ಭಾರತೀಯ ಮೀನುಗಾರರಿಗೆ ಹೆಚ್ಚುತ್ತಿರುವ ಸಂಕಷ್ಟಗಳು

0
ಸಾಂದರ್ಭಿಕ ಚಿತ್ರ

ಮೀನುಗಾರರು ಪ್ರತಿನಿತ್ಯವೂ ಸಮುದ್ರದಲ್ಲಿ ಆಹಾರ ಸಂಗ್ರಹಣೆಗಾಗಿ, ಉಳಿವಿಗಾಗಿ ಸೆಣೆಸುತ್ತಾರೆ. ಇವುಗಳ ಜೊತೆಗೆ ಬದಲಾದ ಹವಾಮಾನ, ವಿವಿಧ ಸರ್ಕಾರಗಳ ವಿದೇಶಿ ನೀತಿಗಳು ಇವರನ್ನು ಬಾಧಿಸುತ್ತಿವೆ.

ಹವಾಮಾನ ಬದಲಾವಣೆ ವೇಗದಿಂದ ಸಾಗುತ್ತಿದೆ. ಇದರ ಪರಿಣಾಮ ದಡದ ಹತ್ತಿರದಲ್ಲಿ ಮೀನು ಸಂಗ್ರಹಣೆಯಾಗುತ್ತಿಲ್ಲ. ಅವುಗಳನ್ನು ಅರಸಿಕೊಂಡು ಆಳ ಸಮುದ್ರದಲ್ಲಿ ಪ್ರಾಣದ ಹಂಗು ಲೆಕ್ಕಿಸದೇ  ದೂರ, ಬಹುದೂರ ಸಾಗಬೇಕಾಗಿದೆ. ಇದು ಭಾರತೀಯ ಮೀನುಗಾರರಿಗೆ ಅನಿರೀಕ್ಷಿತ ಅಪಾಯಗಳನ್ನು ತಂದೊಡ್ಡುತ್ತಿದೆ.

ಭಾರತದ ಕರಾವಳಿಗಳಲ್ಲಿ 28 ಮಿಲಿಯನ್ ಮೀನುಗಾರರು ಇದ್ದಾರೆ.  ಇವರಲ್ಲಿ ಸುಮಾರು 4 ಮಿಲಿಯನ್ ಮೀನುಗಾರರು ಉತ್ತಮ ಪ್ರಮಾಣದ, ಮಾರುಕಟ್ಟೆಯಲ್ಲಿ ಬೆಲೆ ಬಾಳುವ ಮೀನುಗಳ ಸಂಗ್ರಹಣೆಗಾಗಿ ಸಮುದ್ರದಲ್ಲಿ ದೂರದೂರ ಸಾಗುತ್ತಾರೆ. ಇಂಥ ಪಯಣದ ವೇಳೆ ಇವರಿಗೆ ದೇಶದ ಸಮುದ್ರದ ಗಡಿ ದಾಟಿದ್ದೇವೆಯೇ ಇಲ್ಲವೋ ಗೊತ್ತಾಗುವುದಿಲ್ಲ. ಆದರೆ ಬಹಳ ದೂರದಲ್ಲಿ ತಮ್ಮತಮ್ಮ ದೇಶದ ಸಮುದ್ರದ ಗಡಿಗಳ ಮೇಲೆ ಕಣ್ಣಿಟ್ಟಿರುವ ಕರಾವಳಿ ಗಸ್ತುಪಡೆಗಳಿಗೆ ಇದು ಗೊತ್ತಾಗುತ್ತದೆ.

ಬೋಟ್ ಗಳತ್ತ ವೇಗವಾಗಿ ಸಾಗಿ ಬರುವ ಅವರು ಭಾರತೀಯ ಮೀನುಗಾರರನ್ನು ಬಂಧಿಸಿ ತಮ್ಮ ದೇಶದ ಜೈಲುಗಳಿಗೆ ಕಳಿಸುತ್ತಾರೆ. ಈ ರೀತಿ ಬಂಧನಕ್ಕೆ ಒಳಗಾಗುತ್ತಿರುವ ಭಾರತೀಯ ಮೀನುಗಾರರ ಸಂಖ್ಯೆ ಹೆಚ್ಚುತ್ತಲೇ ಇದೆ.

