ನಿರ್ಲಕ್ಷ್ಯದ ಆಡಳಿತಗಾರರಿಂದ ರಾಜ್ಯದ ಜಲ ಭವಿಷ್ಯ  ಭಯಾನಕ

0
ಕಾಡು - ಕಣಿವೆ - ನದಿ
ಚಿತ್ರ – ಲೇಖನ: ಶಿವಾನಂದ ಕಳವೆ, Shivananda Kalave ಕೃಷಿ, ಅರಣ್ಯ ತಜ್ಞರು

ನಮ್ಮ ರಾಜ್ಯ ಸುಮಾರು ವರ್ಷಗಳಿಂದ ನೀರಿನ ನ್ಯಾಯಕ್ಕೆ ಹೊಸ ಹೊಸ ವಕೀಲರನ್ನು ಹುಡುಕುತ್ತಾ  ಸಾಗಿದೆ. ನಾವು ನ್ಯಾಯ ಕೇಳುವ ನದಿಯ ನೀರು ನಮ್ಮದೇ ಮನೆ, ಹೊಲ, ತೋಟ, ಗುಡ್ಡ ಬೆಟ್ಟಗಳಲ್ಲಿ ಸುರಿದು ಕಾಲುವೆ, ಹಳ್ಳಗಳಲ್ಲಿ ಸಾಗಿ ನಾವೇ ನಿರ್ಮಿಸಿದ ಅಣೆಕಟ್ಟು ಭರ್ತಿ ಮಾಡುತ್ತಾ ಬಂದಿದ್ದು ಮರೆತು ಹೋಗಿದೆ.ಬೃಹತ್ ನೀರಾವರಿ ಯೋಜನೆ ಪ್ರದೇಶದ ಮೈಸೂರು ಸೀಮೆಯ ಕೆರೆಗಳಿಗೆ ಇತಿಹಾಸದಲ್ಲಿ ಇರುವ ಮಹತ್ವ ಆಡಳಿತದ ಈ ತಲೆಮಾರು ಅರಿತಿಲ್ಲ. ಕಾಲುವೆ ನೀರಲ್ಲಿ ಭತ್ತ, ಕಬ್ಬು ಬೆಳೆಯುವ ಅನುಕೂಲತೆ ವಿಕೇಂದ್ರೀಕೃತ ನೀರಾವರಿ ವ್ಯವಸ್ಥೆ ಮರೆಯುವಂತೆ ಮಾಡಿದೆ.

ಕಾವೇರಿ ಕಣಿವೆಯ ಪ್ರತೀ ಚದರ ಮೀಟರ್ ಜಾಗದಲ್ಲಿ 650-1 500ಲೀಟರ್ ಮಳೆ ನೀರು ಬಿದ್ದು ಹರಿಯುತ್ತದೆ. ಒಂದೊಂದು ಎಕರೆಯಲ್ಲಿ 20-45ಲಕ್ಷ ಲೀಟರ್ ಮಳೆ  ನೀರು ಹರಿಯುವಾಗ ಎಲ್ಲವನ್ನೂ ಕೆರೆ ಬದಲು ಅಣೆಕಟ್ಟೆಯಲ್ಲಿ ಹಿಡಿದು 334 ಟಿ ಎಂ ಸಿ ಲೆಕ್ಕದಲ್ಲಿ ಏಣಿಸುತ್ತಾ ಹಂಚುತ್ತಾ ಬಹಳ ವರ್ಷಗಳು ಕಳೆದಿದೆ. ನಮ್ಮ ಕಾಲು ಬುಡದ ನೀರಿನ ಬೆಲೆ ಅರಿಯದ ನಾವು ನದಿ ನ್ಯಾಯ ಹೋರಾಟದಲ್ಲಿ ಪಳಗಿದ್ದೇವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದಲ್ಲಿ ಇದ್ದ ಮಳೆನೀರು ಸಂಗ್ರಹಿಸುತ್ತಿದ್ದ ಕೆರೆಗಳ ಸಂಖ್ಯೆ ಅಪಾರ. ಸ್ವಾತಂತ್ರ್ಯ ದೊರೆತ ನಂತರ ಕೆರೆಗಳನ್ನೇ ನುಂಗಿ ನೀರು ಕುಡಿಯಲಾಗಿದೆ !

ವಕೀಲರನ್ನು ಹುಡುಕುವ ಜೊತೆಗೆ  ಕೆರೆ ಹುಡುಕುವ ಕಾರ್ಯ ಕೂಡಾ ನಡೆಯಬೇಕು. ಹೂಳು ತುಂಬಿ, ಅತಿಕ್ರಮಣ ಹೆಚ್ಚಿ  ಕೆರೆಗಳ  ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆ ಆಗಿದೆ. ಅರಣ್ಯ ಪರಿಸ್ಥಿತಿ ಬಹಳ ಹದಗೆಟ್ಟಿದೆ. ನಮಗೆ ಸುರಿಯುವ ಮಳೆ, ಬೆಳೆಯುವ. ಬೆಳೆಯ ನೀರಿನ ಪ್ರಮಾಣ ಗೊತ್ತಿಲ್ಲ. ಅವರಿಗೆ ಇವರು, ಇವರಿಗೆ ಅವರನ್ನು ಎತ್ತಿ ಕಟ್ಟುವ ಭಾಷಣಗಳಿಂದ ಕಣಿವೆ  ಕಷ್ಟ ಹೆಚ್ಚುತ್ತಿದೆ. ಹೋರಾಟದಲ್ಲಿ ನಾಯಕರಾಗಿ ನಿಲ್ಲುವವರು, ಜೋರಾಗಿ ಮಾತಾಡುವವರು  ಮಳೆ ನೀರು ಹಿಡಿಯಲು ಗೊತ್ತಿಲ್ಲದವರು ಎಂಬುದು ವಿಚಿತ್ರ.

