಯೂ ಇದು ಬೇರೆಬೇರೆ ರೂಪದಲ್ಲಿ ದೊರೆತರೆ ಅನುಕೂಲ. ಈ ನಿಟ್ಟಿನಲ್ಲಿಯೂ ಮಂಡಳಿ ಹೆಜ್ಜೆ ಇರಿಸಿದೆ. ಮೌಲ್ಯವರ್ಧನಾ ಘಟಕಗಳನ್ನು ನಿವರ್ಹಣ ಮಾಡುವ ಕಂಪನಿಗಳ ಜೊತೆ ಮಾತನಾಡಲಾಗುತ್ತಿದೆ. ಇದರಿಂದ ಶೀಘ್ರದಲ್ಲೇ ಇಂಥ ಘಟಕಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಭರವಸೆ ಇದೆ.

ಬಜೆಟಿನಲ್ಲಿ ಪ್ರಸ್ತಾವನೆ: ರಾಮನಗರ ಮತ್ತು ಧಾರವಾಡದಲ್ಲಿ ಮಾವು ಮೌಲ್ಯವರ್ಧನಾ ಘಟಕಗಳನ್ನು ತೆರೆಯುವ ಅವಶ್ಯಕತೆ ಇದೆ. ಇದನ್ನು ರಾಜ್ಯ ಸರ್ಕಾರ ಮನಗಂಡಿದೆ, ಬಜೆಟಿನಲ್ಲಿ ಈ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಕಾರ್ಯಸೂಚಿಗಳು ಬಂದ ನಂತರ ಇವುಗಳ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ.

ಸ್ವಸಹಾಯ ಸಂಘಗಳಿಗೆ ತರಬೇತಿ:ಮಾವು ಮೌಲ್ಯವರ್ಧನೆ ಕಾರ್ಯ ಮಾಡಲು ಸ್ವಸಹಾಯ ಸಂಘಗಳ 250 ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಇದಕ್ಕೂ ಮುನ್ನ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರುಗಳು ಮೈಸೂರಿನ ಸಿ.ಎಫ್.ಟಿ.ಆರ್.ಐ.ನಲ್ಲಿ ತರಬೇತಿ ಪಡೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಮಹಿಳೆಯರಿಗೂ ತರಬೇತಿ ನೀಡಲಾಗಿದೆ. ಇವರು ಮಾವಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾಧ್ಯವಿರುವ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಕಳಿಸುತ್ತಾರೆ.

ಈ ಕಾರ್ಯದಲ್ಲಿ ಅಗತ್ಯವಿರುವ ಸಣ್ಣಸಣ್ಣ ಮೆಷಿನರಿಗಳನ್ನು ಬಳಸುವಂಥ ತರಬೇತಿಯನ್ನೂ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಆಕರ್ಷಕ ಪ್ಯಾಕಿಂಗ್ ಮಾಡುವ ಬಗ್ಗೆಯೂ ಹೇಳಿಕೊಡಲಾಗುತ್ತದೆ. ಇದನ್ನು ಗೃಹ ಕೈಗಾರಿಕೆಗಳ ರೀತಿ ಮಾಡಿದಾಗ ಹೆಚ್ಚೆಚ್ಚು ಮಹಿಳೆಯರಿಗೆ ಉದ್ಯೋಗ ಸಿಗುತ್ತದೆ. ಅವರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಗುಣಮಟ್ಟದ ಮಾವು ಉತ್ಪನ್ನಗಳೂ ದೊರೆಯುತ್ತವೆ.

ರಫ್ತು: ಇದು ಕೂಡ ಮುಖ್ಯವಾದ ಸಂಗತಿ. ಫರೀದಾಬಾದಿನಲ್ಲಿರುವ ಎನ್.ಪಿ.ಪಿ.ಒ.ನಿಂದ ಪ್ರಮಾಣೀಕರಣ ಪಡೆದು ಸಂಸ್ಕರಣಾ ಘಟಕ ಆರಂಭಿಸಲಾಗಿದೆ. ಅಪೇಡಾದಿಂದಲೂ ಪ್ರಮಾಣಪತ್ರ ದೊರೆತಿದೆ. ಮಂಡಳಿಯ ಪ್ಯಾಕಿಂಗ್ ಗಳು ಅಪೇಡಾದ ವೆಬ್ ಸೈಟಿನಲ್ಲಿಯೂ ಪ್ರದರ್ಶಿತವಾಗಿದೆ. ನಮ್ಮ ಪ್ಯಾಕ್ ಹೌಸಿನಿಂದ ರಫ್ತು ಆರಂಭವಾಗಿದೆ. ಯುನೈಟೆಡ್ ಕಿಂಗ್ ಡಮ್ ಗೆ ಹೆಚ್ಚು ಪ್ರಮಾಣದಲ್ಲಿ ಹೋಗಿದೆ. ಸಿಂಗಾಪೂರಿಗೂ ಕಡಿಮೆ ಪ್ರಮಾಣದಲ್ಲಿ ರಫ್ತಾಗಿದೆ. ಕನಿಷ್ಟ 100 ಟನ್ ಮಾವು ರಫ್ತು ಮಾಡಬೇಕೆಂದು ನಮ್ಮ ಸದ್ಯದ ಗುರಿಯಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಡಾ. ನಾಗರಾಜ್, ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ. (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಎಫ್ ಬ್ಲಾಕ್, 2ನೇ ಮಹಡಿ, ಕಾವೇರಿ ಭವನ, ಕೆ.ಜಿ. ರಸ್ತೆ, ಬೆಂಗಳೂರು-09 ದೂರವಾಣಿ: 080-22236837, ಮೊಬೈಲ್: 9148447032 ಇಮೈಲ್ :[email protected]

LEAVE A REPLY

Please enter your comment!
Please enter your name here