 “ಕೆಲವೇ ವರ್ಷಗಳ ಮೊದಲು ಸಮುದ್ರ ತೀರದ ಹತ್ತಿರಕ್ಕೆ ಮೀನುಗಳು  ಬರುತ್ತಿದ್ದವು, ಆದರೆ ಈಗ ನಾವು ಅವುಗಳನ್ನು ಹುಡುಕಲು ಹೆಚ್ಚು ದೂರ ಹೋಗಬೇಕು. ನಾವು ಸಮುದ್ರದಲ್ಲಿ ಕಳೆಯುವ ದಿನಗಳ ಸಂಖ್ಯೆಯು ದ್ವಿಗುಣಗೊಂಡಿದೆ, ”ಎಂದು ಭಾರತದ ಗುಜರಾತ್‌ನ ಮೀನುಗಾರ ಮುಖಂಡ ಜೀವನ್ ಆರ್. ಜಂಗಿ ಹೇಳುತ್ತಾರೆ

ಇದು ಮೀನುಗಾರರ ಜೀವನವನ್ನು ಸವಾಲಾಗಿಸಿರುವುದು ಮಾತ್ರವಲ್ಲದೆ, ಅಧಿಕೃತ ಮಾಹಿತಿಯ ಪ್ರಕಾರ ಸುಮಾರು 16 ಮಿಲಿಯನ್  ಮಂದಿ ಇರುವ  ಅವರ ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.

7,500 ಕಿಲೋಮೀಟರ್ ಕರಾವಳಿಯನ್ನು ಹೊಂದಿರುವ ದಕ್ಷಿಣ ಏಷ್ಯಾದ ದೇಶವಾದ ಭಾರತವು ರಾಷ್ಟ್ರೀಯ ಆದಾಯಕ್ಕಾಗಿ ಮೀನು ಮತ್ತು ಸೀಗಡಿಯಂತಹ ಜಲಚರ ಉತ್ಪನ್ನಗಳ ಮೇಲೆಯೂ ಅವಲಂಬಿತವಾಗಿದೆ.

ಇತ್ತೀಚಿನ ವರದಿಯ ಪ್ರಕಾರ, ಭಾರತವು ಸುಮಾರು 17,81,602 ಮೆಟ್ರಿಕ್ ಟನ್ (MT) ಸಮುದ್ರ ಆಹಾರವನ್ನು ರಫ್ತು ಮಾಡಿದೆ, ಆರ್ಥಿ ವರ್ಷ  2023-24 ರಲ್ಲಿ ₹60,523.89 ಕೋಟಿ (USD 7.38 ಶತಕೋಟಿ) ಆದಾಯವನ್ನು ಗಳಿಸಿದೆ.

“ಮೀನುಗಾರಿಕೆಯಲ್ಲಿ ಹೆಚ್ಚಿನ ಲಾಭದ ಪ್ರಮಾಣವಿದ್ದರೂ ಸರ್ಕಾರ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಗ್ನಿ ಸುರಕ್ಷತೆಯಂತಹ ಸರ್ಕಾರವು ಮಾಡಬಹುದಾದ ಮೂಲಭೂತ ಪ್ರಯೋಜನಗಳನ್ನು ಒದಗಿಸಲು ಅವರು ವಿಫಲರಾಗಿದ್ದಾರೆ, ” ಎಂದು ಜಂಗಿ ಹೇಳುತ್ತಾರೆ

