ಒಡಿಶಾದ ನಯಾಗಢ್ನಲ್ಲಿರುವ ಕೊಡಲ್ಪಾಲಿ, ಸಿಂದೂರಿಯಾ ಮತ್ತು ಅಕ್ಕಪಕ್ಕದ ಹಳ್ಳಿಗಳ ಮಹಿಳೆಯರು ಹೇಳುವಂತೆ ಕಾಡುಗಳು ಅವರ ಆಸರೆಯ ನೆಲೆಯಾಗಿವೆ; ಅವರುಗಳನ್ನು ಪೊರೆಯುವ ಸ್ಥಳಗಳಾಗಿವೆ. ಈ ಮೂಲಕ ಅವರು ಭವಿಷ್ಯದ ಆರ್ಥಿಕತೆಯನ್ನು ನಿರ್ಮಿಸಬಹುದಾಗಿದೆ.
ನಿಮ್ಮ ಗ್ರಾಮದ ಸನಿಹದ ಕಾಡಿನಲ್ಲಿ ನೀವು ಕಳೆದ 30 ವರ್ಷಗಳಿಂದ ಪ್ರತಿದಿನ ಏಕೆ ಗಸ್ತು ತಿರುಗುತ್ತೀರಿ? ಏಕೆ ಇದು ತುಂಬಾ ಮುಖ್ಯವಾಗಿದೆ ಎಂದು ಆ ಬುಡಕಟ್ಟು ಮಹಿಳೆಯರ ಗುಂಪನ್ನು ಕೇಳಿದೆ. ಅದಕ್ಕವರು ನನ್ನನ್ನೇ ಆಶ್ಚರ್ಯಚಕಿತರಾಗಿ ನೋಡಿದರು !
ನಾನು ಒಡಿಶಾದ ನಯಾಗರ್ ಜಿಲ್ಲೆಯ ಕೊಡಲ್ಪಾಲಿ ಎಂಬ ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ಮೈಲುಗಳವರೆಗೆ ಹಬ್ಬಿದ ದಟ್ಟವಾದ, ಹಸಿರು ಕಾಡುಗಳನ್ನು ನೋಡಬಹುದು. ಈ ಗ್ರಾಮ ನಗರ ಪ್ರದೇಶದಿಂದ ದೂರದಲ್ಲಿದೆ. ಇದನ್ನು ಆರ್ಥಿಕ ಮಾನದಂಡಗಳ ಮೇಲೆ ಬಡ ಎಂದು ವರ್ಗೀಕರಿಸಲಾಗಿದೆ. ಇಲ್ಲಿ ನಗರದಲ್ಲಿರುವ ಅನೇಕ ಮೂಲಭೂತ ಸೌಲಭ್ಯಗಳಿಲ್ಲ. ಪೈಪ್ನಲ್ಲಿ ನೀರು ಸರಬರಾಜು ಇಲ್ಲ . ಪಡಿತರೀಕರಣ ಎಂಬ ವಿಲಕ್ಷಣ ನೀತಿಯಿಂದಾಗಿ ಶಾಲೆಯನ್ನು ಮುಚ್ಚಲಾಗಿದೆ, ಇದರರ್ಥ ಇಲ್ಲಿನ 25 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಈಗ ಶಿಕ್ಷಣಕ್ಕಾಗಿ ಮೂರು ಕಿಲೋಮೀಟರಿಗೂ ಹೆಚ್ಚು ದೂರವಿರುವ ಮುಂದಿನ ಹಳ್ಳಿಗೆ ಕಾಡಿನಲ್ಲಿ ಚಾರಣ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಇಂಥ ಗ್ರಾಮದ ಮಹಿಳೆಯರು ಕಳೆದ ಮೂರು ದಶಕಗಳಿಂದ ತಮ್ಮ ಕಾಡುಗಳನ್ನು ಉತ್ಸಾಹದಿಂದ ರಕ್ಷಿಸುತ್ತಿದ್ದಾರೆ. ಪ್ರತಿದಿನ, ತಪ್ಪದೆ, ಮಹಿಳೆಯರು ಗುಂಪಿನಲ್ಲಿ ಕಾಡಿನಲ್ಲಿ ಗಸ್ತು ತಿರುಗುತ್ತದೆ. ಪ್ರತಿ ಗುಂಪಿನಲ್ಲೂ ನಾಲ್ವರು ಮಹಿಳೆಯರಿರುತ್ತಾರೆ. ಇವರು ಯಾರೂ ಮರಗಳನ್ನು ಕಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ . ಇವರು ಕಾಡಿಗೆ ಅಕ್ರಮವಾಗಿ ಪ್ರವೇಶಿಸುವ ಕಾಡುಗಳ್ಳರೊಂದಿಗೆ ಹೋರಾಡುತ್ತಾರೆ. ಕಾಡುಗಳ್ಳರ ಕೊಡಲಿಗಳು, ಗರಗಸ, ಮಚ್ಚುಗಳನ್ನು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುತ್ತಾರೆ.
