ರಾಮನಗರದಲ್ಲಿ ತೋಟಗಾರಿಕಾ ಬೆಳೆಯಾಗಿ ಅತೀ ಹೆಚ್ಚು ಬೆಳೆಯುವುದು ಮಾವು. ಆದರೆ ನಮ್ಮ ಸಾಂಪ್ರದಾಯಿಕ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾವಾಗಲೂ ರೈತನಿಗೆ ಬೆಳೆ ಬೆಳೆಯಲು ಬೇಕಾದ ಖರ್ಚಿನದ್ದೇ ಚಿಂತೆ ಮತ್ತೆ ಬೆಳೆ ಬಂದ ಮೇಲೆ ಸೂಕ್ತ ಬೆಲೆ ಸಿಗದೇ ಪರದಾಡಬೇಕಾದ ಸ್ಥಿತಿ ಈ ತೊಂದರೆಗಳು ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆಯುವ ರೈತರನ್ನೂ ಹೊರತುಪಡಿಸಿಲ್ಲ.
ಎಲ್ಲ ಒಳಸುರಿಗಳು ದುಬಾರಿಯಾದ ಈ ಸಂದರ್ಭದಲ್ಲಿ ರೈತ ಮತ್ತು ಗ್ರಾಹಕರು ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಮಾರುಕಟ್ಟೆ ನಿರ್ಮಾಣ ಮಾಡಲು ಸಾದ್ಯವೇ? ಅದರಲ್ಲೂ ವಿಷಮುಕ್ತ ಮಾವು ಹಣ್ಣನ್ನು ಗ್ರಾಹಕ ತನಗೆ ಎಲ್ಲಿ ಸಿಗುತ್ತದೆ ಮತ್ತು ರೈತನಿಗೆ ಕೊಯ್ಲು ಪೂರ್ವದಲ್ಲಿ ಬೆಳೆಯಲು ಬೇಕಾದ ಖರ್ಚನ್ನು ನಿಬಾಯಿಸಲು ಮತ್ತು ಬೆಳೆ ಬಂದಾಗ ಅದನ್ನು ಒಮ್ಮಗೇ ಯಾರಿಗೆ ತಲುಪಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಶಿಷ್ಟ ಪ್ರಯತ್ನ ನಡೆದಿದೆ.
ರಾಮನಗರದ “ತೆನೆ ರೈತ ಉತ್ಪಾದಕರ ಕಂಪೆನಿಯ ತೆನೆ ಸಾವಯವ ಕೃಷಿಕರ ಬಳಗ” ದಿಂದ ಗ್ರಾಹಕರಿಗೆ ಮಾವಿನ ಮರ ದತ್ತು ಕೊಡುವ ಯೋಚನೆ ಬಂದು ಒಂದು ಮಾವಿನ ಹಣ್ಣಿನ ಸೀಸನ್‌ನಲ್ಲಿ ಮಾರುಕಟ್ಟೆ ಕಂಡುಕೊಂಡಿರುವ ಕುರಿತ ಈ ಸಣ್ಣ ವರದಿ ಮತ್ತು ಈ ವರ್ಷವೂ ಈ ಯೋಜನೆಯ ಮುಂದೂಡಿಕೆ ಕುರಿತ ಮಾಹಿತಿ. ಜೊತೆಗೆ ಬೇರೆ ರೈತ ಉತ್ಪಾದಕ ಕಂಪೆನಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಲು ಒಂದು ಅವಕಾಶವಾಗಬಲ್ಲದೇ.
ತೆನೆ ಕಂಪೆನಿಯ ನಿರ್ದೇಶಕರಾದ ರಾಮನಗರ ತಾಲ್ಲೂಕಿನ ನಿಜಯಪ್ಪನ ದೊಡ್ಡಿ ಸುರೇಂದ್ರ ಎನ್ ಆರ್ ಸುಂದರವನ, ಪುನೀತ್ ಗೌಡ. ತೆನೆ ಕಂಪೆನಿ CEO ರಶ್ಮಿಯವರ ಮನದಲ್ಲಿ ಬಂದ ಯೋಜನೆಯೇ ಮಾವಿನ ಮರ ದತ್ತು ಯೋಜನೆ.
