ಮೈಸೂರಿನ ನಮ್ಮ ಮನೆ ಹಿತ್ತಲಿನಲ್ಲಿ ಬಳ್ಳಿ ಬದನೆ ಗಿಡ ನೆಟ್ಟು ನೀರು ಹಾಕುತ್ತ ಪೋಷಿಸುತ್ತ ಬಂದಿದ್ದೆವು. ದಾಳಿಂಬೆ ಮರಕ್ಕೆ ಬಳ್ಳಿ ದಷ್ಟಪುಷ್ಟವಾಗಿ ಹಬ್ಬುತ್ತಲೇ ಇತ್ತು. ಒಂದು ಹೂ ಬಿಟ್ಟಿಲ್ಲ, ಒಂದು ಕಾಯಿ ಬಿಟ್ಟಿಲ್ಲ, ಏನಿಲ್ಲ, ಇದಕ್ಕೆ ನೀರು ಬೇರೆ ಕೇಡು ಎಂದು ಸಿದ್ದಮ್ಮ ಶತ ಅರ್ಚನೆ ಮಾಡುತ್ತಲೇ ದಿನಾ ನೀರು ಹಾಕುತ್ತಿದ್ದಳು! ಈ ಗಿಡವನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ತಮ್ಮ ಶ್ರೀಪತಿ ಕೊಟ್ಟಿದ್ದ. ಅವನೂ ಒಂದು ಗಿಡ ನೆಟ್ಟಿದ್ದ ಅಲ್ಲಿ !
ಕಳೆದ ತಿಂಗಳು ಅಮ್ಮ ದೂರವಾಣಿಸಿದಾಗ `ಇಲ್ಲಿ ಬಳ್ಳಿಬದನೆ 3 ಕಾಯಿ ಬಿಟ್ಟಿದೆ’ ಎಂದು ಸುದ್ದಿ ಹೇಳಿದರು. ಹಾಗೆ ನಮ್ಮಲ್ಲಿರುವ ಗಿಡವನ್ನೂ ಕೂಲಂಕಷವಾಗಿ ಪರೀಕ್ಷಿಸಿ ನೋಡಿದಾಗ ಹೂ ಬಿಟ್ಟಿರುವುದು ಕಂಡಿತು! ಯುರೇಕಾ ಎಂದು ಸಂತೋಷದಿAದ ಕಿರುಚುವಂತಾಯಿತು! ಹೂ ಗಡಿಯಾರದ ಹೂವಿನಂತೆ ದೊಡ್ದದಾಗಿ ನೇರಳೆ ಬಣ್ಣದಿಂದ ಕೂಡಿದ್ದು, ಅತ್ಯಾಕರ್ಷಕವಾಗಿತ್ತು.
ಘಮ ಘಮ ಪರಿಮಳ. ಹೂಗಳು ಬಿಟ್ಟು ಉದುರುತ್ತಿದ್ದುವು. ಹೀಗಿರಲಾಗಿ ಒಂದು ಕಾಯಿ ಬಿಟ್ಟು ದೊಡ್ದದಾಗಿ ಕೊಯ್ಯಲು ಸಿಕ್ಕಿತು. ಬಳ್ಳಿಯಲ್ಲಿ ಇನ್ನೂ ಹೂ ಬಿಡುತ್ತ ಇದೆ. ಸದ್ಯ ನೆಟ್ಟದ್ದಕ್ಕೆ ಒಂದಾದರೂ ಕಾಯಿ ಬಿಟ್ಟಿತಲ್ಲ ಎಂದು ಸಿದ್ದಮ್ಮ ಈಗ ಸಮಾಧಾನ ಹೊಂದಿ ಈಗ ಗಿಡಕ್ಕೆ ಅರ್ಚನೆ ಇಲ್ಲದೆ ನೀರು ಹಾಕುತ್ತಿದ್ದಾಳೆ!
ಇದು ಸೀಮೆ ಬದನೆಯ ಜಾತಿಯಂತೆ ತೋರುತ್ತಿದೆ. ಆದರೆ ಅಷ್ಟು ಧಾರೆಗಳಿಲ್ಲ. ಬಲುಬೇಗ ಬೇಯುತ್ತದೆ. ಅಷ್ಟು ಮೆತ್ತಗೆ. ಹಿಟ್ಟು ಹಿಟ್ಟಾಗಿ ರುಚಿಯಾಗಿದೆ. ಇದರಿಂದ ಪಲ್ಯ, ಸಾಂಬಾರು, ಮಜ್ಜಿಗೆಹುಳಿ, ಹಲ್ವ ತಯಾರಿಸಬಹುದು. ಒಮ್ದು ಬಳ್ಳಿ ಸುಮಾರು ವರ್ಷ ಬಾಳಿಕೆ ಬರುತ್ತದೆ.
ನಮ್ಮಲ್ಲಿ ನೆಟ್ಟು 5 ವರ್ಷಗಳಾಯಿತು. ಹೂ ಬಿಟ್ಟು ಕಾಯಿ ಕೊಡುತ್ತಿದೆ. ತೊಂಡೆಬಳ್ಳಿಯಂತೆ ಬಳ್ಳಿ ನೆಟ್ಟರೂ ಬರುತ್ತದೆ. ಬದನೆ ಒಳಗೆ ಒಟ್ಟೊತ್ತಾಗಿ ಸುಮಾರು ಬೀಜಗಳಿವೆ. ಬಲಿತಬೀಜದಿಂದಲೂ ಸಸಿ ಮಾಡಬಹುದು. ನೆಟ್ಟಂತೆ ಬಳ್ಳಿ ಬದನೆ ಗಿಡ ನೆಟ್ಟು ಕಾಯಿ ಬಿಡಲು ಅಷ್ಟು ಸಮಯ ಬೇಕೆ? ಬಲ್ಲವರು ತಿಳಿಸಬೇಕಾಗಿ ಕೋರಿಕೆ.