ಲೇಖಕರು: ಡಾ. ಮಿರ್ಜಾ ಬಶೀರ್, ಖ್ಯಾತ ಪಶುವೈದ್ಯರು, ಸಾಹಿತಿ

ನಾನು ಬೈಕಿನಲ್ಲಿ ಹಳ್ಳಿಗಳಿಗೆ ಹೋಗುವಾಗ ಬರುವಾಗಲೆಲ್ಲ ಒಬ್ಬ ಕತ್ತೆ ಕಾಯುವವನು ಎದುರಾಗುತ್ತಿದ್ದ. ಬಹಳ ವರ್ಷಗಳ ಕಾಲ ನನಗೆ ಅವನ ಪರಿಚಯವೇ ಆಗಿರಲಿಲ್ಲ. ಸಾಮಾನ್ಯವಾಗಿ ಕುರಿ, ಮೇಕೆ, ದನ ಮೇಯಿಸುವವರನ್ನು ನಾನೇ ಹೋಗಿ ಮಾತನಾಡಿಸುತ್ತಿದ್ದೆ. ದಿನವಿಡೀ ಕಾಡು ಮೇಡು ಅಲೆಯುತ್ತ, ದನಗಳ ಜೊತೆ ಮಾತಾಡುತ್ತ, ಬೈಯ್ಯುತ್ತ, ಬಿಸಿಲು ಗಾಳಿಗಳಿಗೆ ಮೈಯ್ಯೊಡ್ಡಿ ಒಣ ಕಟ್ಟಿಗೆಗಳಂತಾಗಿರುತ್ತಿದ್ದ ಅನೇಕರು ಎಷ್ಟು ಪ್ರೀತಿಯಿಂದ ಸ್ಪಂದಿಸುತ್ತಿದ್ದರೆಂದರೆ ಅದನ್ನು ಮಾತಲ್ಲಿ ಹೇಳುವುದು ಕಷ್ಟ.
ಅದರಲ್ಲೂ ನಾನು ದನದ ಡಾಕ್ಟರಾಗಿ ಕಂಡ ಸ್ಥಳದಲ್ಲೇ ಟಿಂಚರ್, ಮುಲಾಮು, ಜಂತು ಔಷಧ, ಒಮ್ಮೊಮ್ಮೆ ಇಂಜೆಕ್ಷನ್ ಸಹ ಕೊಡುತ್ತಿದ್ದುದರಿಂದ ಫೇಮಸ್ ಸರ್ಜನ್ ಡಾಕ್ಟರ್ ಆಗಿದ್ದೆ. ಹಲವು ಸಲ ಕಾಡಿನಲ್ಲೆಲ್ಲೋ ಹೀಗೆ ಭೇಟಿಯಾಗಿ ಸಿರಿಂಜು, ಸೂಜಿಗಳನ್ನು ಸ್ಟೆರಿಲೈಸೇಷನ್ ಸಹ ಇಲ್ಲದೆ ಇಂಜೆಕ್ಷನ್ ಮಾಡಿದ್ದೂ ಇದೆ. ದನಗಳು ಹುಷಾರಾಗಿದ್ದೂ ಇದೆ. ಯಾವುದೇ ಸ್ಟೆರಿಲೈಸೇಷನ್ ಇಲ್ಲದೆ ಕೊಟ್ಟ ಇಂಜೆಕ್ಷನ್ನುಗಳು ನಂಜಾಗುತ್ತಿರಲಿಲ್ಲ ಎಂಬುದು ನಂಬಲಿಕ್ಕೆ ಕಷ್ಟ. ಆದರೆ ಇದು ನಿಜ. ಹಲವಾರು ಸಲ ಹರಿದ ಚರ್ಮಕ್ಕೆ ಹೊಲಿಗೆ ಹಾಕಿದ್ದೂ ಇದೆ.
