ಮುಂಗಾರು ಕೃಷಿಹಂಗಾಮು ಹೊಸ್ತಿಲಲ್ಲಿ ಪರದಾಟಗಳು

ಪ್ರಾರಂಭದಲ್ಲಿ ಕೆಲವರು ಅತ್ಯುತ್ಸಾಹಿ ಕಾರ್ಯಕರ್ತರು ಯಾರೂ ಕೆಲಸಕ್ಕೆ ಹೋಗಬಾರದು. ಯಾರೂ ಕೆಲಸ ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು. ಆದರೆ ಹಸಿವಿನ ವಾಸ್ತವದ ಮುಂದೆ ಅದು ಕೆಲಸ ಮಾಡಲಿಲ್ಲ. ಈಗ ಸರ್ಕಾರವೇ ಕೃಷಿ ಕೆಲಸಕ್ಕೆ ಅಡ್ಡಿ ಇಲ್ಲ ಎಂದ ಮೇಲೆ ಸಮಸ್ಯೆ ಇಲ್ಲ. ಗೊಬ್ಬರದ ಅಂಗಡಿಗಳಿಗೆ ಯಂತ್ರಗಳ ಬಿಡಿ ಭಾಗಗಳ ಅಂಗಡಿಗಳಿಗೆ ವಾರದಲ್ಲಿ ಮೂರುದಿನ ತೆರೆದಿರಲು ಅನುಮತಿ ನೀಡಿದ್ದು. ಹಳ್ಳಿಗಳಿಗೆ ಸಾಮಾನುಗಳ ಸರಬರಾಜಾಗುತ್ತಿರುವುದು. ನಮ್ಮ ಜಿಲ್ಲೆಯ ಮಟ್ಟಿಗಂತೂ ಸದ್ಯಕ್ಕೆ ಸಮಸ್ಯೆ ಇಲ್ಲ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳಬೇಕು. ಇನ್ನು ಎಚ್ಚರ ವಹಿಸುವುದು ನಮ್ಮ ಜವಾಬ್ದಾರಿ.

0
ಲೇಖಕರು: ಪ್ರಸಾದ್ ರಕ್ಷಿದಿ, ರಂಗಭೂಮಿ ತಜ್ಞರು, ಕಾಫಿ ಬೆಳೆಗಾರರು

ಬೇಸಿಗೆ ಮಳೆ ಬೀಳಲು ಪ್ರಾರಂಭವಾಗಿದೆ. ಇನ್ನೊಂದುವರೆ ತಿಂಗಳುಗಳ ಒಳಗೆ ಮುಂಗಾರು ಮಳೆಯೂ ಆರಂಭವಾಗುತ್ತದೆ. ಇನ್ನೀಗ ಕೃಷಿ ಕೆಲಸಗಳು ವೇಗ ಪಡೆದುಕೊಳ್ಳುವ ಸಮಯ. ಮಳೆಯನ್ನೇ ಕಾದವರು ಕಾಫಿ ಹೂವಾಗಿ ಹೀಚುಗಟ್ಟುವ ತನಕ ಕಾಯಬೇಕು. ಇನ್ನೂ ಮಳೆಯೇ ಬೀಳದ ಪ್ರದೇಶಗಳಿವೆ. ನೀರಾವರಿ ಇದ್ದವರು . ಮೊದಲನೆ ಕಂತು ಗೊಬ್ಬರ ಹಾಕಲು ತಯಾರಿ ಮಾಡಿಕೊಳ್ಳುವ ಸಮಯ. ಅದೇ ಹೊತ್ತಿಗೆ ಮಳೆಗಾಲದ ಸಿದ್ದತೆಗಳು. ಕೊಟ್ಟಿಗೆಗಳ ರಿಪೇರಿ. ಒಂದಷ್ಟು ಸೌದೆ ಸಂಗ್ರಹಣೆ ಇತ್ಯಾದಿ ಕೆಲಸಗಳಿವೆ.

ಎಷ್ಟೇ ಗ್ಯಾಸ್. ವಿದ್ಯುತ್. ಸೋಲಾರ್ ಏನೇ ಬಂದರೂ ಮಲೆನಾಡಿನಲ್ಲಿ ಮಳೆಗಾಲ ಒಂದಿಷ್ಟು ದಿನವಾದರೂ. ಬಚ್ಚಲು ಮತ್ತು ಅಡಿಗೆ ಮನೆಗಳಲ್ಲಿ ಬೆಂಕಿ ಉರಿಯಲೇ ಬೇಕು. ಇಲ್ಲವಾದಲ್ಲಿ ವಸ್ತುಗಳು , ಮನೆಯ ಗೋಡೆಗಳು ಮಾತ್ರವಲ್ಲ ಮನುಷ್ಯರೂ ಶೀತ ಹಿಡಿದು ಹೋಗುತ್ತಾರೆ. ಕೂಲಿ ಕಾರ್ಮಿಕರ ಮನೆಗಳಲ್ಲಿ ಇನ್ನೂ ಬಹು ಮಟ್ಟಿಗೆ ಸೌದೆ ಉಪಯೋಗವೇ ಇದೆ.

