ಪರಿಸರ ಸಂರಕ್ಷಣೆಗೆ ಚಿಗುರಿದ “ಹೊಂಬೇವು”

0
“ಹೊಂಬೇವು” ಸ್ಥಾಪಕರಾದ ಶೈಲಜಾ ಗೌಡಟ್ಟಿ

“ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನದಿಂದ ದುಷ್ಪರಿಣಾಮಗಳು  ಉಂಟಾಗುತ್ತಿವೆ. ಪ್ರಾಕೃತಿಕ ಅಸಮತೋಲನದಿಂದ ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿ ಅಂದರೆ ಬರದಂಥ ಸ್ಥಿತಿ ಉಂಟಾಗುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಜೀವ ಸಂಕುಲಕ್ಕೆ ಅಪಾಯವಿದೆ” ಇದು ಪರಿಸರ ಕಾರ್ಯಕರ್ತೆ ಶೈಲಜಾ ಗೌಡಟ್ಟಿ ಅವರ ಎಚ್ಚರದ ನುಡಿಗಳು.

ಮೇ 9ರಂದು ತುಮಕೂರು ಜಿಲ್ಲೆಯ ಗುಬ್ಬಿ ಸನಿಹದ ಅಮ್ಮನಘಟ್ಟದಲ್ಲಿ ಇವರು ಸ್ಥಾಪಿಸಿರುವ “ಹೊಂಬೇವು” ಸಂಘಟನೆಯ ಬ್ಯಾನರ್ ಅನಾವರಣ ನಡೆಯಿತು. ಇಲ್ಲಿನ ಪರಿಸರಸ್ನೇಹಿ ಕೃಷಿಕ ಮಹೇಶ್ ಅವರ “ಮಣ್ಣಿನ ಮನೆ”ಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯಿತು. ಈ ನಂತರ “ಅಗ್ರಿಕಲ್ಚರ್ ಇಂಡಿಯಾ” ಪ್ರತಿನಿಧಿಯೊಂದಿಗೆ ಶೈಲಾಜಾ ಗೌಡಟ್ಟಿ ಅವರು ಮಾತನಾಡಿದರು.

“ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಕೆಲವೇ ಪರಿಸರವಾದಿಗಳ ಕೆಲಸವಲ್ಲ. ಪ್ರತಿಯೊಬ್ಬ ಪ್ರಜೆಯೂ ಪರಿಸರವಾದಿಯಾಗಬೇಕು. ಆಗಲೇ ಪರಿಸರ ಸಮತೋಲನದ ಕಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು, ಸಮರೋಪಾದಿಯಲ್ಲಿ ವೈವಿಧ್ಯ ಸಸಿಗಳನ್ನು ನೆಟ್ಟು ಪೋಷಿಸುವ ಸಲುವಾಗಿ ಸಮಾನ ಮನಸ್ಕರ ಜೊತೆಗೂಡಿ “ಹೊಂಬೇವು” ಸಂಘಟನೆಗೆ ಚಾಲನೆ ಕೊಟ್ಟಿದ್ದೇನೆ” ಎಂದು ಅವರು ವಿವರಿಸಿದರು.

“ಪರಿಸರ ಎಂದರೆ ಎಲ್ಲಿಯೋ ದೂರದಲ್ಲಿರುವ ಕಾಡುಮೇಡು, ನದಿ ಮಾತ್ರವಲ್ಲ. ನಾವು ವಾಸಿಸುವ ಪ್ರದೇಶವೂ ಪರಿಸರ. ಇದನ್ನು ಉತ್ತಮವಾಗಿ ಇಟ್ಟುಕೊಳ್ಳುವುದು, ನಗರ-ಗ್ರಾಮೀಣ ಪ್ರದೇಶಗಳ ವಸತಿ ಸ್ಥಳಗಳಲ್ಲಿ ಎಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ನೆರಳಿನ ಜೊತೆಗೆ ಮಾಲಿನ್ಯವನ್ನು ಹೀರಿಕೊಂಡು ಉತ್ತಮ ಆಮ್ಲಜನಕ ನೀಡುವ ಸಸಿಗಳನ್ನು ನೆಡಬೇಕು. ಇವುಗಳನ್ನು ನೆಟ್ಟರೆ ಮಾತ್ರ ನಮ್ಮ ಕರ್ತವ್ಯ ಮುಗಿದು ಹೋಗುವುದಿಲ್ಲ. ಇವುಗಳನ್ನು ಪೋಷಿಸಿ, ಮರವಾಗಿ ಬೆಳೆಸುವುದು ಅರಣ್ಯ ಇಲಾಖೆ, ಸ್ಥಳೀಯ ಪುರಸಭೆ, ನಗರಸಭೆ, ಪಾಲಿಕೆ ಕೆಲಸ ಎಂದು ಭಾವಿಸಬಾರದು. ನಿವಾಸಿಗಳೇ ಇದರ ಪ್ರಮುಖ ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ಶೈಲಜಾ ಗೌಡಟ್ಟಿ ಹೇಳುತ್ತಾರೆ.

