ಕೃಷಿಯು ನಮ್ಮ ದೇಶದ ಜೀವನಾಡಿ. ನಮ್ಮ ದೇಶದಲ್ಲಿ ಪ್ರತಿಶತ ೮೬% ರಷ್ಟು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿದ್ದು, ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ರೈತರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು, ರೈತರ ಸಾಮಾಜಿಕ ಹಾಗೂ ಆರ್ಥಿಕ ಗುಣಮಟ್ಟವನ್ನು ಉತ್ತಮಗೊಳಿಸಲು ಹಾಗೂ ರೈತರಿಗೆ ಧ್ವನಿಯಾಗುವಂತಹ ಸಂಸ್ಥೆ ಎಂದರೆ ರೈತ ಉತ್ಪಾದಕರ ಸಂಸ್ಥೆಗಳು. ರೈತರೇ, ರೈತರಿಂದ ರೈತರಿಗೋಸ್ಕರ ರಚಿಸಲ್ಪಡುವ ಸಂಸ್ಥೆಯೇ ರೈತ ಉತ್ಪಾದಕರ ಸಂಸ್ಥೆ.
ಒಬ್ಬ ಕೃಷಿಕ, ಒಂದು ಬೆಳೆ, ಒಂದೇ ಬೆಲೆ ಈ ಒಂದು ಸಾಂಪ್ರದಾಯಿಕ ಪರಿಕಲ್ಪನೆಯಿಂದ ಹೊರ ಬಂದು ಕೃಷಿಕರು ಸಂಘಟಿತರಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿ ಹಳೆಯದಾದರೂ ಇಂದಿಗೂ ಅದು ಹೆಚ್ಚು ಅರ್ಥಗರ್ಭಿತ. ಇತ್ತೀಚಿನ ದಿನಗಳಲ್ಲಿ ರೈತ ಉತ್ಪಾದಕರ ಸಂಸ್ಥೆಗಳು ಕೃಷಿಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿವೆ. ರೈತ ಉತ್ಪಾದಕರ ಸಂಸ್ಥೆಗಳು ಕಂಪನಿಯ ಕಾಯ್ದೆ ೧೯೫೬ ಮತ್ತು ೨೦೧೩ ರಲ್ಲಿ ತಿದ್ದುಪಡಿಯಾದ ವಿಶೇಷ ನಿಬಂಧನೆಗಳಡಿಯಲ್ಲಿ ನೋಂದಾಯಿತ ಕಂಪನಿಗಳಾಗಿರುತ್ತವೆ. ರೈತ ಉತ್ಪಾದಕರ ಸಂಸ್ಥೆಗಳು ಪ್ರಾಥಮಿಕ ಉತ್ಪಾದಕರಾದ ರೈತರನ್ನು ಮಾತ್ರ ಷೇರುದಾರರನ್ನಾಗಿ ಹೊಂದಿದ ಸಂಸ್ಥೆಗಳಾಗಿರುತ್ತವೆ.
ಗ್ರಾಮ ಮಟ್ಟದಲ್ಲಿ ಸುಮಾರು ೨೦ ಸದಸ್ಯರನ್ನೊಳಗೊಂಡ ರೈತ ಆಸಕ್ತ ಗುಂಪುಗಳನ್ನು ರಚಿಸಿ, ಅವುಗಳನ್ನು ರೈತ ಉತ್ಪಾದಕರ ಸಂಸ್ಥೆಗಳಾಗಿ ಕಟ್ಟುವುದು. ರೈತ ಉತ್ಪಾದಕರ ಸಂಸ್ಥೆಗಳು ಪ್ರಾರಂಭದಲ್ಲಿ ೫೦೦ ರೈತ ಸದಸ್ಯರನ್ನು ಹೊಂದಿ ತದನಂತರ ೧೦೦೦ ರೈತ ಸದಸ್ಯರಿಗೆ ಹೆಚ್ಚಿಸಬಹುದು. ಬುಡಕಟ್ಟು, ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಸಂಸ್ಥೆಗಳು ಕಡಿಮೆ ಸದಸ್ಯರುಗಳನ್ನು ಹೊಂದಬಹುದಾಗಿದೆ.
