ಲೇಖಕರು: ಕುಮಾರ ರೈತ

ಸೋಲಾರ್ ಎಂದಕೂಡಲೇ ಥಟ್ಟನೆ ಕಣ್ಮುಂದೆ ಬರುವುದು ಲೈಟ್. ಇದಕ್ಕಷ್ಟೆ ಸೋಲಾರ್ ಎನರ್ಜಿ ಎನ್ನುವ ಕಾಲ ಹಿಂದೆ ಸರಿದು ಹೋಗಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಸೌರಶಕ್ತಿ ಬಳಕೆಯಾಗುತ್ತಿದೆ. ಹೀಗೆ ಮಾಡುವುದರಲ್ಲಿ ಕನ್ನಡಿಗರೊಬ್ಬರು ನೇತೃತ್ವ ವಹಿಸಿರುವ ಸಂಸ್ಥೆಯೊಂದು ಗಣನೀಯ ಕೊಡುಗೆ ನೀಡುತ್ತಿದೆ. ನಿರಂತರ ಸಂಶೋಧನೆ – ಅಭಿವೃದ್ಧಿ ಮೂಲಕ ಲಕ್ಷಾಂತರ ಜನ ಸುಸ್ಥಿರ ಉದ್ಯೋಗ –ಆದಾಯ ಕಂಡುಕೊಳ್ಳಲು ಕಾರಣವಾಗಿದೆ. ಇಂಥ ಒಂದು ಸಂಸ್ಥೆ ಕಿರುಪರಿಚಯ ನಿಮ್ಮ ಮುಂದಿದೆ

ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ಆರಂಭವಾಗಿದ್ದು 1995 ರಲ್ಲಿ. ಇದರ ಸಹಸಂಸ್ಥಾಪಕ ಮ್ಯಾಗ್ಸೆಸ್ಸಿ ಪ್ರಶಸ್ತಿ ಪುರಸ್ಕೃತ ಡಾ.ಹರೀಶ್ ಹಂದೆ. ಉಡುಪಿ ಜಿಲ್ಲೆಯ ಹಂದೆಟ್ಟು ಗ್ರಾಮದವರು. ಅವರು ಓದಿದ್ದು, ಬೆಳೆದಿದ್ದು ಓರಿಸ್ಸಾದಲ್ಲಿ. ಕರಕಪುರ ಐಐಟಿಯಲ್ಲಿ ಪದವೀಧರರಾದ ಹರೀಶ್ ಹಂದೆ ಅವರು ಒಮ್ಮೆ ಅಮೆರಿಕಾಕ್ಕೆ ಹೋದಾಗ ಅಲ್ಲಿನ ಕೆಲವಾರು ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಸೋಲಾರ್ ಬೆಳಕಿನಲ್ಲಿ ಓದುವುದನ್ನು ನೋಡಿದರು. ಆಗ ಅವರಿಗೆ ಭಾರತದಲ್ಲಿ ಸೋಲಾರ್ ಶಕ್ತಿಯನ್ನು ವಿವಿಧ ಆಯಾಮಗಳಲ್ಲಿ ಬಳಸುವ ಬಗ್ಗೆ ಯೋಜನೆಯೊಂದು ಹೊಳೆಯಿತು.

ಮನೆಯಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿಕೊಂಡಿರುವ ಮಹಿಳೆಯೊಂದಿಗೆ ಮಾತನಾಡುತ್ತಿರುವ ಹರೀಶ್ ಹಂದೆ