ಸ್ಟೆರಿಲೈಸೇಷನ್ ಇಲ್ಲದೆ ಸೂಜಿ ದಾರಗಳನ್ನು ಟಿಂಜರ್ ಅಯೋಡಿನ್ನಲ್ಲಿ ಅದ್ದಿ ಹೊಲಿಗೆ ಹಾಕಿದರೆ ನಾಲ್ಕಾರು ದಿನದಲ್ಲಿ ಗಾಯಗಳು ಒಣಗಿ ಹೋದ ಸಾವಿರಾರು ಪ್ರಕರಣಗಳಿವೆ. ಜಾನುವಾರು ಮಾಲೀಕರು ನಮ್ಮ ಮಾತಿನಂತೆ ಆಸ್ಪತ್ರೆಗೆ ಬಂದು ಹೊಲಿಗೆ ಗಾಯಕ್ಕೆ ಹಚ್ಚಲು ಟಿಂಚರು ಅಥವಾ ಮುಲಾಮು ತೆಗೆದುಕೊಂಡು ಹೋಗುತ್ತಿರಲಿಲ್ಲ. ಮನೆಯಲ್ಲಿದ್ದ ಬೇವಿನ ಎಣ್ಣೆಯನ್ನೋ, ಹೊಂಗೆ ಎಣ್ಣೆಯನ್ನೋ ಹಚ್ಚಿಕೊಂಡು ನೊಣ ಆಡದಂತೆ ಮಾಡಿ ಗಾಯ ವಾಸಿ ಆಗುವಂತೆ ನೋಡಿಕೊಳ್ಳುತ್ತಿದ್ದರು.

ಅದು 1987 ರ ಒಂದು ದಿನ. ಮಧ್ಯಾಹ್ನದ ಉರಿಬಿಸಿಲಲ್ಲಿ ಮೇಲೆ ಹೇಳಿದ ಕತ್ತೆಯವನು ಆಸ್ಪತ್ರೆ ಬಾಗಿಲಲ್ಲಿ ಕಾಣಿಸಿಕೊಂಡ. ಅವನ ಹೆಸರು ದಾಸಪ್ಪ ಎಂದು ಆಗ ಗೊತ್ತಾಯಿತು. ನಾನು ತಿಳಿದುಕೊಂಡಂತೆ ಕತ್ತೆಗಳು ದಾಸಪ್ಪನವಾಗಿರಲಿಲ್ಲ. ಅವು ಯಾರೋ ಸಾಹುಕಾರನಿಗೆ ಸೇರಿದ ಕತ್ತೆಗಳು. ದಾಸಪ್ಪ ಅವರ ಮನೆಯ ಕೂಲಿಯಾಳು. ಮಾಲೀಕ ಹೇಳಿದ ತೋಟದಲ್ಲಿ ಕತ್ತೆಗಳನ್ನು ಕೂಡಾಕಿಕೊಂಡು ಮೇಯಿಸುತ್ತಿದ್ದ. ಅದಕ್ಕೆ ಮಂದೆ ಹಾಕುವುದು ಎನ್ನುತ್ತಾರೆ. ದಾಸಪ್ಪ ಭಯಸ್ಥನೂ, ಲೋಕ ವ್ಯವಹಾರದಲ್ಲಿ ದಡ್ಡನೂ ಆಗಿದ್ದನು. ಅವನಿಗೆ ಓದಲು, ಬರೆಯುವುದಿರಲಿ ಅಂಕಿ ಸಂಖ್ಯೆಗಳೂ ಸೈತ ಗೊತ್ತಿರಲಿಲ್ಲ. ಪೀಚಲು ದೇಹದ ಅವನು ದಪ್ಪ ಅಟ್ಟೆಯ ಮೆಟ್ಟುಗಳನ್ನು ಕಷ್ಟಪಟ್ಟು ಎತ್ತಿಡುತ್ತಾ ಓಡಾಡುತ್ತಿದ್ದನು. ತೋಟದವರು ಕೊಟ್ಟ ದುಡ್ಡನ್ನು ತನ್ನ ಯಜಮಾನರಿಗೆ ಮುಟ್ಟಿಸುವುದು ಸಹ ಅವನಿಗೆ ಕಷ್ಟದ ಕೆಲಸವಾಗಿತ್ತು.