 “ನಮ್ಮ ದೋಣಿಗಳು ಮರದಿಂದ ಮಾಡಲ್ಪಟ್ಟಿದೆ.   ಡೀಸೆಲ್‌ ಬಳಸಿ ಚಾಲನೆ ಮಾಡುತ್ತೇವೆ. ಇದು ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ನಾವು ಸುರಕ್ಷತಾ ಕ್ರಮಗಳು ಅಥವಾ ಪರಿಹಾರಕ್ಕಾಗಿ ಸಾಕಷ್ಟು ವರ್ಷಗಳಿಂದ ವಿನಂತಿಸುತ್ತಿದ್ದೇವೆ. ಇವುಗಳ ಜೊತೆಗೆ  ಹವಾಮಾನ ಬದಲಾವಣೆಯ ಕಾರಣದಿಂದ  ಹೆಚ್ಚುತ್ತಿರುವ ಸವಾಲುಗಳನ್ನು ನಾವು  ಎದುರಿಸಲು ಆಗುತ್ತಿಲ್ಲ. ಜೊತೆಗೆ ರಾಷ್ಟ್ರೀಯ ಮೀನುಗಾರಿಕೆ ನೀತಿ 2020 ರಲ್ಲಿನ ಇತ್ತೀಚಿನ ನಿಬಂಧನೆಯನ್ನು ಒಳಗೊಂಡಂತೆ ಭಾರತ ಸರ್ಕಾರದ ನೀತಿಗಳಿಂದ ಮೀನುಗಾರರ ದುಃಸ್ಥಿತಿಯು ಉಲ್ಬಣಗೊಂಡಿದೆ ಎಂದು ಮೀನುಗಾರರು  ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ತಾಪಮಾನ ಏರಿಕೆ

ಡೌನ್ ಟು ಅರ್ಥ್‌ನ ವರದಿ, ಸೈನ್ಸ್ ಡೈರೆಕ್ಟ್‌ನ ಅಧ್ಯಯನ ಪ್ರಕಾರ, ಹಿಂದೂ ಮಹಾಸಾಗರದಲ್ಲಿ  2020 ಮತ್ತು 2100 ರ ನಡುವೆ 1.7–3.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಬಹುದು ಎಂದು ಹೇಳಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿಯ ಹವಾಮಾನ ವಿಜ್ಞಾನಿ ರಾಕ್ಸಿ ಮ್ಯಾಥ್ಯೂ ಕೋಲ್ ಅವರು  “ಶಾಖದ ಅಂಶದಲ್ಲಿನ ಯೋಜಿತ ಹೆಚ್ಚಳವು ಪ್ರತಿ ಸೆಕೆಂಡಿಗೆ ಒಂದು ಹಿರೋಷಿಮಾ ಪರಮಾಣು ಬಾಂಬ್ ಸ್ಫೋಟದ ಶಕ್ತಿಯನ್ನು ನಿರಂತರವಾಗಿ ಸೇರ್ಪಡೆಯಾಗುವುದಕ್ಕೆ ಹೋಲಿಸಬಹುದು” ಎಂದು ತುಲನಾತ್ಮಕ ಹೋಲಿಕೆ ಮಾಡಿ ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಇಡೀ ಭಾರತೀಯ ಕರಾವಳಿಯಲ್ಲಿ ಮೀನುಗಾರಿಕೆ ಮಾಡುವವರು ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಬೇಕಾಗಿದೆ.  ಇದು ಪಾಕಿಸ್ತಾನ, ಇಂಡೋನೇಷಿಯಾ, ಶ್ರೀಲಂಕಾ ಮತ್ತು ಸೌದಿ ಅರೇಬಿಯಾದಂತಹ ನೆರೆಯ ರಾಷ್ಟ್ರಗಳೊಂದಿಗೆ ಸಂಘರ್ಷಗಳಿಗೆ ಕಾರಣವಾಗುತ್ತದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, 2020 ಮತ್ತು 2022 ರ ನಡುವೆ, 2,600 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಸಮುದ್ರದ ಗಡಿ ಅತಿಕ್ರಮಣಕ್ಕಾಗಿ ಹಿಂದೂ ಮಹಾಸಾಗರದಾದ್ಯಂತ ಹತ್ತು ದೇಶಗಳಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನದಲ್ಲಿ (1,060), ಸೌದಿ ಅರೇಬಿಯಾದಲ್ಲಿ (564) ಮತ್ತು ಶ್ರೀಲಂಕಾದಲ್ಲಿ (501) ಹೆಚ್ಚಿನ ಸಂಖ್ಯೆಯ ಬಂಧನಗಳು ಉಂಟಾಗಿವೆ.