ಯೋಜನೆಯ ಕುರಿತ ತೆನೆ ಕಂಪೆನಿಯ ಸುರೇಂದ್ರರವರೊಂದಿಗೆ ಮಾತನಾಡಿದಾಗ ಅವರು ಹೇಳಿದ್ದು ಮುಂದಿದೆ…
ನಮ್ಮ ತೆನೆ ರೈತ ಉತ್ಪಾದಕ ಕಂಪೆನಿಯಿಂದ ಈವರೆಗೂ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಹಲವಾರು ಪ್ರಯೋಗಗಳನ್ನು ಈ ವರೆಗೂ ಮಾಡಿದ್ದೇವೆ ಈ ಹಿಂದೇ ಸಾವಯವ ತರಕಾರಿಗಳನ್ನು ಗ್ರಾಹಕರ ಮನೆಗೇ ತಲುಪಿದ್ದೇವೆ. ಮಾವು ಮೇಳ ಮಾಡೀ ತೋಟಕ್ಕೆ ಬಂದು ಗ್ರಾಹಕರು ತಮಗೇ ಬೇಕಾದ ಹಣ್ಣುಗಳನ್ನು ಕಾಯ್ದುಕೊಳ್ಳಲು ಅವಕಾಶ ಮಾಡಿದ್ದೆವು. ಅದರ ಮುಂದುವರೆದ ಭಾಗವೇ ಈ ಮಾವಿನ ಮರ ದತ್ತು ಯೋಜನೆ ಸರಳವಾಗಿ ಹೇಳುವುದಾದರೆ ಸಾವಯವದದಲ್ಲಿ ಮಾವನ್ನು ಬೆಳೆಯುವ ರೈತರಿಗೆ ಕೊಯ್ಲು ಪೂರ್ವದಲ್ಲಿ ಕೃಷಿ ಚಟುವಟಿಕೆಗಳ ಖರ್ಚಿಗೆ ಹಣ ಬೇಕಿದೆ ಜೊತೆಗೆ ಒಮ್ಮಲೇ ಬರುವ ಬೆಳೆಯನ್ನು ಯಾರಿಗೆ ಮಾರಾಟ ಮಾಡುವುದು ಜೊತೆಗೆ ಬೇರೆ ಬೇರೆ ಭಾಗಗಳಲ್ಲಿರುವ ಗ್ರಾಹಕರಿಗೆ ವಿಷಮುಕ್ತ ಮತ್ತು ರಾಸಾಯನಿಕ ಮುಕ್ತವಾಗಿ ಬೆಳೆಯುವ ಮಾವಿನ ಹಣ್ಣು ಬೇಕಿದೆ. ಯಾಕೇಂದ್ರೆ ಇಂದು ಮಾರುಕಟ್ಟೆಯಲ್ಲಿ ಸಾವಯವದ ಲೇಬಲ್‌ನಲ್ಲಿರೋ ಎಲ್ಲಾ ಪದಾರ್ಥಗಳ ಬಗ್ಗೆ ಗ್ರಾಹಕರಿಗೆ ಸಾವಯವದಲ್ಲಿ ಬೆಳೆದದ್ದು ಎನ್ನುವ ನಂಬಿಕೆ ಬರುತ್ತಿಲ್ಲ.
ಹಾಗಾಗಿಯೇ ತೆನೆ ಸಾವಯವ ಕೃಷಿಕರ ಬಳಗದ ನಂಜುಂಡಸ್ವಾಮಿ, ಗಿರೀಶ್, ಪ್ರಕಾಶ್, ಸತೀಶ್ ಮತ್ತು ನನ್ನನ್ನೂ ಸೇರಿದಂತೆ ಸಾವಯವದಲ್ಲಿ ಮಾವು ಬೆಳೆಯುವ ಸದಸ್ಯರು ಮತ್ತು ನಿರ್ದೇಶಕರು ಮಾತನಾಡಿ ನಿರ್ಧಾರ ಮಾಡಿ ಈ ಗ್ರಾಹಕ ಮತ್ತು ರೈತನ ಪರಸ್ಪರ ಸಹಕಾರ ಯೋಜನೆ ಮಾಡಿದೆವು.