ಭಾರತದ ಅದೆಷ್ಟೋ ಹಳ್ಳಿಗಳು ಈಗಲೂ ವಿದ್ಯುತ್ ಬೆಳಕನ್ನು ಕಾಣದೇ ಕತ್ತಲೆಯಲ್ಲಿಯೇ ತಮ್ಮ ಬದುಕು ಸವೆಸುತ್ತಿವೆ. ಪ್ರಾಕೃತಿಕವಾಗಿ ದೊರೆಯುವ ಸೋಲಾರ್ ಬೆಳಕನ್ನು ಇಂತಹ ಹಳ್ಳಿಗಳಿಗಳಿಗೆ ತಲುಪಿಸುವ ಹಾಗೂ ಸೋಲಾರ್ ಬೆಳಕಿನ ಮೂಲಕ ಬದುಕು ಕಟ್ಟಿಕೊಡುವ ಕನಸನ್ನು ಹರೀಶ್ ಹಂದೆಯವರು ಹೊಂದಿದರು. ಅದರಂತೆ ಅಮೆರಿಕಾದಿಂದ ಬಂದವರೇ ಭಾರತದಲ್ಲಿನ ಹಳ್ಳಿಗಳ ಅಧ್ಯಯನ ಮಾಡಲಾರಂಭಿಸಿದರು.
ಇಪ್ಪತ್ತು ವರ್ಷಗಳ ಹಿಂದೆ ಸೋಲಾರ್ ಬಗ್ಗೆ ಜನರಿಗೆ ಈಗಿರುವಷ್ಟು ಮಾಹಿತಿಯಾಗಲಿ, ಜಾಗೃತಿಯಾಗಲಿ ಇರಲಿಲ್ಲ. ಸೋಲಾರ್ ಹಾಗೂ ಅದರ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಎಂದರೆ ಕಷ್ಟಸಾಧ್ಯವೇ ಆಗಿತ್ತು. ಪರಿಸರಸ್ನೇಹಿ ಸೌರಶಕ್ತಿಯನ್ನು ಜನರಿಗೆ ಮುಟ್ಟಿಸುವುದು ಎಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ.
ಈ ಪ್ರಯೋಗವನ್ನ ಕರ್ನಾಟಕದಿಂದಲೇ ಏಕೆ ಆರಂಭಿಸಬಾರದು ಎಂಬ ಹಠಕ್ಕೆ ಬಿದ್ದ ಹರೀಶ್ ಅವರು, ಉಡುಪಿ ಜಿಲ್ಲೆಯ ಕುಂದಾಪುರವನ್ನು ಮೊದಲಿಗೆ ಆರಿಸಿಕೊಂಡರು. ಬಸ್ಸಲ್ಲಿ ಸಂಚರಿಸಿ, ಕೆಲವು ಕಡೆ ನಡೆದುಕೊಂಡೇ ಹೋಗಿ ಸೋಲಾರ್ ಬಳಕೆ ಬಗ್ಗೆ ಅರಿವು ಮೂಡಿಸಲು ಸ್ವತಃ ಮುಂದಾದರು. ಹಿಂದೇಟು ಹಾಕಿದವರೇ ಹೆಚ್ಚುಮಂದಿ. ಆದರೆ ಹಂದೆ ಹಿಂಜರಿಯಲಿಲ್ಲ. ಮನೆಮನೆಗೆ ಹೋಗಿ ಸೋಲಾರ್ ಬಗ್ಗೆ ಮಾಹಿತಿ ನೀಡಲಾರಂಭಿಸಿದರು. ಮೊದಲು ಬೀದಿಗಳಲ್ಲಿ ಸೋಲಾರ್ ದೀಪಗಳನ್ನು ಅಳವಸಿದರು.