ಮುಟ್ಟುಗೋಲು ಹಾಕಿಕೊಂಡ ಮಾಲನ್ನು ಹಿಂದಿರುಗಿಸುವ ಮುನ್ನ ದಂಡ ಕಟ್ಟುವಂತೆ ಮಾಡುತ್ತೇವೆ. ಎಂದು ದಿಟ್ಟವಾಗಿ ಹೇಳುತ್ತಾರೆ. ಇವರ ಈ ಪರಿಶ್ರಮದಿಂದಲೇ ಅಲ್ಲಿನ ಕಾಡುಗಳ ಸಂಪತ್ತು ಕಣ್ಣು ನೋಡುವಷ್ಟು ದೂರ ಹರಡಿದೆ. ಅವುಗಳ ರಕ್ಷಣೆ ಕಾರ್ಯ ಅನನ್ಯವಾಗಿದೆ ಎಂಬುದು ಆ ಪರಿಸರವನ್ನು ನೋಡಿದಾಗ ಅರಿವಾಗುತ್ತದೆ.
ಈ ಬುಡಕಟ್ಟು ಜಿಲ್ಲೆಯಲ್ಲಿ, ಸುಮಾರು 60,000 ಹೆಕ್ಟೇರ್ ಅರಣ್ಯ ವಲಯವನ್ನು ಸಂರಕ್ಷಿಸುವ 217 ಹಳ್ಳಿಗಳಿವೆ. ಈ ಪೈಕಿ 60 ಗ್ರಾಮಗಳಲ್ಲಿ ಪ್ರಾಥಮಿಕವಾಗಿ ಮಹಿಳೆಯರೇ ಅರಣ್ಯ ಸಂರಕ್ಷಣಾ ಸಮಿತಿಗಳನ್ನು ರಚಿಸಿಕೊಂಡ ಗಸ್ತು ತಿರುಗುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಬುಡಕಟ್ಟು ಹಕ್ಕುಗಳ ಕುರಿತು ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆ “ವಸುಂಧರಾ “ ಸಹಾಯದಿಂದ – ಈ ಹಳ್ಳಿಗರು ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಮ ಸಂರಕ್ಷಣಾ ಸಮಿತಿಗಳ ಒಕ್ಕೂಟವನ್ನು ರಚಿಸಿದ್ದಾರೆ. ಇಲ್ಲಿ ಕಾರ್ಯನಿರ್ವಾಹಕರು – ಹೆಚ್ಚಾಗಿ ಮಹಿಳೆಯರೇ ಆಗಿರುವುದು ವಿಶೇಷ. ಇವರು ಅಂತರ ಗ್ರಾಮ ಸಂಘರ್ಷಗಳು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ತಿಂಗಳು ಸಭೆ ಸೇರುತ್ತಾರೆ.