ಸಮುದ್ರದಲ್ಲಿ ಎದುರಾಗುವ ಇತರ ಅಪಾಯಗಳು

ಕಡಲ ಗಡಿಗಳು ಮತ್ತು ಮೀನುಗಾರಿಕೆ ಹಕ್ಕುಗಳ ವಿಷಯವು  ಸಂಕೀರ್ಣವಾಗಿದೆ. ಇದರಿಂದ  ಆಗಾಗ ವಿವಿಧ ದೇಶಗಳ ಮೀನುಗಾರರಲ್ಲಿ ಘರ್ಷಣೆ ಉಂಟಾಗುತ್ತಿದೆ. ಮೀನುಗಾರರು ಬೇರೊಂದು ದೇಶದ  ಸಮುದ್ರದ ಗಡಿಯಲ್ಲಿ ತಮಗೆ ಅರಿವಿಲ್ಲದೇ ಸಾಗಿ  ಮೀನು ಹಿಡಿದಾಗ ಅಲ್ಲಿನ  ಸ್ಥಳೀಯ ಮೀನುಗಾರರು  ಇದರ ಮೇಲೆ  ಮಾಲೀಕತ್ವ ಸಾಧಿಸುತ್ತಾರೆ. ಇದರಿಂದ ಉಭಯ ದೇಶಗಳ ಮೀನುಗಾರರ ನಡುವೆ  ವಾದ – ವಿವಾದ ಉಂಟಾಗುತ್ತದೆ.

ಮೀನುಗಾರರಲ್ಲಿ ಉಂಟಾಗುವ ಸಂಘರ್ಷವು  ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ಬಂಧನದ ನಂತರ, ನಾಗರಿಕ ಕೈದಿಗಳೆಂದು ಪರಿಗಣಿಸುವ ಬದಲು ವಿದೇಶಿ ಜೈಲುಗಳಲ್ಲಿ ಸಾವಿನ ಅಪಾಯವನ್ನು ಒಳಗೊಂಡಂತೆ ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಾರೆ.

ವಿದೇಶಾಂಗ ಸಚಿವಾಲಯದ ವರದಿಯಂತೆ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಒಂಬತ್ತು ಭಾರತೀಯ ಮೀನುಗಾರರು ಸಾವನ್ನಪ್ಪಿದ್ದಾರೆ. 2022 ರಲ್ಲಿ, ಮಾರಿಯಾ ಜೆಸಿಂಡ್ ಎಂಬ ಭಾರತೀಯ ಮೀನುಗಾರ ಇಂಡೋನೇಷ್ಯಾದ ಜೈಲಿನಲ್ಲಿ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ.

ಈ ಪರಿಸ್ಥಿತಿಯು ಮೀನುಗಾರರಿಗೆ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದವರಿಗೆ ತುಂಬಾ ಪರಿಚಿತವಾಗಿದೆ, ಅವರು ತಮ್ಮ ಸರ್ಕಾರಗಳ ನಡುವಿನ ರಾಜಕೀಯ ಘರ್ಷಣೆಯಲ್ಲಿ ದೀರ್ಘಕಾಲ ಸಿಲುಕಿದ್ದಾರೆ.

ಐತಿಹಾಸಿಕವಾಗಿ, ಸ್ಪಷ್ಟವಾದ ಗಡಿರೇಖೆಯ ಕೊರತೆ ಸಹ  ಸಾಕಷ್ಟು ಭದ್ರತೆಯಿಲ್ಲದೆ ಮೀನುಗಾರರನ್ನು ಸಮುದ್ರದ  ದೂರದೂರಕ್ಕೆ ತಳ್ಳಿದೆ. ಪರಿಣಾಮವಾಗಿ, ಎರಡೂ ದೇಶಗಳು ಹಲವು ವರ್ಷಗಳಿಂದ ಪರಸ್ಪರರ ಪ್ರದೇಶಗಳಿಂದ ಮೀನುಗಾರರನ್ನು ಬಂಧಿಸುತ್ತಿವೆ.