ನೊಣವಿನಕೆರೆಯ ಬಸ್ಟಾಂಡಿನ ಬಳಿಯಿದ್ದ ಪಶು ಚಿಕಿತ್ಸಾಲಯಕ್ಕೆ ಹಿಂದೆ ಮುಂದೆ ಬೇಜಾನ್ ಜಾಗವಿತ್ತು. ಆಸ್ಪತ್ರೆಯ ಕಾಂಪೌಂಡ್ ಒಳಗೆ ನೂರಾರು ಕತ್ತೆಗಳು ಅಲ್ಲಲ್ಲಿ ಜೂಗರಿಸುತ್ತ ನಿಂತವು. ಕುರಿ, ಮೇಕೆಗಳಾದರೆ ಕಾಂಪೌಂಡ್ ತುಂಬ ಓಡಾಡುತ್ತ ಲೇವಡಿ ಮಾಡುತ್ತವೆ. ಆದರೆ ಕತ್ತೆಗಳಲ್ಲಿ ಆ ಪ್ರಶ್ನೆಯೇ ಇಲ್ಲ. ದಾಸಪ್ಪ ಸಾರ್ ಈ ಹೆಣ್ಗತ್ತೆ ನೋಡಿ ವಸೀಯ. ಬೆಳಿಗ್ಗಿಂದ ತಿಣುಕ್ತೈತೆ. ಮರಿ ಮಾತ್ರ ಈಚಿಕ್ ಬರ್ತಿಲ್ಲ ಎಂದ.
ಐದು ವರ್ಷ ಪಶು ವೈದ್ಯಕೀಯ ಓದಿ, ಮತ್ತೈದು ವರ್ಷ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರೂ ನಾನೆಂದೂ ಕತ್ತೆಗಳ ಮುಟ್ಟಿರಲಿಲ್ಲ, ಚಿಕಿತ್ಸೆ ನೀಡಿರಲಿಲ್ಲ. ಇದೇ ಓಂ ಪ್ರಥಮ ಅದೂ ಡಿಸ್ಟೋಕಿಯ(ಹೆರಿಗೆಯಲ್ಲಿ ಅಡಚಣೆಯಾಗಿರುವುದು)! ಹೆರಿಗೆ ಮಾಡಿಸಲು ನಾನು ಕತ್ತೆಯ ಹಿಂದೆಯೇ ನಿಲ್ಲಬೇಕಿತ್ತು. ಅದರ ಯೋನಿ ದ್ವಾರದಲ್ಲಿ ಕೈ ಹಾಕಿ ಒಳಗಿರುವ ಕತ್ತೆ ಮರಿಯ ಸ್ಥಿತಿಗತಿಗಳ ಪರೀಕ್ಷಿಸಬೇಕಿತ್ತು. ಗರ್ಭಚೀಲದೊಳಗಿನ ಮರಿಯ ತಲೆ ಕಾಲುಗಳ ಅಂಗವಿನ್ಯಾಸ ಸರಿಪಡಿಸಿ ಹೊರಗೆ ತೆಗೆಯಬೇಕಾಗಿತ್ತು.
ಬೆದೆಯ ಸಮಯದಲ್ಲಿಯೇ ಬೆನ್ನು ಹತ್ತಿದ ಗಂಡು ಕತ್ತೆಗಳಿಗೆ, ಹೆಣ್ಣು ಕತ್ತೆಗಳು ಮುಖ ಮಾರೆ ನೋಡದೆ ಎರಡೂ ಕಾಲೆತ್ತಿ ಝಾಡಿಸುವುದನ್ನು ನೋಡಿದ್ದೆ. ಕತ್ತೆಗಳು ಕಂಡ ಕೂಡಲೆ ಬೆನ್ನು ಹತ್ತುತ್ತಿದ್ದ ಬೀದಿಯ ನಾಯಿಯೊಂದಕ್ಕೆ ಒಂದು ಕತ್ತೆ ಯಾವ ರೀತಿ ಕಾಲು ಝಾಡಿಸಿತ್ತೆಂದರೆ ನಾಯಿಯ ಕೆಳ ದವಡೆಯೇ ಕಿತ್ತು ಹೋಗಿತ್ತು! ಇದರಿಂದ ಕತ್ತೆಯ ಹಿಂದೆ ನಿಲ್ಲಲು ನನಗೆ ಭಯ ಆವರಿಸಿತು.

