ಟಿಶ್ಯೂಕಲ್ಚರ್ ಅಭಿವೃದ್ಧಿ ಅತ್ಯಂತ ಸೂಕ್ಷ್ಮತೆಯ ಕೆಲಸ. ಈ ಸರಣಿಯ ಯಾವುದೇ ಹಂತದಲ್ಲಿ ಲೋಪ ಉಂಟಾದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂಥ ಸ್ಥಿತಿ. ನುರಿತ ತಂತ್ರಜ್ಞರು, ಕಾರ್ಮಿಕರ ಅವಶ್ಯಕತೆ. ಅಪಾರ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಿದ ಸಸಿಗಳಿಗೆ ಶೀಘ್ರವಾಗಿ ಮಾರುಕಟ್ಟೆ ಒದಗಿಸುವಿಕೆ ಇವೆಲ್ಲದಕ್ಕೂ ಅವಶ್ಯಕವಾಗಿರುವ ಭಾರಿ ಬಂಡವಾಳ, ಇವೆಲ್ಲದರ ಜೊತೆಗೆ ಬಹುದೊಡ್ಡದೊಡ್ಡ ಕಂಪನಿಗಳ ಜೊತೆಯಲ್ಲಿ ನಿರಂತರ ಸ್ಪರ್ಧೆ. ಇವೆಲ್ಲವನ್ನೂ ಸಮನ್ವಯಗೊಳಿಸಿಕೊಂಡು ಅಚ್ಚರಿಪಡುವಂಥ ಸಾಧನೆ ಮಾಡುವುದು ಸಾಧಾರಣ ಸಂಗತಿಯಲ್ಲ.


ಇಳಕಲ್ ಸೀರೆ ಜಗತ್ಪ್ರಸಿದ್ಧ. ಬಾಗಲಕೋಟೆ ಜಿಲ್ಲೆಯ ಈ ಊರಿನ ಯುವಕ ಶೈಲೇಶ್ ಅವರು ಕಂಡ ಕನಸುಗಳು ಅಪಾರ. ಅವುಳಲ್ಲಿ ಚಾರ್ಟೆಂಡ್ ಅಕೌಂಟೆಂಟ್ ಆಗಬೇಕೆನ್ನುವುದು ಒಂದು. ಈ ವೃತ್ತಿ ಆರಂಭಿಸುವುದು ಸುಲಭವಲ್ಲ. ಕಠಿಣವಾದ ಪರೀಕ್ಷೆಗೆ ಅಷ್ಟೇ ಕಠಿಣವಾದ ಪೂರ್ವಸಿದ್ಧತೆ ಅಗತ್ಯ. ಇದನ್ನು ಯಶಸ್ವಿಯಾಗಿ ಪೂರೈಸಿದಾಗ ಬಹುರಾಷ್ಟ್ರೀಯ ಕಂಪನಿಗಳ ಸ್ವಯಂಕರೆ. ಹಿಂದೂಸ್ತಾನ್ ಲಿವರ್ ಅಂತಹ ಬಹುದೊಡ್ಡ ಕಂಪನಿಯಲ್ಲಿ ವೃತ್ತಿ ಆರಂಭಿಸಿದರು. ಇದೇ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳ ಹಾದಿಯೇ ತೆರೆದುಕೊಂಡಿತ್ತು. ಆದರೆ ಬಂದಿದ್ದು ಟಿಶ್ಯೂಕಲ್ಚರ್ ಕಂಪನಿಗೆ
ಶೈಲೇಶ್ ಕತಾರಿಯಾ ಅವರ ಹಿರಿಯ ಸಹೋದರ ಅಶೋಕ್ ಕತಾರಿಯಾ ಅವರು ಮಹಾರಾಷ್ಟ್ರದ ಜಮಖೇಡ್ ನಲ್ಲಿ ಸಣ್ಣ ಪ್ರಮಾಣದ ಟಿಶ್ಯೂಕಲ್ಚರ್ ಲ್ಯಾಬ್ ಆರಂಭಿಸಿದ್ದರು. ಅಂಕಿಸಂಖ್ಯೆಗಳ ಕ್ಷೇತ್ರಗಳಲ್ಲಿ ಮುಳುಗಿಹೋಗದೇ ಹಸಿರುಕ್ಷೇತ್ರದಲ್ಲಿ ಈಜುವ ನಿರ್ಧಾರ ಮಾಡಿದ ಶೈಲೇಶ್ ಅದಕ್ಕೆ ಅವಶ್ಯಕವಾದ ವಿಷಯಗಳನ್ನು ಅಧ್ಯಯನ ಮಾಡಿದರು. ಇದರ ಜೊತೆಗೆ ಪುಷ್ಪಕೃಷಿಯ ಬಗ್ಗೆಯೂ ಒಲವು ಬೆಳೆಯಿತು.
