ಲೇಖಕರು: ಕುಮಾರ ರೈತ

ದಕ್ಷಿಣ ಕನ್ನಡ ಜಿಲ್ಲೆ, ಮೂಡುಬಿದ್ರೆ ಸಮೀಪ ಜೀನೇಂದ್ರ ಹೆಗ್ಗಡೆ ಮತ್ತು ಬಾಲಕೃಷ್ಣ ಶರ್ಮ ಅವರು ಪಪ್ಪಾಯವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಅವರು ಈ ನಿಟ್ಟಿನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಯೋಜನೆ ಮಾಡಿ ಇದರ ಕೃಷಿಗೆ ಮುಂದಾದರೆ ಖಂಡಿತ ಲಾಭ ಪಡೆಯಲು ಸಾಧ್ಯ. ಸಣ್ಣ ಪ್ರಮಾಣದ ಕೃಷಿಕರೂ ಇದರ ಪ್ರಯೋಜನವನ್ನು ಅಧಿಕ ಪ್ರಮಾಣದಲ್ಲಿ ಪಡೆಯಬಹುದು ಎಂದು ಹೇಳುತ್ತಾರೆ.

ಪಪ್ಪಾಯದಲ್ಲಿ ಈಗ ಸಾಕಷ್ಟು ತಳಿಗಳು ಅಭಿವೃದ್ದಿಯಾಗಿವೆ. ಆದ್ದರಿಂದ ಎಲ್ಲ ಪ್ರದೇಶದಲ್ಲಿಯೂ ಇದನ್ನು ಬೆಳೆಯಬಹುದಾಗಿದೆ. ಈ ಹಿಂದೆ ಅಧಿಕ ಪ್ರಮಾಣದ ಮಳೆ ಬೀಳುವ ಪ್ರದೇಶಗಳಲ್ಲಿ ಇದನ್ನು ವಾಣಿಜ್ಯಾತ್ಮಕವಾಗಿ ಬೆಳೆಯಲಾಗುತ್ತಿರಲಿಲ್ಲ. ಇಂಥ ಪ್ರದೇಶದ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುವ ತಳಿಗಳು ಲಭ್ಯವಿರುವುದರಿಂದ ಇಲ್ಲಿಯೂ ಇದರ ಕೃಷಿ ವ್ಯಾಪಕವಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಮತ್ತೆ ಭಾರಿ ಮಹತ್ವ ಪಡೆದುಕೊಳ್ಳುತ್ತಿದೆ. ಇದರ ಅಗತ್ಯತೆಗಳನ್ನು ಕೃಷಿಕರು ಮತ್ತು ಗ್ರಾಹಕರು ಅರಿಯುತ್ತಿದ್ದಾರೆ. ಸಾವಯವದಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಅತ್ಯಧಿಕ ಬೇಡಿಕೆ ಇದೆ. ಈ ಪದ್ಧತಿಯಲ್ಲಿ ಪಪ್ಪಾಯ ಬೆಳೆಯುವುದರಿಂದ ಸಾಕಷ್ಟು ಲಾಭಗಳಿವೆ ಎಂದು ಇದರ ಕೃಷಿ ಮಾಡುವವರು ಅಭಿಪ್ರಾಯ ಪಡುತ್ತಾರೆ.

ಚೆನ್ನಾಗಿ ಬೆಳೆಯುವ ಅಧಿಕ ರುಚಿ ಇರುವ ತಳಿಗಳು ಲಭ್ಯವಿವೆ. ಇದು ಕೂಡ ಪಪ್ಪಾಯ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣ. ಈಗ ಲಭ್ಯ ಇರುವ ತಳಿಗಳಲ್ಲಿ ತೈವಾನ್ ರೆಡ್ ಲೇಡಿ ಹೆಚ್ಚು ಪ್ರಮಾಣದಲ್ಲಿ ಕೃಷಿಯಾಗುತ್ತಿದೆ. ಇದಕ್ಕೆ ಕಾರಣ ಹಣ್ಣಿನ ಗಾತ್ರ, ಅದರ ಆಕರ್ಷಕ ತಿರುಳು, ರುಚಿ, ಮುಖ್ಯವಾಗಿ ಬಹುತೇಕ ಎಲ್ಲ ಪ್ರದೇಶಗಳಿಗೂ ಹೊಂದಿಕೊಂಡು ಬೆಳೆಯುವ ಗುಣಗಳೇ ಕಾರಣವಾಗಿವೆ.