ನಾಗರಿಕ ಸಂಸ್ಥೆಗಳ ಸತತ ಪ್ರಯತ್ನಗಳ ಫಲವಾಗಿ ಪಾಕಿಸ್ತಾನವು ಕಳೆದ ವರ್ಷ  499 ಮೀನುಗಾರರನ್ನು   ಹಲವಾರು ಪ್ರಯತ್ನಗಳ ನಂತರ ಬಿಡುಗಡೆ ಮಾಡಿತು. ಇದಕ್ಕಾಗಿ ಈ ಸಂಸ್ಥೆಗಳವರು ಪಟ್ಟ ಶ್ರಮ ಅಪಾರ. ಸತತ ಪ್ರಯತ್ನಗಳಿಂದ  ಒಂದಷ್ಟು ಮಂದಿಗಾದರೂ ಬಿಡುಗಡೆ ಭಾಗ್ಯ ದೊರೆಯಿತು.

ಸಮುದ್ರ ಗಡಿಗಳಲ್ಲಿ ಅತಿಕ್ರಮಣಕ್ಕಾಗಿ ಭಾರತೀಯ ಮೀನುಗಾರರು  ಪಾಸ್‌ಪೋರ್ಟ್ ಕಾಯಿದೆಯನ್ನು ಅನುಸರಿಸಿ, ನ್ಯಾಯಾಲಯದ ವಿಚಾರಣೆಯ ನಂತರ ಸೆರೆವಾಸ ಅನುಭವಿಸುತ್ತಾರೆ. ಸಾಮಾನ್ಯವಾಗಿ ಅವರಿಗೆ ಕೆಲವು ತಿಂಗಳುಗಳ ಶಿಕ್ಷೆ ವಿಧಿಸುತ್ತಾರೆ. ಅಧಿಕೃತ ಶಿಕ್ಷೆಯು ಸಾಮಾನ್ಯವಾಗಿ ಆರು ತಿಂಗಳುಗಳಾಗಿರುತ್ತದೆ, ಆದರೆ ಇದು ವಾಸ್ತವವಾಗಿ ಜಾರಿಗೆ ಬರುವುದಿಲ್ಲ.  ಇದರ ಪರಿಣಾಮ  ಅನೇಕರು ಐದು ವರ್ಷಗಳಿಗಿಂತ ಹೆಚ್ಚು ಕಾಲ ವಿದೇಶದ ಜೈಲುಗಳಲ್ಲಿ  ಇರುವಂಥ ದುಸ್ಥಿತಿ ಉಂಟಾಗುತ್ತಿದೆ.

“ಹೀಗೆ ಸೆರೆವಾಸ ಅನುಭವಿಸುವ ಹಲವರು ಸಾವನ್ನಪ್ಪಿದ್ದಾರೆ. ಮೇ 2023 ರಲ್ಲಿ ಬಾಲೋ ಜೆತಾ ಲಾಲ್ ಪಾಕಿಸ್ತಾನಿ ಜೈಲಿನಲ್ಲಿ ನಿಧನರಾದರು; ಬಿಚನ್ ಕುಮಾರ್ ಅಲಿಯಾಸ್ ವಿಪನ್ ಕುಮಾರ್ (ಮರಣ ಏಪ್ರಿಲ್ 4, 2023); ಸೋಮ ದೇವ (ಮರಣ ಮೇ 8, 2023); ಮತ್ತು ಕೇರಳದ ಜುಲ್ಫಿಕರ್ ಕರಾಚಿ ಜೈಲಿನಲ್ಲಿ (ಮೇ 6, 2023 ರಂದು) ನಿಧನರಾದರು.  ವಿನೋದ್ ಲಕ್ಷ್ಮಣ್ ಕೋಲ್ ಮಾರ್ಚ್ 17 ರಂದು ಕರಾಚಿಯಲ್ಲಿ ನಿಧನರಾದರು ಮತ್ತು ಅವರ ಪಾರ್ಥಿವ ಶರೀರವನ್ನು ಮೇ 1, 2024 ರಂದು ಮಹಾರಾಷ್ಟ್ರದ ಅವರ ಗ್ರಾಮಕ್ಕೆ ತರಲಾಯಿತು.

