ಖಾಲಿ ಪೈಪ್ ಯೋಜನೆಗಳು ಹಾಗೂ ಒಂದು ಕೆರೆ ಕಥೆ

0
ಲೇಖಕರು: ಶಿವಾನಂದ ಕಳವೆ

ಗದಗ ನರೇಗಲ್ ಜಗದೀಶ್ ಸಂಕನ ಗೌಡರ್ ಫೋನ್ ಮಾಡಿದ್ದರು. ಇಲ್ಲಿಂದ ಬರುವ ಹಲವು ಕರೆಗಳು ಯಾವತ್ತೂ ಕೆರೆಯ ಕುರಿತ ಫೋನೇ ಆಗಿರ್ತದೆ!

“ಸಾರ್ ಮತ್ತೇ ಕೆರೆ ಶುರು ಆಗೇದ, ಕೆರೆಗಳ ಕೆಳಗಡೆ ಭಾಗ ತುಸು ಬಾಕಿ ಇತ್ತು. ಈಗ ಮಾಡ್ಲಕ್ ಹತ್ತಿವ್ರಿ ” ಎಂದರು.

‘ನಿಮ್ಮೂರಿನಲ್ಲಿ ಅರಣ್ಯ ಇಲಾಖೆಯಿಂದ ಒಂದು ವನ ಬೆಳೆಸಲು ಮಾತಾಡಿದ್ದೆವು. ಸಸಿ ಉಳಿಸಲು ನೀರು ಬೇಕಾದ್ರೆ ಯಾರಿಗಾದ್ರೂ ಕೊಳವೆ ಬಾವಿ ಸಹಾಯ ಕೇಳೋಣ? “ಎಂದೆ.

“ಸಾರ್ ಕೆರೆಯಲ್ಲಿ ನೀರು ಈಗ ಇದೆ. ಕೊಳವೆ ಬಾವಿ ಬೇಡ.40 ಎಕರೆಯಲ್ಲಿ 20 ಅಡಿ ನೀರು ಮಳೆಯಲ್ಲಿ ನಿಂತಿದ್ದು ಕೆಲವು ಇನ್ನೂ ಇದೆ. ಸಸಿಗೆ ಸಾಕು ” ಎಂದರು. ಹಿರೇಕೆರೆಯಲ್ಲಿ ನೀರಿದೆಯೆಂಬ ಮಾತು ಕೇಳಿ ನಮ್ಮೂರು ಕೆರೆಯಲ್ಲಿ ನೀರು ಇದ್ದ ಸಂತಸ ಆಯ್ತು. ಎಲ್ಲಕ್ಕಿಂತ ಮುಖ್ಯ ಕೊಳವೆ ಬಾವಿ ಬೇಡ ಎಂದಿದ್ದು!

ಹೂಳು ತುಂಬಿದ ತೂಬು

 

ಈಗ ಆರು ವರ್ಷಗಳ ಹಿಂದೆ ಇಲ್ಲಿನ ದ್ಯಾಮವ್ವ ಗುಡಿಯ ಜಾತ್ರೆಗೆ ಉಪನ್ಯಾಸ ಮಾಡಲು ಹೋಗಿದ್ದೆ. ಊರೆಲ್ಲ ಸೇರಿ 25 ವರ್ಷಗಳ ನಂತರ ಚೆಂದದ ಜಾತ್ರೆ ಮಾಡಿದಂತೆ ನಿಮ್ಮೂರ ಕೆರೆ ಕೂಡಾ ಪುನರುಜ್ಜೀವನ ಮಾಡಬಹುದು ಎಂದಿದ್ದೆ. ನಂತರ ಹಳ್ಳಿಗರ ಜೊತೆಗೆ ಕೆರೆ, ಜಲಾನಯನ ಸುತ್ತಾಟ ನಡೆಯಿತು ನಾಲ್ಕಾರು ಸಭೆ ನಡೆಯಿತು. ನರೇಗಲ್ ನೆಲ ಜಲ ಸಂರಕ್ಷಣಾ ಸಮಿತಿ ಜನ್ಮ ತಳೆಯಿತು. ಯಶ್ ರ ಯಶೋ ಮಾರ್ಗ ಮೂಲಕ ಹೊಳು ತೆಗೆದ ತಲ್ಲೂರು ಕೆರೆಯನ್ನು ಊರವರು ನೋಡಿ ಬಂದರು. ಕೆರೆ ಕನಸು ಚಿಗುರಿತು.