ಕರ್ನಾಟಕ,ಆಂಧ‍್ರ, ಗುಜರಾತ್, ಒಡಿಸ್ಸಾ, ಪಶ್ಚಿಮ ಬಂಗಾಳ,ಅಸ್ಸಾಂ, ಕೇರಳ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪಪ್ಪಾಯವನ್ನು ವಾಣಿಜ್ಯತ್ಮಕವಾಗಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಬೆಳೆಯುವ ಹಣ್ಣುಗಳಿಗೆ ವಿಶೇಷ ಬೇಡಿಕೆಯೂ ಇದೆ.  ಎರಡು ದಶಕದ ಹಿಂದೆ ಇದರ ಕೃಷಿ ಈ ಎಲ್ಲ ರಾಜ್ಯಗಳಲ್ಲಿಯೂ ಅಷ್ಟು ವ್ಯಾಪಕವಾಗಿರಲಿಲ್ಲ. ಪ್ರಸ್ತುತ ದಿನಗಳಲ್ಲಿ ಇದರ ಕೃಷಿ ಮಾಡುವಿಕೆಯ ಪ್ರಮಾಣ ವಿಸ್ತರಿಸಿದೆ.

ಪಪ್ಪಾಯ, ವೈಶಿಷ್ಟತೆ ಎಂದರೆ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾಗಿದೆ. ಇತರೇ ವಾಣಿಜ್ಯಾತ್ಮಾಕ ಹಣ್ಣಿನ ಬೆಳೆಗಳಿಗೆ ಹೋಲಿಸಿದರೆ ಇದಕ್ಕೆ ಭಾಧಿಸುವ ರೋಗಗಳು, ಕೀಟಗಳು ಕಡಿಮೆ. ಪ್ರತಿ ಹಂತದಲ್ಲಿಯೂ ಜಾಗರೂಕತೆ ವಹಿಸಿ ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ. ಖರ್ಚನ್ನು ಕಡಿಮೆ ಮಾಡಲು ಸಾವಯವ ಕೃಷಿ ಪದ್ಧತಿ ಅನುಕೂಲಕರ ಎಂಬುದು ಈ ಪದ್ಧತಿ ಅನುಸರಿಸುತ್ತಿರುವ ರೈತರ ಅನುಭವ

—————————————————————-

ಪಪ್ಪಾಯ ಸಸ್ಯಗಳ ಮತ್ತೊಂದು ವೈಶಿಷ್ಟವೆಂದರೆ ಇದರ ಕೃಷಿಗೆ ಹೆಚ್ಚು ಪ್ರಮಾಣದ ನೀರು ಅಗತ್ಯವಿಲ್ಲ. ಕಡಿಮೆ ನೀರು ನೀಡಿದರೂ ಸಾಕು. ಇದಕ್ಕಾಗಿ ಹನಿ ನೀರಾವರಿ ಪದ್ಧತಿ ಹೆಚ್ಚು ಸೂಕ್ತ. ಇದರಿಂದ ಆಗುವ ಅನುಕೂಲಗಳೆಂದರೆ ಎಲ್ಲ ಗಿಡಗಳು ಏಕ ಪ್ರಕಾರ ಎತ್ತರಕ್ಕೆ ಬೆಳೆಯುತ್ತವೆ, ಏಕ ಗಾತ್ರದ ಹಣ್ಣುಗಳು ದೊರೆಯುತ್ತವೆ. ಎಲ್ಲ ಗಿಡಗಳ ಫಸಲು ಒಂದೇ ಸಮಯದಲ್ಲಿ ಲಭ್ಯವಾಗುತ್ತದೆ. ಕೆಲವಾರು ದ್ರವ ಪೋಷಕಾಂಶಗಳನ್ನು ಹನಿ ನೀರಾವರಿ ಮುಖಾಂತರ ನೀಡಬಹುದು