ಈ ಯೋಜನೆಯಂತೆ ಗ್ರಾಹಕರು ತೆನೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು 1000ರೂ ಕೊಟ್ಟರೆ 1 ಮಾವಿನ ಮರ ದತ್ತು ಕೊಡುತ್ತಾರೆ ಜೊತೆಗೆ ಆ ಮರ ಇರುವ ಸ್ಥಳ, ಅದರ ಫೋಟೊ ಮತ್ತು ನೋಂದಣಿ ಸರ್ಟಿಫಿಕೇಟ್‌ನ್ನು ಕೊಟ್ಟೆವು ಜೊತೆಗೆ ಆ ಮರಕ್ಕೆ ಗ್ರಾಹಕರೇ ಸೂಚಿಸಿದ ಹೆಸರನ್ನು ಇಟ್ಟೆವು. ಪ್ರಾಯೋಗಿಕವಾಗಿ ಕಳೆದ ಸಲ 250 ಮರಗಳನ್ನು ಮಾತ್ರ ದತ್ತು ಸ್ವೀಕಾರ ಯೋಜನೆಯಲ್ಲಿ ಅಳವಡಿಸಲಾಗಿತ್ತು. ಗ್ರಾಹಕರಿಗೆ ಅವರು ತಿನ್ನುವ ಮಾವು ಎಲ್ಲಿಂದ ಬರುತ್ತಿದೆ ಮತ್ತು ಹೇಗೆ ಬೆಳೆದು ಹಣ್ಣು ಮಾಡುತ್ತಾರೆ ಎನ್ನುವ ಅರಿವು ಮೂಡಿದ್ದು ಒಂದು ಸಂತೋಷದ ವಿಚಾರ.
ಮನೆ ಬಾಗಿಲಿಗೆ ರಾಸಾಯನಿಕ ಮುಕ್ತ ಹಣ್ಣು ತಲುಪಿಸಿದೆವು
ಮಾವಿನ ಮರ ದತ್ತು ಸ್ವೀಕಾರ ಮಾಡುವ ಗ್ರಾಹಕರು ಕಳೆದ ಬಾರಿ ಪ್ರಾಯೋಗಿಕವಾಗಿ ಒಂದು ಸಾವಿರ ರೂಗಳನ್ನು ಪಾವತಿ ಮಾಡಿದ್ದರು. ದತ್ತು ಸ್ವೀಕರಿಸಿದ ಮರದಲ್ಲಿ ಬೆಳೆಯುವ ರಾಸಾಯನಿಕ ಮುಕ್ತವಾಗಿರುವ ಮಾವಿನಹಣ್ಣನ್ನು 10ಕೆ.ಜಿ.ಯಂತೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೂ ಉತ್ತಮ ಪ್ರತಿಕ್ರಿಯೆ ಬಂದಿದೆ.. ಪ್ರಾರಂಭಿಕ ಹಂತದಲ್ಲಿ ಬೆಂಗಳೂರು, ಮಂಡ್ಯ ಮತ್ತು ಮೈಸೂರು ನಗರದ ಗ್ರಾಹಕರಿಗೆ ಮಾತ್ರ ದತ್ತು ಸ್ವೀಕಾರಕ್ಕೆ ಅವಕಾಶ ನೀಡಲಾಗಿತ್ತು ಆದರೂ ಬೇರೆ ಬೇರೆ ಜಿಲ್ಲೆಗಳಿಂದಲೂ ನೋಂದಣಿ ಮಾಡಿಕೊಂಡಿದ್ದರಿಂದ ಸುಮಾರು ಅರ್ಧ ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ಗ್ರಾಹಕರಿಗೆ ರಾಸಾಯನಿಕ ಮುಕ್ತ ಹಣ್ಣುಗಳನ್ನು ತಲುಪಿಸಿದೆವು ಜೊತೆಗೆ “5 ಟನ್” ವಿಷ ರಹಿತ ಮಾವನ್ನು ಕಳೆದ ಸಲ ಅಕ್ಷಯಕಲ್ಪಕ್ಕೆ ಮಾರಾಟ ಮಾಡಿದ್ದೇವೆ..
ಈ ವರ್ಷದ ಗುರಿ
ಕಳೆದ ವರ್ಷ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಫಸಲು ಜಾಸ್ತಿ ಇರಲಿಲ್ಲ ಹಾಗಾಗಿ ಬೇರೆ ಬೇರೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಬೇಡಿಕೆ ಬಂದರೂ ಕೊಡಲಾಗಿರಲಿಲ್ಲ. ಹಾಗಾಗಿಯೇ ಈ ಬಾರಿ ನಮ್ಮಲ್ಲಿನ ಸಾವಯವ ವಿಧಾನದಲ್ಲಿ ಬೆಳೆಯುವ ರೈತರನ್ನು ಗುರುತಿಸಿ ಮತ್ತು ಬೇರೆ ರೈತರಿಗೆ ಸಾವಯವ ವಿಧಾನದಲ್ಲೇ ಬೆಳೆಯುವ ಬಗ್ಗೆ ತರಬೇತಿಗಳನ್ನು ಮಾಡಿದ್ದೇವೆ ಈ ಬಾರಿ 1000 ಬೇರೇ ಬೇರೇ ತಳಿಯ ಮರಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದೇವೆ.
