ಬೇಸಾಯ ಬಿಟ್ಟು ಬದುಕಲಾದೀತೇ …?

1
ಲೇಖಕರು: ರಮೇಶ್ ಚೀಮಾಚನಹಳ್ಳಿ

ಮನೆಯಲ್ಲೇ ಕೂತು ಕಂಪ್ಯೂಟರ್ ಕುಟ್ಟಿಕುಟ್ಟಿ ಬೇಜಾರಾದ್ದರಿಂದ ಇಲ್ಲೆ ಹೊಲದ ಕಡೆ ಹೋಗಿಬರೋಣ ಅಂತ ಹೊರಟೆ. ಮಳೆ ಬಂದಿದ್ದರಿಂದ ಒಂದಷ್ಟು ತೊಗರಿ ಹಾಕೋಣ ಅಂತ ಅಮ್ಮನೂ ಹೊಲದಲ್ಲಿ ತಯಾರಿ ಮಾಡ್ತಿದ್ರು. ಅದೇನು ದೊಡ್ಡ ಹೊಲವಲ್ಲ, ಒಂದು ಸಣ್ಣ ಜಾಗವಷ್ಟೆ. ತಿಂಗಳಿಗೆ ಒಂದು‌ ಸೇರು ಬೇಳೆ ಸಾರಿಗೆ,  ವರ್ಷಕ್ಕೆ ಒಂದಾರು ಸಾರಿ ತೊಗರಿಬೇಳೆ ಒಬ್ಬಟ್ಟು, ಇವೆಲ್ಲಕ್ಕೂ ಸೇರಿ ಒಂದಿಪ್ಪತ್ತು ಸೇರಾದ್ರೆ ಸಾಕು ಅನ್ಕೊಂಡು ಸಾಲು ಹಾಕೊಕೆ ಶುರು ಮಾಡಿದ್ವಿ.

ಸುಮಾರು ದಿನದಿಂದ ನಾನು ಜಮೀನಿನ ಕೆಲಸ ಮಾಡ್ದೆ ಕಳ್ಳ ಬಿದ್ದಿದ್ದಕ್ಕೆ ಬೆವರು ಎಲ್ಲ ಕಡೇನು ಕಿತ್ಕೊಂಡು ಬಂದಿತ್ತು. ಆದ್ರು ಕೆಲಸ ಮುಗಿಸಲೇಬೇಕಿತ್ತು. ಅಲ್ಲೇ ನನ್ನ ಕೆಲವು ಅಡಕಸ್ಪಿ ಗೆಳೆಯರು ಜೊತೆಗಿದ್ರು. ಅವರತ್ರ ನಾನು ಕಳ್ಬಿದ್ದಿರೋದನ್ನ ಸಮರ್ಥಿಸ್ಕೊಳ್ಳೊಕೆ ನನ್ನ ಗತ ಕಾಲದ ಕೃಷಿಗಾಥೆಗಳನ್ನ ಪುಂಕಾನು ಪುಂಕ ಪುಂಗತೊಡಗಿದೆ. ಒಂದಾನೊಂದು ಕಾಲದಲ್ಲಿ ಎರಡು ಎಕರೆ ಜೋಳಕ್ಕೆ ಇಬ್ಬರೇ ಸೇರಿ ಸಾಲು ಮಾಡಿದ್ದು,(ಗಿಡಕ್ಕೆ ಮಣ್ಣೇರಿಸಿದ್ದು) ನಿಮಿಷಕ್ಕೊಂದು ಸಾಲು ಸರಾಗವಾಗಿ ಹಾಕುತ್ತಿದ್ದದ್ದು…ಹೀಗೆ….

ಅತ್ತ ನಮ್ಮಮ್ಮ, ನೆನೆಸಿದ ಬಟ್ಟೆಯಲ್ಲಿ ತಂದಿದ್ದ ತೊಗರಿ ಬೀಜಾನ ಊಣ್ತಾ, ನನ್ನ ಮಾತಿಗೆ “ಹೌದೌದು” ಅಂತಿದ್ರು.