ಮೂಲಸೌಲಭ್ಯಗಳಿಂದ ವಂಚಿತವಾದ ಹಳ್ಳಿಗಳಿಗೆ ಸೌರಶಕ್ತಿ ಚಾಲಿತ ಸೌಲಭ್ಯಗಳ ನೀಡಿಕೆ

ಮನೆಮನೆಗೆ ಹೋಗಿ ಸೋಲಾರ್ ಬೆಳಕು ಬಗ್ಗೆ ಹೇಳುತ್ತಿದ್ದರೆ ಆರಂಭದಲ್ಲಿ ಯಾರೂ ಗಮನವನ್ನೇ ಕೊಡಲಿಲ್ಲ. ಪ್ರತಿದಿನ ಇವರ ಕಾರ್ಯ ಗಮನಿಸುತ್ತಿದ್ದ ಅಜ್ಜಿಯೊಬ್ಬರು ತಮ್ಮ ಮನೆಗೆ ಸೋಲಾರ್ ವಿದ್ಯುತ್ ಬಳಸಿಕೊಳ್ಳಲು ಒಪ್ಪಿಗೆ ನೀಡಿದರು. ಮೊದಲಿಗೆ ಮನೆಗೆ ಸೋಲಾರ್ ದೀಪ, ಬೀದಿ ದೀಪಗಳು ಆರಂಭವಾದವು. ಬೀದಿಬೀದಿಗಳಲ್ಲಿ ಸೋಲಾರ್ ಲೈಟ್, ಬ್ಯಾಟರಿ ಚಾರ್ಜಿಂಗ್ ಕೊಡಲಾರಂಭಿಸಿದರು.

                                                =====================
ಸೋಲಾರ್ ಎನರ್ಜಿಯಿಂದ ಸುಸ್ಥಿರ – ಲಾಭದಾಯಕ ಉದ್ಯೋಗಗಳನ್ನು ನೀಡುವ ಯೋಜನೆಗೆ ಕೈ ಹಾಕಿದರು. ‘ಸೌರಶಕ್ತಿ ಮತ್ತು ಜೀವನ’ ದ ಬಗ್ಗೆ ಚಿಂತನೆ ನಡೆಸಿದರು. 2010 ರಲ್ಲಿ ಸೋಲಾರ್ ನಿಂದ ಬಡತನ ನಿರ್ಮೂಲನೆ ಎನ್ನುವ ಕಲ್ಪನೆಯೂ ಹುಟ್ಟಿಕೊಂಡಿತು. ಇದರ ರೂಪವಾಗಿ ಸೋಲಾರ್ ಹೊಲಿಗೆ ಯಂತ್ರ, ಸೋಲಾರ್ ಕುಲುಮೆ, ಸೋಲಾರ್ ರೋಟಿ ರೋಲರ್ ನಂತಹ ಅನೇಕ ಆವಿಷ್ಕಾರಗಳು ಹುಟ್ಟಿಕೊಂಡವು.
=====================


ಉತ್ತರ ಕರ್ನಾಟಕದ ಮಹಿಳೆಯರ ಪಾಲಿಗೆ ರೋಟಿ ರೋಲರ್ ವರದಾನವಾಗಿದೆ. 20 ರಿಂದ 30 ಸಾವಿರ ರೊಟ್ಟಿಗಳು ಪ್ರತಿದಿನ ಇದರಿಂದ ತಯಾರಾಗುತ್ತಿವೆ. ಎರಡೇ ನಿಮಿಷದಕ್ಕೊಂದು ತೆಳು ರೊಟ್ಟಿ ಸಿದ್ಧವಾಗುತ್ತಿದ್ದು, ಧಾರವಾಡದ ನರೇಂದ್ರ ಗ್ರಾಮದ ಸುಮಂಗಲಾ ಪಾಟೀಲ್ ಎನ್ನುವವರು ಇದನ್ನು ಬಳಸಿ ಯಶಸ್ವಿ ಉದ್ಯಮಿ ಎನಿಸಿದ್ದಾರೆ. ಕೊಪ್ಪಳದ ಅಲ್ಲಾಹ್ ಭಕ್ಷ್ ಯಶಸ್ವಿ ರೋಟಿ ಮೇಕರ್ ಆಗಿದ್ದಲ್ಲದೇ ಸೆಲ್ಕೋ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಅನೇಕರಿಗೆ ಮಾಹಿತಿ ಮಾರ್ಗದರ್ಶನ ನೀಡುತ್ತಿದ್ದಾರೆ. ಇಷ್ಟೇ ಅಲ್ಲ ಸೋಲಾರ್ ಹೊಲಿಗೆಯಂತ್ರ ಅನೇಕ ಮಹಿಳೆಯರು ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕೊಪ್ಪಳದ ಅನುಸೂಯ ಮಾಲಗತ್ತಿ ಈ ಯಂತ್ರಗಳನ್ನು ಬಳಸಿ ತಮ್ಮ ಭಾಗದ ಯಶಸ್ವಿ ಟೈಲರ್ ಆಗಿದ್ದಾರೆ.