ಎಲ್ಲ ಪಶುವೈದ್ಯ ಸಂಸ್ಥೆಗಳಲ್ಲಿಯೂ ಒಂದು ಟ್ರೆವಿಸ್ ಇರುತ್ತದೆ. ಇದು ದನ ಎಮ್ಮೆಗಳ ನಿಯಂತ್ರಣದ ಕಟಕಟೆ. ಕಬ್ಬಿಣದ ಪೈಪಿನಿಂದ ಮಾಡಿ, ಕಾಂಕ್ರೀಟ್ ಬೆಡ್ ಹಾಕಿ ಬಿಗಿ ಮಾಡಿರುವ ಕಟಕಟೆ. ಈ ಟ್ರೆವಿಸ್ ಒಳಗೆ ಕತ್ತೆಯನ್ನು ನೂಕಿ ಪರೀಕ್ಷಿಸಲಣಿಯಾದೆ. ಹತ್ತಿರ ಹೋಗದಷ್ಟು ಕತ್ತೆ ಕೆಟ್ಟ ವಾಸನೆ ಹೊಡೆಯುತ್ತಿತ್ತು. ಅದರ ಗುದದ್ವಾರದಲ್ಲಿ ಕೈಹಾಕಿ ಮರಿ ಜೀವಂತವಾಗಿರುವುದನ್ನು ಖಚಿತಪಡಿಸಿಕೊಂಡೆ. ಆದರೆ ಟ್ರೆವಿಸ್ ಒಳಗೆ ಕತ್ತೆಯ ಹೆರಿಗೆ ಮಾಡಿಸುವುದು ಅಸಂಭವ ಎಂಬುದು ಗೊತ್ತಾಗಲು ತಡವಾಗಲಿಲ್ಲ. ಆದ್ದರಿಂದ ಕತ್ತೆಯನ್ನು ನಿಧಾನಕ್ಕೆ ಮಣ್ಣಿನ ನೆಲಕ್ಕೆ ತಳ್ಳಿಕೊಂಡು ಹೋದೆವು. ಅಲ್ಲೆಲ್ಲ ಗರಿಕೆ ಬೆಳೆದಿದ್ದರಿಂದ ನೆಲ ಮೆತ್ತಗಿತ್ತು. ಕಾಂಪೌಂಡಿನಲ್ಲಿ ಬೆಳೆದಿದ್ದ ಬೃಹತ್ ಆಕಾಶ ಮಲ್ಲಿಗೆ ಮರದ ನೆರಳು ಹಬ್ಬಿಕೊಂಡಿತ್ತು. ಅಲ್ಲೊಂದೆರಡು ಹೊಂಗೆ ಮರಗಳೂ ಇದ್ದುದರಿಂದ ತಣ್ಣಗಿತ್ತು. ದಾಸಪ್ಪ ಕತ್ತೆಯನ್ನು ನಿಧಾನಕ್ಕೆ ಮಲಗಿಸಿದ. ಸಿಬ್ಬಂಧಿವರ್ಗದವರು ಮುಂಜಾಗ್ರತಾ ಕ್ರಮವಾಗಿ ಹಿಂದಿನ ಎರಡು ಕಾಲುಗಳನ್ನೂ ಕಟ್ಟಿ ಜಗ್ಗಿ ಹಿಡಿದುಕೊಂಡಿದ್ದರು. ನಾನು ಕತ್ತೆಯ ಬಾಲ ಬುಡಕ್ಕೆ ಕುಳಿತು ಯೋನಿದ್ವಾರದಲ್ಲಿ ಕೈ ಹಾಕಿ ಪರೀಕ್ಷಿಸತೊಡಗಿದೆ. ಕತ್ತೆ ಉಚ್ಚೆ ಹೊಯ್ಯದೆ ಎಷ್ಟು ಹೊತ್ತಾಗಿತ್ತೋ ಏನೋ? ಕೂಡಲೇ ಒಂದು ಬಕೆಟ್ನಷ್ಟು ಉಚ್ಚೆ ಹೊಯ್ದ ಪರಿಣಾಮವಾಗಿ ಅಲ್ಲಿಯೇ ಕೂತಿದ್ದ ನನ್ನ ಕೈ, ಕಾಲು, ಶಟರ್ು, ಪ್ಯಾಂಟ್ಗಳೆಲ್ಲ ಭಾಗಶಃ ತೊಯ್ದು ಹೋದವು.