ತೊಗರಿ ಹಾಕಿದ್ದು ಮುಗಿದಾಗಿತ್ತು, ನಾವು ಗಂಡು ಮಕ್ಕಳು ಮನೆ ಕಡೆ ಹೊರಡೋಕೆ ರೆಡಿಯಾಗ್ತಿದ್ವಿ. ಆದ್ರೆ ಅಮ್ಮ ಅಲ್ಲೇ ಏನೊ ಮಾಡ್ತಿದ್ರು.. ನಾನು “ಏನಮ್ಮ” ಅಂತ ಕೇಳ್ದೆ ಅದಕ್ಕವ್ರು “ಅಯ್ಯೋ… ಅಲಸಂದ್ರೆ ಕಾಳು ಇಕ್ತಿದೀನಿ, ಮನೆ ಸಾರ್ಕ ಒಂದಷ್ಟು ಸಿಕ್ತವೆ” ಅಂತ ಅವರ ಕೆಲ್ಸ ಮುಂದುವರಿಸಿದ್ರು. ನಾವು ಅಲ್ಲೇ ಮಿಷೀನ್ ಮನೆ ಅತ್ರ ಸ್ವಲ್ಪವತ್ತು ಕೂತು ಹರಟೆ ಹೊಡೀತಾ ಸುದಾರ್ಸಕತಿದ್ವಿ. ಅಮ್ಮ ಇನ್ನೇನೊ ಚೆಲ್ತಿದ್ರು…ನಾನು ಮತ್ತೆ ಕೇಳ್ದೆ “ಇನ್ನೂ ಏನ್ಮಾಡ್ತಿದಿಯಮ್ಮ” ಅದಕ್ಕವರು “ಅಯ್ಯೊ…ಸೊಪ್ಪು ಬೀಜ ಚೆಲ್ತಿದೀನಿ ಇರು, ಮನೆಗೆ ಬೇಡಾ..?” ಅಂದ್ರು.

ಇಷ್ಟಾದ್ಮೇಲೆ ಒಂದಷ್ಟು ಹುಲ್ಲು ಕೊಯ್ಕಂಡು ಮನೆ ಕಡೆ ಬಂದ್ವಿ ಅನ್ನಿ.

“ಅಲ್ಲಾ ನಮಗೆ ಹೊಳಿದೇ ಇರೋದು ಈ ಅಮ್ಮಂದಿರಿಗೆ ಹೇಗೆ ಹೊಳೆಯುತ್ತೆ” ಅನ್ನೋದು ಇಂದಿಗೂ ನನ್ನ ಕೌತುಕದ ವಿಷಯ. ಮನೆಗೆ ಏನು ಬೇಕು ಏನು ಬೇಡ ಅನ್ನೋದು ಅವರಿಗೆ ಮಾತ್ರ ಗೊತ್ತಿರುತ್ತಾ ಅಂತ.

ನಮಗೆ ಕೃಷಿ ಅಂದ್ರೆ ತೋಟದಲ್ಲಿರೋ ಬೆಳೆ, ಅದರಲ್ಲೂ ಮುಖ್ಯಬೆಳೆ ಮಾರಿದಾಗ ಬರೋ ದುಡ್ಡು ಮಾತ್ರ. ಆದ್ರೆ ನಮ್ಮಮ್ಮನಿಗೆ ಆಗಲ್ಲ. ಮನೆಯಲ್ಲಿರೋ ದನಾ,ಕರು,ಕೋಳಿ ಮನೆ ಪಕ್ಕದ ಬೀದಿಯ ಕಸ, ಮರದಡಿ ಬಿದ್ದ ವಂಗೆ ಎಲೆ-ಹೊವು, ದಾರೀಲಿ ಬಿದ್ದ ಸಗಣಿ ಇವೆಲ್ಲ ಕಾಣ್ತವೆ. ಹೊಲದ ಹುಲ್ಲು ಕಳೆಯಾಗಿ ಅಲ್ದೆ ದನಗಳ ಮೇವಾಗಿ ಕಾಣ್ತವೆ.

ಮನೆಗೆ ಬೇಕಾಗಿರೋ ಕಾಳು ಕಡಿ, ಸೊಪ್ಪು ಸೊದೆ, ಬದು ಪಕ್ಕದಲ್ಲೊಂದು ಕುಂಬಳ ಗಿಡ, ಒಂದು ನಾಲ್ಕು ಹೂವಿನ ಗಿಡ, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಹೀಗೆ ಎಲ್ಲ ಸೇರಿದರೆ ಮಾತ್ರ ಕೃಷಿ ಅನಿಸುತ್ತೆ ಅವರಿಗೆ.

ಇದಿಷ್ಟೂ ನಮ್ಮಮ್ಮನ ವಿಷಯವೇ ಆದ್ರೂ ಬಹುಪಾಲು ಬೇಸಾಯ ಮಾಡೋ ‌ಅಮ್ಮಂದಿರ ಕಥೆ ಇದೇನೆ..