ಈ ಬಾರಿ ವಿಭಿನ್ನವಾಗಿ 10ಕೆಜಿ ತೋತಾಪುರಿ ಸೆಂದುರ ಮತ್ತು ಮಿಕ್ಸ್ 1000 ಬಾದಾಮಿ 10 ಕೆಜಿ 1500, ರಸಪೂರಿ 1500, ಮಲಗೋಬ 1500, ಸಕ್ಕರೆ ಗುತ್ತಿ 2000, ತೋತಾಪುರಿ 1000, ಸೇಂದೂರ 1000, ಈಗ ಬೆಂಗಳೂರು ಬಿಡದಿ ರಾಮನಗರ ಚನ್ನಪಟ್ಟಣ ಹೊರತು ಪಡಿಸಿ ಬೇರೆ ಕಡೆ ಸಗಾಣಿಕೆ ವೆಚ್ಚ ಪ್ರತೇಕ
ನಿಗಧಿತ ದಿನದಂದು ಗ್ರಾಹಕರೇ ನೇರವಾಗಿ ತೋಟಕ್ಕೆ ಬಂದು ಅವರೇ ಮಾವು ಕೊಯ್ಲು ಮಾಡಿಕೊಂಡು ಹೋಗಬಹುದು ಈ ಸಾಲಿನ ನೋಂದಣಿಯನ್ನು ಸಂಕ್ರಾಂತಿ ಹಬ್ಬ ಕಳೆದ ಮೇಲೆ ಶುರು ಮಾಡುತ್ತಿದ್ದೇವೆ.
2023ರಿಂದ ನಿರಂತರವಾಗಿ ಬೆಂಗಳೂರು ಗ್ರಾಹಕರಿಗೆ ತೆನೆ ರೈತ ಉತ್ಪಾದಕರ ಕಂಪೆನಿಯಿಂದ “ನಾಗರಬಾವಿ ಅಂಬೇಡ್ಕರ್ ಕಾಲೇಜು ಹತ್ತಿರ ರೈತ ಬಜಾರ್ Raithu Bazar , 80 Feet main Road, Near Croma Store, Nagarbhavi, Bangalore 560072” ಆರಂಭ ಮಾಡುತ್ತಿದ್ದು ನಿರಂತರವಾಗಿ ಸಾವಯವ ಉತ್ಪನ್ನಗಳು ದೊರೆಯುತ್ತವೆ
ಮಧ್ಯವರ್ತಿಗಳಿಲ್ಲದ ರೈತ ಮತ್ತು ಗ್ರಾಹಕ ನೇರ ವ್ಯವಸ್ಥೆ–
ಮಾವಿನ ಮರವನ್ನು ದತ್ತು ಸ್ವೀಕರಿಸಿ ಹಣ್ಣು ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಜೊತೆಗೆ ರೈತ ಉತ್ಪಾದಕ ಸಂಘಟನೆಯೊಂದಿಗೆ ನೇರ ಸಂಪರ್ಕ ಇರಲಿದೆ. ಹಣ ಪಾವತಿಗೂ ಆನ್‌ಲೈನ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗ್ರಾಹಕರು ಮಾವಿನ ಹಣ್ಣಿಗಾಗಿ ಮಾರುಕಟ್ಟೆಗಳಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.
ಮಾವು ಬೆಳೆಗಾರ ರೈತರಿಂದ ನೇರವಾಗಿ ಗ್ರಾಹಕರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಮಾವಿನ ಮರದ ದತ್ತು ಸ್ವೀಕಾರ ಕಾರ್ಯಕ್ರಮ ಪರಿಚಯಿಸಲಾಗಿದೆ. ದತ್ತು ಸ್ವೀಕಾರದಿಂದ ರೈತರು ಬೆಳೆಯುವ ಮಾವು ಕೃಷಿಯ ಕುರಿತು ಮಾಹಿತಿ ಲಭ್ಯವಾಗಲಿದೆ. ಜತೆಗೆ, ಸಾವಯವ ಮಾವು ಲಭ್ಯವಾಗಲಿದೆ.
