ಭಾರಿಮಳೆಯಿಂದ ಅಮೂಲ್ಯ ಮಣ್ಣು, ಬೆಳೆಗಳನ್ನು ರಕ್ಷಿಸಿಕೊಳ್ಳುವ ಮಾರ್ಗಗಳು

0

ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ಅವಧಿಯಲ್ಲಿ ಭಾರಿಮಳೆಗಳು ಸಂಭವಿಸುತ್ತಿವೆ. ಒಂದು ವಾರದ ಅವಧಿಗೆ ಹಂಚಿಕೆಯಾಗಬೇಕಾದ ಮಳೆ ಪ್ರಮಾಣ ಒಂದೆರಡು ಗಂಟೆ ಅಥವಾ ಒಂದೇ ದಿನದಲ್ಲಿ ಆಗುತ್ತಿದೆ. ಇದಲ್ಲದೇ  ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾಗುವ ಅನೇಕ ಚಂಡಮಾರುತಗಳ ಪರಿಣಾಮಗಳು ಕರ್ನಾಟಕದ ರೈತ ಸಮುದಾಯ ಮತ್ತು ಜನರ ಮೇಲೆ   ದುಷ್ಪರಿಣಾಮಗಳನ್ನು ಬೀರುತ್ತಿದೆ.

ಇವೆಲ್ಲದರಿಂದ ಅಮೂಲ್ಯ ಮಣ್ಣು ಕೊಚ್ಚಿ ಹೋಗದಂತೆ ಜೊತೆಗೆ ಬೆಳೆಹಾನಿ ಆಗದಂತೆ ತಡೆಗಟ್ಟುವುದು ಪ್ರಮುಖ ಸವಾಲಾಗಿದೆ. ಭಾರಿಮಳೆಯ ಹೊಡೆತವನ್ನು ತಡೆದುಕೊಳ್ಳಬಲ್ಲ ಬೆಳೆಗಳ ದೇಸೀ ತಳಿಗಳಿವೆ. ಇದಲ್ಲದೇ ಸಂಶೋಧಕರು ಅಭಿವೃದ್ಧಿಪಡಿಸಿದ ಹಲವು ಹೊಸ ಪ್ರಭೇದಗಳಿವೆ. ಆದರೆ ಇಂಥವುಗಳಲ್ಲಿ ಅನೇಕವೂ ಕ್ಷೇತ್ರಕ್ಕೆ ಬಾರದೇ ಪ್ರಯೋಗದ ತಾಕುಗಳಲ್ಲಿಯೇ ಉಳಿದಿವೆ ಎನ್ನಲಾಗುತ್ತಿದೆ.

ಭಾರಿಮಳೆಯಿಂದ ಮಣ್ಣು ಕೊಚ್ಚಿ ಹೋಗದಂತೆ ತಡೆಯಲು ದೇಸೀ ಅಂದರೆ ಪಾರಂಪಾರಿಕಾ ವಿಧಾನಗಳಿವೆ. ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಹಾನಿಯನ್ನು ತಡೆಯಬಹುದು. ಅಥವಾ ಗರಿಷ್ಟ ಮಟ್ಟದ ನಷ್ಟದಿಂದ ತಪ್ಪಿಸಿಕೊಳ್ಳಬಹುದು.

ಬಸಿಗಾಲುವೆ:

ತೋಟಗಾರಿಕೆಯಾಗಿರಲಿ ಅಥವಾ ಬಯಲುಕೃಷಿ (ಹೊಲಗದ್ದೆ) ಆಗಿರಲಿ ಸುತ್ತಲೂ ಕನಿಷ್ಟ ಒಂದೂವರೆ ಅಡಿ ಆಳದ ಬಸಿಗಾಲುವೆಗಳನ್ನು ನಿರ್ಮಿಸುವುದು ಅಗತ್ಯ. ಇದರಿಂದ ನೀರು ತೋಟ, ಹೊಲಗದ್ದೆಗಳಿಗೆ ನುಗ್ಗದೇ ಹರಿದು ಹೋಗುತ್ತದೆ. ಇದರಿಂದಲೂ ಸಸ್ಯಗಳ ಬೇರು ಕೊಳೆಯದಂತೆ, ಮೇಲ್ಮಣ್ಣು ಕೊಚ್ಚಿಕೊಂಡು ಹೋಗದಂತೆ ಮಾಡಬಹುದು

 

ಇಳಿಜಾರಿಗೆ ಅಡಲಾಗಿ ಉಳುಮೆ ಮತ್ತು ಬಿತ್ತನೆ:

ಕೃಷಿಭೂಮಿಯ ಇಳಿಜಾರಿಗೆ ಅಡಲಾಗಿ ಉಳುಮೆ ಮಾಡುವುದು, ರಂಟೆಕುಂಟೆ ಹೊಡೆಯುವುದು, ಬಿತ್ತನೆ ಅಥವಾ ನಾಟಿ ಮಾಡುವುದರಿಂದಲೂ ಗರಿಷ್ಟ ಪ್ರಮಾಣದ ಹಾನಿಯನ್ನು ತಪ್ಪಿಸಬಹುದು. ಈ ವಿಧಾನದಿಂದ ಸಸ್ಯಗಳ ಬೇರು ಕೊಳೆಯುವುದು ತಪ್ಪುತ್ತದೆ.

