ಪೋಷಕಾಂಶ ನೀಡುವಾಗ ವಹಿಸಬೇಕಾದ ಮುಂಜಾಗ್ರತೆಗಳು

0
ಡಾ. ಭವಿಷ್ಯ ಕೆ. ವಿಜ್ಞಾನಿ, ಸಿ.ಪಿ.ಸಿ.ಆರ್.ಐ., ವಿಟ್ಲ

ಬೆಳೆಗಳಿಗೆ ಯಾವುದೇ ಸಾವಯವ ಗೊಬ್ಬರ ,ಹಸಿರೆಲೆ ಗೊಬ್ಬರ, ಕೋಳಿ ಗೊಬ್ಬರ, ಆಡಿನ ಹಿಕ್ಕೆ,ತೆಂಗಿನ ನಾರು, ಅಡಿಕೆ ಸಿಪ್ಪೆ……ಕೊಡುವಾಗ ಅದನ್ನು ಕಾಂಪೋಸ್ಟ್ ಮಾಡಿಕೊಡುವುದು ಒಳ್ಳೆಯದು. ಎಷ್ಟು ಸಾಧ್ಯವೋ ಅಷ್ಟು ಹಸಿಯಾಗಿರುವಾಗಲೇ ಕಾಂಪೋಸ್ಟ್ ಮಾಡುವುದು ಒಳಿತು. ಯಾಕೆಂದರೆ ಸಸ್ಯಭಾಗಗಳು ಒಣಗುವಾಗ ಲಿಗ್ನೈನ್ ಅಂಶ ಹೆಚ್ಚಾಗುತ್ತದೆ, ಆಗ ಕರಗುವಿಕೆ ನಿಧಾನವಾಗುತ್ತದೆ.
ಇಂಗಾಲ ಸಾರಜನಕ ಅನುಪಾತ ಕರಗುವಿಕೆಯ ವೇಗವನ್ನು ನಿರ್ಧರಿಸುತ್ತದೆ. ತೆಂಗಿನ ನಾರು,ಅಡಿಕೆ ಸಿಪ್ಪೆ, ಒಣ ವಸ್ತುಗಳಲ್ಲಿ ಇಂಗಾಲದ ಅಂಶ ತೀರಾ ಹೆಚ್ಚು ಇರುತ್ತದೆ.ಕರಗುವಿಕೆ ವೇಗವಾಗಿ ನಡೆಯಬೇಕಾದರೆ ಇಂಗಾಲ ಸಾರಜನಕದ ಅನುಪಾತ 20:1 ಆಗಬೇಕು.ಅದಕ್ಕಾಗಿ ಸಾರಜನಕ ಗಂಜಲ,ಸಗಣಿ, ಯೂರಿಯಾ ರೂಪದಲ್ಲಿ ಬಳಸಬಹುದು.ಕಾಂಪೋಸ್ಟಿಂಗ್ ಮಾಡುವಾಗ ಸುಣ್ಣ ಮತ್ತು ರಾಕ್ ಫಾಸ್ಪೇಟ್ ಶೇಕಡ ಎರಡರಷ್ಟು ಬಳಸಬೇಕು.
ಯಾಕೆ ಎಲ್ಲವನ್ನೂ ಕಾಂಪೋಸ್ಟಿಂಗ್ ಮಾಡಬೇಕು ? ಸಾವಯವ ವಸ್ತುಗಳು ಕಳಿಯುವಾಗ ,ವಿಘಟನೆಯಾಗುವಾಗ ಅಮೋನಿಯಾ ಬಿಡುಗಡೆಯಾಗುತ್ತದೆ. ಈ ಅಮೋನಿಯಾವನ್ನು ಅಡಿಕೆ ಸಿಪ್ಪೆ,ತೆಂಗಿನ ನಾರು ಹೀರಿಕೊಳ್ಳುತ್ತದೆ.ಇದರಿಂದಾಗಿ ಸಾರಜನಕದ ನಷ್ಟ ತಡೆದಂತಾಗುತ್ತದೆ,ಸದುಪಯೋಗವಾಗುತ್ತದೆ. ರಸಸಾರ ಸರಿಪಡಿಸಲು ಸುಣ್ಣ ಬಳಸುವುದರಿಂದ ಡೋಲೊಮೈಟ್ ಬಳಸುವುದು ಒಳ್ಳೆಯದು.ಯಾಕೆಂದರೆ ಅದರಲ್ಲಿ ಕ್ಯಾಲ್ಸಿಯಂ ಜೊತೆಗೆ ಸತು ಕೂಡಾ ಸಿಗುತ್ತದೆ.
