ಸಾವಯವ ಕೃಷಿಪದ್ಧತಿಯಲ್ಲಿ ಸಮೃದ್ಧ ಇಳುವರಿಗೆ ಜೈವಿಕ ಗೊಬ್ಬರ ಬಳಕೆ

0

ಕೃಷಿಗೆ ಉಪಯುಕ್ತವಾಗುವ ಸೂಕ್ಷ್ಮಾಣು ಜೀವಿಗಳು,  ಗೊಬ್ಬರಗಳನ್ನು ಅತ್ಯುತ್ತಮವಾಗಿ ಕಳಿಯುವಂತೆ ಮಾಡುವ  ಸೂಕ್ಷ್ಮಾಣು  ಜೀವಿಗಳು, ಸಾರಜನಕ ಸ್ಥಿರೀಕರಿಸುವ, ರಂಜಕ ಕರಗಿಸುವ, ಪೊಟ್ಯಾಷ್ ಕರಗಿಸುವ, ಗಂಧಕ ಹಾಗೂ ಇತರೆ ಪೋಷಕಾಂಶಗಳನ್ನು ಗಿಡಕ್ಕೆ ಒದಗಿಸಬಲ್ಲ ಸೂಕ್ಷ್ಮಾಣು ಜೀವಿಗಳು ಜೈವಿಕ ಗೊಬ್ಬರದಲ್ಲಿ ಸಿಗುತ್ತದೆ. ಸಾವಯವ ಕೃಷಿಪದ್ಧತಿಯಲ್ಲಿ ಜೈವಿಕ ಗೊಬ್ಬರಗಳು ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

 ಜೈವಿಕ ಗೊಬ್ಬರಗಳೆಂದರೆ ಪ್ರಯೋಜನಕಾರಿ ಸೂಕ್ಷö್ಮಜೀವಿಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ತಯಾರಾದ ಗೊಬ್ಬರಗಳು. ಇವುಗಳನ್ನು ಅಣುಜೀವಿಗಳೆಂದು ಕರೆಯುವುದುಂಟು. ಸೂಕ್ಷ್ಮಾಣು ಜೀವಿಗಳನ್ನು ಬೀಜ ಲೇಪನಗಳಾಗಿ ಅಥವಾ ಮಣ್ಣಿನಲ್ಲಿ ಬೆರಸಲು ಅನುಕೂಲವಾಗುವಂತೆ ತಯಾರಿಸುತ್ತಾರೆ, ಇವು ಸಸ್ಯಗಳ ಬೇರಿನ ಆವರಣದಲ್ಲಿ ಚಟುವಟಿಕೆಯಿಂದ ಇದ್ದು ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸಿ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ವಿವಿಧ ಜೈವಿಕ ಗೊಬ್ಬರಗಳು

 ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೋಸ್ಪೆöÊರಿಲಂ, ಗ್ಲುಕನೋ ಬ್ಯಾಕ್ಟರ್, ಅಜೋಲ್ಲಾ, ಹಸಿರು ಪಾಚಿ, ಶಿಲೀಂಧ್ರಗಳು – ಮೈಕೋರೈಜಾ, ಟ್ರೆöÊಕೋಡರ್ಮಾ, ಸಸ್ಯ ಬೆಳವಣಿಗೆಕಾರಕ ಸೂಕ್ಷ್ಮಾಣು ಜೀವಿಗಳು, ಬ್ಯಾಕ್ಟೀರಿಯಾ ಇತ್ಯಾದಿ.