ಸುಮಾರು 60 ಎಕರೆ ಕೆರೆ ಹೂಳು ತೆಗೆಯಲು ಭಾರೀ ಹಣ ಬೇಕು. ಏನು ಮಾಡೋಣ? ಎಲ್ಲರಿಗೆ ಚಿಂತೆ ಶುರುವಾಯ್ತು. ಕೆರೆಯ ಹೂಳನ್ನು ರೈತರು ಹೊಲಕ್ಕೆ ಒಯ್ಯಬಹುದು,ಒಂದು ಟ್ರ್ಯಾಕ್ಟರ್ ಹೂಳಿಗೆ 75 ರುಪಾಯಿ ಬೆಲೆ ನಿಗದಿ ಮಾಡಿದ್ರೆ ಆ ಹಣದಿಂದ ಜೆಸಿಬಿ ಬಾಡಿಗೆ ನೀಡಬಹುದು.

ಆರ್ಥಿಕ ನೆರವಿಗೆ ಬೇರೆ ಬೇರೆ ಕಡೆಗಳಲ್ಲಿ ಪ್ರಯತ್ನ ನಡೆದಿತ್ತು. ಆದರೆ ಯಾವ ನೆರವು ದೊರೆಯಲಿಲ್ಲ. ಆದರೆ ಕೆರೆ ಕನಸು ಕಂಡ ಊರವರು 2018 ಎಪ್ರಿಲ್ 18ರ ಬಸವ ಜಯಂತಿ ಶುಭ ದಿನದಂದು ಕೆಲಸ ಆರಂಭಿಸಿದರು. ಫಲವತ್ತಾದ ಹೂಳು ಒಯ್ಯಲು ರೈತರು ಟ್ರ್ಯಾಕ್ಟರ್ ತಂದರು. ದಿನಕ್ಕೆ 300-350 ಟ್ರಾಕ್ಟರ್ ಲೋಡ್ ಮಣ್ಣು ಸಾಗಾಟ ನಡೆಯಿತು. ಇದೇ ಮಾದರಿಯಲ್ಲಿ 2019ರಲ್ಲಿ ಮತ್ತೆ ಕೆಲಸ ನಡೆಯಿತು. ಸುಮಾರು 40 ಎಕರೆ ಪ್ರದೇಶ 20 ಅಡಿ ಆಳವಾಯ್ತು. ಒಳ್ಳೆಯ ಮಳೆ ಸುರಿದು ಕೆರೆ ಭರ್ತಿ ಆಯ್ತು. ಕೆರೆ ದಂಡೆಯಲ್ಲಿ ಸಸಿ ನಾಟಿ ನಡೆಯಿತು.