ಹೊಂಬೇವು ಬ್ಯಾನರ್ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಸರ ಕಾರ್ಯಕರ್ತರು

“ನಾನು ಕಳೆದ 17 ವರ್ಷಗಳಿಂದ ಪರಿಸರ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ವಿವಿಧ ಸಂಘಟನೆಗಳ ಜೊತೆ ಸೇರಿರುವುದಲ್ಲದೇ ವೈಯಕ್ತಿಕ ಹಂತದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ,  ನಾಗರಿಕರಲ್ಲಿ “ನಮ್ಮ ಪರಿಸರದ ಸಂರಕ್ಷಣೆ ಕಾರ್ಯ ನಮ್ಮದೇ” ಎಂಬ ಜಾಗೃತಿ ಮೂಡಿಸುವುದರಲ್ಲಿ ತೊಡಗಿಸಿಕೊಂಡಿದ್ದೇನೆ. ಸಾವಿರಾರು ಸಸಿಗಳನ್ನು ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನೊಬ್ಬಳೇ 350 ಸಸಿಗಳನ್ನು ನೆಟ್ಟಿ ಬೆಳೆಸಿದ್ದೇನೆ. ಸಸಿಗಳನ್ನು ನೆಟ್ಟು ವನ ಮಹೋತ್ಸವ ಮಾಡಿ ಕೈ ತೊಳೆದು ಎದ್ದು ಹೋಗುವುದಷ್ಟಕ್ಕೆ ಸೀಮಿತವಾಗಿಲ್ಲ. ಅವುಗಳ ಬೆಳವಣಿಗೆಯನ್ನು ಗಮನಿಸುತ್ತೇನೆ. ಸಮಾನ ಮನಸ್ಕರ ಜೊತೆಗೂಡಿ ಅವುಗಳಿಗೆ ನೀರು ಎರೆದು ಬೆಳೆಸುವುದರತ್ತಲೂ ತೊಡಗಿಸಿಕೊಂಡಿದ್ದೇನೆ. ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾಡುವ ಸಲುವಾಗಿ “ಹೊಂಬೇವು” ಚಿಗುರಿದೆ ಎಂದು ಸಂತಸದಿಂದ ಹೇಳಿದರು.

ಅಮ್ಮನಘಟ್ಟದಲ್ಲಿಯೇ “ಹೊಂಬೇವು” ಬ್ಯಾನರ್ ಅನಾವರಣ ಕಾರ್ಯಕ್ರಮ ಮಾಡಿರುವುದರ ಉದ್ದೇಶವನ್ನು ಅವರು ವಿವರಿಸಿದರು. “ಬೆಂಗಳೂರಿನಿಂದ 40 ಮಂದಿ ಬಂದಿದ್ದೇವೆ. ನಾವೆಲ್ಲರೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪರಿಸರ ಕಾಯಕದಲ್ಲಿ ತೊಡಗಿಸಿಕೊಂಡವರು. ಹಿಂದೆ ಅಮ್ಮನಘಟ್ಟ ಗ್ರಾಮದ ಸರಹದ್ದಿನಲ್ಲಿ ನಾನು ಸೇರಿದಂತೆ ಹಲವರು ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಇಂಥ ಪರಿಸರದಲ್ಲಿ ಸಮಾನ ಮನಸ್ಕರ ಮಾತುಕತೆ, ಹಾಡು, ಸರಳ ಸಾವಯವ ಊಟ ಸವಿಯುವ ಉದ್ದೇಶಗಳೂ ಸೇರಿದ್ದವು”