ಕಾಫಿ ತೋಟಗಳಲ್ಲಿ ನೆರಳು ನಿಯಂತ್ರಣ ಅನಿವಾರ್ಯ. ಆದ್ದರಿಂದ ಸೌದೆಯಂತೂ ಇದ್ದೇ ಇರುತ್ತದೆ. ಹಾಗಿದ್ದರೂ ಇಂದಿನ ದಿನಗಳಲ್ಲಿ ಅದನ್ನು ಸಂಗ್ರಹಿಸಿ ಮನೆ ತಲಪಿಸುವ ಖರ್ಚು ನೋಡಿದರೆ. ಗ್ಯಾಸ್ ಕೊಳ್ಳುವುದು ಅಗ್ಗ ಎನಿಸಿದೆ. ಏನೇ ಆದರೂ ಸೌದೆ ಒಲೆಯ ಅಭ್ಯಾಸ ಉಳಿಸಿಕೊಳ್ಳುವುದು ಒಳ್ಳೆಯದು. ತುರ್ತು ಸಂದರ್ಭಗಳಲ್ಲಿ ಅದು ಕಾಪಾಡುತ್ತದೆ. ಕಳೆದ ಎರಡು ವರ್ಷಗಳ ಅನುಭವ ಅದನ್ನು ತಿಳಿಸಿದೆ.

ಕಾಫಿಯ ಜೊತೆಯಲ್ಲಿ ಮೆಣಸು ಒಂದು ಉಪಬೆಳೆಯೆಂದು ಲೆಕ್ಕ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಮಾತ್ರವೇ ಬೆಳೆಗಾರರನ್ನು ಉಳಿಸಿರುವುದು. ಕಾಫಿಯ ಆದಾಯ ತೋಟವನ್ನು ಉಳಿಸಿಕೊಳ್ಳಲು ಮಾತ್ರ. ಮೆಣಸಿದ್ದರೆ ಮಾಲೀಕನ ಮನೆ ಖರ್ಚು –ವೆಚ್ಚಕ್ಕೆ ಒಂದಿಷ್ಟಾದರೂ ಹಣ ಉಳಿಯುತ್ತದೆ. ಹಾಗಿದ್ದರೆ ಮಲೆನಾಡಿನಲ್ಲಿ ಸಾಕಷ್ಟು ಮಂದಿ ಶ್ರೀಮಂತರಂತೆ – ಐಷಾರಾಮಿ ಬದುಕು ನಡೆಸುವವರಂತೆ ಕಾಣುತ್ತಾರಲ್ಲ ಅದು ಬೇರೆಯೇ ಕತೆ, ಹಲವು ಸಲ ನಾನೇ ಬರೆದಿದ್ದೇನೆ.

ಕೊರೋನಾ ಕಾರಣದಿಂದ ಸಾಕಷ್ಟು ಕೆಲಸಗಳು ಹಿಂದೆ ಬಿದ್ದಿವೆ. ವಲಸೆ ಕಾರ್ಮಿಕರು ಇಲ್ಲ. ಹಲವು ಕಡೆಗಳಲ್ಲಿ ಮೆಣಸು ಕೊಯ್ಲಾಗಿಲ್ಲ. ಹಳ್ಳಿಗಳಲ್ಲಿ ಮತ್ತು ಎಸ್ಟೇಟುಗಳ ಲೈನ್ ಮನೆಗಳಲ್ಲಿ ಇರುವವರು. ಕೆಲಸ ಮಾಡುತ್ತಿದ್ದಾರೆ. ಕೃಷಿ ಕೆಲಸಗಳಲ್ಲಿ ದೈಹಿಕ ಅಂತರ ಸಮಸ್ಯೆಯೇ ಅಲ್ಲ. ಸಹಜವಾಗಿ ಅಂತರ ಇರುತ್ತದೆ.ಹಳ್ಳಿಗಳಲ್ಲಿನ ಎಚ್ಚರ ನಗರಗಳಿಗಿಂತ ಚೆನ್ನಾಗಿದೆ. ಗುಂಪು ಕೆಲಸಗಳನ್ನು ಯಾರೂ ಮಾಡಿಸುತ್ತಿಲ್ಲ.