ಸೌರಶಕ್ತಿ ಆಧಾರಿತ ಮಗ್ಗ

ರಾಜಸ್ತಾನದಲ್ಲಿ ಮೊದಲಿಗೆ ಸೋಲಾರ್ ಹಿಟ್ಟಿನ ಗಿರಣಿ ಆರಂಭಗೊಂಡಿದೆ. ಇದರ ಬಳಕೆ ನಂತರ ವಿದ್ಯುತ್ ಶುಲ್ಕದ ಖರ್ಚು ತಗ್ಗಿದೆ. ಲಾಭಾಂಶ ಗಣನೀಯವಾಗಿ ಹೆಚ್ಚಾಗಿದೆ. ಆರೋಗ್ಯ ಕ್ಷೇತ್ರದತ್ತ ನೋಡೋದಾದರೆ ಸೋಲಾರ್ ಫ್ರಿಜ್, ಸೋಲಾರ್ ವೈದ್ಯಕೀಯ ಉಪಕರಣಗಳನ್ನು ಚಾಮರಾಜನಗರ ಜಿಲ್ಲೆ, ಶಿರಸಿಯ ಯಲ್ಲಾಪುರ, ಉತ್ತರ ಕರ್ನಾಟಕ, ಓರಿಸ್ಸಾ, ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ. ದೀರ್ಘಕಾಲ ಬಾಳಿಕೆ ಬರುವ ಇವುಗಳು ದಿನದ ಹೆಚ್ಚಿನ ಅವಧಿ ವಿದ್ಯುತ್ ಪೂರೈಕೆಯಿಲ್ಲದ ಗ್ರಾಮೀಣ ಪ್ರದೇಶಗಳಿಗೆ ವರದಾನವಾಗಿದೆ.

ಸೆಲ್ಕೊ ಪ್ರತಿಷ್ಠಾನದ ಕಾರ್ಯಕ್ರಮಗಳು.
ಗ್ರಾಮೀಣಾಭಿವೃದ್ಧಿ – ಆರ್ಥಿಕ ದುರ್ಬಲರಿಗೆ ಉತ್ತಮ ಬದುಕು ಕಲ್ಪಿಸುವ ಉದ್ದೇಶದಿಂದ ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್, ಪ್ರತಿಷ್ಠಾನ ಸ್ಥಾಪಿಸಿದೆ. ಇದರ ಮುಖಾಂತರ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿವೆ. ಸೂಕ್ತ ವ್ಯವಸ್ಥೆಗಳಿಲ್ಲದೇ ಬಳಲುವ ಗ್ರಾಮೀಣ ಪ್ರದೇಶಗಳನ್ನು ಗುರುತಿಸಿ ನೆರವಾಗುತ್ತಿದೆ. ಇಲ್ಲಿ ಅದರ ಕೆಲವು ಉದಾಹರಣೆಗಳು ಇವೆ.

ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದ, ದೀಪಗಳಿಲ್ಲದ ಮಲೆಮಹಾದೇಶ್ವಷರ ಬೆಟ್ಟದ ಸುತ್ತಮುತ್ತಲಿನ ಏಳು ಗ್ರಾಮಗಳಿಗೆ ಮೊಬೈಲ್ ಹೆಲ್ತ್ ವ್ಯಾನ್ ನೀಡಲಾಗಿದೆ. ಸೆಲ್ಕೋ ಕಂಪೆನಿ ಇದರಲ್ಲಿ ಟಿವಿ ಅಳವಡಿಸಲಾಗಿದ್ದು, ಸದಾ ಆರೋಗ್ಯದ ಮಾಹಿತಿಗಳು ಪ್ರದರ್ಶನವಾಗುತ್ತಲೇ ಇರುತ್ತವೆ. ಮಾದರಿ ಗ್ರಾಮ ಪರಿಕಲ್ಪನೆಯಡಿ ಆಯ್ದ ಗ್ರಾಮಗಳಿಗೆ ಸೋಲಾರ್ ಬೀದಿ ದೀಪಗಳ ಅಳವಡಿಕೆ, ಸೋಲಾರ್ ರೈಸ್ ಮಿಲ್, ಸೋಲಾರ್ ಪಂಪ್ ಸೆಟ್, ಸೋಲಾರ್ ಎಣ್ಣೆಗಾಣ ಸೇರಿದಂತೆ ಇತ್ಯಾದಿಗಳನ್ನು ಅಳವಡಿಸಲಾಗಿದೆ.
ಕೃಷಿಕ್ಷೇತ್ರದಲ್ಲಿಯೂ ಸೋಲಾರ್ ಲಗ್ಗೆಇಟ್ಟಿದೆ. ಕೃಷಿಕರಿಗೆ ಅತ್ಯವಶ್ಯಕವಾಗಿ ಯಾವ ಸೌಲಭ್ಯಗಳು ಬೇಕು ಎನ್ನುವುದನ್ನು ಅರಿತು ಕ್ಷೇತ್ರ ಅಧ್ಯಯನ ನಡೆಸಲಾಗುತ್ತದೆ. ಈ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಶಿಕ್ಷಣ ಕ್ಷೇತ್ರದ ಸುಸ್ಥಿರತೆಗೂ ಕೊಡುಗೆಗಳನ್ನು ನೀಡಲಾಗುತ್ತಿದೆ. ಖಾಸಗಿ ಶಿಕ್ಷಣ ಮಾದರಿಯಲ್ಲಿ ಹಳ್ಳಿಯ ಸರ್ಕಾರಿ ಮಕ್ಕಳಿಗೂ ಅತ್ಯುತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶ ಹೊಂದಿರುವುದು ಗಮನಾರ್ಹ


ಆಯ್ದ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಸೋಲಾರ್ ಪವರ್ ಟಿವಿಗಳನ್ನು ನೀಡಲಾಗಿದೆ. ಇದರ ಮುಖಾಂತರ ಡಿಜಿಟಲ್ ಶಿಕ್ಷಣ ಸೌಲಭ್ಯ ಒದಗಿಸಲಾಗುತ್ತಿದೆ. ಗಣಿತ, ಇಂಗ್ಲಿಷ್, ವಿಜ್ಞಾನ ಪಠ್ಯಪುಸ್ತಕಗಳ ವಿಷಯಗಳು ಇದರಲ್ಲಿ ಅಡಕವಾಗಿರುತ್ತವೆ. ಸೆಲ್ಕೋ ಇಂಡಿಯಾ ಹೆಸರಿನಲ್ಲಿ ರಾಜ್ಯಾದ್ಯಂತ ಸುಮಾರು 2 ಸಾವಿರ ಶಾಲೆಗಳು “ಸೆಲ್ಕೋ ಡಿಜಿಟಲ್ ಶಿಕ್ಷಣ ಇ-ಶಾಲಾ ಪ್ರೋಗ್ರಾಮ್ ಅಳವಡಿಸಿಕೊಂಡಿವೆ. ಶಾಲಾ ಮಕ್ಕಳಿಗೆ ಸೋಲಾರ್ ಚಾರ್ಜಿಂಗ್ ದೀಪಗಳನ್ನು ನೀಡಲಾಗಿದ್ದು, ಅವುಗಳನ್ನು ಶಾಲೆಯಲ್ಲಿಯೇ ಉಚಿತವಾಗಿ ಚಾರ್ಜ್ ಮಾಡಿಕೊಡುವ ವ್ಯವಸ್ಥೆ ಅಳವಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8073765665

1 COMMENT

LEAVE A REPLY

Please enter your comment!
Please enter your name here