ಇಷ್ಟಾಗುವ ಹೊತ್ತಿಗೆ ಬಸ್ಸುಗಳಿಗೆ ಕಾಯುತ್ತಿದ್ದ ಜನರು, ವಿದ್ಯಾರ್ಥಿಗಳು ಆಸ್ಪತ್ರೆಯ ಕಡೆಗೆ ಆಕರ್ಷಿತರಾಗಿ ಆಸ್ಪತ್ರೆಯ ಕಾಂಪೌಂಡ್ ಒಳಗೆ ಬಂದು, ಸುತ್ತ ನಿಂತುಕೊಂಡು ಸರ್ಕಸ್ ತರ ಕತ್ತೆಯ ಹೆರಿಗೆ ನೋಡತೊಡಗಿದರು. ನಮ್ಮ ಆಸ್ಪತ್ರೆಯ ಸಿಬ್ಬಂದಿಯಾದ ಪಶು ಪರೀಕ್ಷಕ, ಕಾಂಪೌಂಡರ್ ಮತ್ತು ಸೇವಕ ಎಲ್ಲರೂ ಇದ್ದರು. ಸೇವಕ ಪುಟ್ಟಯ್ಯ ಜನರನ್ನೆಲ್ಲ ಕಾಂಪೌಂಡ್ ಆಚೆಗೆ ಕಳುಹಿಸುವುದು ಮತ್ತೊಂದು ಕ್ಷಣದಲ್ಲಿ ಅವರೆಲ್ಲ ವಾಪಸ್ ಬರುವುದು ನಡೆದೇ ಇತ್ತು.
ಕೆಲವು ಹುಡುಗರು ಕಾಂಪೌಂಡ್ ಮೇಲೆ ನಿಂತು ಗದರಿಸಿದಾಗ ಆಚೆ ಎಗರುವುದು, ಸುಮ್ಮನಾದ ಕೂಡಲೆ ಈಚೆ ಎಗರುವುದು ಮಾಡುತ್ತಿದ್ದರು. ಕೊನೆ ಕೊನೆಗೆ ಪುಟ್ಟಯ್ಯ ಸುಮ್ಮನಾಗಿಬಿಟ್ಟ. ಇದು ದಿನವೂ ನಡೆಯುತ್ತಿದ್ದ ನಾಟಕವೇ ಆಗಿತ್ತು. ಇವತ್ತು ಮಾತ್ರ ಕತ್ತೆ ದೆಸೆಯಿಂದ ಪ್ರೇಕ್ಷಕ ವರ್ಗ ಅಪಾರವಾಗಿ ನೆರೆದಿತ್ತು. ಕತ್ತೆ ಉಚ್ಚೆ ಹುಯ್ದು ಕೂಡಲೆ ಮಕ್ಕಳೆಲ್ಲ ಬಿದ್ದು ಬಿದ್ದು ನಗುವುದು, ದೊಡ್ಡವರು ಬೈಯ್ಯೋದು, ಅಲ್ಲೊಬ್ಬ ಇಲ್ಲೊಬ್ಬ ಬೀಡಿ ಸೇದೋದು, ಕ್ಯಾಕರಿಸಿ ಉಗಿಯೋದು ಇತ್ಯಾದಿ ನಡೆದೇ ಇತ್ತು.

ಕತ್ತೆಯ ಕಣ್ಣಲ್ಲಿ ಭಯ, ನೋವು ತುಂಬಿಕೊಂಡಿದ್ದವು. ಕತ್ತೆಯು ನೋವಿಗೂ, ಸುಸ್ತಿಗೂ ನಾವೇಳಿದಂತೆ ಕೇಳುತ್ತಿತ್ತು. ದಾಸಪ್ಪನ ಕಣ್ಣಲ್ಲಿ ಒಂದು ಹನಿ ನೀರು ಉರುಳಿ ಬಿತ್ತು. ಯಾವಾಗದರೂ ಹಿಂಗಾಗಿತ್ತ ದಾಸಪ್ಪ? ಎಂದೆ. ಇಲ್ಲ ಕಣೀ ಸಾ. ಯಾವತ್ತೂ ಇಲ್ಲ. ಇವತ್ತೇ ಹಿಂಗೆ. ಬಲೊಳ್ಳೆ ಕತ್ತೆ ಸಾ ಇದು ಎಂದ. ಆಸ್ಪತ್ರೆಯ ಮೆಟ್ಟಿಲ ಮೇಲೆ ಕುಳಿತವನೊಬ್ಬ ಎಪ್ಪತ್ತೆಂಬತ್ತು ರೂಪಾಯಿಗೆ ಒಂದು ಕತ್ತೆ ಸಿಗುತ್ತೆ, ಅದಕ್ಯಾಕೆ ಇಷ್ಟು ವ್ಯಥೆ ಪಡ್ತೀರಿ? ಎಂದ.