ಪ್ಲೋರಿಕಲ್ಚರ್ ನಕ್ಷೆಯಲ್ಲಿ ಬೆಂಗಳೂರಿಗೆ ವಿಶಿಷ್ಟಸ್ಥಾನವಿದೆ. ಇಲ್ಲಿಯೇ ಪುಷ್ಪಕೃಷಿ ಆರಂಭಿಸಬೇಕೆಂಬ ಯೋಜನೆಯೊಂದಿಗೆ ದೇವನಹಳ್ಳಿ ಬಳಿಯ ಭಿನ್ನಮಂಗಲದಲ್ಲಿ ಜಮೀನು ಖರೀದಿಸಿದರು.

ಸಮೀಪದಲ್ಲಿಯೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆ ಸಾಕಾರಗೊಳ್ಳಲು ಸಿದ್ಧವಾಗುತ್ತಿತ್ತು.. ಹೊರರಾಜ್ಯಗಳು, ಹೊರದೇಶಗಳಲ್ಲಿ ಬೆಂಗಳೂರು ಹೊರವಲಯಗಳಲ್ಲಿ ಬೆಳೆಯುವ ವೈವಿಧ್ಯಮಯ ಪುಷ್ಪಗಳಿಗೆ ಅಪಾರ ಬೇಡಿಕೆಯಿದೆ. ಕೊಯ್ಲಾಗಿ, ಪ್ಯಾಕಿಂಗ್ ಆದ ಪುಷ್ಪಗಳನ್ನು ಶೀಘ್ರ ವಿಮಾನದಲ್ಲಿ ಬೇಡಿಕೆಯಿರುವ ಸ್ಥಳಕ್ಕೆ ಕಳಿಸಬಹುದು. ಇದು ಸಹ ಇಲ್ಲಿಯೇ ಪುಷ್ಪಕೃಷಿ ಆರಂಭಿಸುವ ನಿರ್ಧಾರಕ್ಕೆ ಕಾರಣ
ಅಗತ್ಯವಿರುವ ಎಲ್ಲ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡರು. ಪುಷ್ಪಕೃಷಿಯೂ ಆರಂಭಗೊಂಡಿತು. ಆದರೆ ಶೀಘ್ರದಲ್ಲಿಯೇ ಇದನ್ನು ಬಿಟ್ಟು ಅಂಗಾಂಶಕೃಷಿ ಆರಂಭಿಸಲು ಶೈಲೇಶ್ ನಿರ್ಧರಿಸಿದರು. ಇದರ ಹಿಂದೆ ಪುಷ್ಪಕೃಷಿ ಕ್ಷೇತ್ರದ ಸಾಧಕ –ಬಾಧಕಗಳ ಅನುಭವವಿತ್ತು. ಸಾಕಷ್ಟು ಆಲೋಚನೆ ನಂತರ ಆಂಗಾಂಶಕೃಷಿ ಆರಂಭಿಸಲು ನಿರ್ಧರಿಸಿದರು.