——————————————————————-

ಸಾವಯವದಲ್ಲಿ ಬೆಳೆದಾಗ ಖರ್ಚು ಕಡಿಮೆಯಾಗಲು ಕಾರಣವಾಗುವ ಅಂಶಗಳೆಂದರೆ ಅಗತ್ಯ ಇರುವ ಪೋಷಕಾಂಶಗಳನ್ನು ಸ್ವತ: ತಯಾರಿಸಿಕೊಳ್ಳಬಹುದಾಗಿದೆ. ಉತ್ತಮ ಕಾಂಪೋಸ್ಟ್ ಗೊಬ್ಬರದಲ್ಲಿ ಸಸ್ಯಗಳಿಗೆ ಬೇಕಾದ ಎಲ್ಲ ಬಗೆಯ ಪೋಷಕಾಂಶಗಳು ಕೂಡ ಲಭ್ಯವಿವೆ. ಎರೆಗೊಬ್ಬರ ನೀಡಿದರೆ ಗಿಡಗಳ ಬೆಳವಣಿಗೆ ಅತ್ಯುತ್ತಮ ರೀತಿಯಲ್ಲಿ ಆಗುತ್ತದೆ. ಇದೇ ರೀತಿ ದ್ರವ ಪೋಷಕಾಂಶಗಳನ್ನು ನೀಡಬಹುದು. ಇದಕ್ಕಾಗಿ ಬಯೋ ಡೈಜೆಸ್ಟರ್ ವಿಧಾನ ಅಳವಡಿಸಿಕೊಳ್ಳಬಹುದು

ಪಪ್ಪಾಯದಲ್ಲಿ ಬೇರೆಬೇರೆ ತಳಿಗಳಿವೆ. ಇವುಗಳ ಬಗ್ಗೆಯೂ ಹೆಚ್ಚಿನ ವಿಷಯ ತಿಳಿದುಕೊಳ್ಳುವ ಹಾಗೆಯೇ ಸಸ್ಯಗಳಿಗೆ ಬಾಧಿಸುವ ರೋಗ-ಕೀಟಗಳ ಬಗ್ಗೆ ಅರಿಯುವ ಅಗತ್ಯವಿದೆ. ಹೊಸದಾಗಿ ಕೃಷಿ ಮಾಡಲು ಹೊರಟವರು ಇದರ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಳ್ಳುವುದು, ಸಸ್ಯಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅನುಸರಿಸಬೇಕಾದ ಕೃಷಿಕ್ರಮಗಳ ಬಗ್ಗೆ ತಜ್ಞರ ಮಾರ್ಗದರ್ಶನ ಪಡೆಯುವುದು ಅವಶ್ಯಕ.

ಪಪ್ಪಾಯ ಕೃಷಿಯನ್ನು ಬಹು ಜತನದಿಂದ ಮಾಡಬೇಕು. ಸಸ್ಯಗಳನ್ನು ಮಕ್ಕಳ ಹಾಗೆ ಬೆಳೆಸಬೇಕು. ಆಗಷ್ಟೆ ಅವುಗಳ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ. ಯಾವುದೇ ಒಂದು ಹಂತದಲ್ಲಿ ನಿರ್ಲಕ್ಷ್ಯ ತೋರಿದರೂ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೆಳೆಗಾರರು ಇಂಥ ನಕಾರಾತ್ಮಕ ಅಂಶಗಳಿಗೆ ಆಸ್ಪದ ನೀಡಬಾರದು.

ಬಾಲಕೃಷ್ಣ ಶರ್ಮ ಅವರು ಮತ್ತೆಮತ್ತೆ ಹೇಳುವ ಅಂಶವೆಂದರೆ ಪಪ್ಪಾಯ ಗಿಡಗಳಿಗೆ ಅವಶ್ಯಕ ಇರುವಷ್ಟೇ ಪ್ರಮಾಣದಲ್ಲಿ ನೀರು ನೀಡಬೇಕು. ಆರಂಭದಲ್ಲಿ ಇದನ್ನು ಅರಿಯದೇ ಹೋಗಿರುವುದರಿಂದ ತಮ್ಮ ತೋಟದ ಕೆಲವು ಭಾಗಗಳಲ್ಲಿನ ಪಪ್ಪಾಯ ಗಿಡಗಳ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮವಾಗಿದೆ ಎಂದು ಹೇಳುತ್ತಾರೆ.