ಒಟ್ಟಾರೆ ವಿಷ ರಹಿತ ಮಾವು ಪೂರೈಕೆಯ ಕಾರ್ಯದ ಗುಣಮಟ್ಟ ಕಾಯ್ದುಕೊಳ್ಳುವ ಪ್ರಕ್ರಿಯೆ ಹೇಗಿತ್ತು… ?
ಮೊದಲಿಗೆ ನಮ್ಮ ತೆನೆ ಕಂಪೆನಿಯ ಶೇರುದಾರರಾದ ರೈತರನ್ನು ಮಾತ್ರವೇ ನಾವು ಆಯ್ಕೆ ಮಾಡಿಕೊಂಡಿದ್ದೆವು. ಅವರಿಗೆ ರಾಸಾಯನಿಕ ಬಳಸದೇ ಹೇಗೆ ಮಾವು ಬೆಳೆಯುವುದು ಎನ್ನುವ ತರಬೇತಿಗಳನ್ನು ಕೊಟ್ಟಿದ್ದೆವು. ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಗೋಕೃಪಾಮೃತ, ಜೀವಾಮೃತ, ಮುಂತಾದ ಸಹಜ ಗೊಬ್ಬರಗಳು ಮತ್ತು ಜೈವಿಕ ಕೀಟ ನಿಯಂತ್ರಣ ವ್ಯವಸ್ಥೆಗಳಾದ ಜೈವಿಕ ಟಾನಿಕ್‌ಗಳನ್ನು ತಯಾರು ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು. ಜೊತೆಗೆ ಕಂಪೆನಿಯಿಂದ ಫೆರೆಮೆನ್ ಟ್ರ್ಯಾಪ್‌ಗಳನ್ನು ಕೊಡಲಾಗಿತ್ತು. ಅವರೊಂದಿಗೆ ಮೊದಲೇ ಕರಾರುಗಳನ್ನು ಮಾಡಕೊಂಡಿದ್ದೆವು.
ಗುಣಮಟ್ಟಕ್ಕೆ ಆಧ್ಯತೆ ತುಂಬಾ ಗುಣಮಟ್ಟದ ಕಾಯಿಗಳನ್ನು ಕೊಯ್ಲು ಮಾಡಿ ಅವನ್ನು ಹಣ್ಣು ಮಾಡುವ ಕುರಿತ ತರಬೇತಿ ಕೊಟ್ಟಿದ್ದೆವು ಮತ್ತು ಯಾರು ಹಣ್ಣು ಮಾಡಿಕೊಡಲು ತಯಾರಿಲ್ಲವೋ ಅವರ ಬಳಿ ಚೆನ್ನಾಗಿ ಬಲಿತ ಕಾಯಿಗಳನ್ನು ಖರೀದಿಸಿ ಅವನ್ನು ರಾಮನಗರದ ನಮ್ಮ ತೆನೆ ಕಛೇರಿಯಲ್ಲಿಯೇ ಹಣ್ಣು ಮಾಡಿ ಅಲ್ಲಿಂದ ಗ್ರಾಹಕರಿಗೆ ತಲುಪಿಸಿದೆವು.
ವಹಿವಾಟು
ಕಳೆದ ಸಲ ಸುಮಾರು 15 ಲಕ್ಷದಷ್ಟು ವಹಿವಾಟು ಆಗಿತ್ತು. ಅದರಲ್ಲಿ ಸುಮಾರು 60% ರೈತರಿಗೆ ಮತ್ತು 20% ಸಾಗಾಣೆ ಮತ್ತಿತರೆ ವೆಚ್ಚಕ್ಕೆ ಮತ್ತು 20% ಹಣ್ಣು ಡ್ಯಾಮೇಜ್ ಆಗಿ ಸ್ವಲ್ಪ ನಷ್ಟ ಅನುಭವಿಸಿದೆವು. ಒಟ್ಟಾರೆ ಒಂದೊಳ್ಳೆ ಅನುಭವವಾಗಿತ್ತು.
