ದೇಹಕ್ಕೆ ಅಧಿಕ ಶಕ್ತಿ ನೀಡುವ ಅಳಿಯನ ಅಕ್ಕಿ

2
ಲೇಖಕರು: ಕುಮಾರ ರೈತ

ತಮಿಳುನಾಡಿನ ಪುದುಕೊಟೈಯ ಸಾವಯವ ಕೃಷಿಕ ಅರವಿಂದನ್ ನೀಲಮೇಘಮ್ ಅವರ ಕೃಷಿಕ್ಷೇತ್ರಕ್ಕೆ ಹೋಗಿದ್ದೆವು. ಮುಂಜಾನೆಯೇ ಅವರು ಅನುಸರಿಸುತ್ತಿರುವ ಸುಸ್ಥಿರ – ಸಾವಯವ ಕೃಷಿ ಕುರಿತು ಚಿತ್ರೀಕರಣ ಶುರು ಮಾಡಿದ್ದೆವು. ಬೆಳಗ್ಗೆ ಸುಮಾರು 9 ಗಂಟೆಗೆ ಅಲ್ಲಿಗೆ ಅವರ ಕುಟುಂಬದವರು ನಮಗೆಲ್ಲ ಮನೆಯಿಂದ ತಿಂಡಿ ಮಾಡಿ ತಂದಿದ್ದರು. “ಮಾಪಿಳ್ಳೈ ಸಾಂಬಾ ಅಕ್ಕಿಯಿಂದ ಮಾಡಿದ ಗಂಜಿಯೂ ಇದೆ. ಕುಡೀತೀರಾ” ಎಂದರು.

ಮಾಪಿಳ್ಳೈ ಸಾಂಬಾ ತಳಿಯ ಅಕ್ಕಿ ಬಗ್ಗೆ ಕೇಳಿದ್ದೆ. ಆದರೆ ಅದರಿಂದ ಮಾಡಿದ ಆಹಾರ ಸವಿದಿರಲಿಲ್ಲ. ಸಂತೋಷದಿಂದ ಆಯಿತು ಎಂದೆ. ದೊಡ್ಡ ಬಟಲಿನಲ್ಲಿ ಗಂಜಿ ತುಂಬಿ ನೆಚ್ಚಿಕೊಳ್ಳಲು ಎಣ್ಣೆಯಲ್ಲಿ ಕರಿದ ಒಣ ಮೆಣಸಿನಕಾಯಿ (ವತ್ತಲ್) ಸಂಡಿಗೆ ಕೊಟ್ಟರು. ಭಾರಿ ರುಚಿಯಾಗಿತ್ತು. ಮೂರು ಬಟ್ಟಲು ಗಂಜಿ ಕುಡಿದಿದ್ದಾಯ್ತು.

ಈ ನಂತರ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ಗಡಿಗಳು ಸಂಗಮಿಸುವ ಸ್ಥಳದಲ್ಲಿರುವ ಮಲ್ಲಯ್ಯನ ಬೆಟ್ಟಕ್ಕೆ ಹೋಗಿದ್ದೆವು. ಮುಂಜಾನೆಯೇ ಹೊರಟ್ಟಿದ್ದರಿಂದ ತಿಂಡಿ ವೇಳೆಗೆ ಕೃಷ್ಣಗಿರಿ ಸನಿಹ ಇದ್ದೆವು. ಅಲ್ಲಿ ಹೆದ್ದಾರಿ ಬದಿಯಲ್ಲೇ  ಇರುವ “ಮುರುಗನ್ ಇಡ್ಲಿ” ಹೋಟೆಲಿಗೆ ಹೋದೆವು. ಮೆನುವಿನಲ್ಲಿ ಮಾಪಿಳ್ಳೈ ಸಾಂಬಾ ಇಡ್ಲಿಯೂ ಇತ್ತು. ತರಲು ಹೇಳಿದೆ. ಅಲ್ಲಿ ಮೂರು ಥರದ ಚಟ್ನಿಯಿಂದಿಗೆ ಇಡ್ಲಿ ಕೊಡುತ್ತಾರೆ. ಮೊದಲಿಗೆ ಎರಡು ಇಡ್ಲಿ ತಿಂದವನು ಮತ್ತೆ ನಾಲ್ಕು ಇಡ್ಲಿ ತರಿಸಿಕೊಂಡು ತಿಂದೆ. ಅಷ್ಟು ರುಚಿ.