“ನಾನು ಹೆಚ್ಚಾಗಿ ಹೊಂಗೆ, ಬೇವಿನ ಸಸಿಗಳನ್ನು ಮತ್ತು ಗ್ರಾಮದ ಸರಹದ್ದುಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲು ಆದ್ಯತೆ ನೀಡುತ್ತೇನೆ. ಹೊಂಗೆ ನೆರಳು ನೀಡುವುದರ ಜೊತೆಗೆ ಇದು ಬಿಡುವ ಕಾಯಿಗಳಿಂದ ಜೈವಿಕ ಇಂಧನ ಪಡೆಯಲು ಕಾರಣವಾಗುತ್ತದೆ. ಬೇವು ಅನೇಕ ಔಷಧಗಳ ಆಗರ. ಇವೆರಡೂ ಅತೀ ಅಗತ್ಯ. ಇದು ಸಹ ನಮ್ಮ ಸಂಘಟನೆಗೆ “ಹೊಂಬೇವು” ಎಂದು ಹೆಸರಿಡಲು ಕಾರಣವಾಗಿದೆ” ಎಂದರು

ಈ ಬಾರಿಯ ಮುಂಗಾರು ಮಳೆಗಾಲ ಆರಂಭಕ್ಕೆ ಮುನ್ನ ಕನಿಷ್ಟ ಒಂದು ಸಾವಿರ ಸಸಿಗಳನ್ನು ವಿವಿಧ ಸ್ಥಳಗಳಲ್ಲಿ ನೆಡುವ ಯೋಜನೆ ಇದೆ. ಯಾವಯಾವ ಸ್ಥಳಗಳಿಗೆ ಯಾವ ವಿಧದ ಸಸಿಗಳನ್ನು ನೆಡುವುದು ವೈಜ್ಞಾನಿಕವಾಗಿ ಸೂಕ್ತವೋ ಅಂಥವುಗಳನ್ನೇ ನೆಡುತ್ತೇವೆ. ಇದರ ಜೊತೆಗೆ ಶಾಲಾ ಮಕ್ಕಳಲ್ಲಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಅವರನ್ನೂ ಒಳಗೊಂಡು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಸಾರ್ವಜನಿಕರೇ ಇದರ ಸಹಭಾಗಿತ್ವ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ವಿವರಿಸಿದರು.

ಪರಿಸರದ ಮಡಿಲಿನಲ್ಲಿ ಪರಿಸರ ಕಾರ್ಯಕರ್ತರ ಸಾವಯವ ಭೋಜನ

“ಹೊಂಬೇವು” ಅನಾವರಣ ಕಾರ್ಯಕ್ರಮದಲ್ಲಿ “ಮಿಂಚು” ಸಂಘಟನೆಯ ಕಾರ್ಯದರ್ಶಿ ಶ್ರೀಲಕ್ಷ್ಮಿ, ಬೆಂಗಳೂರು ಜ್ಞಾನಭಾರತೀ ಆವರಣದಲ್ಲಿ ಬಯೋಪಾರ್ಕ್ ಅಭಿವೃದ್ದಿಗೆ ಶ್ರಮಿಸಿದ ಡಾ. ರೇಣುಕಾ ಪ್ರಸಾದ್, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ “ಜೀವನ್ಮುಕ್ತಿ” ಸಂಘಟನೆಯ ಮುಖ್ಯಸ್ಥೆ ರೂಪಾ, ಗಾನಸಿರಿ ಟ್ರಸ್ಟ್ ಮುಖ್ಯಸ್ಥರು, ಖ್ಯಾತ ಸಂಗೀತಗಾರರು ಆಗಿರುವ ಪ್ರಭಾ ಇನಾಂದಾರ್, ಮನೆಯನ್ನೇ ಸಸ್ಯಗಳ ಕಾಶಿ ಮೂಲಕ ನಂದನವನ ಮಾಡಿರುವ ಇಸ್ರೋ ಸಿಬ್ಬಂದಿ ರತ್ನಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಭಾ ಇನಾಂದಾರ್ ನೇತೃತ್ವದಲ್ಲಿ ಸಂಗೀತದ ಮೂಲಕವೂ ಪರಿಸರ ಜಾಗೃತಿ ಮೂಡಿಸುತ್ತಿರುವ ಶೈಲಜಾ ಅವರು ಸೇರಿದಂತೆ ಅನೇಕರು ಸೇರಿ ನೂರು ವರ್ಷಕ್ಕೂ ಹಳೆಯ ವಿಶಾಲ ಮಾವಿನ ಮರದಡಿ ಹಾಡುಗಳನ್ನು ಹಾಡಿದರು.

LEAVE A REPLY

Please enter your comment!
Please enter your name here