ಸಾರಜನಕವನ್ನು ಸ್ಥಿರೀಕರಿಸುವ ಜೈವಿಕ ಗೊಬ್ಬರಗಳು

ನಾವು ಜೀವಿಸುವ ವಾತಾವರಣದಲ್ಲಿ ಶೇ. 78 ರಷ್ಟು ಸಾರಜನಕವಿದೆ, ಆದರೆ ಇದು ಬೆಳೆಗಳಿಗೆ ನೇರವಾಗಿ ಸಿಗುವುದಿಲ್ಲ, ಯಾಕೆಂದರೆ ಇದು ಅನಿಲ ರೂಪದಲ್ಲಿರುತ್ತದೆ. ಬೆಳೆಗಳಿಗೆ ಯಾವುದೇ ಪೋಷಕಾಂಶಗಳು ಘನ ರೂಪದಲ್ಲಿ ಅಥವಾ ನೀರಿನಲ್ಲಿ ಕರುಗುವಂತಿದ್ದರೆ ಮಾತ್ರ ಉಪಯೋಗವಾಗುತ್ತದೆ. ಆದುದರಿಂದ ಅನಿಲ ರೂಪದಲ್ಲಿರುವ ಸಾರಜನಕವನ್ನು ಈ ಸೂಕ್ಷಾö್ಮಣುಜೀವಿಗಳು ತಮ್ಮಲ್ಲಿರುವ ಕಿಣ್ವಗಳ ಸಹಾಯದಿಂದ ಘನ ರೂಪಕ್ಕೆ ಪರಿವರ್ತನೆ ಮಾಡಿ ಬೆಳೆಗಳಿಗೆ ಒದಗಿಸುತ್ತವೆ. ಈ ಕ್ರಿಯೆಯನ್ನು ಸಾರಜನಕ ಸ್ಥಿರೀಕರಣವೆನ್ನುತ್ತಾರೆ.

ರೈಜೋಬಿಯಂ ಜೈವಿಕ ಗೊಬ್ಬರ

ರೈಜೋಬಿಯಂ ಎನ್ನುವುದು ಬ್ಯಾಕ್ಟೀರಿಯಾ ಗುಂಪಿಗೆ ಸೇರಿದ ಏಕಾಣುಜೀವಿ. ಇದನ್ನು ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಕಡಲೆ, ಅವರೆ, ಅಲಸಂದೆ, ಹೆಸರು ಮುಂತಾದ ಬೆಳೆಗಳಿಗೆ ಬೀಜೋಪಚಾರ ಮಾಡುವುದರಿಂದ ಅದು ಸಸ್ಯಗಳ ಬೇರಿನೊಳಗೆ ಪ್ರವೇಶಿಸಿ, ವೃದ್ಧಿಗೊಂಡು ಬೇರಿನ ಮೇಲೆ ಗಂಟುಗಳನ್ನುಂಟುಮಾಡಿ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಬೆಳೆಗಳಿಗೆ ದೊರಕುವಂತೆ ಮಾಡುತ್ತದೆ. ಒಂದೇ ಜಾತಿಯ ರೈಜೋಬಿಯಂ ಅನ್ನು ಎಲ್ಲ ದ್ವಿದಳ ಧಾನ್ಯ ಬೆಳೆಗಳಿಗೆ ಉಪಯೋಗಿಸಲಾಗದು, ಪ್ರತಿಯೊಂದು ಗುಂಪಿನ ದ್ವಿದಳ ಬೆಳೆಗಳಿಗೆ ನಿರ್ದಿಷ್ಟವಾದ ರೈಜೋಬಿಯಂ ಅನ್ನು ಉಪಯೋಗಿಸಬೇಕು.

ಉಪಯೋಗಗಳು

  1. ಬೇಳೆಕಾಳುಗಳಲ್ಲಿ ಶಿಫಾರಸ್ಸು ಮಾಡಿದ ಸಾರಜನಕ ಪ್ರಮಾಣವನ್ನು ಶೇ. 50 ರಷ್ಟು ಕಡಿಮೆ ಮಾಡಬಹುದು.
  2. ದ್ವಿದಳ ಧಾನ್ಯಗಳಲ್ಲಿ ಸಾರಜನಕದ ಪ್ರಮಾಣ ಮತ್ತು ಇಳುವರಿಯನ್ನು ಶೇ 15-20 ರಷ್ಟು ಹೆಚ್ಚಿಸಬಹುದು.
  3. ಜೈವಿಕವಾಗಿ ಸ್ಥಿರೀಕರಣವಾಗುವ ಅಥವಾ ಲಭ್ಯವಾಗುವ ಪೋಷಕಾಂಶಗಳು ಮಣ್ಣಿನಲ್ಲಿ ಶೇಖರಣೆಗೊಂಡು ಮುಂದಿನ ಬೆಳೆಗಳಿಗೆ ಒದಗಿಸಿ ಅದರ ಇಳುವರಿಯನ್ನೂ ಹೆಚ್ಚಿಸುತ್ತದೆ.
  4. ಮಣ್ಣಿನ ಫಲವತ್ತತೆ ಮತ್ತು ಭೌತಿಕ ರಚನೆಯನ್ನು ಉತ್ತಮಗೊಳಿಸಬಹುದು, ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು.