ಈ ವೇಳೆಗಾಗಲೇ ಈ ಕ್ಷೇತ್ರದಲ್ಲಿ ಬಹುದೊಡ್ಡದೊಡ್ಡ ಕಂಪನಿಗಳಿದ್ದವು. ಅವುಗಳೊಂದಿಗೆ ಸ್ಪರ್ಧೆ ನಡೆಸಿ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವುದು ಸಾಧಾರಣವಾದ ಸಂಗತಿಯಲ್ಲ. ತುಸು ಏರುಪೇರಾದರೂ ಹೂಡುವ ಅಪಾರ ಬಂಡವಾಳ ಕಳೆದುಕೊಳ್ಳುವ ಭೀತಿಯಿತ್ತು. ಇವೆಲ್ಲವನ್ನು ಯೋಚಿಸಿದ ಶೈಲೇಶ್ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ನಿರ್ಧರಿಸಿ 2005ರಲ್ಲಿ ಭಿನ್ನಮಂಗಲದಲ್ಲಿ “ಹೆಚ್.ಯು. ಗುಗ್ಲೆ ಬಯೋಟೆಕ್ ಕಂಪನಿ ಆರಂಭಿಸಿದರು. ಹಿರಿಯ ಸಹೋದರ ಜಮಖೇಡ್ ನಲ್ಲಿ ಈಗಾಗಲೇ ಆರಂಭಿಸಿದ ಉದ್ದಿಮೆಯನ್ನು ಬೆಂಗಳೂರಿನಲ್ಲಿಯೂ ಚಾಲನೆ ನೀಡಿದರು.


ಮಹಾರಾಷ್ಟ್ರಕ್ಕಿಂತಲೂ ಕರ್ನಾಟಕದಲ್ಲಿ ತೀವ್ರಸ್ಪರ್ಧೆ ಇತ್ತು. ಅದರಲ್ಲಿಯೂ ಬೆಂಗಳೂರು ಮತ್ತು ಸುತ್ತಮುತ್ತ ಅಗಾಧ ಪ್ರಮಾಣದಲ್ಲಿ ಬೆಳೆದಿದ್ದ ಕಂಪನಿಗಳಿದ್ದವು. ಶೈಲೇಶ್ ಅಳುಕದೇ ಕೆಲಸ ಆರಂಭಿಸಿದರು. ಆರೇಮಂದಿ ನೌಕರರೊಂದಿಗೆ ಕೆಲಸ ಶುರು ಮಾಡಿದರು. ಆರಂಭದಲ್ಲಿ ಜಿ9 ಬಾಳೆತಳಿ ಸಸಿಗಳ ಉತ್ಪಾದನೆಯಿತ್ತು. ಮೊದಲಿಗೆ ಕೇವಲ 15 ಸಾವಿರ ಸಸಿಗಳನ್ನಷ್ಟೆ ಅಭಿವೃದ್ಧಿಪಡಿಸಲು ಆರಂಭಿಸಿದರು.
ಇವೆಲ್ಲದರ ಜೊತೆಗೆ ಇಲ್ಲಿ ಮಾರುಕಟ್ಟೆ ಕಂಡುಕೊಳ್ಳುವ ಅವಶ್ಯಕತೆಯಿತ್ತು. ಬೈಕಿನಲ್ಲಿ ಹಳ್ಳಿಹಳ್ಳಿ ತಿರುಗಲು ಆರಂಭಿಸಿದರು. ಉತ್ಸಾಹಕ್ಕಿಂತ ನಿರುತ್ಸಾಹಗೊಳ್ಳುವಂತ ಸನ್ನಿವೇಶಗಳೇ ಹೆಚ್ಚಾಗಿದ್ದವು. ಆದರೆ ಶೈಲೇಶ್ ನಿರಾಶೆಗೊಳ್ಳಲಿಲ್ಲ; ಹಿಂಜರಿಯಲಿಲ್ಲ. ನಿಧಾನವಾಗಿ ಕೃಷಿಕರಲ್ಲಿ ಗುಗ್ಲೆ ಬಯೋಟೆಕ್ ಅಭಿವೃದ್ಧಿಪಡಿಸಿದ ಸಸಿಗಳ ಗುಣಮಟ್ಟದ ಬಗ್ಗೆ ವಿಶ್ವಾಸ ಮೂಡತೊಡಗಿತು. ಇದರ ಪರಿಣಾಮವಾಗಿ ಅಂಗಾಂಶಕೃಷಿ ಜಿ 9 ಬಾಳೆತಳಿ ಸಸಿಗಳ ಅಭಿವೃದ್ಧಿ 15 ಸಾವಿರದಿಂದ 1 ಲಕ್ಷಕ್ಕೇರಿತು.