ಸರ್ಕಾರ ಮತ್ತು ಇಲಾಖೆಗಳ ಸಹಕಾರ
ನಮಗೆ ತೊಟಗಾರಿಕೆ ಇಲಾಖೆ ಕೃಷಿ ಇಲಾಖೆ ಜಲಾನಯನ ಇಲಾಖೆ ಮತ್ತು ಜಿಲ್ಲಾಡಳಿತ ಪ್ರಚಾರ ಮಾಡಲು ಸಾಕಷ್ಟು ನೆರವು ಕೊಟ್ಟಿದ್ದರು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಮೊದಲ ನೋಂದಣಿ ಮಾಡಿಕೊಂಡಿದ್ದರು.
ಈ ಸಹಕಾರ ಇನ್ನು ಸಾಕಾಗಲ್ಲ ಯಾಕೇಂದ್ರೆ ನಾವು ಜಿಲ್ಲಾ ಮಟ್ಟದಲ್ಲಿ ಹಣ್ಣು ಮಾಡುವ ಕೇಂದ್ರ ಮತ್ತು ಬಿಸಿನೀರಿನ ಟ್ರೀಟ್‌ಮೆಂಟ್ ಘಟಕ ವನ್ನು ಸ್ಥಾಪಿಸೋಕೆ ತುಂಬಾ ವರ್ಷಗಳಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಆದರೆ ಈವರೆಗೂ ಅವ್ಯಾವುದೂ ಆಗಿಲ್ಲ ಈ ವ್ಯವಸ್ಥೆಗಳಾದರೆ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಬಹುದು. ಜೊತೆಗೆ ಸಾಗಾಣೆ ಮತ್ತು ಸಬ್ಸಿಡಿ ದರದಲ್ಲಿ ಸರಿಯಾದ ಸಮಯಕ್ಕೆ ಕ್ರೇಟ್‌ಗಳ ವ್ಯವಸ್ಥೆ ಇವೆಲ್ಲಾ ಸಿಕ್ಕರೆ ಮಾತ್ರವೇ ರೈತನಿಗೂ ಮತ್ತು ರೈತ ಉತ್ಪಾದಕ ಕಂಪೆನಿಗಳು ಸ್ವಲ್ಪ ಲಾಭವನ್ನು ನೋಡಬಹುದು.
ಈ ವರ್ಷದ ಗುರಿ.
ಕಳೆದ ಬಾರಿ ನಿರೀಕ್ಷೆಗೂ ಮೀರಿ ಬೇಡಿಕೆ ಬಂದರೂ ಪೂರೈಸೋಕೆ ಕಷ್ಟ ಆಗಿತ್ತು ಯಾಕೆಂದ್ರೆ 250 ಮರಗಳು ಮಾತ್ರವೇ ನೋಂದಣಿಯಾಗಿದ್ದವು. ಈ ಸಲ ಸುಮಾರು 1000 ಮರಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದೇವೆ. ಜೊತೆಗೆ ಮೊದಲ ಶ್ರೇಣಿ ಹಣ್ಣು ಗ್ರಾಹಕರಿಗೆ ಪೂರೈಕೆ ಮಾಡಿದ ನಂತರ 2ನೇ ಮತ್ತು 3ನೇ ದರ್ಜೆಯ ಹಣ್ಣುಗಳನ್ನು ಗ್ರಾಹಕರಿಗೆ ಕೊಡಲು ಸಾಧ್ಯವಿಲ್ಲ. ಅವುಗಳಿಂದ ಕಳೆದ ಬಾರಿ ಮ್ಯಾಂಗೋ ಜಾಮ್ ಮತ್ತು ಮ್ಯಾಂಗೋ ಬಾರ್ ಮಾಡಿದ್ದೆವು ಈ ವರ್ಷ ಇವುಗಳ ಜೊತೆಗೇ ಮ್ಯಾಂಗೋ ವೈನ್ ಮುಂತಾದ ಮೌಲ್ಯ ವರ್ಧಿತ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ ಗ್ರಾಹಕರಿಗೆ ತಲುಪಿಸುವ ಉದ್ಧೇಶ ಇದೆ. ಈ ಸಾರಿಯ ಮಾವಿನ ಮರ ದತ್ತು ಸ್ವೀಕಾರ ಇದೇ ಸಂಕ್ರಾಂತಿಯಂದು ಶುರುವಾಗುತ್ತದೆ…
ಫೋಟೊ ಕೃಪೆ ಪ್ರಕಾಶ್. ಜೈಪುರ. ರಾಮನಗರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸುರೇಂದ್ರ ಎನ್ ಆರ್ ಸುಂದರವನ
9980807024 / 9964949649