ಅಜೋಸ್ಪಿರಿಲಂ ಜೈವಿಕ ಗೊಬ್ಬರ

ಅಜೋಸ್ಪಿರಿಲಂ ಕೂಡ ದುಂಡಾಣು ಗುಂಪಿಗೆ ಸೇರಿದ ಮತ್ತೊಂದು ಏಕಾಣುಜೀವಿ. ಇದನ್ನು ಏಕದಳ ಧಾನ್ಯ ಬೆಳೆಗಳಾದ ಜೋಳ, ಗೋಧಿ, ಮುಸುಕಿನ ಜೋಳ, ರಾಗಿ, ಭತ್ತ, ಸಜ್ಜೆ, ಹತ್ತಿ ಮತ್ತು ಸೂರ್ಯಕಾಂತಿ ಮುಂತಾದ ಬೆಳೆಗಳಿಗೆ ಬೀಜಲೇಪನ ಮಾಡುವ ಮೂಲಕ ವಾತಾವರಣದಲ್ಲಿ ಹೇರಳವಾಗಿ ಸಿಗುವ ಸಾರಜನಕವನ್ನು ಸ್ಥಿರೀಕರಿಸಬಹುದು.

ನಾಟಿಮಾಡುವ ಬೆಳೆಗಳಾಗಿದ್ದಲ್ಲಿ (ಭತ್ತ, ಮೆಣಸಿನಕಾಯಿ, ಟೊಮೊಟೊ ಇತ್ಯಾದಿ) ಒಂದು ಕಿಲೋ ಅಜೋಸ್ಪಿರಿಲಂ ಜೈವಿಕ ಗೊಬ್ಬರವನ್ನು 20 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ, ಸಸಿಗಳ ಬೇರನ್ನು ಮಾತ್ರ ಮಿಶ್ರಣದಲ್ಲಿ ಅದ್ದಿ ನಾಟಿ ಮಾಡಬಹುದು. ತೋಟಗಾರಿಕೆ ಬೆಳೆಗಳಲ್ಲಿ ಗಿಡದ ಸುತ್ತ ತಗ್ಗು ತೆಗೆದು ಉಂಗುರಾಕಾರದಲ್ಲಿ ಸಾವಯವ ಗೊಬ್ಬರದ ಜೊತೆಯಲ್ಲಿ ಪ್ರತಿ ಗಿಡಕ್ಕೆ 50 ಗ್ರಾಂ ಅಜೋಸ್ಪಿರಿಲಂ ಹಾಕುವುದು ಸೂಕ್ತ.

ಉಪಯೋಗಗಳು

  1. ಏಕದಳ ಧಾನ್ಯ ಬೆಳೆಗಳಲ್ಲಿ ಅಜೋಸ್ಪಿರಿಲಂ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಮೂಲಕ ಕೊಡುವ ಸಾರಜನಕದಲ್ಲಿ ಶೇ. 25 ರಷ್ಟನ್ನು ಉಳಿತಾಯ ಮಾಡಬಹುದು.
  2. ಅಜೋಸ್ಪಿರಿಲಂ ಜೈವಿಕ ಗೊಬ್ಬರದಲ್ಲಿ ಇಂಡೋಲ್ ಆಸಿಟಿಕ್ ಆಮ್ಲ, ಜಿರ‍್ಲಿನ್ಸ್ ಮತ್ತು ಸೈಟೋಕೈನಿನ್‌ಗಳೆಂಬ ಬೆಳವಣಿಗೆಗೆ ಪ್ರಚೋದನಕಾರಿ ವಸ್ತುಗಳಿರುವುದರಿಂದ ಸಸ್ಯಗಳ ಬೆಳವಣಿಗೆ ಉತ್ತಮವಾಗಿರುತ್ತದೆ.
  3. ಬೆಳೆ ಇಳುವರಿಯನ್ನು ಶೇ. 10-13 ರಷ್ಟು ಹೆಚ್ಚಿಸಬಹುದು.

