ಎಲ್ಲಿ ಹೋಯಿತು ಬೆಟ್ಟಬಾಳೆ !

0
ಲೇಖಕರು: ಶ್ರೀನಿವಾಸಮೂರ್ತಿ, ಕೃಷಿಕರು, ಶೃಂಗೇರಿ

ಬೆಳಿಗ್ಗೆ ಏಳರ ಬಸ್ಸಿಗೇ ಬಂದು “ಹೋಯ್ ಬಾಳೆ ಎಲೆ ಕೊಯ್ಯುದಾ? ” ಎನ್ನುತ್ತಲೇ ಉಣುಗೋಲು ತೆಗೆದು ಅಂಗಳಕ್ಕಿಳಿಯುತ್ತಿದ್ದ ಚಂದ್ರಭಟ್ಟರು ಲಗುಬಗೆಯಲ್ಲಿ ಕೊಟ್ಟ ಅರ್ದ ಲೋಟ ಕಾಫಿ ಕುಡಿದು ತಮ್ಮ ಕೈಚೀಲದೊಂದಿಗೆ ತೋಟಕ್ಕಿಳಿಯುತ್ತಿದ್ದರು. ಅದರಲ್ಲಿರುತ್ತಿದ್ದ ಹರಿತವಾದ ಕುಡುಗೋಲು ತೆಗೆದು ಕೆಲಸ ಶುರುಮಾಡಿದರೆಂದರೆ ಮಧ್ಯಾಹ್ನದ ಹೊತ್ತಿಗೆ ಹೊರಲಾದಷ್ಟು ದೊಡ್ಡ ಬಾಳೆ ಎಲೆ  ಕಟ್ಟು ಹೊತ್ತು ಅಂಗಳದಲ್ಲಿ ಹಾಜರ್. ಏನೋ ಒಂದು ಲೆಕ್ಕಾಚಾರದಂತೆ ಇಪ್ಪತ್ತೋ ಮೂವತ್ತೋ ನನ್ನ ಕೈಮೇಲಿಟ್ಟು ” ಬರಲಾ ” ಎನ್ನುತ್ತಲೇ ಕಟ್ಟು ಹೊತ್ತು ಏದುಸಿರು ಬಿಡುತ್ತಾ ಏರುದಾರಿಯಲ್ಲಿ ಅದೇ ವೇಗದಲ್ಲಿ ಹೊರಟುಬಿಡುತ್ತಿದ್ದರು. ಬಸ್ ಹಿಡಿಯುವ ಧಾವಂತದಲ್ಲಿ.

ಸುಮಾರಾಗಿ ತಿಂಗಳಿಗೊಮ್ಮೆ ಅವರ ಭೆಟ್ಟಿ ಇತ್ತು. ಆಗೆಲ್ಲಾ ನಮ್ಮ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ಹಾಗೂ ಸುತ್ತಮುತ್ತ ಈ ಬೆಟ್ಟಬಾಳೆ ಹಿಂಡಿಲುಗಳು ಇದ್ದೇ ಇರುತ್ತಿದ್ದವು. ಸಾಮಾನ್ಯವಾಗಿ ನೆರಳಿಗಾಗಿ ಇದನ್ನು ಬೆಳೆಸಲಾಗುತ್ತಿದ್ದರೂ ಆಗೀಗ ಮೂರು ಕಾಸು ಆದಾಯವೂ ಇದರಿಂದ ಸಿಗುತ್ತಿತ್ತು. ಅಲ್ಲದೆ ಚಂದ್ರಭಟ್ಟರಂತಹ ಹಲವರಿಗೆ ಉದ್ಯೋಗವನ್ನೂ ಒದಗಿಸಿತ್ತು. ಬೀಜದಿಂದಲೇ ಹುಟ್ಟಿ ಬೆಳೆಯುವ ಈ ಕಾಡು ತಳಿಗೆ ವಿಶೇಷ ಆರೈಕೆಯೇನೂ ಬೇಕಿರಲಿಲ್ಲ. ತೋಟದಾಚಿನ ಕಾಡು ಸರುಕಲುಗಳಲ್ಲೂ ಹುಟ್ಟಿ ಬೆಳೆದು ದನ, ಕಾಡುಹಂದಿಗಳಿಗೂ ಆಹಾರವಾಗುತ್ತಿತ್ತು.

ಅಲ್ಲದೇ ಹೊಸದಾಗಿ ಅಡಿಕೆ ತೋಟ ಮಾಡುವವರು ನೆರಳಿನ ಅಗತ್ಯಕ್ಕಾಗಿ ಬಾಳೆ ಗಿಡ ನೆಡುವುದಿತ್ತು. ಆದರೆ ಅಡಿಕೆಗೆ ಮಾರಕ ರೋಗ ತಗುಲಿ ಹರಡತೊಡಗಿದ ನಂತರ ಇತ್ತೀಚೆಗೆ ಹೊಸದಾಗಿ  ತೋಟ ಮಾಡುವುದೂ ನಿಂತುಹೋಯಿತು.

