ಸಾವಯವ ಅನ್ನಲು ‘ನಾಮಬಲ’ ಒಂದೇ ಸಾಕೆ !?

0
ಲೇಖಕರು: ಪ್ರಶಾಂತ್‌ ಜಯರಾಮ್

ಸಾವಯವ ದೃಢೀಕರಣ (Organic Certificate) ನೀಡುವಾಗ ರೈತರ ಜಮೀನಿನ ಮಣ್ಣು ಈ ರೀತಿಯ ಗುಣ ಹೊಂದಿರಬೇಕು,ಸಾವಯವ ಇಂಗಾಲದ ಪ್ರಮಾಣ ಇಂತಿಷ್ಟಿರಬೇಕು, ಬೆಳೆದ ಬೆಳೆಯಲ್ಲಿ ರಾಸಾಯನಿಕ ಪಳಿಯುಳಿಕೆ ಅಂಶದ ಪ್ರಮಾಣದ ಸೂಚ್ಯಂಕದ ಮಟ್ಟ ಯಾವ ಮಿತಿ ಮೀರಿರಬಾರದು ಅನ್ನುವ ಯಾವುದೇ ಮಾನದಂಡ ನಿಗದಿಪಡಿಸದೇ ಹೇಗೆ ಮಾಡುತ್ತಾರೆ?

ಆರ್ಗಾನಿಕ್ ಸರ್ಟಿಫಿಕೇಟ್ ಪಡೆದ ನಂತರ ರಾಸಾಯನಿಕ ಗೊಬ್ಬರ,ಕೀಟನಾಶಕ ಬಳಕೆ ಮಾಡಿ ಬೆಳೆ ಬೆಳೆದರೆ ಹೇಗೆ ಕಂಡು ಹಿಡಿಯುವುದು?

01 ಎಕರೆಗೆ ಆರ್ಗಾನಿಕ್ ಸರ್ಟಿಫಿಕೇಟ್ ಮಾಡಿಸಿ 2-3 ಬೆಳೆ ಮಾಡಿ ಅಥವಾ ಯಾವುದೇ ಬೆಳೆ ಮಾಡದೇ,ಬೇರೆ ಕಡೆ ಬೆಳೆದ ಬೆಳೆಗಳನ್ನು ಸೇರಿಸಿ ಸರ್ಟಿಫಿಕೇಟ್ ಬೆಂಬಲದಲ್ಲಿ ಸಾವಯವ ಹೆಸರಿನಲ್ಲಿ ಬೆಳೆಗಳನ್ನು ಮಾರಾಟ ಮಾಡಬಹುದಲ್ಲವೇ?

ನಿರ್ದಿಷ್ಟ(ಆರ್ಗಾನಿಕ್ ಸರ್ಟಿಫಿಕೇಟ್) ಪ್ರದೇಶದಲ್ಲಿ 100 ಕೆಜಿ ಇಳುವರಿ ಪಡೆದು,ಬೇರೆ ಕಡೆಯಿಂದ 400 ಕೆಜಿ ತಂದು,ಹೀಗೆ ಒಟ್ಟು 500 ಕೆಜಿ ಆರ್ಗಾನಿಕ್ ಸರ್ಟಿಫೀಕೆಟ್ ಹೆಸರಿನಲ್ಲಿ ಮಾರಾಟ ಮಾಡಿದಾಗ ಹೇಗೆ ಗ್ರಾಹಕರು ಮತ್ತು ಸರ್ಟಿಫಿಕೇಟ್ ಏಜನ್ಸಿ ಪತ್ತೆ ಹಚ್ಚಲು ಸಾಧ್ಯ?

ಸರ್ಟಿಫಿಕೇಟ್ ಏಜನ್ಸಿ ಅವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡುತ್ತಾರೆ,ಅವರು ಹೊಂದಿರಬೇಕಾದ ಅರ್ಹತೆ ಎನು?

ಸಾವಯವ ಪದಾರ್ಥ ಅನ್ನಲು ಆರ್ಗಾನಿಕ್ ಸರ್ಟಿಫಿಕೇಟ್ ನಾಮಬಲ ಒಂದೇ ಸಾಕೆ?ಉತ್ಪನ್ನಗಳ ಮೇಲೆ ‘Organic Certified’ ಲೇಬಲ್ ಅಂಟಿಸಿದ್ದರೆ ಸಾಕೆ?ಪ್ರತಿಷ್ಠಿತ ಎನ್ನಿಸಿಕೊಂಡಿರುವ ಕೆಲವು ಕಂಪನಿಗಳು,ಎಪಿಎಂಸಿ ಮತ್ತು ಇನ್ನಿತರೇ ಕಡೆಗಳಿಂದ ಉತ್ಪನ್ನಗಳನ್ನು ತಂದು ಬ್ರಾಂಡ್ ಮಾಡಿ,ಸಾವಯವ ಲೇಬಲ್ ಹಾಕಿ ಮಾರಾಟ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ನೈಜವಾಗಿ ಸಾವಯವ ವಿಧಾನದಲ್ಲಿ ಬೆಳೆದ ಬೆಳೆಗಳು ಸಿಗುತ್ತಿರುವುದು ಅತ್ಯಲ್ಪ ಪ್ರಮಾಣದಲ್ಲಿ,ಆದರೆ ನೈಜವಾಗಿ ಬೆಳೆ ಬೆಳೆಯದೆ ಕೇವಲ ಆರ್ಗಾನಿಕ್ ಸರ್ಟಿಫೈಡ್ ಠಸೆ/ಮುದ್ರೆ ಹೊತ್ತು ಮಾರಾಟವಾಗುತ್ತಿರುವುದು ಬೃಹತ್ ಪ್ರಮಾಣದಲ್ಲಿ.