ಅಜೋಟೊಬ್ಯಾಕ್ಟರ್ ಜೈವಿಕ ಗೊಬ್ಬರ

ಅಜೋಟೊಬ್ಯಾಕ್ಟರ್ ಜೈವಿಕ ಗೊಬ್ಬರಗಳನ್ನು ಭತ್ತ, ಗೋಧಿ, ಹತ್ತಿ, ಜೋಳ, ಕುಸುಬೆ, ಬದನೆ, ಟೊಮೊಟೊ, ತೆಂಗು, ಅಡಿಕೆ, ಕೋಸು, ರೇಷ್ಮೆ ಹಾಗೂ ಇನ್ನಿತರ ಬೆಳೆಗಳಲ್ಲಿ ಬಳಸಬಹುದು. ಅಜೋಟೊಬ್ಯಾಕ್ಟರ್ ಕೂಡ ಬ್ಯಾಕ್ಟೀರಿಯಾ ಗುಂಪಿಗೆ ಸೇರಿದ ಏಕಾಣುಜೀವಿ. ಇದು ಸ್ವತಂತ್ರವಾಗಿ ಬದುಕುವ ಜೀವಾಣು. ಇದನ್ನು ಬೆಳೆಗಳಿಗೆ ಬೀಜೋಪಚರಿಸುವುದರಿಂದ ಪರಿಸರದಲ್ಲಿ ಸಿಗುವಂತಹ ಸಾರಜನಕವನ್ನು ಸಂಗ್ರಹಿಸಿ, ಸ್ಥಿರೀಕರಿಸಿ ಬೆಳೆಗಳಿಗೆ ದೊರಕಿಸಿ ಕೊಡುವುದರಿಂದ ಸಾರಜನಕ ಕೊರತೆಯನ್ನು ಸರಿದೂಗಿಸುತ್ತದೆ.

ಉಪಯೋಗಗಳು

  1. ಅಜೋಟೊಬ್ಯಾಕ್ಟರ್ ಜೈವಿಕ ಗೊಬ್ಬರ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳ ಮೂಲಕ ಕೊಡುವ ಸಾರಜನಕದಲ್ಲಿ ಶೇ. 25 ರಷ್ಟನ್ನು ಉಳಿತಾಯ ಮಾಡಬಹುದು.
  2. ಅಜೋಟೊಬ್ಯಾಕ್ಟರ್ ಜೀವಿಗಳು, ಫೆüವಿನ್, ರೈಬೊಪ್ಲೇವಿನ್, ನಿಕೋಟೆನಿಕ್ ಆಮ್ಲ, ಬಯೋಟಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲಗಳನ್ನು ಉತ್ಪಾದಿಸುವುದರಿಂದ ಬೆಳೆಗಳ ಪೌಷ್ಠಿಕಾಂಶವನ್ನು ಹೆಚ್ಚಿಸಬಹುದು.
  3. ಅಜೋಟೊಬ್ಯಾಕ್ಟರ್‌ನಲ್ಲಿ ಸಸ್ಯ ಪ್ರಚೋದನಕಾರಿ ವಸ್ತುಗಳಾದ ಇಂಡೋಲ್ ಆಸಿಟಿಕ್ ಆಮ್ಲ ಹಾಗೂ ಜಿಬ್ರ‍್ಲಿನ್ಸ್ಗಳನ್ನು ಉತ್ಪಾದಿಸುವುದರಿಂದ ಬೆಳೆಗಳ ಬೆಳವಣಿಗೆ ಮತ್ತು 12-15 ರಷ್ಟು ಇಳುವರಿಯನ್ನು ಹೆಚ್ಚಿಸಬಹುದು.

ಗ್ಲುಕನೋಬ್ಯಾಕ್ಟರ್

ಈ ಸೂಕ್ಷಾö್ಮಣು ಜೀವಿಯು ಸಕ್ಕರೆಯುಕ್ತ ಬೆಳೆಗಳಾದ ಕಬ್ಬು, ಗೆಣಸು, ಟಾಪಿಯೋಕಾ, ಬೀಟ್ ರೂಟ್ ಇತ್ಯಾದಿ ಬೆಳೆಗಳಲ್ಲಿ ಒಳಹೊಕ್ಕು, ನೆಲಸಿ ವಾಯುಮಂಡದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಒದಗಿಸುತ್ತದೆ. ಕಬ್ಬಿನಲ್ಲಿ ಈ ಜೀವಾಣುವನ್ನು ಬಳಸುವುದರಿಂದ ಶೇಕಡ 25-30 ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಅಜೋಲ್ಲಾ