ನಿರಂತರ ಪರಿಶ್ರಮದಿಂದ ಬೆಂಗಳೂರಿನ ಆಚೆಗೂ ಮಾರುಕಟ್ಟೆ ಕಂಡುಕೊಳ್ಳತೊಡಗಿದರು. ಇಲ್ಲಿಂದ ಸಸಿಗಳನ್ನು ಖರೀದಿಸಿದವರು ನಿರಾಶೆಗೊಳ್ಳುತ್ತಿರಲಿಲ್ಲ. ಇದರ ಪರಿಣಾಮ ವಿಶ್ವಾಸಾರ್ಹತೆ ಹೆಚ್ಚತೊಡಗಿತು. 1 ಲಕ್ಷದಷ್ಟಿದ್ದ ಸಸಿಗಳ ಅಭಿವೃದ್ಧಿ ಸಂಖ್ಯೆ 15 ಲಕ್ಷಕ್ಕೇರಿತು. ಶೈಲೇಶ್ ಮುಂದೆ ಕನಸುಗಳ ಹಾದಿಯಿತ್ತು. ಇಷ್ಟರಲ್ಲಿ ನೌಕರರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿತ್ತು. ವರ್ಷದಿಂದ ವರ್ಷಕ್ಕೆ ಉತ್ಪಾದನೆಯಾಗುವ ಸಸಿಗಳ ಸಂಖ್ಯೆ ಏರತೊಡಗಿತು.
ದಾಳಿಂಬೆ, ಎಲಕ್ಕಿ ಮತ್ತು ತೇಗ
ಜಿ 9 ಅಂಗಾಂಶಕರಷಿ ಬಾಳೆಸಸಿಗಳ ಅಭಿವೃದ್ಧಿಗಷ್ಟೆ ಸೀಮಿತರಾಗಲಿಲ್ಲ. ದಾಳಿಂಬೆ ಸಸಿಗಳ ಅಭಿವೃದ್ಧಿಯನ್ನು ಆರಂಭಿಸಿದರು. ದಾಳಿಂಬೆಗೆ ಬಾಧಿಸುವ ರೋಗಗಳ ಸಂಖ್ಯೆ ಹೆಚ್ಚು. ರೋಗಗಳಿಲ್ಲದ, ರೋಗನಿರೋಧಕ ಶಕ್ತಿ ಇರುವ ಗುಣಮಟ್ಟದ ಸಸಿಗಳನ್ನು ರೈತರಿಗೆ ನೀಡಲಾರಂಭಿಸಿದರು. ಈ ನಂತರ ಎಲಕ್ಕಿಸಸಿಗಳ ಅಭಿವೃದ್ಧಿಯನ್ನೂ ಮಾಡತೊಡಗಿದರು. ಇದಾದ ಅಲ್ಪ ಅವಧಿಯಲ್ಲಿಯೇ ತೇಗದ ಸಸಿಗಳ ಅಭಿವೃದ್ಧಿಯನ್ನು ಶುರು ಮಾಡಿದರು. ಪ್ರತಿಯೊಂದರಲ್ಲಿಯೂ ಯಶಸ್ಸು ದೊರೆಯತೊಡಗಿತು. ಇದಕ್ಕೆ ಕಾರಣ ನಿರಂತರ ದುಡಿಮೆ.
ವಿಸ್ತರಿತವಾದ ಸಂಸ್ಥೆ ಮತ್ತು ಮಾರುಕಟ್ಟೆ:
“ಹೆಚ್.ಯು. ಗುಗ್ಲೆ ಬಯೋಟೆಕ್ ಕಂಪನಿ” ಯ ಮಾರುಕಟ್ಟೆ ಪ್ರಸ್ತುತ ದೇಶದ ಬಹುತೇಕ ರಾಜ್ಯಗಳಿಗೆ ವಿಸ್ತರಿತಗೊಂಡಿದೆ. ಐದು ರಾಜ್ಯಗಳಲ್ಲಿ ಬಯೋಟೆಕ್ ಲ್ಯಾಬ್ ಗಳು ಸ್ಥಾಪಿತವಾಗಿವೆ. ಇದಿಷ್ಟೇ ಅಲ್ಲ; ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳು, ವಿವಿಧ ರಾಜ್ಯ ಸರ್ಕಾರಗಳ ಕೃಷಿ – ತೋಟಗಾರಿಕೆ ಇಲಾಖೆಗಳು ವಿವಿಧ ಸಸಿಗಳಿಗಾಗಿ ಬೇಡಿಕೆ ಸಲ್ಲಿಸುತ್ತಿವೆ. ಇವೆಲ್ಲದರ ಹಿಂದೆ ಈ ಯುವಕನ ಶ್ರಮ, ವ್ಯವಹಾರದ ಲೆಕ್ಕಚಾರ, ಪ್ರಾಮಾಣಿಕತೆ ಮತ್ತು ಮಾನವೀಯ ದೃಷ್ಟಿ ಕಾರಣ.


