ರೈತ ಗುಂಪುಗಳಿಗೆ  ಪ್ರೋತ್ಸಾಹ ನೀಡಲು ನಿರ್ಧಾರ

0

ಬೆಂಗಳೂರು: ಆಗಸ್ಟ್ 24: ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ನೇತೃತ್ವದಲ್ಲಿ ಜರುಗಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಒಂಭತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಕೃಷಿ ಸಹಕಾರ ಸಂಘಗಳು, ರೈತರ ಗುಂಪುಗಳನ್ನು ರಚಿಸಿ ಅವುಗಳಿಗೆ ಪ್ರೋತ್ಸಾಹ ನೀಡುವುದೂ ಸೇರಿದೆ.

ಜಗತ್ತಿನಾದ್ಯಂತ ಕೃಷಿಯಲ್ಲಿ ಹೆಚ್ಚು ಆಹಾರ ಉತ್ಪಾದನೆಯಾಗುತ್ತಿದ್ದರೂ ಇನ್ನೂ ಬಡತನ, ಹಸಿವು ತಾಂಡವವಾಡುತ್ತಿದೆ ಮತ್ತು ಮುಂದಿನ ಸವಾಲುಗಳನ್ನು ಎದುರಿಸಲು ಯುವಜನತೆಯನ್ನು ಸಜ್ಜಾಗುವಂತೆ ಮಾಡುತ್ತಿದೆ. ಸೋಲು ಮತ್ತು ಗೆಲುವನ್ನು ಸಮಾನಾಂತರವಾಗಿ ತೆಗೆದುಕೊಂಡಾಗ ಮಾತ್ರ ಗುರಿಯೆಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ನವದೆಹಲಿಯ ರಾಷ್ಟ್ರೀಯ  ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ  ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ. ಆಶೋಕ್ ದಳವಾಯಿ  ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಮತ್ತು ಅಖಿಲ ಭಾರತ ಕೃಷಿ ವಿದ್ಯಾರ್ಥಿಗಳ ಸಂಘ, ನವದೆಹಲಿ   ಸಹಯೋಗದೊಂದಿಗೆ “ಕೃಷಿ ಮತ್ತು ಆಹಾರ ವ್ಯವಸ್ಥೆಯಲ್ಲಿ ಸುಸ್ಥಿರ ಆಭಿವೃದ್ಧಿ” ಕುರಿತು ಮೂರು ದಿನ  ಜರುಗಿದ ಆಂತರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ಜಿಕೆವಿಕೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡಾ. ಅಶೋಕ್ ದಳವಾಯಿ ಆನ್ ಲೈನ್ ಮೂಲಕ  ಮಾತನಾಡಿದರು.

ಮುಂದಿನ 25 ವರ್ಷಗಳಲ್ಲಿ ದೇಶವು ಯುವಜನತೆಗೆ ಕ್ರಾಂತಿಕಾರಿ ಬದಲಾವಣೆಗೆ ವೇದಿಕೆಯನ್ನು ಒದಗಿಸುವುದು ಅತ್ಯಂತ ಅವಶ್ಯಕವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅದರಲ್ಲೂ ಮುಖ್ಯವಾಗಿ ಯುವಜನತೆಗೆ ಗೌರವಾನ್ವಿತ ಉದ್ಯೋಗವನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕೃಷಿ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರವಾಗಿರುವುದರಿಂದ  ಯುವ ಜನತೆ ಕೃಷಿಯನ್ನು ಒಂದು ವಾಣಿಜ್ಯ ಉದ್ಯಮವಾಗಿ ಪರಿಗಣಿಸಿ ಆಧುನಿಕ ತಂತ್ರಜ್ಞಾನಗಳಾದ ಯಂತ್ರ ಮಾನವನ ಅಳವಡಿಕೆ, ಕೃತಕ ಬುದ್ಧಿಮತ್ತೆ, ನಿಖರ ಕೃಷಿ, ಸಂವೇದಕಗಳ ಅಳಡಿವಕೆಯಿಂದ ಕೂಲಿ ಕಾರ್ಮಿಕರ ಕೊರತೆಯನ್ನು ಕಡಿಮೆಗೊಳಿಸಿ, ಶ್ರಮವನ್ನು ಕಡಿತಗೊಳಿಸಿ ಸಕಾಲದಲ್ಲಿ ಬೇಸಾಯ ಕ್ರಮಗಳನ್ನು ಕೈಗೊಂಡು, ಜೈವಿಕ ತಂತ್ರಜ್ಞಾನ, ಜೈವಿಕ ಇಂಜಿನಿಯರಿಂಗ್ ಹಾಗೂ ಡಿಜಿಟಲ್ ಕೃಷಿಗೆ ಒತ್ತುನೀಡಿ ಕೃಷಿಯನ್ನು ಸ್ಪರ್ಧಾತ್ಮಕ ಜಗತ್ತಿನೆಡೆಗೆ ಕೊಂಡೊಯ್ಯುವುದು ಅವಶ್ಯಕವೆಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃವಿವಿ, ಬೆಂಗಳೂರಿನ ಕುಲಪತಿ   ಡಾ. ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ ಸಮ್ಮೇಳನವು ವಿವಿಧ ದೇಶಗಳ ಕೃಷಿ ವಿದ್ಯಾರ್ಥಿಗಳು ಒಂದು ಸೂರಿನೆಡೆ ಅನೇಕ ಕೃಷಿಪರ ವಿಚಾರಗಳು, ಸಂಶೋಧನೆಗಳು, ಸಾಂಸ್ಕೃತಿಕ ವಿಚಾರಗಳು, ವೈವಿಧ್ಯ  ಕೃಷಿ ಮುಂತಾದ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಕಲ್ಪಿಸಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸಂಶೋಧನಾ ಪ್ರವೃತ್ತಿ, ಸಂವಹನ ಕಲೆಗಳನ್ನು ವೃದ್ಧಿಸಿಕೊಳ್ಳಲು ಇಂತಹ ವೇದಿಕೆಗಳು ಅನಿವಾರ್ಯ ಮತ್ತು ಅವಶ್ಯಕವೆಂದರು. ಕೃಷಿಯಿಂದ ವಿಮುಕ್ತರಾಗುತ್ತಿರುವ ಯುವಕರನ್ನು ಕೃಷಿಯತ್ತ ಸೆಳೆಯಲು ಮತ್ತು ಕೃಷಿ ವಿದ್ಯಾರ್ಥಿಗಳು ಸ್ವಯಂ ಉದ್ಯೋಗಿಳಾಗಲು ಇಂತಹ ಸಮ್ಮೇಳನಗಳು ದಾರಿ ದೀಪವಾಗುತ್ತವೆ ಎಂದು ತಿಳಿಸಿದರು.