ಉದ್ದೇಶಗಳು: ರೈತರ ಅಗತ್ಯಕ್ಕನುಗುಣವಾಗಿ ತಾಂತ್ರಿಕ ತರಬೇತಿ ನೀಡುವುದು. ಸಕಾಲದಲ್ಲಿ ಗುಣಮಟ್ಟದ ಕೃಷಿ ಮತ್ತು ತೋಟಗಾರಿಕಾ ಪರಿಕರಗಳನ್ನು ಹಾಗೂ ಸೇವೆಗಳ ಸಂಪರ್ಕ ಕಲ್ಪಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು. ಹಣಕಾಸು ಸೌಲಭ್ಯ ಮತ್ತು ಕೃಷಿ ಬೆಳೆ ವಿಮೆ ಸೇವೆಗಳನ್ನು ಕಲ್ಪಿಸುದು. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ನ್ಯಾಯೋಚಿತ ಹಾಗೂ ಲಾಭದಾಯಕ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುವುದು. ಸಂಸ್ಥೆಗಳು ಲಾಭದಾಯಕವಾಗಿ ಕಾರ್ಯನಿರ್ವಹಿಸಿದಾಗ ಸದಸ್ಯ ರೈತರುಗಳು ಸಂಸ್ಥೆಯೊAದಿಗೆ ವ್ಯವಹರಿಸಿದ ಮೊತ್ತಕ್ಕೆ ಅನುಗುಣವಾಗಿ ಹೆಚ್ಚುವರಿ ಲಾಭವನ್ನು ಸದಸ್ಯರುಗಳು ಸಂಸ್ಥೆಯಿಂದ ಪಡೆಯಬಹುದು.
ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಪಶು ಸಂಗೋಪನೆ, ಅರಣ್ಯ, ಮೀನುಗಾರಿಕೆ, ಜಲಾನಯನ ಅಭಿವೃದ್ಧಿ, ಸಹಕಾರ, ಮಾರುಕಟ್ಟೆ ಮಂಡಳಿ ಹಾಗೂ ಇತರ ಅಭಿವೃದ್ಧಿ ಇಲಾಖೆಗಳು ರೈತ ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳ ಭಾಗವಾಗಿರುತ್ತವೆ. ನಮ್ಮ ರಾಜ್ಯದಲ್ಲಿ ಈಗಾಗಲೇ ೮೦೦ ಕ್ಕೂ ಹೆಚ್ಚು ರೈತ ಉತ್ಪಾದಕರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ೧೦,೦೦೦ ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು ದೇಶಾದ್ಯಂತ ರಚಿಸಲು ಕೇಂದ್ರ ಸರ್ಕಾರ ಗುರಿ ಹೊಂದಿದೆ.
ಇದರಲ್ಲಿ ನಮ್ಮ ರಾಜ್ಯಕ್ಕೆ ೧೭೫ ಹೊಸ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಬAಧಿಸಿದ ನೀತಿಯನ್ನು ರೂಪಿಸಿದ ರಾಷ್ಟçದ ಕೆಲವೇ ರಾಜ್ಯಗಳಲ್ಲಿ ಒಂದಾಗಿದೆ. ಈ ನೀತಿಯಲ್ಲಿ ರಾಜ್ಯದಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಕನಿಷ್ಟ ೧ ರೈತ ಉತ್ಪಾದಕರ ಸಂಸ್ಥೆಯನ್ನು ರಚಿಸಿ ಪ್ರೋತ್ಸಾಹಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ರೈತರನ್ನು ಸಜ್ಜುಗೊಳಿಸುವುದಕ್ಕೆ, ನೊಂದಣಿ ಶುಲ್ಕ, ನಿರ್ವಹಣೆ ಖರ್ಚು, ತರಬೇತಿ ಹಾಗೂ ಕಲಿಕಾ ಕ್ಷೇತ್ರ ಭೇಟಿ ಇತ್ಯಾದಿಗಳಿಗೆ ಬಂಡವಾಳದ ಅವಶ್ಯವಿರುತ್ತದೆ. ಬೆಳವಣಿಗೆಯ ಹಂತದಲ್ಲಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಬೆಂಬಲ, ವ್ಯವಹಾರವನ್ನು ನಿರ್ವಹಿಸಲು ಹಾಗೂ ಸಾಮರ್ಥ್ಯವರ್ಧನೆಗೆ ಬಂಡವಾಳದ ಅವಶ್ಯಕತೆಯಿರುತ್ತದೆ. ವ್ಯವಹಾರ ವಿಸ್ತರಣಾ ಹಂತದಲ್ಲಿ ವಿವಿಧ ಮೂಲ ಸೌಕರ್ಯಗಳಾದ ಸಂಸ್ಕರಣಾ ಘಟಕಗಳು, ಸಂಸ್ಕರಣಾ/ ವರ್ಗೀಕರಣ/ ವಿಂಗಡಣೆ, ಸಂಗ್ರಹಣಾ ಗೋದಾಮುಗಳು, ಸಾರಿಗೆ ವ್ಯವಸ್ಥೆ, ಮಾರುಕಟ್ಟೆಯಂತಹ ಬೆಂಬಲ ವ್ಯವಸ್ಥೆಗಳಿಗೆ ಅವಶ್ಯಕವಿರುತ್ತದೆ.