ಒಕ್ಕೂಟದ ಅಧ್ಯಕ್ಷೆ ಶಶಿ ಪ್ರಧಾನ್ ಶಶಿ ಮೌಸಿ ಎಂದೇ ಇಲ್ಲಿ ಖ್ಯಾತವಾಗಿರುವ ಶಶಿ ಪ್ರಧಾನ ಅವರು ಇಲ್ಲಿನ ಒಕ್ಕೂಟದ ಮುಖ್ಯಸ್ಥೆಯಾಗಿದ್ದಾರೆ. ಗಸ್ತು ತಿರುಗುವುದು ಕಾಡುಗಳು ಉಳಿವಿಗೆ ಅಗತ್ಯ. ಇದರಿಂದ ಕಾಡುಗಳ ನಮ್ಮ ಅಗತ್ಯಗಳಾದ ಗೆಡ್ಡೆ ಗೆಣಸುಗಳು, ಗಿಡಮೂಲಿಕೆಗಳು, ಉದುರಿಬಿದ್ದ ರೆಂಬೆ, ಕೊಂಬೆ, ಕಡ್ಡಿಗಳಿಂದ ಉರುವಲುಗಳನ್ನು ನೀಡಲು ಸಾಧ್ಯವಾಗಿದೆ ಎಂದು ವಿವರಿಸುತ್ತಾರೆ.
ಶಶಿ ಮೌಸಿಯ ಕಿರಿಯ ಸಹೋದ್ಯೋಗಿ, ಕುಂತಲಾ ನಾಯಕ್, “ಕೋವಿಡ್-19 ರ ಎರಡು ಭಯಾನಕ ವರ್ಷಗಳಲ್ಲಿಯೂ ಸಹ, ಅವರಿಗೆ ಹೊರಗಿನ ಯಾವ ಸಹಾಯದ ಅಗತ್ಯವಿರಲಿಲ್ಲ. ಈ ಬುಡಕಟ್ಟು ಹಳ್ಳಿಗಳಲ್ಲಿ ಯಾರೂ ಅನಾರೋಗ್ಯಕ್ಕೆ ಒಳಗಾಗಲಿಲ್ಲ. ಇದಕ್ಕೆಲ್ಲ ಸುತ್ತಲಿನ ಕಾಡೇ ಕಾರಣ. ಅದು. ನಮ್ಮ ಜೀವನದ ಮೂಲವಾಗಿದೆ . ಆದ್ದರಿಂದ ನಾವು ಕಾಡನ್ನು ರಕ್ಷಿಸುತ್ತೇವೆ” ಎಂದು ಹೇಳುತ್ತಾರೆ.
ಅರಣ್ಯ ಬಳಕೆಯ ನಿಯಮಗಳು ಬುಡಕಟ್ಟು ಹಳ್ಳಿಗಳ ಎಲ್ಲರಿಗೂ ಅನ್ವಯಿಸುತ್ತವೆ – ಇಂಧನವನ್ನು ಭಾನುವಾರದಂದು ಮಾತ್ರ ಸಂಗ್ರಹಿಸಬೇಕು; ಹಸಿರು ಮರಗಳನ್ನು ಕಡಿಯಲಾಗುವುದಿಲ್ಲ; ಮಳೆಗಾಲದಲ್ಲಿ ಕಾಡಿನೊಳಗೆ ರಾಸುಗಳನ್ನು ಬಿಟ್ಟು ಮೇಯಿಸುವುದಿಲ್ಲ. ಕಿರು ಅರಣ್ಯ ಉತ್ಪನ್ನಗಳಾದ ಬಿದಿರು, ಕೆಂಡು ( ಬೀಡಿ ತಯಾರಿಕೆಯಲ್ಲಿ ಬಳಸುವ ಟೆಂಡು ಎಲೆಗಳು) ಸಂಗ್ರಹಣೆಯನ್ನು ಗ್ರಾಮದ ಮನೆಯವರು ಮಾತ್ರ ಮಾಡಬೇಕು, ಹೊರಗಿನವರು ಮಾಡಬಾರದು.