ಒಂದು ಕೆರೆ ಹೂಳು ಎತ್ತಲು ನಿಜವಾಗಿ ಹಣ ಎಷ್ಟು ಬೇಕು? ಹೇಗೆ ಹೂಳು ಎತ್ತಬೇಕು? ಗೊತ್ತಿಲ್ಲದ ಆಡಳಿತ ನಮ್ಮದು. ಹೂಳು ತೆಗೆಯುವುದು ಎಂದರೆ ದುಡ್ಡು ಹೊಡೆಯುವುದು. ಎಂಬ ಅರ್ಥ ಇಲಾಖೆಗೆ ಜನಜನಿತ. ಇಲ್ಲಿ ಮೈಲಿಗೊಂದು ಕೆರೆ ಇದೆ, 1884ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಇದು 38, 000 ಕೆರೆಗಳ ನೆಲೆ ಎಂದಿದ್ದರು ಅಲ್ಲವೇ?ಹೊಸ ಕೆರೆಗೆ ಜಾಗ ಹುಡುಕುವುದೇ ಕಷ್ಟ ಎಂದಿದ್ದ ಕಾಲ ಮರೆತು ಎಲ್ಲಿಗೋ ಹೊರಟಿದ್ದೇವೆ.

ಏನ್ ಮಾಡೋಣ? ಯಾವಾಗಲೂ ನೀರಿನ ವಿಚಾರದಲ್ಲಿ ರಾಜ್ಯ ಆಡಳಿತ ವರ್ತನೆ ವಿಚಿತ್ರವಾಗಿದೆ.ನಮ್ಮ ಕೃಷ್ಣಾ ಕಣಿವೆಯಲ್ಲಿ ಕೆರೆಗಳು ಮೈಸೂರು ಸೀಮೆಗೆ ಹೋಲಿಸಿದರೆ ಬಹಳ ಕಡಿಮೆ. ಲೆಕ್ಕ ಹಾಕಿದರೆ ನಾಲ್ಕೈದು ಮೈಲಿಗೆ ಒಂದು ಕೆರೆ ಸಿಕ್ಕೀತು! ಅತಿ ಹೆಚ್ಚು ಬರಗಾಲ ಅನುಭವಿಸಿದ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಈ ಪ್ರದೇಶ ಕೃಷ್ಣಾ ನದಿ ನಂಬಿದೆ.

ಕಾವೇರಿ ಕಣಿವೆಯಲ್ಲಿ 18ಲಕ್ಷ ಎಕರೆ ಕೃಷಿ ಭೂಮಿ ಇದ್ದರೆ ಕೃಷ್ಣಾ ಕಣಿವೆಯಲ್ಲಿ 40ಲಕ್ಷ ಎಕರೆ ಇದೆ! ನಮ್ಮ ಮಾಧ್ಯಮಗಳಲ್ಲಿ ಕಾವೇರಿ ಸುದ್ದಿ ಆದಷ್ಟು ಕೃಷ್ಣಾ ಕಥೆ ಕೇಳಿದೆಯೇ? 1600 ವರ್ಷಗಳ ಹಿಂದೆ ಕಲ್ಲಣೆ ನಿರ್ಮಿಸಿ ನೀರು ಹಿಡಿದು ವಿಶ್ವದ ಜನರನ್ನು ಸೆಳೆದ ಕಾವೇರಿ ಕಣಿವೆ, ಪ್ರವಾಹ ತಡೆಗೆ ಸರಣಿ ಕೆರೆ ನಿರ್ಮಿಸಿದ ತಜ್ಞತೆ ಹೊಂದಿದ ನೆಲೆಯಾಗಿದೆ. ಈಗ ನೀರಿನ ಹೋರಾಟಕ್ಕೆ ಸುದ್ದಿಯಾಗಿದೆ.

ದೂರದೃಷ್ಟಿ ಇದ್ದ ಆಡಳಿತಗಾರ ದೇವರಾಜ ಅರಸು

ಹನೂರಿನಲ್ಲಿ ಹೊಳೆಗೆ ಒಡ್ಡು ಕಟ್ಟುವಾಗ ಅಲ್ಲಿಯೇ ಬೀಡು ಬಿಟ್ಟು ನೀರಾವರಿ ಯೋಜನೆ ಯಶಸ್ವಿ ಆಗಲು ಶಾಸಕರಾಗಿದ್ದ ದೇವರಾಜ್ ಅರಸು ಕೆಲಸ ಮಾಡಿ ಹೇಗೆ ಮಹಾ ನಾಯಕರಾಗಿ,ಜನಪ್ರತಿನಿಧಿ ಹೇಗೆ ಜಲ ಪ್ರತಿನಿಧಿ ಆಗಬೇಕೆಂದು ತೋರಿಸಿದವರಲ್ಲವೆ? ನೀರಿನ ಇಂಥ ನಾಯಕತ್ವ ಕೂಡಾ ಈ ಕಾಲದಲ್ಲಿ  ನೀರಿನಂತೆ ಮಾಯವಾಗಿದೆ, ಅಂತರ್ ಜಲ ಕುಸಿತದಲ್ಲಿ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವ ರಾಜ್ಯ ನಮ್ಮದು.ನಿರ್ಲಕ್ಷ್ಯದ ನಾಯಕರಿಂದ ರಾಜ್ಯದ ಜಲ ಭವಿಷ್ಯ  ಭಯಾನಕವೇ!

LEAVE A REPLY

Please enter your comment!
Please enter your name here