ಬೆಳಗಾವಿ (ರಾಮದುರ್ಗ) ಮಾರ್ಚ್ 15: ಬೆಳಗಾವಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರಿಗೆ ಸುಮಾರು 1130 ಕೋಟಿ ರೂ.ಗಳು ತಲುಪಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಬೆಳಗಾವಿ ಇವರ ವತಿಯಿಂದ ರಾಮದುರ್ಗ ತಾಲ್ಲೂಕಿನ ಬಟಕುರ್ಕಿ ಯಲ್ಲಿ ಆಯೋಜಿಸಿರುವ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂಥ ದೊಡ್ಡ ಸಹಾಯವನ್ನು ನರೇಂದ್ರ ಮೋದಿಯವರು ರಾಜ್ಯಕ್ಕೆ ಮಾಡಿದ್ದಾರೆ. ಜಲ್ ಜೀವನ್ ಮಿಷನ್ ಅಡಿ ಕಳೆದ 3 ವರ್ಷಗಳಲ್ಲಿ 12 ಕೋಟಿ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಈ ವರ್ಷ ಇನ್ನೂ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಗುರಿ ಇದೆ ಎಂದರು.
6.57 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ
ಬೆಳಗಾವಿಯಲ್ಲಿ ಒಟ್ಟು 6.57 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕಳೆದ 2 ವರ್ಷಗಳ ಹಿಂದೆ ಬೆಳಗಾವಿಯ ಪ್ರವಾಹದ ಸಂದರ್ಭದಲ್ಲಿ ಮನೆ ಬಿದ್ದವರಿಗೆ 5 ಲಕ್ಷ ರೂ. ನೀಡಿದರು. ಕರ್ನಾಟಕದಲ್ಲಿ ಮಾತ್ರ ಬಿ.ಎಸ್.ಯಡಿಯೂರಪ್ಪ ಅವರು ಈ ರೀತಿಯ ಪರಿಹಾರ ಒದಗಿಸಿದರು.
ತಡೆಗೋಡೆಗೆ 125 ಕೋಟಿ
ಮಲಪ್ರಭಾ ದಡದಲ್ಲಿ ಕೊರೆತ ಆಗಿದ್ದ ಸಂದರ್ಭದಲ್ಲಿ 125 ಕೋಟಿ ಅನುದಾನ ನೀಡಿ ರಕ್ಷಣಾ ಗೋಡೆಯನ್ನು ಕಟ್ಟಲು ಟೆಂಡರ್ ಆಗಿ ಕೆಲಸ ಪ್ರಾರಂಭವಾಗಿದೆ. ಪ್ರವಾಹ ಬಂದು ಒಂದು ವರ್ಷದೊಳಗೆ ನಮ್ಮ ಸರ್ಕಾರ ಈ ತೀರ್ಮಾನ ಮಾಡಿದೆ. ಹೊಸ ವ್ಯವಸ್ಥೆಯಲ್ಲಿ ಕೂಡಲೇ ಸ್ಪಂದಿಸಿ ಕೆಲಸ ಮಾಡುವುದು ನಮ್ಮ ಧರ್ಮ ಎಂದರು.
ಬೆಳೆ ನಾಶಕ್ಕೆ ದುಪ್ಪಟ್ಟು ಪರಿಹಾರ
ಬೆಳೆ ನಾಶಕ್ಕೆ ಕೇಂದ್ರ ಸರ್ಕಾರದ ಅನುದಾನಕ್ಕೆ ಎರಡು ಪಟ್ಟು ಹಣ ಒದಗಿಸಲಾಯಿತು. ಒಣ ಬೇಸಾಯ ಕ್ಕೆ ರೂ 13600 ಒಂದು ಹೆಕ್ಟೇರಿಗೆ ನೀಡಲಾಯಿತು. ನೀರಾವರಿಗೆ ರೂ 12500 ಕೊಟ್ಟರೆ, ನಮ್ಮ ಸರ್ಕಾರ 25 ಸಾವಿರ ರೂ.ನೀಡಿತು. ಇದುವರೆಗೂ ಯಾವುದೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ದುಪ್ಪಟ್ಟು ಪರಿಹಾರ ಕೊಟ್ಟಿರುವುದು ಇತಿಹಾಸದಲ್ಲಿ ಯಾರೂ ಮಾಡಿಲ್ಲ. ಬೆಲೆ ನಾಶ ಆದ 2 ತಿಂಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.
7768 ಮನೆಗಳಿಗೆ 200 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರ
ಏಳೆಂಟು ಸಾವಿರ ಮನೆಗಳಿಗೆ ಪರಿಹಾರ ದೊರೆಯದಿದ್ದ ಸಂದರ್ಭದಲ್ಲಿ 200 ಕೋಟಿ ರೂ.ಗಳನ್ನು ಅಧಿಕವಾಗಿ ಬಿಡುಗಡೆ ಮಾಡಲಾಗಿದೆ. 7768 ಮನೆಗಳಿಗೆ ಪರಿಹಾರ ಹೆಚ್ಚುವರಿಯಾಗಿ ನೀಡಲಾಗಿದೆ. ಜನರ ಕಷ್ಟಕಾಲದಲ್ಲಿ ರಕ್ಷಣೆ ಹಾಗೂ ಪರಿಹಾರ ನೀಡುವುದು ಸರ್ಕಾರದ ಜೀವಂತಿಕೆ ಎಂದರು.
ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, 53 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಪಾವತಿಯಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ, ಬೆಳಕು, ಉಜ್ವಲ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗಿದೆ. ರೈತ ವಿದ್ಯಾ ನಿಧಿ ಯೋಜನೆಯಡಿ 13 ಲಕ್ಷ ರೈತರ ಮಕ್ಕಳಿಗೆ ಈ ಯೋಜನೆ ತಲುಪಿದೆ. ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ ದೊರೆತಿದೆ. ದುಡಿಯುವ ವರ್ಗ ಸಬಲರಾಗಿದ್ದಾಗ ರಾಜ್ಯದ ಅಭಿವೃದ್ಧಿಯಾಗುತ್ತದೆ. ಸಮಸ್ಯೆ ಅರಿತು, ಸಂವೇದನಾಶೀಲವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿನ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕ ದುರ್ಯೋಧನ ಐಹೊಳೆ, ರಾಜ್ಯ ಸಭಾ ಸದಸ್ಯ ಈರಣ್ಣ ಕಾಡಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ಬೈಗಾಣ, ಪ್ರಾದೇಶಿಕ ಆಯುಕ್ತ ಹಿರೇಮಠ್ ಮೊದಲಾದವರು ಉಪಸ್ಥಿತರಿದ್ದರು.