ಈ ವಿನೂತನ ಪ್ರಯೋಗ ಈಗ ಹೊಸ ಹಂತವನ್ನು ಪ್ರವೇಶಿಸಿದೆ. ನವೆಂಬರ್ 2021 ರಲ್ಲಿ, ವರ್ಷಗಳ ಹೋರಾಟದ ನಂತರ, 24 ಹಳ್ಳಿಗಳಿಗೆ ಸಮುದಾಯ ಅರಣ್ಯ ಹಕ್ಕುಗಳನ್ನು ನೀಡಲಾಗಿದೆ. ಇದು ಅರಣ್ಯ ಹಕ್ಕುಗಳ ಕಾಯಿದೆ, 2006 ರ ನಿಬಂಧನೆಯಾಗಿದೆ, ಇದರ ಅಡಿಯಲ್ಲಿ ಹಳ್ಳಿಗಳು ಅವರು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಸರ್ಕಾರಿ ಅರಣ್ಯಗಳ ಹಕ್ಕನ್ನು ಸಂಪನ್ಮೂಲಗಳು ಮತ್ತು ರಕ್ಷಣೆಯ ಬಳಕೆಗಾಗಿ ಪಡೆಯಬಹುದು.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸುಮಾರು 4.5 ಮಿಲಿಯನ್ ಹೆಕ್ಟೇರ್ ಅರಣ್ಯಭೂಮಿಯಲ್ಲಿ ಸಮುದಾಯ ಹಕ್ಕುಗಳನ್ನು ನೀಡಲಾಗಿದೆ, ಇದು ಒಂದು ನಿರ್ಣಾಯಕ ಅಂಶ. ಇದು, ಸರ್ಕಾರದ ನಿಯಂತ್ರಣದಲ್ಲಿರುವ ಅರಣ್ಯ ವ್ಯಾಪ್ತಿಯಲ್ಲಿರುವ ಶೇಕಡ 8 ರಷ್ಟು ಭೂಮಿಯಾಗಿದೆ. ಸಚಿವಾಲಯವು ಇದರಲ್ಲಿ ಜಲಮೂಲಗಳು ಅಥವಾ ಸಣ್ಣ ಅರಣ್ಯ ಉತ್ಪನ್ನಗಳ ಬಳಕೆಗೆ ನೀಡಲಾದ ಹಕ್ಕುಗಳು ಸೇರಿದಂತೆ ಎಲ್ಲಾ ಸಮುದಾಯದ ಹಕ್ಕುಗಳನ್ನು ಪರಿಗಣಿಸುತ್ತದೆ.
ಪ್ರಸ್ತುತ ಪ್ರಕರಣದಲ್ಲಿ, ಅರಣ್ಯಭೂಮಿ ನಿರ್ವಹಣೆಯನ್ನು ಎರಡು ಗ್ರಾಮಗಳಿಗೆ ಜಂಟಿಯಾಗಿ ನೀಡಲಾಗಿದೆ – ಕೊಡಲ್ಪಲಿ ಮತ್ತು ಸಿಂದೂರಿಯಾ. ಶೀರ್ಷಿಕೆ ಪತ್ರವು ನಿರ್ವಹಣೆಗಾಗಿ ಸುಮಾರು 300 ಹೆಕ್ಟೇರ್ಗಳನ್ನು ಗುರುತಿಸಿದೆ. ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ, ಸಂಸ್ಕರಿಸುವ, ಬಳಸುವ ಮತ್ತು ಮಾರಾಟ ಮಾಡುವ ಹಕ್ಕು ಈಗ ಇಲ್ಲಿನ ಹಳ್ಳಿಗಳಿಗೆ ಇದೆ. ಇದು ಮೌಲ್ಯವರ್ಧನೆ, ಸಂಗ್ರಹಣೆ ಮತ್ತು ಗ್ರಾಮದ ಗಡಿಯೊಳಗೆ ಮತ್ತು ಹೊರಗೆ ಉತ್ಪನ್ನಗಳ ಸಾಗಣೆಯ ಹಕ್ಕನ್ನು ಸಹ ಒಳಗೊಂಡಿದೆ.
ಇದು ಸ್ಪಷ್ಟ ಬದಲಾವಣೆಯಾಗಿದೆ. ಇದರರ್ಥ ಈ ಗ್ರಾಮಗಳು ಈಗ ರಕ್ಷಣೆಯ ಮುಂದಿನ ಹಂತಕ್ಕೆ ಹೋಗಬಹುದು, ಅಲ್ಲಿನ ಹಸಿರು ಸಂಪತ್ತು, ಹಸಿರು ಉದ್ಯೋಗಗಳು ಮತ್ತು ಹಸಿರು ಆರ್ಥಿಕತೆಯ ಆಧಾರವಾಗಿದೆ.
