ಈ ತರ ಕಾಲವಲ್ಲದ ಕಾಲದಲ್ಲಿ ಮಳೆಯಾಗ್ತಿದೆ, ಮಲೆನಾಡಿನಂತೆ ಬಯಲು ಸೀಮೆಯಲ್ಲಿ ಮಳೆಯಾಗಿದೆ. ಮಳೆ,ಚಳಿ, ಬಿಸಿಲು ನಿಸರ್ಗದ ಲಯ ತಪ್ಪಿವೆ, ಇದಕ್ಕೇ ಕ್ಲೈಮಟ್ ಚೇಂಚ್ ಅಥವಾ ಹಮಾಮಾನ ಬದಲಾವಣೆ ಎನ್ನುತ್ತಿದ್ದಾರೆ. ಇದನ್ನು ಇನ್ನೂ ಸೀರಿಯಸ್ ಆಗಿ ಜನರು ಯೋಚಿಸುತ್ತಿಲ್ಲ,
ರಾಜಕೀಯದವರಿಗೂ. ಇಷ್ಟು ಹೊತ್ತಿಗೆ ಹವಾಮಾನ ಬದಲಾವಣೆ ಒಂದು ರಾಜಕೀಯ ವಿಷಯವಾಗಬೇಕಿತ್ತು. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಹವಾಮಾನ ಬದಲಾವಣೆ ಜೊತೆ ಹೊಂದಿಕೊಳ್ಳುವ ಯೋಜನೆಗಳ ರೂಪುರೇಷೆ ರೂಪಿಸಬೇಕಿತ್ತು. ರಾಜಕೀಯದವರ ವಿಷಯ ಹಾಳಾಗಿ ಹೋಗಲಿ ಬಿಡಿ. ರೈತರಿಗೋಸ್ಕರ ನನ್ನ ಗ್ರಹಿಕೆಗಳನ್ನು ದಾಖಲಿಸುತ್ತಾ ಇದ್ದೇನೆ.
ಈ ಹವಾಮಾನ ಬದಲಾವಣೆ ಎಂದರೆ ಸರಳವಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಹಲಸಿನ ಮರದ ಹತ್ತಿರ ಹೋಗಿ, ಮಾವಿನ ಮರದ ಹತ್ತಿರ ಹೋಗಿ, ತೆಂಗಿನ ಮರದ ಹತ್ತಿರ ಹೋಗಿ ನಿಂತು ಮಾತನಾಡಿ ಅರ್ಥ ಆಗುತ್ತದೆ.
ನಮ್ಮ ತೊಟದ ಹಲಸಿ ಮರಗಳಲ್ಲಿ ಪ್ರತಿ ವರ್ಷ ಇಷ್ಟೊತ್ತಿಗೆ ಹೂವು ಕಾಯಿ ಬಿಡಬೇಕಿತ್ತು, ಬಿಟ್ಟಿಲ್ಲ. ಮಾವು ಹೂವಾಗುವುದೇ ತಡವಾಗುತ್ತಿದೆ; ಇಷ್ಟೊತ್ತಿಗೆ ಹೂವಾಗಬೇಕಿತ್ತು. ತೆಂಗಿನ ಮರದ ಗರಿಗಳೆಲ್ಲಾ ನವಂಬರ್ ತಿಂಗಳಲ್ಲೇ ಉದುರಬೇಕಿತ್ತು ಉದುರಿಲ್ಲ,
ತೇಗದ ಮರಗಳೂ ಎಲೆ ನವೆಂಬರ್ ನಲ್ಲಿ ಉದುರಿಸಬೇಕಿತ್ತು ಉದುರಿಸಿಲ್ಲ, ತೆಂಗಿನ ಮರದಲ್ಲಿ ಈಗ ಕೂಳೆ ಕಾಯಿ ಬರಬೇಕಿತ್ತು, ಇನ್ನೂ ತುಂಬಿದ ಗೊನೆಗಳ ಕೋಯ್ಲು ಮಾಡುತ್ತಿದ್ದೇನೆ. ಮುಂದಿನ ವರ್ಷಕ್ಕೆ ಫಲವೇ ಕಡಿಮೆ ಕಾಣುತ್ತಿದೆ. ಗೆಡ್ಡೆ ಗೆಣಸು ಚೆನ್ನಾಗಿ ಬಿಟ್ಟಿವೆ. ಈತರಕೀತರ ಎಲ್ಲವೂ ಅದಲು ಬದಲಾಗಿದೆ. ನಮ್ಮ ಆಹಾರ ಮತ್ತು ಜೀವನ ಶೈಲಿ ಬದಲಾಗಿಲ್ಲ. ನಿಸರ್ಗದಿಂದ ನೋಡಿ ಕಲಿಯದೇ ಹೋದರೆ ಮುಂದೆ ಭೀಕರ ಅಪಾಯಗಳು ಬಂದೊದಗಲಿವೆ.