ಅಡಿಕೆ ತೋಟಕ್ಕೆ ಸಪ್ಟಂಬರ ತಿಂಗಳ ಪ್ರಥಮ ವಾರದಲ್ಲಿ ಡೋಲೊಮೈಟ್ ಹಾಕಿ, ಮೂರು ವಾರದ ಬಳಿಕ ಇತರ ಗೊಬ್ವರ ಕೊಡಿ.ಬರೀ ಕುರಿಗೊಬ್ಬರ ಕೊಡುವುದಿದ್ದರೆ ಐದು ಕೇಜಿ ಕೊಡಿ. ಎರೆಹುಳ ಗೊಬ್ಬರ ಕೊಡುವುದಾದರೆ ಆರು ಕೇಜಿ ಮತ್ತು ಪೊಟ್ಯಾಶ್ ಕೊಡಿ. ರಸಸಾರ ಆರರಿಂದ ಏಳು ಇದ್ದ ಜಮೀನಿನಲ್ಲಿ ಡಿಏಪಿ ಬಳಕೆ ಮಾಡಬಹುದು. ಅದಕ್ಕಿಂತ ಕಡಿಮೆ ಇದ್ದ ಜಮೀನಿಗೆ ರಾಕ್ ಫಾಸ್ಪೇಟ್ ಒಳ್ಳೆಯದು. ಕ್ಷಾರೀಯ ಮಣ್ಣಲ್ಲಿ ಸೂಪರ್ ಫಾಸ್ಪೇಟ್ ಬಳಸಿ. ಯಾವತ್ತೂ ಶಿಫಾರಿತ ಪ್ರಮಾಣದ ಮೂರನೇ ಒಂದು ಭಾಗ ಪ್ರಥಮ ವರ್ಷ,ಮೂರನೇ ಎರಡು ಭಾಗ ಎರಡನೇ ವರ್ಷ ಮತ್ತು ಮೂರನೆಯ ವರ್ಷದ ಬಳಿಕ ಸಂಪೂರ್ಣ ಪ್ರಮಾಣ ಕೊಡಬೇಕು.

ವಾರ್ಷಿಕ, ಅರೆ ವಾರ್ಷಿಕ ಬೆಳೆಗಳಿಗೆ ಪೊಟ್ಯಾಶ್ ಕಡಿಮೆ ಸಾಕು. ಬಹುವಾರ್ಷಿಕ ಬೆಳೆಗಳಿಗೆ ಪೊಟ್ಯಾಶ್ ಜಾಸ್ತಿ ಬೇಕು. ಬೂದಿಯಲ್ಲಿ ಸುಮಾರು ಐದು ಶೇಕಡಾ ಪೊಟ್ಯಾಶ್ ಇದೆ.ಸಲ್ಫರ್ ಆಫ್ ಪೊಟ್ಯಾಶ್ (sop)ಯಲ್ಲಿ ಗಂಧಕ ಇದೆ.ಅದು ಮಣ್ಣನ್ನು ಆಮ್ಲೀಯವನ್ನಾಗಿಸುತ್ತದೆ. ರಸಸಾರ ಏಳಕ್ಕಿಂತ ಹೆಚ್ಚಿರುವ ಪ್ರದೇಶಕ್ಕೆ ಇದನ್ನು ಬಳಸಿ.ನಾರಿನ ಪದಾರ್ಥಗಳಲ್ಲಿ ಪೊಟ್ಯಾಶ ಹೆಚ್ಚಿದೆ. ಸಾವಯವ ವಸ್ತಗಳಲ್ಲಿ ಇರುವ ಎಲ್ಲ ಪೋಷಕಾಂಶಗಳು ಇಂಗಾಲದೊಂದಿಗೆ ಸಂಯೋಜನೆ ಗೊಂಡಿರುತ್ತವೆ. ಅದನ್ನು ಉರಿಸಿದಾಗ ಇಂಗಾಲದ ಜೊತೆಜೊತೆಗೆ ಈ ಪೋಷಕಾಂಶಗಳೂ ನಷ್ಟವಾಗುತ್ತದೆ.ಬೂದಿಯಲ್ಲಿ ಇಂಗಾಲ ಇಲ್ಲದೇ ಇರುವುದರಿಂದ ಇದು ಸೂಕ್ಷಾಣು ಜೀವಿಗಳಿಗೆ ಅನುಕೂಲಕರ ಅಲ್ಲ. ಬೂದಿ ಹೆಚ್ಚು ಹಾಕಿದರೆ ಎಲೆ ಹಳದಿಯಾಗುತ್ತದೆ . ಕೇವಲ ಬೂದಿಯನ್ನು ಹಾಕಿದರೆ ಅದು ಸಿಮೆಂಟ್ ಹಾಕಿದಂತಾಗಿ ಗಾಳಿಯಾಡುವಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆ.