ಇದು ನೀರಿನಲ್ಲಿ ಬೆಳೆಯುವ ಸಸ್ಯ. ಇದರ ಎಲೆಗಳ ಹಿಂದೆ ಸಣ್ಣ ಸಣ್ಣ ರಂಧ್ರಗಳಿದ್ದು ಅವುಗಳಲ್ಲಿ ಅನೇಬಿನಾ ಎಂಬ ನೀಲಿ ಹಸಿರು ಪಾಚಿ ಅಡಕವಾಗಿದ್ದು ವಾಯು ಮಂಡಲದಲ್ಲಿರುವ ಸಾರಜನಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ಅಜೋಲ್ಲಾವನ್ನು ಭತ್ತದ ಗದ್ದೆಯಲ್ಲಿ ಬೆಳೆಯುವುದರಿಂದ ಸಾರಜನಕ ಮತ್ತು ಇತರೆ ಪೋಷಕಾಂಶಗಳು ಹಾಗೂ ಹೆಚ್ಚಿನ ಹಸಿರೆಲೆಗೊಬ್ಬರವನ್ನು ಭೂಮಿಗೆ ಸೇರಿಸಿದಂತಾಗುತ್ತದೆ.

ಇದನ್ನು ಗೊಬ್ಬರವಾಗಿ ತರಕಾರಿ, ಹೂವಿನಗಿಡ ಮತ್ತು ಇತರ ಅಲಂಕಾರಿಕ ಸಸ್ಯಗಳಲ್ಲಿ ಬಳಸಬಹುದು. ಕಾಂಪೋಸ್ಟ್ ತಯಾರಿಕೆಯಲ್ಲಿ ಬಳಸುವುದರಿಂದ ಸಂಪದ್ಭರಿತ ಗೊಬ್ಬರವನ್ನು ಪಡೆಯಬಹುದು. ಪಶು ಸಂಗೋಪನೆ, ಕೋಳಿ ಸಾಕಣೆ, ಹಂದಿ ಸಾಕಣೆ, ಮೀನಗಾರಿಕೆಯಲ್ಲಿ ಆಹಾರವಾಗಿ ಬಳಸಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಅಜೋಲ್ಲಾದಲ್ಲಿರುವ ಪೋಷಕಾಂಶಗಳು (ಶೇಕಡ) ಸಾರಜನಕ 4-6, ರಂಜಕ-0.5-09, ಪೊಟ್ಯಾಷ್- 3-6.7, ಸುಣ್ಣ 0.4-1, ಮೆಗ್ನೀಷಿಯಂ-0.5, ಮ್ಯಾಂಗನೀಸ್ 0.11-1.16 ಕಬ್ಬಿಣ 0.06-0.16, ಬೂದಿ 9-10.0, ಪಿಷ್ಟ 5-6, ಕೊಬ್ಬು-5, ಕಚ್ಚಾ ಸಸಾರಜನಕ 24-26, ಕಚ್ಚಾ ನಾರು-9.

ಹಸಿರು ಪಾಚಿ

ಈ ಜೀವಾಣು ವಾಯು ಮಂಡಲದಲ್ಲಿರುವ ಸಾರಜನಕವನ್ನು ಹೀರಿ ಭತ್ತದ ಬೆಳವಣಿಗೆಗೆ ಒದಗಿಸಿ ಭತ್ತದ ಇಳುವರಿಯನ್ನು ಶೇಕಡ 15-18 ರಷ್ಟು ಹೆಚ್ಚಿಸುತ್ತದೆ. ಹಾಗೂ 12-15 ರಷ್ಟು ಸಾರಜನಕಯುಕ್ತ ರಸಗೊಬ್ಬರ ಹಾಕುವಿಕೆಯನ್ನು ಮಿತಿಗೊಳಿಸುವುದು. ಇದಕ್ಕೆ ಮಣ್ಣಿನ ರಸಸಾರ 7-8.5 ಹಾಗೂ ಉಷ್ೞತೆ 20-250 ಸೆಂ. ಅತಿ ಸೂಕ್ತ. ಇದರ ಬೆಳವಣಿಗೆಗೆ ಸೂರ್ಯನ ಬೆಳಕು ಮತ್ತು ಸ್ವಲ್ಪ ಮಟ್ಟದ ರಂಜಕ ಅಗತ್ಯವಿರುತ್ತದೆ.