ಮೀನುಗಾರರ ಕುಟುಂಬಗಳ ಮೇಲೆ  ಅವರವರ ಬಂಧುಗಳ ಸಾವುಗಳು ತೀವ್ರ ಪರಿಣಾಮ ಬೀರುತ್ತವೆ.  ಮೃತರಾದವರನ್ನು ಆಶ್ರಯಿಸಿದ ಕುಟುಂಬದ ಸದಸ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅವರ ದೈನಂದಿನ ಜೀವನ ಶೈಲಿ ಬಾಧಿತವಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಸಮುದ್ರದ ಗಡಿ ದಾಟುವ ಮೀನುಗಾರರನ್ನು ಬಂಧಿಸಬಾರದು ಅಥವಾ ಗುಂಡು ಹಾರಿಸಬಾರದು. ಹೀಗೆ ಮಾಡುವ ಬದಲಿಗೆ ಅವರನ್ನು ಅವರವರ ದೇಶದ ಸಮುದ್ರದ ಗಡಿಗಳತ್ತ ವಾಪಸ್ ಕಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಬಿಡುಗಡೆಯಾದ ನಂತರವು  ಮೀನುಗಾರರು ತೀವ್ರ ಸವಾಲುಗಳನ್ನು ಎದುರಿಸಬೇಕಾಗುತ್ತದೆ.  ಏಕೆಂದರೆ ಅವರನ್ನು  ಬಂಧನ ಮಾಡಿದ್ದ  ಸರ್ಕಾರವು ಅವರ ದೋಣಿಗಳನ್ನು ತುಂಬ ಅಪರೂಪದ ುದಾಹರಣೆಗಳಲ್ಲಿ ಹಿಂದಿರುಗಿಸುತ್ತದೆ.  ಒಂದು ಸುಸಜ್ಜಿತ ಮೀನುಗಾರಿಕ ದೋಣಿಗೆ ಕನಿಷ್ಟ ಎಂದರೂ 50–60 ಲಕ್ಷ ರೂಪಾಯಿ ಬೆಲೆಯಿದೆ.  ಇಂಥ ಬೆಲೆಬಾಳುವ ದೋಣಿಗಳನ್ನು ಮೀನುಗಾರರು ಕಳೆದುಕೊಳ್ಳುತ್ತಿದ್ದಾರೆ.

ವಿದೇಶಿ ಸರ್ಕಾರಗಳು ವಶಪಡಿಸಿಕೊಂಡ ತಮ್ಮ ದೋಣಿಗಳನ್ನು ಹಿಂದಿರುಗಿಸಬೇಕು. ಮೀನುಗಾರರು ವಿದೇಶದಲ್ಲಿ ಬಂಧನವಾದಾಗ ಅವರನ್ನು ಆಶ್ರಯಿಸಿರುವ ಕುಟುಂಬದ ಸದಸ್ಯರಿಗೆ ಇಲ್ಲಿನ  ಸರ್ಕಾರ ನೆರವು ನೀಡಬೇಕು. ವಿದ್ಯಾಭ್ಯಾಸ ಮಾಡುತ್ತಿರುವವರ ಶೈಕ್ಷಣಿಕ ಬದುಕು ಕಮರದಂತೆ ವ್ಯವಸ್ಥೆ ಮಾಡಬೇಕು ಎಂದು ಭಾರತೀಯ ಮೀನುಗಾರರು  ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here