ಇದು ವಿಶೇಷವಾಗಿ ತಮಿಳುನಾಡು ತಿರುವಣ್ಣಾ ಮಲೈ, ಪುದುಕೊಟೈ ಭಾಗದಲ್ಲಿ ಬೆಳೆಯುವ ದೇಸೀ ತಳಿ. ಇದಕ್ಕೆ “ಮಾಪಿಳ್ಳೈ ಸಾಂಬಾ” ಎಂದು ಹೆಸರಿಡಲು ಬಹು ವಿಶೇಷ ಕಾರಣವೂ ಇದೆ. ತಮಿಳಿನಲ್ಲಿ ಮಾಪಿಳ್ಳೈ ಎಂದರೆ ಅಳಿಯ. ಸಾಂಬಾ ಎಂದರೆ ಅಕ್ಕಿ. ಕನ್ನಡದಲ್ಲಿ ಅಳಿಯನ ಅಕ್ಕಿ” ಎಂದು ಹೇಳಬಹುದು. ನವವರ ಅಂದರೆ ಆಗಷ್ಟೆ ಮದುವೆಯಾಗಿ ಪತ್ನಿ ಮನೆಗೆ ಆತಿಥ್ಯಕ್ಕಾಗಿ ಬಂದ ಅಳಿಯನಿಗೆ ಆತನ ಅತ್ತೆ “ಮಾಪಿಳ್ಳೈ ಸಾಂಬಾ” ದಿಂದ ಮಾಡಿದ ಅನ್ನ, ಗಂಜಿ, ಇಡ್ಲಿ, ದೋಸೆ, ಪಾಯಸ, ಕಜ್ಜಾಯ ಇತ್ಯಾದಿ ತಿನಿಸುಗಳನ್ನು ಮಾಡುತ್ತಿದ್ದರು.

ಮಾಪಿಳ್ಳೈ ಸಾಂಬಾದಿಂದ ಮಾಡಿದ ಆಹಾರ ಸವಿಯುವುದರಿಂದ ದೇಹಕ್ಕೆ ಬೇಗನೆ ವಿಶೇಷ ಶಕ್ತಿ ದೊರೆಯುತ್ತದೆ.  ಇದರಿಂದ ಮಾಡಿದ ಆಹಾರ ತಿಂದು ಮತ್ತಷ್ಟೂ ದೇಹಶಕ್ತಿ ಗಳಿಸಿದ ನಂತರ ಗ್ರಾಮದ ಗರಡಿ ಮನೆಯಲ್ಲಿರುವ ಬಲು ಭಾರದ ದೊಡ್ಡ ಗುಂಡನ್ನು ಅಳಿಯ ಎತ್ತಬೇಕಿತ್ತು. ಇದರ ಹಿಂದೆ ಗ್ರಾಮೀಣರ ಕ್ರೀಡಾಸಕ್ತಿಯೂ ಇತ್ತು.

ಆರೋಗ್ಯ ವೃದ್ದಿಸಲು, ಶಕ್ತಿ ಹೆಚ್ಚಿಸಲು, ದೇಹ ಪುಷ್ಟಿ ಅಂದರೆ ದಪ್ಪಗಾಲು ಮಾಪಿಳ್ಳೈ ಸಾಂಬಾ ತಳಿಯ ಅಕ್ಕಿಯಿಂದ ಮಾಡಿದ ಆಹಾರ ಸೇವನೆ  ಪೂರಕ. ಇಂಥ ವಿಶೇಷ ತಳಿಯ ಕೃಷಿಕ್ಷೇತ್ರ ಇತ್ತೀಚಿನ ದಶಕಗಳಲ್ಲಿ ಕಡಿಮೆಯಾಗಿದೆ.

ಮಾಪಿಳ್ಳೈ ಸಾಂಬಾ ತಳಿ ಅಕ್ಕಿ ಬಣ್ಣ ಕೆಂಪು. ನೋಡಲು ಕರ್ನಾಟಕದ ಕೆಂಪಕ್ಕಿ ತಳಿಯ ಹಾಗೆ ಇದೆ. ಇದು 160 ದಿನಗಳ ಬೆಳೆ. ಸಾವಯವ ಕೃಷಿಗೆ ಸೂಕ್ತ. 90 ರಿಂದ 120  ದಿನಗಳಲ್ಲೇ ಕೊಯ್ಲಿಗೆ ಬರುವ ಅಕ್ಕಿ ತಳಿಗಳನ್ನೇ ಬೆಳೆಯಲು ಹೆಚ್ಚಿನ ಕೃಷಿಕರು ಆಸಕ್ತಿ ತೋರಿದ ಕಾರಣ ಇದರ ಕೃಷಿಕ್ಷೇತ್ರ ಗಣನೀಯವಾಗಿ ಕುಗ್ಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಸೀ ತಳಿ ಅಕ್ಕಿಗಳಿಗೆ ಅದರಲ್ಲೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಮಾಪಿಳ್ಳೈ ಸಾಂಬಾ ತಳಿ ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಇದರ ಕೃಷಿಕ್ಷೇತ್ರ ನಿಧಾನವಾಗಿ ಹೆಚ್ಚುತ್ತಿದೆ. ಇದು ಆಶಾದಾಯಕ ಬೆಳವಣಿಗೆ.

2 COMMENTS

  1. ನಮಗೆ ಮಾಪಿಳ್ಳೆ ಸಾಂಬಾ ಬೆಳೆಯ ಬಿತ್ತನೆ ಬೀಜ ಸಿಗಬಹುದೇ

    • ತಮಿಳುನಾಡಿನ ದೇಸೀ ಬೀಜ ಸಂಸ್ಥೆ ಅಥವಾ ರೈತರಲ್ಲಿ ವಿಚಾರಿಸಬೇಕು

LEAVE A REPLY

Please enter your comment!
Please enter your name here