ಈ ತೋಟದಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಲಾಗುತ್ತಿದೆ. ಇದು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ. ನಾವು ಸೇವಿಸುವ ಆಹಾರವೂ ಔಷಧ ಎಂದು ತಿಳಿದುಕೊಳ್ಳಬೇಕು. ಇದರಲ್ಲಿ ವ್ಯತ್ಯಯಗಳಾದರೆ ಆರೋಗ್ಯ ಸಮಸ್ಯೆ ಬಾಧಿಸಬಹುದು. ಅಲ್ಲದೇ ಹಣ್ಣಿನ ಬೆಳೆಗಳಿಗೆ ಸಾವಯವ ಕೃಷಿಯೇ ಸೂಕ್ತ ಎಂಬುದು ಶರ್ಮ ಅವರ ಪ್ರತಿಪಾದನೆ.

ಈ ತೋಟದಲ್ಲಿ ಬೃಹತ್ ಪ್ರಮಾಣದಲ್ಲಿ ಪಪ್ಪಾಯ ಕೃಷಿ ಮಾಡಲಾಗುತ್ತಿದೆ. ಇದರ ಮಾರುಕಟ್ಟೆಯನ್ನು ಅರಿತೇ ಈ ಕಾರ್ಯಕ್ಕೆ ಮುಂದಾಗಲಾಗಿದೆ. ಈ ಕೃಷಿಗೆ ತೊಡಗುವ ಮುನ್ನ ಶರ್ಮಅವರು ಸಾಕಷ್ಟು ಮಾಹಿತಿಗಳನ್ನು ಕ್ರೋಢಿಕರಿಸಿದ್ದಾರೆ. ಪಪ್ಪಾಯ ಕೃಷಿ ಮಾಡುತ್ತಿರುವ ಬೇರೆಬೇರೆ ಕೃಷಿಕರ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಈ ತೋಟದಲ್ಲಿ ಜಂಬಿಟ್ಟಿಗೆ ಮಣ್ಣಿದೆ. ಗಿಡಗಳನ್ನು ನಾಟಿ ಮಾಡುವುದಕ್ಕಿಂತ ಮೊದಲು ಮಣ್ಣನ್ನು ಫಲವತ್ತು ಮಾಡಲು ಸಾಕಷ್ಟು ಕ್ರಮಗಳನ್ನು ಅನುಸರಿಸಲಾಗಿದೆ. ಮಣ್ಣಿನ ಫಲವತ್ತತೆ ಮಟ್ಟ ತಿಳಿದುಕೊಂಡ ನಂತರವೇ ಗಿಡಗಳನ್ನು ನಾಟಿ ಮಾಡಲಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಮಣ್ಣಿನ ಫಲವತ್ತತೆ ವೃದ್ಧಿಸುವ ಅಂಶಗಳತ್ತ ಗಮನ ನೀಡುವುದು ಕೂಡ ಅವಶ್ಯಕವಾಗಿದೆ.

ಈ ತೋಟದಲ್ಲಿಯೇ ಪಪ್ಪಾಯಿ ನರ್ಸರಿ ಮಾಡಿ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಪಪ್ಪಾಯ ಬೀಜಗಳನ್ನು ತಂದು ಬೀಜೋಪಚಾರ ಮಾಡಿ ಪಾಲಿಥೀನ್ ಚೀಲಗಳಲ್ಲಿ ನಾಟಿ ಮಾಡಲಾಗಿದೆ. ಇದಕ್ಕೂ ಮುನ್ನ ಪಾಲಿಥೀನ್ ಚೀಲಗಳಿಗೆ ಪೋಷಕಾಂಶ ಭರಿತ ಮಣ್ಣನ್ನು ಭರ್ತಿ ಮಾಡಲಾಗಿದೆ. ಹೀಗೆ ಮಾಡಿದ್ದು ಸಹ ಖರ್ಚಿನ ಪ್ರಮಾಣವನ್ನು ತಗ್ಗಿಸಿದೆ.