ಶಿಕ್ಷಣ ನಿರ್ದೇಶಕ ಡಾ: ಕೆ.ಸಿ. ನಾರಾಯಣಸ್ವಾಮಿ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಕುಲಸಚಿವ ಡಾ: ಬಸವೇಗೌಡ,  ನವದೆಹಲಿಯ ಅಖಿಲ ಭಾರತ ಕೃಷಿ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ  ಡಾ: ಆಶಿಷ್ ಕನ್‌ದೆಲ್‌ವಾಲ್,  ಕೃಷಿ ವಿಶ್ವವಿದ್ಯಾಲಯದ ಹಿರಿಯ ವಾರ್ತಾಧಿಕಾರಿ ಡಾ. ಕೆ. ಶಿವರಾಮು  ಉಪಸ್ಥಿತರಿದ್ದರು.

ಅಖಿಲ ಭಾರತ ಕೃಷಿ ವಿದ್ಯಾರ್ಥಿಗಳ ಸಂಘದ ಸಲಹೆಗಾರ ಡಾ. ಸಚಿದೇವಸಿಂಗ್ ಅವರು ಸಮ್ಮೇಳನದ ಪ್ರಮುಖ ಶಿಫಾರಸ್ಸುಗಳನ್ನು, ಮಂಡಿಸಿದರು.

ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸುಮಾರು 50 ಸಂಪನ್ಮೂಲ ವ್ಯಕ್ತಿಗಳು ಮತ್ತು 1000 ವಿದ್ಯಾರ್ಥಿಗಳು ಭಾರತ ಸೇರಿದಂತೆ 15 ದೇಶಗಳಿಂದ ಹೈಬ್ರಿಡ್ ಮೋಡ್‌ನಲ್ಲಿ ಭಾಗವಹಿಸಿದ್ದರು.

ಸಮ್ಮೇಳನದ ಪ್ರಮುಖ ಶಿಫಾರಸ್ಸುಗಳು

  1. ಸುಸ್ಥಿರ ಆಧಾರದ ಮೇಲೆ ಕೃಷಿ ಉತ್ಪನ್ನಗಳ ಸಾಮೂಹಿಕ ಉತ್ಪಾದನೆಗೆ ವೈವಿಧ್ಯೀಕರಣ.
  2. ಕೃಷಿಯೆಡೆಗೆ ಯುವಕರನ್ನು ಸೆಳೆದುಕೊಳ್ಳುವ ಪೂರೈಕೆ ಸರಪಳಿ ನಿರ್ವಹಣೆ ಅಂತರವನ್ನು ಕಡಿತಗೊಳಿಸುವ ಮೂಲಕ ವೆಚ್ಚವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
  3. ಸಹಕಾರ ಸಂಘಗಳು ಮತ್ತು ರೈತ ಗುಂಪುಗಳ ರಚನೆ ಮತ್ತು ಪ್ರೋತ್ಸಾಹ.
  4. ಪರಿಸರ ವ್ಯವಸ್ಥೆ ಮತ್ತು ಬೆಳೆ ಸ್ಥಿತಿಸ್ಥಾಪಕ ಕೃಷಿಯಲ್ಲಿ ಸುಧಾರಿಸಲು ಬೆಳೆ ವ್ಯವಸ್ಥೆಗಳನ್ನು ಪರಿವರ್ತಿಸುವುದು.
  5. ಪೌಷ್ಟಿಕಾಂಶದ ಭದ್ರತೆಗೆ ಒತ್ತು ನೀಡುವುದು.
  6. ಮಣ್ಣಿನ ಸಮರ್ಪಕ ನಿರ್ವಹಣೆಗಾಗಿ ರಸಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರಗಳ ಬಳಕೆ.
  7. ಡ್ರೋನ್, ರೊಬೊಟಿಕ್ಸ್ ಮುಂತಾದ ಆಧುನಿಕ ತಂತ್ರಜ್ಞಾನಗಳ ಮೂಲಕ ನಿಖರ ಕೃಷಿ ಅಳವಡಿಕೆ.
  8. ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಮಾರ್ಗಸೂಚಿ ಅನ್ವಯ ಕೃಷಿ ಶಿಕ್ಷಣದಲ್ಲಿ ಸುಧಾರಣೆ.
  9. ಕೃಷಿಯಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆ ಒಳಗೊಂಡಂತೆ ಯುವಕರು ಮತ್ತು ಮಹಿಳೆಯರ ಸಬಲೀಕರಣ.

LEAVE A REPLY

Please enter your comment!
Please enter your name here