ಹಳ್ಳಿಗಳಲ್ಲಿ ಇನ್ನೊಂದು ಅಭ್ಯಾಸ ಬಲವಾಗಿದೆ. ಅದೇನೆಂದರೆ. ಒಂದು ಊರಿನ ಕಾರ್ಮಿಕರು ಅದೇ ಊರಿನಲ್ಲಿ ಕೆಲಸ ಮಾಡುವುದು ಕಡಿಮೆ. ಅವರೆಲ್ಲ ಹತ್ತು ಹದಿನೈದು ಕಿ.ಮೀ. ದೂರದ ಇನ್ಬೊಂದು ಊರಿಗೆ ಹೋಗುವುದು. ಇನ್ನೊಂದು ಕಡೆಯವರು ಇಲ್ಲಿಗೆ ಬರುವುದು. ಇದಕ್ಕೆ ಹಲವು ಸಾಮಾಜಿಕ, ಆರ್ಥಿಕ ಕಾರಣಗಳಿವೆ. ಇದೊಂದು ಸಾಮಾಜಿಕ ಅಧ್ಯಯನದ ವಿಷಯ. ಆದರೆ ಈಗ ವಾಹನ ಸಂಚಾರ ನಿಷೇಧ ಇರುವುದರಿಂದ. ಅಲ್ಲಲ್ಲೇ ಕೆಲಸ ಮಾಡುವುದು ಅನಿವಾರ್ಯವಾಗಿದೆ.

ಪ್ರಾರಂಭದಲ್ಲಿ ಕೆಲವರು ಅತ್ಯುತ್ಸಾಹಿ ಕಾರ್ಯಕರ್ತರು ಯಾರೂ ಕೆಲಸಕ್ಕೆ ಹೋಗಬಾರದು. ಯಾರೂ ಕೆಲಸ ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು. ಆದರೆ ಹಸಿವಿನ ವಾಸ್ತವದ ಮುಂದೆ ಅದು ಕೆಲಸ ಮಾಡಲಿಲ್ಲ. ಈಗ ಸರ್ಕಾರವೇ ಕೃಷಿ ಕೆಲಸಕ್ಕೆ ಅಡ್ಡಿ ಇಲ್ಲ ಎಂದ ಮೇಲೆ ಸಮಸ್ಯೆ ಇಲ್ಲ. ಗೊಬ್ಬರದ ಅಂಗಡಿಗಳಿಗೆ ಯಂತ್ರಗಳ ಬಿಡಿ ಭಾಗಗಳ ಅಂಗಡಿಗಳಿಗೆ ವಾರದಲ್ಲಿ ಮೂರುದಿನ ತೆರೆದಿರಲು ಅನುಮತಿ ನೀಡಿದ್ದು. ಹಳ್ಳಿಗಳಿಗೆ ಸಾಮಾನುಗಳ ಸರಬರಾಜಾಗುತ್ತಿರುವುದು. ನಮ್ಮ ಜಿಲ್ಲೆಯ ಮಟ್ಟಿಗಂತೂ ಸದ್ಯಕ್ಕೆ ಸಮಸ್ಯೆ ಇಲ್ಲ. ಇದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳಬೇಕು. ಇನ್ನು ಎಚ್ಚರ ವಹಿಸುವುದು ನಮ್ಮ ಜವಾಬ್ದಾರಿ.

ಮುಖ್ಯವಾಗಿ ಸಮಸ್ಯೆ ಇರುವುದು ಬ್ಯಾಂಕುಗಳ ATM ಗಳದ್ದು. ಹಣ ಪಡೆಯಲು ಹರಸಾಹಸ ಮಾಡಬೇಕು. ಕೆಲವರು ಹಣಕ್ಕಾಗಿಯೇ ಪದೇ ಪದೇ ನಗರಕ್ಕೆ ಹೋಗುವಂತಾಗಿದೆ. ಇದನ್ನು ಸರಿಪಡಿಸಬೇಕು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 22 ಲಕ್ಷ ಜನರಿಗೆ ಬದುಕು ಕೊಡುವ ಬೆಳೆ ಕಾಫಿ. ಮುಂದಿನ ವರ್ಷದ ಚಿಂತೆ ಹಲವರನ್ನು ಭಾದಿಸುತ್ತಿದೆ.ಕಳೆದ ಎರಡು ವರ್ಷಗಳ ಪ್ರಕೃತಿ ವಿಕೋಪದಿಂದ ಬದುಕು ಕಳೆದುಕೊಂಡವರಿದ್ದಾರೆ. ವಿನಾಶದ ಅಂಚಿಗೆ ತಲುಪಿದವರಿದ್ದಾರೆ. ಅವರು ಸುಧಾರಿಸಿಕೊಂಡಿಲ್ಲ.