ಮಠದಲ್ಲಿ ಪ್ರವಾಸಿ ಭಕ್ತಾದಿಗಳ ಊಟಕ್ಕೆ ಸ್ಟೀಲ್ ತಟ್ಟೆಗಳು ಬಂದಮೇಲೆ ಎಲೆ ಕೊಯ್ಯುವವರೂ ಉದ್ಯೋಗ ಕಳೆದುಕೊಂಡರು. ಇತ್ತ ಕೃಷಿಕರೂ ಇದನ್ನು ನೆಡುವುದನ್ನು ನಿಲ್ಲಿಸಿ  ಇದ್ದವನ್ನೂ ಸವರಿಹಾಕತೊಡಗಿದರು. ಇನ್ನು ಆಗೀಗ ನಡೆಯುವ ಮದುವೆ ಮುಂಜಿಗಳಿಗೆ ಕೆಲವರ ತೋಟಗಳಲ್ಲಿ ಅಲ್ಲಲ್ಲಿ ಇರುವ ಏಲಕ್ಕಿಬಾಳೆ ಎಲೆಗಳೇ ಸಾಕಾಗಿಬಿಡುತ್ತವೆ.

ಜೊತೆಗೆ ಆಗ ವ್ಯಾಪಕವಾಗಿ ಬಳಕೆಯಲ್ಲಿದ್ದ ಬಾಳೆನಾರಿನ ಹಗ್ಗವನ್ನು ಪ್ಲಾಸ್ಟಿಕ್ ಹಗ್ಗಗಳು ಸ್ಥಾನಪಲ್ಲಟಗೊಳಿಸಿದವು.

ಈ ಬೆಟ್ಟಬಾಳೆ (ಕಲ್ಲುಬಾಳೆ ಎಂದೂ ಕರೆಯುವವರಿದ್ದಾರೆ) ಕಾಡು ಮೂಲದ್ದು  (ಆದರೆ ಈಗ ಕಾಡಿನಲ್ಲಿಲ್ಲ). ತಿನ್ನಲಾರದ ಹಣ್ಣು ಬಿಡುವ ಇದು ಭಾರೀ ಗಾತ್ರದ ಹಿಂಡಿಲು (ಮೆಳೆ )ಗಳಾಗಿ ಬೆಳೆದುಬಿಡುತ್ತದೆ. ಯಾವುದೇ ತರಹದ ಭೂಮಿಗೂ ಒಗ್ಗಿಕೊಳ್ಳುವ ( ಕಲ್ಲು ಕೊರಕು, ಜೌಗು, ಬೆಟ್ಟು) ಇದಕ್ಕೆ ನೀರಿನ ಅಗತ್ಯವೂ ಕಡಿಮೆ.

ಗೊನೆಯಲ್ಲಿ ಒತ್ತೊತ್ತಾಗಿ ಬೂದು ಛಾಯೆಯ ಕಾಯಿಗಳನ್ನು ಬಿಡುವ ಇದರ ಹಣ್ಣು ತಿನ್ನಲು ಬರುವುದಿಲ್ಲ.ತಿನ್ನಲು ಪ್ರಯತ್ನಿಸಿದರೂ ಬಾಯಿಗೆ ಹಾಕಿ ನೊಣಚಿ ಉಗುಳಬೇಕಷ್ಟೇ. ಪರಿಮಳಯುಕ್ತ ಸಿಹಿ ರುಚಿಯ ಹಣ್ಣಿನ ಶೇಕಡಾ 99 ರಷ್ಟು ಭಾಗವನ್ನು ಕಪ್ಪು ಬಣ್ಣದ ಕಲ್ಲಿನಂತಹ ಬೀಜಗಳೇ ಆಕ್ರಮಿಸಿರುತ್ತವೆ. ಆ ಕಾರಣಕ್ಕೆ ಮಂಗಗಳೂ ಇದನ್ನು ಇಷ್ಟಪಡುವುದಿಲ್ಲ. ಏನಿದ್ದರೂ ಇದರ ದಿಂಡು ಹಾಗೂ ಮೂತಿಯನ್ನು ತರಕಾರಿಯಾಗಿ ಬಳಸಬಹುದು.

ಕಾಡಿನಿಂದ ಊರಿಗೆ ಬಂದ ಈ ಬಾಳೆ ತಳಿ ಅತ್ತ ಕಾಡಿನಲ್ಲೂ ನಾಶವಾಗಿ ಇತ್ತ ಊರಿನಲ್ಲೂ ಅಸ್ತಿತ್ವ ಕಳೆದುಕೊಳ್ಳುವುದರಲ್ಲಿದೆ. ಇದರ ಈ  ಸ್ಥಿತಿ ಕತ್ತೆಯನ್ನು ನೆನಪಿಸುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅದೆಷ್ಟು ಜೀವಜಂತು ಕುಲಗಳನ್ನು ಬಳಸಿ ಬಿಸಾಡಿದನೋ ಲೆಕ್ಕ ಇಟ್ಟವರು ಯಾರು?

LEAVE A REPLY

Please enter your comment!
Please enter your name here