ಇಡೀ ಭಾರತದೇಶವೇ ಪ್ರೋಟೀನ್ ಸಮಸ್ಯೆಯಿಂದ ಬಳಲುತ್ತಿದೆ. ಈ ಪ್ರೋಟೀನ್ ಮೂಲದ ಕಾಳುಗಳು ಈ ವರ್ಷ ಸರಿಯಾಗಿ ಒಣಗದೆ ಅದರ ತುಂಬ ಅಪ್ಲಾ ಟಾಕ್ಸಿನ್ ತರದ ವಿಷ ತುಂಬಿವೆ. ಇದಕ್ಕೆ ಉದಾಹರಣೆ ನೋಡಿ, ಹೆಸರುಕಾಳು ಕೋಯ್ಲು ಸಮಯದಲ್ಲಿ ಮಳೆ ಬಂತು.
ಈಗ ಹುರುಳಿಕಾಳಾದರೂ ಚೆನ್ನಾಗಿ ಬರುತ್ತಿದೆ, ಅವರೆಕಾಳಾದರೂ ಸಿಗುತ್ತವೆ ಎನ್ನುವ ಸಮಯದಲ್ಲಿ ಮತ್ತೆ ಮಳೆಯಾಗುತ್ತಿದೆ. ಈ ಮಳೆಗೆ ಕಾಳು ಕಡ್ಡಿ ನೆನೆದಾಗ, ಸರಿಯಾಗಿ ಒಣಗಿಸದೇ ಇದ್ದಾಗ ಆ ಕಾಳುಗಳಲ್ಲಿ ಭಯಾನಕ ವಿಷಕಾರಿಯಾದ ಅಪ್ಲಾಟಾಕ್ಸಿನ್ ತುಂಬಿಕೊಳ್ಳುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಇದು ಮನುಷ್ಯನ ದೇಹ ಸೇರಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಇದೆಲ್ಲಾ ಹವಾಮಾನ ವೈಪರಿತ್ಯದ ಪರಿಣಾಮಗಳು.
ವಿಪರೀತ ಮಳೆಯ ಕಾರಣದಿಂದ ಒಣಭೂಮಿಯ ಬೆಳೆಗಳು ಫಲಬಿಡುವುದಿಲ್ಲ. ಪರಾಗಸ್ಪರ್ಶಕ್ಕೂ ತೊಂದರೆಯಾಗುತ್ತದೆ ಮತ್ತು ಬಿಸಿಲಿನ ಕೊರತೆಯೂ ಕಾರಣವಾಗುತ್ತದೆ. ಹಲಸು ಮಾವು ಈ ವರ್ಷ ನನ್ನ ತೋಟದಲ್ಲಿ ಕೈಕೊಟ್ಟಿವೆ. ಸಪೋಟ ಕೂಡ ಕಡಿಮೆ ಫಸಲು ಬಿಟ್ಟಿದೆ. ತೆಂಗಿನಲ್ಲಿಯೂ ಇಳುವರಿ ಕಡಿಮೆಯಾಗಿದೆ ಕಾರಣ ವಿಪರೀತ ಮಳೆ ಇರಬಹುದು. ಅಕಾಲಿಕ ಮಳೆ ಕೂಡ ದೊಡ್ಡ ಮಟ್ಟದ ಹಾನಿಯನ್ನು ಮಾಡುತ್ತಿದೆ.