ಎರಡು ವರ್ಷಗಳ ಹಾನಿಯಿಂದ ಬೆಳೆ ಅರ್ಧಕ್ಕಿಳಿದರೆ. ಬೆಲೆ ಇಪ್ಪತ್ತು ವರ್ಷದ ಹಿಂದಿನ ಸ್ಥಿತಿಯಲ್ಲಿಯೇ ಇದೆ.ಮುಂದಿನ ದಿನಗಳು ಇನ್ನೂ ವಿಷಮವಾಗಲಿದೆ. ನನ್ನ ಗೆಳೆಯರೊಬ್ಬರಿದ್ದಾರೆ. ಸಣ್ಣ ಬೆಳೆಗಾರರು, ಗದ್ದೆಯಿಲ್ಲ. ಆದರೆ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಮನೆಯ ಪಕ್ಕದಲ್ಲಿ ಕೇವಲ ಏಳುಗುಂಟೆ ಜಾಗದಲ್ಲಿ ಭತ್ತ ಬೆಳೆಯುತ್ತಾರೆ. ಮನೆಯವರ ಊಟಕ್ಕೆ ಸಾಲುತ್ತದೆ.

ಸ್ವಂತ ಜಮೀನಿಲ್ಲದ, ಆದರೆ ಮನೆಯ ಸುತ್ತ ಐದಾರು ಗುಂಟೆ ಜಾಗ ಇರುವ. ಹಾಗೇಯೇ ಕಾಲು ಎಕರೆ ಅರ್ಧ ಎಕರೆ ಜಾಗ ಇರುವ ಸಾವಿರಾರು ಕೃಷಿ ಕಾರ್ಮಿಕ ಕುಟುಂಬಗಳಿವೆ. ಅವರೆಲ್ಲ ಮಳೆಗಾಲದಲ್ಲಿ ಒಂದು ಬೆಳೆ ಭತ್ತ (ಮಲೆನಾಡಿನಲ್ಲಿ) ಬೆಳೆಯಬಹುದು. ಕೃಷಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಅವರಿಗೆಲ್ಲ ಬೀಜ ವಿತರಣೆ ಮಾಡಬೇಕು. ಗುಡ್ಡಗಳಲ್ಲೂ ಬೆಳೆಯಬಹುದಾದ ಭತ್ತದ ತಳಿಗಳಿವೆ.

ಮಲೆನಾಡಿನಲ್ಲಿ ಗದ್ದೆಗಳು ತೋಟಗಳಾಗಿವೆ. ಇಂದಿನ ಪರಿಸ್ಥಿತಿ ಮತ್ತು ಖರ್ಚು ನೋಡಿದರೆ ಯಾರೂ ಗದ್ದೆ ಮಾಡಲು ಸಾಧ್ಯವಿಲ್ಲ. ದೊಡ್ಡ ಗದ್ದೆ ಬಯಲು ಇದ್ದವರು ಯಾಂತ್ರೀಕೃತ ಬೇಸಾಯ ಮಾಡಲು ಸಾಧ್ಯ. ಅಂತವರು ಹಲವರು ಮಾಡುತ್ತಲೂ ಇದ್ದಾರೆ. ಜಮೀನನ್ನು ಹಾಳು ಬಿಟ್ಟರೆ ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ಹೆದರಿಸಿದ್ದರಿಂದ ಸಿಲ್ವರ್ ಓಕ್ ಬೆಳೆಯುವುದು, ಅಡಿಕೆ ಹಾಕುವುದು ಇಂತಹ ಚಟುವಟಿಕೆ ಹೆಚ್ಚಾಗುತ್ತದೆ ಅಷ್ಟೇ.

ಕೊರೊನಾ ಕಾರಣದ ಲಾಕ್ ಡೌನ್ ಅನೇಕ ಪಾಠಗಳನ್ನು ಕಲಿಸಿದೆ. ಹಲಸಿನ ಬಡುಕು, ಹಲಸಿನ ಗಾಳ (ಬೀಜ) ಕೆಸುವಿನ ಸೊಪ್ಪು, ಕೀರೆ ಸೊಪ್ಪು, ಗಂಧದ ಕುಡಿ, ಇವುಗಳಿಗೆ ಮತ್ತೆ ರಾಜ ಮರ್ಯಾದೆ ದೊರೆಯುತ್ತಿದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಊಟ ನಿದ್ರೆ ಮಾಡುವುದನ್ನು ಕಲಿಸಿತು. ಹಾಗೆಯೇ ಹೋಗುವ ಮುನ್ನ ಮನುಷ್ಯ ತಾನೇ ಈ ಭೂಮಿಯ ಸರ್ವಾಧಿಕಾರಿ ಅಲ್ಲ ಎಂಬ ಎಚ್ಚರವನ್ನು ಕರೋನಾ ಕಲಿಸಿ ಹೋಗಬೇಕು. ಆಗ ಅದರ ಬಲಿದಾನವೂ, ಅದು ಕೊಂಡೊಯ್ದುವರ ಬಲಿದಾನವೂ ಸಾರ್ಥಕವಾಗುತ್ತದೆ.

LEAVE A REPLY

Please enter your comment!
Please enter your name here