ಸಾವಯವ ಬೇಸಾಯ ಮಾಡುವವರು ಕುಲಾಂತರಿ ಬೀಜ ಉಪಯೋಗಿಸಬಾರದು ಎಂಬ ನಿಯಮವಿದೆ, ಈ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹೇಗೆ? ಮಣ್ಣು ಮತ್ತು ಬೆಳೆ ಪರೀಕ್ಷೆ ಮಾಡಲು ಯಾವುದೇ ನಿರ್ದಿಷ್ಟಪಡಿಸಿದ ಮಾನದಂಡ ಇಲ್ಲದೇ ಇದ್ದಾಗ ಮೇಲೆ ಯಾವ ಆಧಾರದ ಮೇಲೆ ಆರ್ಗಾನಿಕ್ ಸರ್ಟಿಫಿಕೇಟ್ ನೀಡಲು ತೀರ್ಮಾನಿಸುತ್ತಾರೆ?

ಸಂಪೂರ್ಣ ಸಾವಯವ ಗ್ರಾಮ ಎಂದು ಘೋಷಣೆ ಮಾಡಿ, ಅಲ್ಲಿ ಬೋರ್ಡ್ ಬರೆದು ಬರುತ್ತಾರೆ. ಬೋರ್ಡ್ ಮುಂದೆ ಸಾಕಷ್ಟು ರಾಸಾಯನಿಕ ಗೊಬ್ಬರ,ಕೀಟನಾಶಕ ಮಾರಾಟದ ಅಂಗಡಿಗಳಿರುತ್ತವೆ, ಅಲ್ಲಿ ಒಬ್ಬರು ಸಾವಯವ ಬೇಸಾಯ ಮಾಡದ ಸಾಕಷ್ಟು ಗ್ರಾಮದ ಉದಾಹರಣೆ ಇದೆ,ಇದು ಸರಿಯೇ?

ಆರ್ಗಾನಿಕ್ ಸರ್ಟಿಫಿಕೇಟ್ ಗೆ ಮಣ್ಣು ಮತ್ತು ಬೆಳೆಗೆ ಯಾವುದೇ ನಿರ್ದಿಷ್ಟ ಮಾನದಂಡ/ಅಳತೆಗೋಲು ಇಲ್ಲಾದ ಮೇಲೆ ರೈತರು ಹಣ ಕೊಟ್ಟು ದೃಢೀಕರಣ ಮಾಡಿಸುವುದು,ಗ್ರಾಹಕರು ಇದನ್ನು ಖರೀದಿಸುವುದು ಎಷ್ಟು ಸರಿ?ಉದ್ದೇಶದ ಸಫಲತೆ ಇಲ್ಲಾದ ಈ ದೃಢೀಕರಣ ನೀಡುವ ಏಜನ್ಸಿ ಯವರನ್ನು ದೃಢೀಕರಿಸುವವರು ಯಾರು?ಈ ವ್ಯರ್ಥ ಸಾಹಸ ಬೇಕೇ?

ಗ್ರಾಹಕರು ಸಾವಯವ ರೈತರ ನೇರ ಸಂಪರ್ಕ ಪಡೆದು ಅವರ ಜಮೀನಿಗೆ ಭೇಟಿ ನೀಡಿ ಅವರು ಸಾವಯವ ವಿಧಾನ ಅನುಸರಿಸುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಂಡು ಅವರಿಂದ ಉತ್ಪನ್ನ ಪಡೆಯುವುದು ಸೂಕ್ತ ಮಾರ್ಗವಾಗಿರುತ್ತದೆ.

ಕೆಲವು ಸಾವಯವ ಮಳಿಗೆಯವರು ಸಾವಯವ ಪದಾರ್ಥದ ಹೆಸರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡಿ ಹಣಗಳಿಸುವ ದಂಧೆ ಮಾಡಿಕೊಂಡಿದ್ದಾರೆ.ಇಂಥ ಮಳಿಗೆಯವರು ಯಾವುದೇ ಸಾವಯವ ರೈತರಿಂದ ಖರೀದಿ ಮಾಡುತ್ತಿಲ್ಲ,

ಕೆಲವು ಮಳಿಗೆಯವರು ನಾಮಕಾವಸ್ಥೆಗೆ ಕೆಲವು ರೈತರಿಂದ ಸಣ್ಣ ಪ್ರಮಾಣದಲ್ಲಿ ಪಡೆದು ಅದರ ಜೊತೆಗೆ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಕೃಷಿಯಲ್ಲಿ ಬೆಳೆದ ಉತ್ಪನ್ನಗಳನ್ನು ಸೇರಿಸಿ ಸಾವಯವ ರೈತರ ಉತ್ಪನ್ನದ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ನೆಡೆಯುತ್ತಿದೆ.

-ಪ್ರಶಾಂತ್ ಜಯರಾಮ್
9342434530

LEAVE A REPLY

Please enter your comment!
Please enter your name here