ಬಾಂಧವ್ಯ: ಬೆಂಗಳೂರಿನಲ್ಲಿ ಆರಂಭದಲ್ಲಿ ಗುಗ್ಲೆ ಕಂಪನಿಗೆ ಸೇರಿದ ನೌಕರರು 14 ವರ್ಷಗಳ ನಂತರವೂ ಇದೇ ಕಂಪನಿಯಲ್ಲಿ ಮುಂದುವರಿದ್ದಾರೆ ಎಂದರೆ ಅದು ಅವರ ಮತ್ತು ಮಾಲೀಕರ ನಡುವಿನ ಗಟ್ಟಿಯಾದ ಬಾಂಧವ್ಯವನ್ನು ಸೂಚಿಸುತ್ತದೆ. ಶೈಲೇಶ್ ಅವರು ಇಲ್ಲಿಯ ನೌಕರರನ್ನು ತಮ್ಮ ಒಡನಾಡಿಗಳಂತೆ ಕಾಣುತ್ತಾರೆ. ವ್ಯವಹಾರಿಕವಿರಲಿ, ವೈಯಕ್ತಿಕ ವಿಷಯಗಳೇ ಇರಲಿ ಸಮಾಧಾನದಿಂದ ಕೇಳಿಸಿಕೊಳ್ಳುತ್ತಾರೆ. ಸಲಹೆ – ನೆರವು ನೀಡುತ್ತಾರೆ.
ಗ್ರಾಮೀಣ ಪ್ರದೇಶದಿಂದ ಬಂದ ಓರ್ವ ಯುವಕ ಬಹುದೊಡ್ಡ ಸ್ಪರ್ಧೆ ಇರುವ ಟಿಶ್ಯೂಕಲ್ಚರ್ ಕ್ಷೇತ್ರದಲ್ಲಿ ಬೆಳೆಯುವುದು ಸುಲಭದ ಮಾತಲ್ಲ. ಅಡಿಗಡಿಗೂ ಅಡ್ಡಿಗಳಿರುತ್ತವೆ. ಇವೆಲ್ಲವನ್ನೂ ನಿವಾರಿಸಿಕೊಂಡು ಸಂಸ್ಥೆಯನ್ನು ಬೆಳೆಸಿರುವ ಪರಿ ಅಚ್ಚರಿ ಮೂಡಿಸುತ್ತದೆ. ಆರು ಮಂದಿಯಿಂದ ಆರಂಭವಾದ ಕಂಪನಿಯಲ್ಲಿ ಇಂದು ಕೆಲಸ ಮಾಡುತ್ತಿರುವವರ ಸಂಖ್ಯೆ 300ಕ್ಕೂ ಹೆಚ್ಚು. ಈ ಕಂಪನಿಯಿಂದ ಪರೋಕ್ಷವಾಗಿ ಉದ್ಯೋಗ ಕಂಡುಕೊಂಡಿರುವವರ ಸಂಖ್ಯೆ ಇದಕ್ಕೂ ಹಲವುಪಟ್ಟು ಹೆಚ್ಚು. ಉತ್ಪಾದಿತವಾಗುತ್ತಿರುವ ಸಸಿಗಳ ಸಂಖ್ಯೆ 2 ಕೋಟಿಗೂ ಹೆಚ್ಚು. ಇಷ್ಟೆಲ್ಲ ಸಾಧನೆ ಹಿಂದೆ ಇರುವ ಗುಟ್ಟೇನು ಎಂದು ಕೇಳಿದರೆ ” ಶ್ರಮ ನಿರಂತರ ಶ್ರಮ” ಎನ್ನುತ್ತಾರೆ.
ಶೈಲೇಶ್ ಅವರ ಸಂಪರ್ಕ ಸಂಖ್ಯೆ: 99806 45151

LEAVE A REPLY

Please enter your comment!
Please enter your name here