ಭೂ ಕುಸಿತ, ಕೆಸರಿನ ಪ್ರವಾಹ, ಸಾವುನೋವು, ಆಸ್ತಿ ಪಾಸ್ತಿ ನಷ್ಟ ಎಲ್ಲವೂ ಘಟಿಸಿ ಮುಗಿದುಹೋಯ್ತು. ದುಃಖಿಸಿಯೂ ಆಯ್ತು. ಆದದ್ದಾಯಿತು ಎಂದು ಸುಮ್ಮನೆ ಎಲ್ಲಾ ಮರೆತು ಮುಂದುವರಿದು ಬಿಡುತ್ತೇವೆ. ಆದರೆ ಇದು ಇಷ್ಟಕ್ಕೇ ಮುಗಿದುಬಿಡುತ್ತದೆ ಎಂದು ಭಾವಿಸಿಕೊಂಡರೆ ತಪ್ಪಾಗಲಾರದೇ?
ಹತ್ತಿಪ್ಪತ್ತು ಅಡಿ ಅಗಲದ ಮಳೆಗಾಡಿನ ಕಿರುನದಿಯೊಂದು ಈಗ ತನ್ನ ಪಾತ್ರವನ್ನು ನೂರಾರು ಅಡಿಗಳಿಗೆ ವಿಸ್ತರಿಸಿಕೊಂಡಿದೆ. ಅಲ್ಲದೆ ತನ್ನ ಪಾತ್ರದ ಆಳವನ್ನೂ ಕಳೆದುಕೊಂಡು ಹೇಗೆ ಮತ್ತು ಯಾವ ಮಾರ್ಗದಲ್ಲಿ ಯಾವ ತರಹದ ಅಂಕುಡೊಂಕು ನಿರ್ಮಿಸಿ ಹರಿಯಬೇಕು ಎಂಬುದನ್ನೇ ಅರಿಯದೆ ದಿಗ್ಮೂಡವಾಗಿ ಚದುರಿ ನಿಂತಿದೆಯಲ್ಲವೇ? ಇದರ ಮುಂದಿನ ಪರಿಣಾಮ ಏನಾದೀತು?
ಅದರ ದಾರಿ ಅದು ಹುಡುಕಿಕೊಳ್ಳುತ್ತದೆ ಬಿಡಿ ಎಂಬ ಹಾರಿಕೆಯ ಉತ್ತರ ಕೊಡಬಹುದು. ಆದರೆ ಅದು ಅಷ್ಟು ಸರಳ ವಿಷಯವೇ? ಕಂಡಿತಾ ಅಲ್ಲ. ಮಳೆಕಾಡಿನ ಆಳ ಕಣಿವೆಗಳ ಝರಿತೊರೆಗಳನ್ನೊಳಗೊಳ್ಳುತ್ತಾ ಹರಿಯುವ ಕಿರುನದಿಗಳು ಪಾತ್ರ ಬದಲಾವಣೆ ಒಪ್ಪುವುದೇ ಇಲ್ಲ, ಅದೇನಿದ್ದರೂ ಹಿಮಾಲಯ ಪೀಠಪರ್ವತಗಳಿಂದ ಇಳಿದು ಹರಿಯುವ ನದಿಗಳ ಕ್ರಮ.