ಇವತ್ತು ಯಾಕೆ ಅಮ್ಮನ ಬಗ್ಗೆ ಬರೀತಿದೀನಿ, ಏನು ವಿಶೇಷ… ಅಂತೇನಾದ್ರು ಕೇಳಿದ್ರೆ, ಅಂತದ್ದೇನು ಇಲ್ಲ. ಬರೀಬೇಕು ಅನಿಸ್ತು ಅಷ್ಟೆ.

ಅಮ್ಮ ನಾನು ನೋಡ್ದಾಗೆಲ್ಲಾ ಏನಾದ್ರು ಕೆಲಸ ಮಾಡ್ತಾನೇ ಇರ್ತಾರೆ. ಏನ್ಮಾಡ್ತಿದಾರೆ ಅಂತ ನೋಡಿದ್ರೆ ಮನೆ, ಹೊಲ ಎಲ್ಲ ಕಡೆ ಸಣ್ಣ ಸಣ್ಣ‌ ಸೂಕ್ಷ್ಮ ಕೆಲಸಗಳು ಕಾಣಿಸ್ತವೆ… ಅವರ ಬದುಕಿನುದ್ದಕ್ಕೂ ಹೀಗೆ ಬದುಕುತ್ತಿರೋರು…ಗಾಣದ ಎತ್ತಿನ ತರ.

ಆದ್ರೆ ಇವತ್ತು ಬರೀಬೇಕು ಅನಿಸಿದ್ದಕ್ಕೆ ಮತ್ತೊಂದು ಕಾರಣ ಇದೆ. ಅದೂ… ಮುಂದೆ ಅಮ್ಮ ಮಾಡುವ ಈ ಕೃಷಿ ನೋಡೋಕೆ ಸಿಗದಿರಬಹುದಾದ ಆತಂಕ… ಹೌದು ಹೇಗೂ ನೆಲ ಕೆರ್ಕಂಡು ಬದುಕ್ತಿದ್ದ ನಮ್ಮೂರಿನ ಸುತ್ತಮುತ್ತಲ ಸುಮಾರು ಜನ ಭೂಮಿ ಕಳೆದುಕೊಳ್ಳೊರಿದ್ದಾರೆ. ಫ್ಯಾಕ್ಟರಿಗಳು ಕಟ್ಟೊಕಂತ ಸರ್ಕಾರದ ರಿಯಲ್ ಎಸ್ಟೇಟ್ ಏಜೆಂಟ್‌ KIDB ಸಂಸ್ಥೆ ಭೂಮಿ ಕಿತ್ತುಕೊಳ್ಳೋಕೆ ಪ್ಲಾನ್ ಮಾಡ್ತಿದೆ. ಮತ್ತೊಂದು ಕಡೆ ಸರ್ಕಾರ, ಭೂಸುದಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ, ದುಡ್ಡಿರೊರಿಗೆ ಜಮೀನು ಕೊಡಿಸೋಕೆ ಹೊರಟಿದೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ… ಆದ್ರೆ ಬೇಸಾಯ ಬಿಟ್ಟು ಬದುಕಲಾಗದ ನಮ್ಮಮ್ಮನಂತ ಅದೆಷ್ಟೂ ಜನರನ್ನ ನೆನಸಿಕೊಂಡ್ರೆ ಕಷ್ಟ ಅನಿಸತ್ತೆ. ಮುದೊಂದು ದಿನ ಇಂಗೆ ಬರೆಯೋ ಅವಕಾಶಾನೂ ಇಲ್ಲವಾಗಿಬಿಡಬಹುದು….

ಥ್ಯಾಂಕ್ಯೂ ನಮ್ಮನ್ನಾಳುವ ಸರಕಾರಗಳಿಗೆ… ಉದ್ದಾರ ಮಾಡೋ ನೆಪದಲ್ಲಿ, ಬೇಸಾಯಾನ, ಬೇಸಾಯ ಮಾಡೋರನ್ನ ಅಸಹಾಯಕರಾಗಿಸಿ ಬೀದಿಪಾಲು ಮಾಡಲು ಹೊರಟಿರೊದಕ್ಕೆ…

1 COMMENT

  1. ಭೂಮಿ (ತಾಯಿ) ಗೆ ನಮನ🙏
    ನಾಲಾಕ್ ಸರ್ಕಾರಕ್ಕಿಲ್ಲ ಗಮನ 😡

LEAVE A REPLY

Please enter your comment!
Please enter your name here