ಹಣಕಾಸು ಸಹಾಯವನ್ನು ಎಸ್.ಎಫ್.ಎ.ಸಿ. ಯ ಇಕ್ವಿಟಿ ಗ್ರಾಂಟ್ಸ್, ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆಯಡಿಯಲ್ಲಿ ನಬಾರ್ಡ್ನ ನಾಬ್-ಕಿಸಾನ್ ಯೋಜನೆಯಡಿಯಲ್ಲಿ ವಿವಿಧ ವಾಣಿಜ್ಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸಾಲಗಳು ಮತ್ತು ವರ್ಕಿಂಗ್ ಕ್ಯಾಪಿಟಲ್ ಹಾಗೂ ಇಂಟರೆಸ್ಟ್ ಸಬ್‌ವೆನಷನ್ ಯೋಜನೆಗಳಿಂದ ಪಡೆಯಬಹುದಾಗಿದೆ. ಭಾರತ ಸರ್ಕಾರವು ೨೦೧೮ರ ಆಯವ್ಯಯದಲ್ಲಿ ೫ ವರ್ಷಗಳ ಅವಧಿಗೆ ರೈತ ಉತ್ಪಾದಕರ ಸಂಸ್ಥೆಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿದೆ
ಪ್ರಸ್ತುತ ಕೋವಿಡ್ ಸಂಧರ್ಭದಲ್ಲಿ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಮತ್ತು ಇತರ ಕೃಷಿ ಪರಿಕರಗಳನ್ನು ರೈತರಿಗೆ ಒದಗಿಸುವಲ್ಲಿ, ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗುವಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಬಹಳ ಪ್ರಮುಖವಾದದ್ದು. ಪ್ರತಿಯೊಂದು ಜಿಲ್ಲೆಯಲ್ಲೂ ಸಹ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸದಸ್ಯ ರೈತರಿಗೆ ನೆರವಾಗುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ ಉದಾಹರಣೆ ಸಾಕಷ್ಟಿವೆ.
ಕರ್ನಾಟಕ ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿಗಳಲ್ಲಿ ಶೇ. ೨೫ ರಿಂದ ೩೦ ರಷ್ಟು ಕೋಯ್ಲೋತ್ತರ ನಷ್ಟ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರೈತರು ಕೋಯ್ಲಿನ ನಂತರ ಪ್ರಾರಂಭಿಸಿ ಬಳಕೆಯವರೆಗೆ ವಿವಿಧ ಹಂತಗಳಲ್ಲಿ ಸರಳ ತಂತ್ರಜ್ಞಾನಗಳಿಂದ ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ ಮಾಡಿ ಕೋಯ್ಲೋತ್ತರ ನಷ್ಟವನ್ನ ಕಡಿಮೆ ಮಾಡಿ ಲಾಭ ಗಳಸಿಬಹುದು.
ಈ ನಿಟ್ಟಿನಲ್ಲಿ ಬಾಗಲಕೋಟ ಜಿಲ್ಲೆಯ ಹುನಗುಂದ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯು ಕೃಷಿ ಪರಿಕರಗಳ ಸಗಟು ಖರೀದಿ ಮತ್ತು ಮಾರಾಟಕ್ಕಷ್ಟೇ ಸೀಮಿತವಲ್ಲದೆ ಸದಸ್ಯರು ಬೆಳೆದ ಬೆಳೆಗಳನ್ನು ಗುಣಮಟ್ಟದ ಆಧಾರದ ಮೇಲೆ ವರ್ಗೀಕರಿಸಿ ಮೊದಲನೆ ಹಂತದ ಮೌಲ್ಯವರ್ಧನೆ ಮಾಡಿ ಜನ ತೃಪ್ತಿ ಎಂಬ ಬ್ರಾಂಡ್ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಿ ಇತರ ರಾಜ್ಯಗಳಿಗೂ ಸಹ ರಫ್ತು ಮಾಡುತ್ತಿದ್ದಾರೆ. ಪ್ರಮುಖವಾಗಿ ಹಸಿರು ಮೆಣಸಿನಕಾಯಿ ಪುಡಿ, ಈರುಳ್ಳಿ ಪುಡಿ, ಒಣ ದ್ರಾಕ್ಷಿ, ಬೆಳೆ ಕಾಳುಗಳು ಮತ್ತು ಎಣ್ಣೆ ಕಾಳುಗಳನ್ನು ಬಯೋ ಡಿಗ್ರೇಡೆಬಲ್ ಪ್ಯಾಕಿಂಗ್ ಮಾಡಿ ನೇರ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಬಹುರಾಷ್ಟ್ರೀಯ ಕಂಪನಿಗಳಾದ ಐಟಿಸಿ, ರಿಲಯನ್ಸ್, ಮೋರ್, ಸಫಲ್, ಮೆಟ್ರೋ, ಮುಂತಾದ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದಸ್ಯರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಸದಸ್ಯರಿಗೆ ಅಧಿಕ ಲಾಭ ತಂದುಕೊಡುವಲ್ಲಿ ಯಶಸ್ವಿಯಾಗಿ ಸದಸ್ಯ ರೈತರ ನಂಬಿಕೆಗೆ ಪಾತ್ರವಾಗಿದೆ.