ಉಚ್ಚೆಯಿಂದ ಗಬ್ಬು ವಾಸನೆ ಹೊಡೆಯುತ್ತಿದ್ದ ನನ್ನ ಶರ್ಟನ್ನು ಬಿಚ್ಚಿಡುವಷ್ಟರಲ್ಲಿ ಕತ್ತೆಯನ್ನು ಪರೀಕ್ಷಿಸಿದ ಪಶು ಪರೀಕ್ಷಕರು ಸಾರ್ ಮರೀಗೆ ತಲೇನೇ ಇದ್ದಂಗೆ ಕಾಣಲ್ಲ ಸಾ ಅಂದ್ರು. ಗಾಬರಿಯಲ್ಲಿ ಹಾಗಂದದ್ದೇ ತಡ ನೂರಾರು ಜನ ಆಂ! ತಲೇನೇ ಇಲ್ವ? ದೇವ್ರಾಟ! ಮುಂತಾಗಿ ಉದ್ಗಾರ ತೆಗೆದರು. ಸುಮ್ನಿರ್ರಯ್ಯ ಎಂದು ಕೂಗಿದ ಪುಟ್ಟಯ್ಯ.

ಆಸ್ಪತ್ರೆಯ ಸುತ್ತಲೂ ಜಾಗವಿದ್ದುದರಿಂದ ಒಂದು ಬ್ಯಾಡ್ಮಿಂಟನ್ ಕೋರ್ಟ್ ಮಾಡಿಕೊಂಡು ನಾವೊಂದಷ್ಟು ಗೆಳೆಯರು ದಿನವೂ ಬೆಳಿಗ್ಗೆ, ಸಾಯಂಕಾಲ, ಅವಕಾಶವಾದಾಗ ಆಟ ಆಡುತ್ತಿದ್ದೆವು. ನಮ್ಮೆಲ್ಲರ ಬ್ಯಾಟು, ಷಟಲ್ ಕಾಕು, ಟೀ ಶರ್ಟು ಎಲ್ಲವನ್ನೂ ಆಸ್ಪತ್ರೆಯಲ್ಲಿಯೇ ಇಟ್ಟಿರುತ್ತಿದ್ದೆವು. ಈಗ ಆ ಟೀ ಶರ್ಟನ್ನು ಏರಿಸಿಕೊಂಡು ಕತ್ತೆ ಚಿಕಿತ್ಸೆಗೆ ತಯಾರಾದೆ.