ತೀವ್ರ ಇಳಿಜಾರಿಗೆ ಬದು ನಿರ್ಮಾಣ / ಕತ್ತಳೆ ನೆಡುವಿಕೆ

ತೋಟ ಅಥವಾ ಕ್ಷೇತ್ರಬೆಳೆ ಇರುವ ಕೃಷಿಭೂಮಿ ತೀವ್ರ ಇಳಿಜಾರಿನಲ್ಲಿದ್ದರೆ ಅಲ್ಲಿ ಕತ್ತಾಳೆಸಸಿಗಳನ್ನು ಅಡಲಾಗಿ ನೆಡುವುದು ಅಥವಾ ಸ್ಥಳೀಯವಾಗಿ ದೊರೆಯುವ ಕಲ್ಲುಗಳಿಂದ ಬದುಗಳನ್ನು ನಿರ್ಮಿಸುವುದರಿಂದಲೂ ಮಣ್ಣಿನ ಕೊಚ್ಚಣೆ ತಡೆಯುವುದು

ಮಳೆಗಾಲದ ಬೆಳೆಗಳು:

ಎಲ್ಲ ಬೆಳೆಗಳು ಭಾರಿ ಮಳೆಯ ಹೊಡೆತವನ್ನು ತಡೆದುಕೊಳ್ಳಲಾರವು. ಆದ್ದರಿಂದ ಟೊಮ್ಯಾಟೋ, ಮೆಣಸಿನಕಾಯಿ, ಈರುಳ್ಳಿ, ಆಲೂಗೆಡ್ಡೆ ಇತ್ಯಾದಿ ನೀರಿಗೆ ಬೇಗ ಕೊಳೆಯುವ ಬೆಳೆಗಳನ್ನು ಮಳೆಗಾಲದ ಅವಧಿಯಲ್ಲಿ ಕೊಯ್ಲಿಗೆ ಬಾರದಂತೆ ಯೋಜನೆ ರೂಪಿಸಬೇಕು. ಯಾವುದೇ ಕಾರಣಕ್ಕೂ ಇವುಗಳನ್ನು ಮಳೆಗಾಲದ ಆಸುಪಾಸಿನಲ್ಲಿ ಬಿತ್ತನೆ ಮಾಡಲು ಹೋಗಬಾರದು. ಜೋಳ ಸಹ ತೀವ್ರ ಮಳೆಯನ್ನು ತಡೆದುಕೊಳ್ಳಲಾರದು.

ಮಳೆ ಹೊಡೆತ ತಡೆಯುವ ಬೆಳೆಗಳು:

ದೇಸೀ ಭತ್ತ, ರಾಗಿ ತಳಿಗಳಿಗೆ ಮಳೆಯ ಹೊಡೆತವನ್ನು ತಡೆದು ಬದುಕುವ ಶಕ್ತಿ ಇದೆ. ಆದ್ದರಿಂದ ಇವುಗಳನ್ನು ಮಳೆಗಾಲದ ಆರಂಭದಲ್ಲಿ  ನಾಟಿ ಮಾಡಬಹುದು. ಆದರೆ ಕೃಷಿಭೂಮಿಯ ಸುತ್ತಲೂ ಬಸಿಗಾಲುವೆ ತೋಡುವುದನ್ನು, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದನ್ನು ಮರೆಯಬಾರದು. ಹೀಗೆ ಮಾಡುವುದರಿಂದ ಪೂರ್ಣವಾಗಿ ಅಲ್ಲದಿದ್ದರೂ ಸಾಧ್ಯವಾದಷ್ಟೂ ಮಟ್ಟಿಗೆ ಬೆಳೆಹಾನಿ ತಡೆಯಬಹುದು.