ನೊಂದಣಿ ಆದ ೩ ವರ್ಷ ಅವಧಿಯಲ್ಲಿ ವಾರ್ಷಿಕ ೬ ಕೋಟಿ ರೂಗಳಷ್ಟು ವ್ಯವಹಾರ ನಡೆಸುತ್ತಿದ್ದು, ರಾಜ್ಯಕ್ಕೆ ಮಾದರಿ ರೈತ ಉತ್ಪಾದಕರ ಸಂಸ್ಥೆಯಾಗಿ ಕಾರ್ಯನಿರ್ವಹಸಿ ಸದಸ್ಯ ರೈತರ ಸಂಕಷ್ಟಕ್ಕೆ ನೆರವಾಗಿ ಅವರ ಮೊಗದಲ್ಲಿ ಮಂದಹಾಸ ಮೂಡಿಸಲು ಯಶಸ್ವಯಿಯಾಗಿದ್ದೀವಿ ಎನ್ನುತ್ತಾರೆ ಇದರ ನಿರ್ದೇಶಕರಾದ . ರವಿ ಸಜ್ಜನ್.
ಆಸಕ್ತ ರೈತರು ರೈತ ಉತ್ಪಾದಕರ ಸಂಸ್ಥೆಯ ಸದಸ್ಯತ್ವ ಹೊಂದಲು ಹತ್ತಿರದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನಾ ಇಲಾಖೆ ಅಲ್ಲದೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ರೈತ ಉತ್ಪಾದಕರ ಸಂಸ್ಥೆಗಳನ್ನು ಸಂಪರ್ಕಿಸಿ ಸದಸ್ಯತ್ವವನ್ನು ಪಡೆಯಬಹುದು. ರಾಜ್ಯದಲ್ಲಿ ಜಲಾನಯನ ಇಲಾಖೆಯು ರೈತ ಉತ್ಪಾದಕ ಸಂಸ್ಥೆಗಳ ರಚನೆಯಲ್ಲಿ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಅಭಿವೃದ್ದಿ ಇಲಾಖೆಗಳ ಯೋಜನೆಗಳ ಅನುಷ್ಟಾನಗೊಳಿಸುವಲ್ಲಿ ರೈತ ಉತ್ಪಾದಕರ ಸಂಸ್ಥೆಗಳಿಗೆ ಪ್ರಮುಖ ಆಧ್ಯತೆ ನೀಡಲಾಗುತ್ತಿದ್ದು ರೈತರು ಇದರ ಸದ್ಭಳಕೆ ಪಡೆಯಬೇಕು.
ರೈತ ಉತ್ಪಾದಕರ ಸಂಸ್ಥೆಗಳ ಭಲವರ್ಧನೆಗೆ ಉತ್ಕೃಷ್ಟತಾ ಕೇಂದ್ರ
ರೈತ ಉತ್ಪಾದಕರ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರವು ಕರ್ನಾಟಕ ರಾಜ್ಯದಲ್ಲಿ ಒಂದು ಸ್ವತಂತ್ರವಾದ ತಜ್ಞ ಸಂಸ್ಥೆಯಾಗಿದ್ದು, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ರಚನೆಗೆ ಸಂಬಂಧಿಸಿದ ಅಭಿವೃದ್ಧಿ ಇಲಾಖೆಗಳ ಬೇಡಿಕೆಗೆ ಸ್ಪಂದಿಸುತ್ತಿದೆ. ರಾಜ್ಯದಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ರಚನೆಗೆ ಮತ್ತು ಬಲವರ್ಧನೆಗೆ ಸಹಕಾರ ನೀಡುತ್ತಿದೆ. ಪ್ರಮುಖವಾಗಿ ರೈತ ಉತ್ಪಾದಕರ ಸಂಸ್ಥೆಗಳ ಅಬಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಮತ್ತು ನೀತಿ ನಿಯಮಾವಳಿಗಳನ್ನು ರೂಪಿಸುವಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರವು ವಿಚಾರ ವೇದಿಕೆಯಂತೆ ಕಾರ್ಯನಿರ್ವಹಿಸುವುದು.
ಲೇಖಕರು: ಡಾ. ಶ್ವೇತಾ ಬಿ.ಎಸ್. ಮತ್ತು ಡಾ. ಇಟಿಗಿ ಪ್ರಭಾಕರ್