ಆರ್ಥಿಕವಾಗಿ ತರಕಾರಿ ಕೃಷಿ ಅವಲಂಬಿತ ರೈತರು ಇಂತಹ ಹವಾಮಾನ ವೈಪರಿತ್ಯದ ಕಾರಣ ಹೆಚ್ಚು ಹೆಚ್ವು ರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸುತ್ತಿದ್ದಾರೆ. ಇದರಿಂದ ಗ್ರಾಹಕನ ಹೊಟ್ಟೆಗೆ ರಾಸಾಯನಿಕಗಳು ಸೇರುತ್ತಿವೆ.
ಹವಾಮಾನ ಬದಲಾವಣೆ ಎದುರಿಸುವತ್ತ ಯೋಚಿಸುವ ಬದಲು ರೈತರು ಆರ್ಥಿಕ ಬೆಳೆಗಳ ಕಡೆ ಯೋಚಿಸುತ್ತಿದ್ದಾರೆ. ಇದರ ಬಗ್ಗೆ ಯೋಚಿಸಿ ಯೋಜಿಸಿ ಕಾರ್ಯಪ್ರವೃತ್ತರಾಗಬೇಕಿದ್ದ ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು ಅಷ್ಟೇನು ಆಶಾದಾಯಕವಾಗಿ ಕಾಣುತ್ತಿಲ್ಲ. ಏನೆಲ್ಲಾ ಮಾಡಬಹುದು? ಏನೆಲ್ಲಾ ಅನಾಹುತ ಆಗಿವೆ, ಏನೆಲ್ಲಾ ಆಗಬಹುದು ಇದರ ಬಗ್ಗೆ ಆಳವಾದ ಅಧ್ಯಯನಗಳು ಆಗಬೇಕು.
ಒಂದು ಅಧ್ಯಯನದ ಪ್ರಕಾರ ಉತ್ತರ ಭಾರತದಲ್ಲಿ ಗೋಧಿ ಮತ್ತು ಮತ್ತು ಭತ್ತ ಉತ್ಪಾದನೆ ಗಣನೀಯವಾಗಿ ಕುಸಿದಿದೆ ಎನ್ನುತ್ತಿದ್ದಾರೆ. ಈ ಪರಿಣಾಮ ನಮ್ಮಲ್ಲಿಯ ಬೆಳೆಗಳ ಉತ್ಪಾದನೆ ಮೇಲೆಯೂ ಆಗಿದೆ.
ಬೇಸಿಗೆಯಲ್ಲಿ ಕಾಳುಗಳ ಮತ್ತು ಆಹಾರ ಧಾನ್ಯಗಳ ಉತ್ಪಾದನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಈ ವರ್ಷ ಗೆಡ್ಡೆಗೆಣಸು ಮಳೆಗಾಲದಲ್ಲಿ ಚೆನ್ನಾಗಿ ಬಂದಿವೆ, ನಮ್ಮ ಆಹಾರದಲ್ಲಿ ಗೆಡ್ಡ ಗೆಣಸುಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬೆಳೆ, ತಳಿಗಳನ್ನು ತರಬೇಕು.
ಮೊನ್ನೆ ಮೈಸೂರಿನಲ್ಲಿ ನಡೆದ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬಗೆಯ ಕುರಿತು ಚರ್ಚೆಗಳಾಗಿವೆ. ಹವಾಮಾನ ವೈಪರಿತ್ಯದ ನಿಮ್ಮ ಅನುಭವವನ್ನೂ ಕಾಮೆಂಟ್ ಮೂಲಕ ತಿಳಿಸಲು ಕೋರುತ್ತೇನೆ.
ಚಿಂತಿಸಬೇಕಾದವರು
ಚಿಂತಿಸುತ್ತಿಲ್ಲವೇ……