ಮರಗಿಡ ಬೆಳೆಸುವಿಕೆ:

ತೋಟ ಅಥವಾ ಕ್ಷೇತ್ರಬೆಳೆ ಬೆಳೆಯುವ ಕೃಷಿಭೂಮಿ ಸುತ್ತಲೂ ಎತ್ತರವಾಗಿ – ದಟ್ಟವಾಗಿ ಬೆಳೆಯುವ ಮರಗಿಡಗಳನ್ನು ಬೆಳೆಸಬಹುದು. ಇವುಗಳು ಮಳೆನೀರಿನ ಪ್ರವಾಹ, ಮಣ್ಣು ಕೊಚ್ಚಣೆ ತಡೆಯಬಲ್ಲವು. ಆದರೆ ಮರಗಳ ನೆರಳು, ಬೆಳೆಗಳ ಮೇಲೆ ಬಿದ್ದು ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಜಮೀನಿನ ಸುತ್ತ ಮರಗಿಡ ಬೆಳೆಸಲು ಇಚ್ಛಿಸುವುದಿಲ್ಲ. ತೋಟಗಾರಿಕೆ ಬೆಳೆಗಳ ಬೆಳೆಗಾರರು ತೋಟದ ಸುತ್ತಲೂ ಎತ್ತರವಾಗಿ ಬೆಳೆಯುವ ಮರಗಳನ್ನು ಬೆಳೆಸುವುದರಿಂದ ಗರಿಷ್ಟ ಮಟ್ಟದಲ್ಲಿ ಮಳೆಯಿಂದ ಆಗುವ ಹಾನಿಯನ್ನು ತಡೆಯಬಹುದು.

ಕೃಷಿಹೊಂಡಗಳ ಸರಣಿ:

ಮಳೆಗಾಲದಲ್ಲಿ ಸಾಕಷ್ಟು ಮಳೆಯಾಗಿದ್ದರೂ ಮಾರ್ಚ್‌ ವೇಳೆಗೆ ಹಲವೆಡೆ ನೀರಿನ ಹಾಹಾಕಾರ ಉಂಟಾಗುತ್ತದೆ. ಬೆಳೆಗಳನ್ನು ರಕ್ಷಿಸಿಕೊಳ್ಳವುದು ಹೇಗೆ ಎಂಬ ಚಿಂತೆ ಮೂಡುತ್ತದೆ. ಆದ್ದರಿಂದ ಸರಣಿ ಕೃಷಿಹೊಂಡಗಳನ್ನು ನಿರ್ಮಿಸಿಕೊಳ್ಳವುದು ಇದಕ್ಕೆ ಪರಿಹಾರವಾಗಬಲ್ಲುದು. ಎಲ್ಲಕಡೆಯೂ ಇದು ಸಾಧ್ಯವಾಗುವುದಿಲ್ಲ. ಇದರ ಸಾಧ್ಯತೆ ಇರುವ ರೈತರು ಸರಣಿ ಕೃಷಿಹೊಂಡ ನಿರ್ಮಿಸಿಕೊಳ್ಳಬಹುದು. ಸಹಕಾರ ಕೃಷಿಪದ್ಧತಿ ಅಡಿಯಲ್ಲಿ ರೈತರು ಇದನ್ನು ಮಾಡುವ ಸಾಧ್ಯತೆ ಇದೆ. ಈ ದಿಶೆಯಲ್ಲಿ ಪ್ರಯತ್ನಿಸಬಹುದು. ಸರಣಿ ಕೃಷಿಹೊಂಡ ಅಥವಾ ಕೊಳಗಳನ್ನು ನಿರ್ಮಿಸುವುದರಿಂದ ಹೊಲಗಳಲ್ಲಿ ನೀರು ನಿಲ್ಲುವುದನ್ನು ತಡೆಬಹುದು. ಹೆಚ್ಚುವರಿ ನೀರು ಕೃಷಿಹೊಂಡ/ಕೊಳಗಳಲ್ಲಿ ಶೇಖರಣೆಯಾಗುವಂತೆ ಮಾಡಬಹುದು.

ಸಾಂಪ್ರದಾಯಿಕ ಜ್ಞಾನ

ಭಾರಿಮಳೆಯಿಂದ ಕೃಷಿಭೂಮಿಯ ಮಣ್ಣು, ಬೆಳೆಗಳನ್ನು ರಕ್ಷಿಸಿಕೊಳ್ಳುವ ವಿಧಾನಗಳನ್ನು ಅನುಸರಿಸುತ್ತಿರುವ ಕೃಷಿಕರು ಕರುನಾಡಿನಲ್ಲಿದ್ದಾರೆ. ಅಂಥವರು ತಮ್ಮ ಕೃಷಿಜ್ಞಾನವನ್ನು ಹಂಚಿಕೊಂಡರೆ ಇತರ ರೈತ ಸಮುದಾಯಕ್ಕೂ ಪ್ರಯೋಜನವಾಗುತ್ತದೆ. ದಯವಿಟ್ಟು ಅಂಥ ರೈತರು ಕಾಮೆಂಟ್‌ ಬಾಕ್ಸಿನಲ್ಲಿ ವಿವರಿಸಬಹುದು ಅಥವಾ ತಮ್ಮ ಪೋನ್‌ ನಂಬರ್‌ ನಮೂದಿಸಿದರೆ ಅವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬಹುದು.

LEAVE A REPLY

Please enter your comment!
Please enter your name here