ರಂಜಕವನ್ನು ಕರಗಿಸುವ ಜೈವಿಕ ಗೊಬ್ಬರ

ರಂಜಕವೂ ಇತರೆ ಪೋಷಕಾಂಶಗಳAತೆ ಸಸ್ಯಗಳ ಬೆಳವಣಿಗೆಗೆ ಮತ್ತು ಇಳುವರಿಗೆ ಬಹಳ ಮುಖ್ಯ. ಭೂಮಿಗೆ ಹಾಕಿದ ರಂಜಕದ ರಸಗೊಬ್ಬರಗಳು ಬೆಳೆಗಳಿಗೆ ಸಂಪೂರ್ಣವಾಗಿ ಸಿಗುವುದಿಲ್ಲ. ಹಾಕಿದ ರಂಜಕವೂ ಮಣ್ಣಿನಲ್ಲಿರುವ ಲವಣಗಳೊಡನೆ ರಾಸಾಯನಿಕ ಕ್ರಿಯೆ ನಡೆಸಿ ಶೇ. 60-70 ರಷ್ಟು ಬೆಳೆಗಳಿಗೆ ಲಭ್ಯವಾಗದೇ ಮಣ್ಣಿನಲ್ಲೇ ಹಿಡಿದಿಡಲ್ಪಡುತ್ತವೆ.

ಮಣ್ಣಿನಲ್ಲಿ ಕರಗದ ರಂಜಕವನ್ನು ಕರಗಿಸಿ ಬೆಳೆಗಳಿಗೆ ಸುಲಭವಾಗಿ ದೊರೆಯುವಂತೆ ಮಾಡಲು ದುಂಡಾಣುಗಳಾದ ಸುಡೋಮೊನಾಸ್ ಸ್ಟಿçಯೇಟ, ಬ್ಯಾಸಿಲಸ್ ಮೆಗಟೇರಿಯಂ ಮತ್ತು ಬ್ಯಾಸಿಲಸ್ ಪಾಲಿಮಿಕ್ಸ, ಆಸ್ಪರ್ಜಿಲಿಸ್ ಅವಮೋರಿ ಮತ್ತು ಆಸ್ಪಿರ್ಜಿಲಿಸ್ ನೈಜರ್‌ಗಳ ಪಾತ್ರ ತುಂಬಾ ಮಹತ್ವವಾದದ್ದು. ಇವುಗಳು ಆಮ್ಲಗಳನ್ನು ಉತ್ಪಾದಿಸಿ ಕರಗದ ರಾಸಾಯನಿಕ ಫಾಸ್ಫೇಟನ್ನು ಕರಗಿಸಿ ಬೆಳೆಗಳಿಗೆ ದೊರೆಯುವಂತೆ ಮಾಡುತ್ತವೆ. ಈ ಜೈವಿಕ ಗೊಬ್ಬರಗಳನ್ನು ಎಲ್ಲಾ ಬೆಳೆಗಳಿಗೂ ಉಪಯೋಗಿಸಬಹುದು.

ಉಪಯೋಗಗಳು

  1. ರಂಜಕ ಕರಗಿಸುವ ಜೈವಿಕ ಗೊಬ್ಬರಗಳು ಆಮೈನೋ ಆಮ್ಲ, ವಿಟಮಿನ್ ಮತ್ತು ಬೆಳವಣಿಗೆ ಪ್ರಚೋದನೆಗೊಳಿಸುವ ಇಂಡೋಲ್ ಆಸಿಟಿಕ್ ಆಮ್ಲ ಮತ್ತು ಜಿಬ್ರ‍್ಲಿನ್ಸ್ ಗಳನ್ನು ಉತ್ಪಾದಿಸುವುದರಿಂದ ಸಸಿಗಳ ಬೆಳವಣಿಗೆ ವೃದ್ಧಿಗೊಳ್ಳುತ್ತದೆ.
  2. ವಿವಿಧ ಬೆಳೆಗಳ ಇಳುವರಿಯನ್ನು ಶೇ. 10 ರಿಂದ 15 ರಷ್ಟು ಹೆಚ್ಚಿಸಬಹುದು.