ಸಾವಯವ ಗೊಬ್ಬರಗಳಲ್ಲಿ ಸಾರಜನಕದ ಅಂಶ ಹೆಚ್ಚು, ಪೊಟ್ಯಾಶ್ ಕಡಿಮೆ ಇರುತ್ತದೆ. ನಮ್ಮೂರ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ,ತಾಮ್ರ,ಮ್ಯಾಂಗನೀಸ್ ,ಅಲ್ಯೂಮಿನಿಯಂ, ಸಾಮಾನ್ಯವಾಗಿ ಹೆಚ್ಚಾಗಿಯೇ ಇದೆ. ಆದ್ದರಿಂದ ಅವುಗಳ ಪೂರೈಕೆ ಬೇಡ. ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು,ಬೋರಾನ್ ಕಡಿಮೆ ಇದೆ. ಆದ್ದರಿಂದ ಕೊಡಬೇಕು. ಆದರೆ ಸಾವಯವ ಗೊಬ್ಬರ ಧಾರಾಳವಾಗಿ ಬಳಸುವ ತೋಟಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಬಳಕೆಯ ಆವಶ್ಯಕತೆ ಇಲ್ಲ.ಸತು ಬೇಕಾದ್ದು ಹೊಸ ಚಿಗುರುಗಳು ಬರಲು.ಅಡಿಕೆಗೆ ಮುಂಡುತಿರಿ ಕಾಡುತ್ತಿದ್ದಲ್ಲಿ znso4 15-20gms ಬಳಸಿ.ಇನ್ನೊಂದು Zn edt ಅಂತ ಸಿಗುತ್ತದೆ. ಎಲ್ಲಾದರೂ znso4 ಕೆಲಸ ಮಾಡದೇ ಇದ್ದಲ್ಲಿ ಅದನ್ನು ಬಳಸಬಹುದು.ಬೋರಾನ್ ಮತ್ತು Zn ಕೊರತೆ ನಮ್ಮಲ್ಲಿ ಸಾಮಾನ್ಯ. ಬೋರಾನ್ ಹಣ್ಣಿನ ಗುಣಮಟ್ಟ ಮತ್ತು ಪಕ್ವತೆಗೆ ಆವಶ್ಯ. ಅಡಿಕೆ ಒಡೆದು ಬೀಳುವುದಕ್ಕೂ ಇದರ ಕೊರತೆ ಕಾರಣ.
ಪೋಷಕಾಂಶಗಳು ಆವಶ್ಯಕತೆಗಿಂತ ಕಡಿಮೆಯಾದರೆ ಫಸಲು ಇಲ್ಲ, ಹೆಚ್ಚಾದರೆ ಅದೇ ವಿಷ.ಆದ್ದರಿಂದ ಆವಶ್ಯ ಇದ್ದಷ್ಟೇ ಬಳಸುವುದು ಮುಖ್ಯ. ಯಾವುದೋ ಒಂದು ಪೋಷಕಾಂಶದ ಕೊರತೆ /ಹೆಚ್ಚಳ ಇನ್ನೊಂದು ಪೋಷಕಾಂಶದ ಬಳಕೆಗೆ ತಡೆಯೊಡ್ಡಬಹುದು. ಸೂಕ್ಷ್ಮ ಪೋಷಕಾಂಶಗಳನ್ನು ಮುಖ್ಯ ಪೋಷಕಾಂಶಗಳ ಜೊತೆಗೆ ಬಳಸಬಾರದು,ಪ್ರತ್ಯೇಕವಾಗಿಯೇ ಬಳಸಬೇಕು.ಅದರಲ್ಲೂ ಕ್ಯಾಲ್ಸಿಯಂ ಜೊತೆ ಯಾವುದನ್ನೂ ಬೆರೆಸುವಂತಿಲ್ಲ.Zn ಮತ್ತು ರಾಕ್ ಫಾಸ್ಫೇಟ್ ಜೊತೆಗೆ ಕೊಡಬಾರದು.