ಪಪ್ಪಾಯ ಕೃಷಿ ಮಾಡಲು ಹೊರಟಾಗ ಗಿಡಗಳು ಸಮೃದ್ಧವಾಗಿ ಬೆಳೆದು ಅತ್ಯುತ್ತಮ ಫಸಲುನ್ನು ನೀಡುವ ಮಾದರಿಗಳನ್ನು ಅನುಸರಿಸಬೇಕು. ಇದಕ್ಕಾಗಿ ವೈಜ್ಞಾನಿಕ ಮಾದರಿ ಅಳವಡಿಸಿಕೊಳ್ಳಬೇಕು. ಇದರ ಫಲಿತಾಂಶ ಅತ್ಯುತ್ತಮವಾಗಿರುತ್ತದೆ. ಈ ಕುರಿತ ಹೆಚ್ಚಿನ ವಿಷಯಗಳನ್ನು ತಿಳಿಸುತ್ತೇವೆ, ಒಂದು ಪುಟ್ಟ ಬ್ರೇಕಿನ ನಂತರ

ಪಪ್ಪಾಯ ಸಸಿಗಳ ನಡುವೆ ಸೂಕ್ತ ಅಂತರ ನೀಡಿ ನಾಟಿ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಬೇರುಗಳು ಸಮೃದ್ಧವಾಗಿ ಬೆಳೆದಷ್ಟು ಗಿಡಗಳ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ. ಅವುಗಳು ನೀಡುವ ಇಳುವರಿಯೂ ಅತ್ಯುತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಬೇರು ಹೆಚ್ಚು ಆಳಕ್ಕೆ ಮತ್ತು ಅಗಲವಾಗಿ ಚಾಚಿಕೊಳ್ಳುವುದು ಅಗತ್ಯ. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹೆಚ್ಚು ಅಂತರ ಇದ್ದರೆ ನೀರು ಮತ್ತು ಪೋಷಕಾಂಶ ತೆಗೆದುಕೊಳ್ಳಲು ಪೈಪೋಟಿ ಇರುವುದಿಲ್ಲ.

ಹಣ್ಣಿನ ಬೆಳೆಗಳಿಗೆ ಹರಿ ನೀರಾವರಿ, ತುಂತುತು ನೀರಾವರಿಗಳಿಗಿಂತ ಹನಿ ನೀರಾವರಿ ಸೂಕ್ತ ಎಂಬುದು ಬಾಲಕೃಷ್ಣ ಶರ್ಮ ಅವರ ಅನುಭವ. ಜಾಸ್ತಿ ನೀರು ಕೊಟ್ಟರೆ ಗಿಡಗಳ ಮೇಲಷ್ಟೆ ದುಷ್ಪರಿಣಾಮವಾಗದೇ ಮಣ್ಣಿನ ಮೇಲೆಯೂ ಆಗುತ್ತದೆ. ಮಣ್ಣಿನ ಫಲವತ್ತತೆ ಕಡಿಮೆಯಾಗಲು ಕಾರಣವಾಗುತ್ತದೆ. ಅಲ್ಲದೇ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆಗೂ ಬಾಧೆ ಉಂಟಾಗುತ್ತದೆ.

ದ್ರವರೂಪದ ಪೋಷಕಾಂಶಗಳನ್ನು ನೀಡುವುದರಿಂದ ಏಕಕಾಲದಲ್ಲಿ ಮಣ್ಣು ಮತ್ತು ಗಿಡಗಳ ಬೇರು, ಕಾಂಡಗಳ ಬೆಳವಣಿಗೆ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಬಯೋ ಡೈಜೆಸ್ಟರ್, ಜೀವಾಮೃತ ಸಹಾಯಕ.  ಯಾವಯಾವ ಹಂತಗಳಲ್ಲಿ ಇವುಗಳನ್ನು ನೀಡಬೇಕು ಎಂಬುದು ಮುಖ್ಯವಾದ ಅಂಶ