ರಂಜಕ ದೊರಕಿಸಿಕೊಡುವ ಜೈವಿಕ ಗೊಬ್ಬರ (ವ್ಯಾಮ್)

 ಶಿಲೀಂಧ್ರ ಮತ್ತು ಸಸ್ಯದ ಬೇರಿನ ಸಹಜೀವನವನ್ನು ಮೈಕೋರೈಜಾ ಅಥವಾ ಶಿಲೀಂಧ್ರ ಬೇರು ಎಂದು ಕರೆಯುವರು. ಇದನ್ನು ವೆಸಿಕ್ಯುಲಾರ್ ಆರ್‌ಬೇಸಕ್ಯುಲಾರ್ ಮೈಕೋರೈಜಾ ಎಂದು ಕರೆಯಲಾಗುವುದು. ಇದು ರಂಜಕ ಮತ್ತು ಇತರೆ ಪೋಷಕಾಂಶಗಳನ್ನು ಸಸ್ಯಗಳಿಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳುವಂತೆ ಸಹಾಯ ಮಾಡುತ್ತದೆ.

ಮೈಕೋರೈಜಾ ಶಿಲೀಂಧ್ರ‍್ರವು ಸಸ್ಯಗಳು ಉತ್ಪಾದಿಸುವ ಇಂಗಾಲವನ್ನು ಬಳಸಿಕೊಂಡು, ಸಸಿಗಳ ಬೇರಿನ ಮೇಲೆ ಚಾಪೆಯಂತಹ ರಚನೆಯನ್ನು ಸೃಷ್ಠಿಸಿ ಅದರ ಮೂಲಕ ಮಣ್ಣಿನಿಂದ ಪೋಷಕಾಂಶಗಳನ್ನು ಪಡೆದು ಸಸ್ಯಗಳಿಗೆ ಒದಗಿಸುತ್ತದೆ. ಇದನ್ನು ಹತ್ತಿ, ಶೇಂಗಾ, ಜೋಳ, ಈರುಳ್ಳಿ, ಬಾಳೆ ಮುಂತಾದ ಬೆಳೆಗಳಲ್ಲಿ ಉಪಯೋಗಿಸಬಹುದು.

ಉಪಯೋಗಗಳು

  1. ಈ ಶಿಲೀಂಧ್ರವು ಸಸ್ಯಗಳ ಅಗತ್ಯಕ್ಕಿಂತ ಹೆಚ್ಚಾದ ಪೋಷಕಾಂಶಗಳನ್ನು ಶೇಖರಿಸುವುದು ಮತ್ತು ಸಸ್ಯಗಳಲ್ಲಿ ಕೊರತೆ ಕಂಡುಬಂದಾಗ ಶೇಖರಿಸಿರುವ ಪೋಷಕಾಂಶಗಳನ್ನು ಪೂರೈಸುವುದು.
  2. ಸಸಿಗಳಿಗೆ ಬರುವ ಬೇರಿನ ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ಸಸ್ಯಗಳಲ್ಲಿ ತುಂಬುತ್ತದೆ.
  3. ಈ ಶಿಲೀಂಧ್ರವು ಇಂಡೋಲ್ ಅಸಿಟಿಕ್ ಆಮ್ಲ ಮತ್ತು ಜಿಬ್ರ‍್ಲಿಕ್ ಆಮ್ಲಗಳನ್ನು ಉತ್ಪಾದಿಸುವುದರಿಂದ ಸಸ್ಯಗಳ ಬೆಳವಣಿಗೆ ಉತ್ತಮವಾಗಿರುತ್ತದೆ.

ಲೇಖಕರು:  

ಗಂಗಾಧರ ಎಂ.ಅರ್ಕಾಚಾರಿ ಎಂ.ಎಸ್ಸಿ ( ಕೃಷಿ) ಸಸ್ಯರೋಗ ಶಾಸ್ತ್ರಜ್ಞ , ಶ್ರೀ ಸಂಯೋಜಕ ಗೋ ಕೃಷಿ ಸಂಶೋಧನಾ ಉಪಖಂಡ ಶ್ರೀರಾಮಚಂದ್ರಾಪುರಮಠ , ಚಂದನಾ ಹೆಚ್.ಎಸ್ ಎಂ.ಎಸ್ಸಿ (ಕೃಷಿ) ಸಸ್ಯ ತಳಿ ಅಭಿವೃದ್ಧಿ ಮತ್ತು ಅನುವಂಶೀಕತೆ ವಿಭಾಗ ಭಾರತೀಯ ಕೃಷಿ ಸಂಶೋಧನಾ ಕೇಂದ್ರ ನವದೆಹಲಿ , ಐಶ್ವರ್ಯ.ಅ.ಅಂಗಡಿ

LEAVE A REPLY

Please enter your comment!
Please enter your name here