ಯೋನಿಯಲ್ಲಿ ಕೈ ಹಾಕಿ ಒಳಗಿನ ಮರಿಯನ್ನು ಪರೀಕ್ಷಿಸಿದೆ. ಪಶು ಪರೀಕ್ಷಕರು ಹೇಳಿದ್ದು ನಿಜವಾಗಿತ್ತು. ಯಾಕೆಂದರೆ ಸಾಮಾನ್ಯವಾಗಿ ಜಾನುವಾರುಗಳಲ್ಲಿ ಹೆರಿಗೆಯಾಗುವಾಗ ಮೊದಲು ತಲೆ ಮತ್ತು ಮುಂದಿನ ಕಾಲುಗಳು ಯೋನಿ ದ್ವಾರದಿಂದ ಹೊರಬರುತ್ತವೆ. ಅಂಥ ಹೆರಿಗೆಗಳಲ್ಲಿ ಗರ್ಭಚೀಲದಲ್ಲಿ ಕೈ ಹಾಕಿದರೆ ಮೊದಲಿಗೇ ತಲೆ ಸಿಗುತ್ತದೆ. ಇದಕ್ಕೆ ಮುಮ್ಮುಖ ಹೆರಿಗೆಯೆನ್ನಬಹುದು. ಆದರೆ ಪ್ರಸ್ತುತ ಹೆರಿಗೆಯಲ್ಲಿ ಮರಿ ಗರ್ಭಚೀಲದಿಂದ ಹಿಂದು ಮುಂದಾಗಿ ಹೊರಬರತೊಡಗಿದ್ದರಿಂದ ನಮ್ಮ ಸಿಬ್ಬಂದಿಗೆ ಮರಿಯ ತಲೆ ಎಟುಕಿರಲಿಲ್ಲ. ಇದಕ್ಕೆ ಹಿಮ್ಮುಖ ಹೆರಿಗೆಯೆನ್ನಬಹುದು. ಅದಕ್ಕೆ ಸಿಬ್ಬಂದಿಯವರು ಆಶ್ಚರ್ಯದಿಂದಲೂ, ಗಾಬರಿಯಿಂದಲೂ ‘ಸಾರ್ ಕತ್ತೆ ಮರಿಗೆ ತಲೆಯೇ ಇಲ್ಲ’ ಎಂದು ಕೂಗಿದ್ದು.

ಮುಂದಿನದೆಲ್ಲ ಸುಲಭವಿತ್ತು. ಹೆರಿಗೆಯ ಕ್ರಿಯೆ ಪ್ರಾರಂಭವಾಗಿ ಬಹಳ ಹೊತ್ತಾದುದರಿಂದ ಗರ್ಭಚೀಲವು ಒದ್ದೆಯಾಗಿಯೂ, ಲೋಳೆಲೋಳೆಯಾಗಿಯೂ ಇರದೆ ಸ್ವಲ್ಪ ಒಣಗಿದಂತಿತ್ತು. ಕೈಯಿಂದ ಸ್ವಲ್ಪ ಒತ್ತಡ ಹಾಕಿ ಕಾಲುಗಳ ಎಳೆದದ್ದೇ ತಡ ಮೊದಲು ಹಿಂದಿನ ಕಾಲುಗಳು, ದೇಹ, ಆಮೇಲೆ ಮುಂದಿನ ಕಾಲುಗಳು ಮತ್ತು ತಲೆ ಹೊರಬಂದವು. ನೆರೆದಿದ್ದ ಜನರು ‘ಶಿವ ಶಿವ’ ಎಂದರು. ಕತ್ತೆಗೆ ನಂಜು ಮತ್ತು ನೋವು ನಿವಾರಕ ಇಂಜೆಕ್ಷನ್ನು ಕೊಟ್ಟು ಗರ್ಭಚೀಲದಲ್ಲಿ ಆಂಟಿಬಯೋಟಿಕ್ ಮಾತ್ರೆಗಳನ್ನು ಇಟ್ಟೆ. ಪುಟ್ಟಯ್ಯ ಕತ್ತೆಗೆ ಕುಡಿಯಲು ಒಂದು ಬಕೆಟ್ ನೀರಿಟ್ಟನು. ಕತ್ತೆ ಎದ್ದದ್ದೇ ಮರಿಯನ್ನು ನೆಕ್ಕತೊಡಗಿತು. ಕತ್ತೆ ಮರಿ ಬಹಳ ಮುದ್ದಾಗಿತ್ತು. ಆಸ್ಪತ್ರೆಯಿಂದ ಒಂದು ಹಿಂಡು ಜನರು ಸಿನಿಮಾ ಬಿಟ್ಟಂತೆ ಹೊರಹೊರಟರು. ಅದರಲ್ಲೊಬ್ಬ ಪುಣ್ಯ ಬರುತ್ತೆ ಕಣ್ಲ ದನೀನ ಡಾಕ್ಟ್ರಿಗೆ ಎಂದ. ಮತ್ತೊಬ್ಬ ಪುಣ್ಯ ಇದ್ದೋರ್ಗೆ ಮಾತ್ರ ಈ ಕೆಲ್ಸ ಸಿಗೋದು, ಅದು ತಿಳ್ಕ ಎಂದ.

LEAVE A REPLY

Please enter your comment!
Please enter your name here