ಪಪ್ಪಾಯಿಗೆ ಅತಿಹೆಚ್ಚು ಬಾಧಿಸಬಹುದಾದ ಸಮಸ್ಯೆ ಎಂದರೆ ಎಲೆಚುಕ್ಕೆ ರೋಗ. ಇದಲ್ಲದೇ ಫಂಗಸ್ ಕೂಡ ಕಾಣಿಸಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ಕೂಡಲೇ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ವಿಳಂಬ ಮಾಡಿದರೆ ಸಮಸ್ಯೆ ಉಲ್ಬಣಿಸುತ್ತದೆ. ಆಗ ತೆಗೆದುಕೊಳ್ಳುವ ಪರಿಹಾರ ಕ್ರಮಗಳು ಪ್ರಯೋಜನವಾಗದೇ ಇರಬಹುದು

ಪಪ್ಪಾಯ ಗಿಡಗಳು ಇರುವ ತೋಟಗಳಲ್ಲಿ ನುಗ್ಗೆಯನ್ನು ಕೂಡ ಬೆಳೆಸಬಹುದು. ಈ ಸಸ್ಯಗಳ ಸಂಯೋಜನೆ ಅತ್ಯುತ್ತಮವಾಗಿರುತ್ತದೆ. ನುಗ್ಗೆಗಿಡಗಳನ್ನು ಅಂಚಿನಲ್ಲಿ ಹಾಕಬಹುದು. ಇದರಿಂದ ಆಗುವ ಅನುಕೂಲವೆಂದರೆ ಸಾರಜನಕ ಸ್ಥಿರಿಕರಣ. ಇದರಿಂದಲೂ ಪಪ್ಪಾಯ ಗಿಡಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ನುಗ್ಗೆ ಮಾರಾಟದಿಂದಲೂ ಉತ್ತಮ ಲಾಭಾಂಶ ಪಡೆಯಬಹುದು

==============

ಪಪ್ಪಾಯಿ ಕೃಷಿಯ ಒಟ್ಟು ಖರ್ಚು-ವೆಚ್ಚದತ್ತ ಗಮನ ನೀಡುವುದು ಅವಶ್ಯಕ. ಆದ್ದರಿಂದ ಖರ್ಚನ್ನು ತಗ್ಗಿಸುವ ಕ್ರಮಗಳ ಬಗ್ಗೆ ಚಿಂತನೆ ಅಗತ್ಯ. ಪೋಷಕಾಂಶದ ವಿಷಯಗಳಲ್ಲಿ ಸಾಧ್ಯವಾದಷ್ಟು ಸ್ವಾವಲಂಬನೆ ಸಾಧಿಸಿದರೆ ಖರ್ಚಿನ ಪ್ರಮಾಣ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸಾವಯವ ಪದ್ಧತಿ ಅನುಕೂಲಕರ. ಇತ್ತೀಚಿನ ದಿನಗಳಲ್ಲಿ ಸಾವಯವ ಮಾರುಕಟ್ಟೆಯೂ ಪ್ರಬಲವಾಗಿ ಬೆಳೆಯುತ್ತಿರುವುದರಿಂದ ಅದರ ಅನುಕೂಲ ಪಡೆಯಲು ಮುಂದಾಗಬಹುದು

================

ಅತಿಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ನೀರು ನಿಂತರೆ ಗಿಡಗಳಿಗೆ ಫಂಗಸ್ ಬಾಧಿಸುತ್ತದೆ. ಆದ್ದರಿಂದ ನೀರು ನಿಲ್ಲದೆ ಹೊರಗೆ ಹರಿದು ಹೋಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬಸಿಗಾಲುವೆಗಳು ಸಹಾಯಕ. ಪಪ್ಪಾಯಿ ಗಿಡಗಳನ್ನು ನಾಟಿ ಮಾಡುವ ಮುನ್ನವೇ ಇವುಗಳನ್ನು ನಿರ್ಮಾಣ ಮಾಡಿರಬೇಕು.