ಹಾಗಿರುವಾಗ ಈ ಕಿರುನದಿಗೆ ಮುಂದಿನ ಮಳೆ ನೀರು ಸಾಗಿಸುವಾಗ ಹೂಳು ಕೊರೆಯುತ್ತಾ ಮುಂದಕ್ಕೆ ಜರುಗಿಸುತ್ತಾ ತನ್ನ ಹಳೆಯ ಪಾತ್ರವನ್ನು ಕಂಡುಕೊಂಡು ಹರಿಯಬೇಕಾದ ಅನಿವಾರ್ಯತೆ. ಹಾಗೆ ಕೊರೆದು ಸಾಗಿದಂತೆಲ್ಲಾ ಆಚೀಚಿಗೆ ಏರ್ಪಟ್ಟ ಪ್ರವಾಹ ಪಾತ್ರದಲ್ಲಿ ಜಮೆಯಾಗಿರುವ ಹೂಳೂ ಕ್ರಮೇಣ ಮಳೆನೀರಿಗೆ ಕರಗಿ ಮುಖ್ಯಧಾರೆಯೊಡನೆ ಸೇರಿ ಮುಂದಕ್ಕೆ ಜರುಗಲೇಬೇಕಲ್ಲವೇ? ಇದಕ್ಕೆ ಪೂರಕ ಬೆಂಬಲ ನೀಡಲು ಗುಡ್ಡದ ಪಾದಗಳಲ್ಲಿ ತೂರಿ ಬರುವ ಅಂತರ್ಜಲ ಕುಹರಗಳ ಹೊರಹರಿವಿನ ಬಲವೂ ಇರುತ್ತದಲ್ಲ.
ಹೀಗೆ ಮುಂದಕ್ಕೆ ಜರುಗುತ್ತಾ ಸಾಗುವ ಹೂಳು, ಕಲ್ಲು ,ಮರಮಟ್ಟು ಹಾಗೂ ಮಾನವ ನಾಗರಿಕತೆಯ ಅವಶೇಷಗಳು ಮಾಡಬಹುದಾದ ಹಾನಿಗಳ ಬಗ್ಗೆ ಯಾರಾದರೂ ಯೋಚಿಸುತ್ತಾರೆಯೇ? ತನ್ನ ಹರಿವಿನುದ್ದಕ್ಕೂ ತನ್ನೊಳಗಿನ ಜಲಜೀವ ಸಂಕುಲಗಳನ್ನು ನಾಶಮಾಡುತ್ತಾ ಸಾಗುವುದರ ಜೊತೆಗೆ ಮುಂದೆ ಸೇರುವ ಅಣೆಕಟ್ಟೆಗೆ ಅದೆಷ್ಟು ಪ್ರಮಾಣದ ಹೂಳು ತಂದು ತುಂಬಿಸಬಹುದು ಎಂದು ಒಂದು ಕ್ಷಣ ಯೋಚಿಸೋಣ.
ಪಶ್ಚಿಮ ಘಟ್ಟಗಳೆಂಬ ಮಳೆಕಾಡುಗಳಲ್ಲಿ ಹುಟ್ಟಿ ಪೂರ್ವದ ಬಯಲಿನತ್ತ ಸಾಗುವ ನದಿಗಳಲ್ಲಿ ಯಾವ ನದಿಯನ್ನೂ ಬಿಡದೆ ಅಣೆಕಟ್ಟು ಕಟ್ಟಿ, ಅದನ್ನೇ ಅವಲಂಬಿಸಿ ಕೃಷಿ, ಕೈಗಾರಿಕೆ, ನಗರಗಳನ್ನು ಕಟ್ಟಿಕೊಂಡಿರುವ ನಾಡ ಮಂದಿ, (ಮಾತ್ರವಲ್ಲ ಅವಲಂಬಿತ ಪೂರ್ವದ ರಾಜ್ಯಗಳೂ )ಇದನ್ನು ಗಂಭೀರವಾಗಿ ಪರಿಗಣಿಸಬೇಡವೇ?
ಹೀಗಿರುವಾಗ ನಿಜಕ್ಕೂ ಪಶ್ಚಿಮ ಘಟ್ಟಗಳ ಸುಸ್ಥಿತಿಗಾಗಿ ಯೋಚಿಸಬೇಕಾದವರು, ಹೋರಾಟ ಮಾಡಬೇಕಾದವರು ಯಾರು? ಇಲ್ಲಿನ ಅರಣ್ಯ ನಾಶಕ್ಕೆ,ಭೂಕುಸಿತಗಳಿಗೆ ಕಾರಣ ಕಂಡುಕೊಂಡು ತಡೆಗಟ್ಟುವ ಜವಾಬ್ದಾರಿ ಬರಿ ಇಲ್ಲಿನ ನಿವಾಸಿಗಳದ್ದು ಮಾತ್ರವೇ?