ಎರೆಗೊಬ್ವರ ಮಾಡುವುದು ಒಳ್ಳೆಯದು.ಎರೆಗೊಬ್ಬರ ಲಭ್ಯ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.ಸಾವಯವ ವಸ್ತುಗಳಲ್ಲಿ ಪೋಷಕಾಂಶಗಳು ಸಸ್ಯಗಳಿಗೆ ಲಭ್ಯ ಮತ್ತು ಅಲಭ್ಯ ಎಂಬ ಎರಡು ಸ್ಥಿತಿಯಲ್ಲಿರುತ್ತವೆ. ಕೆಂಪು ಬಣ್ಣದ ಪೊಟ್ಯಾಶಿನಲ್ಲಿ ಕಬ್ವಿಣದ ಅಂಶ ಇದೆ.ಪೋಷಕಾಂಶಗಳನ್ನು ರಸಾವರಿ ಮುಖಾಂತರ ಕೊಡುವುದರಿಂದ ಅದರ ಕ್ಷಮತೆಯನ್ನು ಸುಮಾರು ಹೆಚ್ಚಿಸಬಹುದು. ಸಾಮಾನ್ಯವಾಗಿ ನಾವು ಕೊಡುವ ಗೊಬ್ವರದ ಸುಮಾರು 30% ಮಾತ್ರ ಸಸ್ಯಗಳ ಬಳಕೆಗೆ ಸಿಗುತ್ತದೆ.ರಸಾವರಿಯಲ್ಲಿ ಇದು 70-80% ಗೆ ಹೆಚ್ಚುತ್ತದೆ.ಆದ್ದರಿಂದ ಕನಿಷ್ಟ 25% ಕಡಿಮೆ ಪೋಷಕಾಂಶಗಳ ಬಳಕೆ ಸಾಕು.
ರಸಾವರಿಗಾಗಿ ವೆಂಚುರಿ ಬಳಸಿದಲ್ಲಿ ಏಕಕಾಲಕ್ಕೆ ಸುಮಾರು ಮುನ್ಬೂರು ಗಿಡಗಳಿಗಷ್ಟೇ ಪೂರೈಕೆ ಸಾಧ್ಯ.fertigation tank ಬಳಸಿದರೆ 700 ಗಿಡಕ್ಕೆ ಪೂರೈಸಬಹುದು.ರಸಾವರಿಯಲ್ಲೂ ಕ್ಯಾಲ್ಸಿಯಂ ಪ್ರತ್ಯೇಕವಾಗಿ ಕೊಡಬೇಕು. ಅಡಿಕೆ ತೋಟಕ್ಕೆ ರಾಕ್ ಫಾಸ್ಫೇಟ್ ಒಮ್ಮೆಲೇ ಕೊಡಿ. ಸಾರಜನಕ ಮತ್ತು ಪೊಟ್ಯಾಶನ್ನು ದಶಂಬರದಿಂದ ಮೇ ತಿಂಗಳ ತನಕ ಇಪ್ಪತ್ತು ದಿನಕ್ಕೊಮ್ಮೆ ಒಂಬತ್ತು ಕಂತುಗಳಲ್ಲಿ ಕೊಡಿ.ಈ ರೀತಿ ಕೊಟ್ಟಲ್ಲಿ ಪೋಷಕಾಂಶಗಳು ನೇರವಾಗಿ ಫಸಲಿನ ಮೇಲೆ ಪರಿಣಾಮ ತೋರಿಸುತ್ತದೆ.

LEAVE A REPLY

Please enter your comment!
Please enter your name here