ಪೋಷಕಾಂಶಗಳಿಗೆ ಕೊರತೆಯಾದರೆ ಹೂ ಉದುರುವಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ನಾಟಿಗೆ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸುವುದು ಸೂಕ್ತ. ನೀರು ಪರೀಕ್ಷೆಯೂ ಅವಶ್ಯಕ. ಮಣ್ಣಿನ ಪರೀಕ್ಷೆ ಮಾಡಿಸಿದಾಗ ಕೊರತೆ ಇರುವ ಪೋಷಕಾಂಶಗಳ ಮಾಹಿತಿ ದೊರೆಯುತ್ತದೆ. ಅವುಗಳನ್ನು ಸೂಕ್ತ ಪ್ರಮಾಣದಲ್ಲಿ ಪೂರೈಸಬೇಕು.

ಕಾಯಿಗಳು ಕಚ್ಚಿದ ನಂತರ ಅವುಗಳ ಬೆಳವಣಿಗೆಗೆ ಸೂಕ್ತವಾದ ಪೋಷಕಾಂಶಗಳನ್ನು ಹಂತಹಂತವಾಗಿ ಪೂರೈಸುವುದು ಅಗತ್ಯ. ಇದರಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡದಿದ್ದರೆ ಚೆನ್ನಾಗಿ ಕಾಯಿ ಕಚ್ಚಿಯೂ ಪ್ರಯೋಜನವಿಲ್ಲದಂತೆ ಆಗುತ್ತದೆ. ಎಲ್ಲ ಗಿಡಗಳಿಗೂ ಸಮಾನ ಪ್ರಮಾಣದಲ್ಲಿ ಪೋಷಕಾಂಶ ಪೂರೈಸಿದರೆ ಫಲಿತಾಂಶ ಉತ್ತಮವಾಗಿರುತ್ತದೆ. ಹನಿ ನೀರಾವರಿ ಮುಖಾಂತರವೂ ದ್ರವ ಪೋಷಕಾಂಶ ನೀಡಬಹುದು

ಗಿಡಕ್ಕೆ ನೀರು ಪೂರೈಸುವ ದಿನಗಳಲ್ಲಿ ಎಷ್ಟು ಅವಧಿ ನೀರು ಪೂರೈಸುತ್ತೇವೆ ಎಂಬುದು ಮುಖ್ಯ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಮಣ್ಣಿನ  ರೀತಿ, ಅದು ಅಲ್ಪಾವಧಿ ನೀರು ಹಿಡಿದಿಟ್ಟುಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನೆಲ್ಲ ಗಮನಿಸಿ ನೀರು ನೀಡುವ ಅವಧಿ ನಿರ್ಧರಿಸಬಹುದು.

ಗಿಡಗಳನ್ನು ಚೆನ್ನಾಗಿ ಬೆಳೆಸುವುದು , ಉತ್ತಮ ಇಳುವರಿ ಪಡೆಯುವುದು ಎಷ್ಟು ಮುಖ್ಯವೋ ಅಷ್ಟೆ ಮಾರುಕಟ್ಟೆಯೂ ಮುಖ್ಯವಾಗಿರುತ್ತದೆ. ಪಪ್ಪಾಯ ಬೆಳೆಯಲು ತೊಡಗುವ ಮುನ್ನವೇ ಈ ವಿಷಯದಲ್ಲಿ ಸ್ಪಷ್ಟತೆ ಇರಬೇಕು. ಸ್ಥಳೀಯ ಮಾರುಕಟ್ಟೆ ಇದೆಯೇ ಅಥವಾ ದೂರದ ಮಾರುಕಟ್ಟೆಗಳಿಗೆ ಕಳಿಸಬೇಕೆ, ಸಾರಿಗೆ ವೆಚ್ಚಎಷ್ಟಾಗಬಹುದು. ಎಷ್ಟು ಹಣ ಬಂದರೆ ಎಷ್ಟು ಪ್ರಮಾಣದ ಲಾಭಾಂಶ ದೊರೆಯುತ್ತದೆ ಎಂಬೆಲ್ಲ ಅಂದಾಜು ಮಾಹಿತಿ ಇರಬೇಕು

1 COMMENT

LEAVE A REPLY

Please enter your comment!
Please enter your name here