ಈ ಮರ-ವೈವಿಧ್ಯತೆಯ ಪ್ರದೇಶದ ನಿರ್ವಹಣೆಗಾಗಿ ಈ ಹಳ್ಳಿಗಳಿಗೆ ಈಗ ಒಂದು ಯೋಜನೆ ಅಗತ್ಯವಿದೆ. ಇದರಿಂದಾಗಿ ಅವರು ಮರದಿಂದ ಮಾತ್ರವಲ್ಲ, ಅರಣ್ಯ ಸಂಪತ್ತು ಒದಗಿಸುವ ಇತರ ಎಲ್ಲ ಸಂಪತ್ತಿನಿಂದಲೂ ಲಾಭ ಪಡೆಯಬಹುದು. ಅರಣ್ಯ ನಿರ್ವಹಣೆಯಲ್ಲಿ ಹಳ್ಳಿಯ ಸಮುದಾಯಗಳು ತೊಡಗಿಸಿಕೊಂಡಾಗ – ಅಥವಾ ಕೊಡಲ್ಪಾಲಿ ಪ್ರಕರಣದಲ್ಲಿ ನಿಯಂತ್ರಣವನ್ನು ನೀಡಿದಾಗ ಕಾಡುಗಳು ಉಳಿಯುತ್ತವೆ ಎಂದು ಈ ಅನುಭವವು ತೋರಿಸುತ್ತದೆ. ಇಂಥ ಬೆಳವಣಿಗೆಯಿಂದ ಮಾತ್ರ ನಾವು ಮರ ಆಧಾರಿತ ಆರ್ಥಿಕತೆಯತ್ತ ಸಾಗಬಹುದು.
ಬಹುತೇಕ ಕಡೆಗಳಲ್ಲಿ ಹವಾಮಾನ ಸಂಕೀರ್ಣ ಪರಿಸ್ಥಿತಿಯಲ್ಲಿದೆ. ಅಪಾಯದ ಹಂತದಲ್ಲಿದೆ. ಇಂಥ ಅಪಾಯಗಳನ್ನು ನಿವಾರಿಸಲು ಇಲ್ಲಿ ನಿಜವಾದ ಅವಕಾಶವಿದೆ. ಪ್ರಪಂಚದ ಹಸಿರು ಹೊದಿಕೆಯನ್ನು ಹೆಚ್ಚಿಸಬೇಕು ಎಂದು ನಮಗೆ ತಿಳಿದಿದೆ, ಕಾಡುಗಳು ಇಂಗಾಲದ ಡೈಆಕ್ಸೈಡ್ ಅನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತವೆ.. ಪ್ರಕೃತಿ-ಆಧಾರಿತ ಪರಿಹಾರಗಳು ಮಾತ್ರ ಎಲ್ಲವನ್ನೂ ಎಲ್ಲರನ್ನೂ ರಕ್ಷಿಸಬಲ್ಲುದು.
ಕೊಡಲ್ಪಲಿ, ಸಿಂದೂರಿಯಾ ಮತ್ತು ಅಕ್ಕಪಕ್ಕದ ಹಳ್ಳಿಗಳ ಮಹಿಳೆಯರು “ ಕಾಡುಗಳು ತಮ್ಮನಿಜವಾದ ನೆಲೆಗಳು, ಅವುಗಳು ನಮ್ಮ ಭವಿಷ್ಯದ ಆರ್ಥಿಕತೆಯನ್ನು ನಿರ್ಮಿಸುವ ಶಕ್ತಿಯನ್ನು ಹೊಂದಿವೆ. ಇದೆಲ್ಲ ತಮಗಾಗಿ ಮಾತ್ರವಲ್ಲ, ಇಡೀ ಜಗತ್ತಿಗೆ”
ಈ ಮಾತುಗಳು ಭಾರಿ ಅರ್ಥಪೂರ್ಣವಾಗಿವೆ.