ಅಪ್ಪಟ ಎರೆ ಸೀಮೆಯ ಬರದ ನೆಲೆಯಲ್ಲಿ ಒಂದು ಕೆರೆ ಕಾಯಕ ಜನಮನದಲ್ಲಿ ಈಗ ಉತ್ತಮ ಬದಲಾವಣೆ ತಂದಿದೆ. ಒಮ್ಮೆ ಸ್ನೇಹಿತರೊಬ್ಬರು ತಮ್ಮ ಕಂಪನಿಯ ಸಿ ಎಸ್ ಆರ್ ಹಣ ಇದೆ, ಏನು ಮಾಡಬೇಕು? ಕೇಳಿದರು. ತಕ್ಷಣ ನರೇಗಲ್ ಹೆಸರು ಸೂಚಿಸಿದೆ. ಅಲ್ಲಿನ ಬಡ ಶಾಲೆಗೆ ಹತ್ತು ಹದಿನೈದು ಲಕ್ಷ ರೂಪಾಯಿಯ ಸಾಮಗ್ರಿ ನೀಡಿದರು. ಮಕ್ಕಳ ಕಲಿಕೆಗೆ ಅನುಕೂಲವಾಯಿತು. ಒಂದು ಕೆರೆ ಕಾಯಕ,  ಮಳೆ ನೀರು, ಅಂತರ್ಜಲ ಸುಧಾರಣೆ ಜೊತೆಗೆ ಹಲವು ಜನ ಒಟ್ಟಿಗೆ ಸೇರಿ ಗ್ರಾಮ ಅಭಿವೃದ್ಧಿಗೆ ಯೋಚಿಸುವ ಕಾರಣವಾಗಿದೆ.

ಊರಿನ ಜನ ನನಗೂ ಕಳೆದ ಐದಾರು ವರ್ಷಗಳಿಂದ ಒಳ್ಳೆಯ ಸಂಪರ್ಕದಲ್ಲಿ ಇದ್ದಾರೆ. ಈ ದಾರಿಯಲ್ಲಿ ಹೋಗುವಾಗ ಬಿಸಿ ಬಿಸಿ ಜೋಳದ ರೊಟ್ಟಿ ಊಟ ನೀಡುತ್ತಾ ಜಲಮಿತ್ರರ ಆತ್ಮೀಯ ಒಡನಾಟ ಬೆಳೆದಿದೆ. ಅಬ್ಬಾ! ಒಂದು ಕೆರೆ ಏನೆಲ್ಲ ಸಾಧ್ಯತೆ ಹೇಳಿತು.

ನಿಮಗೂ ಗೊತ್ತು. ಈಗ ಯಾವುದೇ ರಸ್ತೆಗೆ ಹೋದರೆ ಪೈಪ್ ಲೈನ್ ಕಾಮಗಾರಿ ಕಾಣುತ್ತಿದೆ. ಕಾಡು, ಕೆರೆ, ನದಿ ಹಾಳು ಮಾಡುತ್ತಾ ಅದೆಷ್ಟು ಊರಿಗೆ ಖಾಲಿ ಪೈಪ್ ಯೋಜನೆಗಳು ಜಾರಿಯಾಗಿವೆಯೋ ಗೊತ್ತಿಲ್ಲ. ಎತ್ತಿನ ಹೊಳೆಯಂತೆ ಹಲವು ಯೋಜನೆ ಕಾಣುತ್ತಿವೆ. ಮೊದಲು ಪ್ರತೀ ಹಳ್ಳಿಯ ಕೆರೆ ಉಳಿಸುವ ಕೆಲಸ ಅಗತ್ಯ.ಆದರೆ ಊರ ಕೆರೆ ಉಳಿಸಿ ನೀರ ನೆಮ್ಮದಿ ಹುಡುಕಲು ಇರುವ ದಾರಿ ಮರೆತು ಮತ್ತೇನೋ ಮಾಡುತ್ತಿದ್ದೇವೆ.

ವಿ. ಸೂ. ಈ ಪೋಸ್ಟ್ ಹಾಕಿದ ಕ್ಷಣದಲ್ಲಿ ನರೇಗಲ್ ಶಿವನ ಗೌಡರು ಫೋನ್ ಮಾಡಿದರು. ಕೆರೆ ಭರ್ತಿ ಬಳಿಕ ಸುಮಾರು 40-50ವರ್ಷಗಳಿಂದ ನೀರೇ ಇಲ್ಲದ ತೆರೆದ ಬಾವಿಯಲ್ಲಿ ಈಗ ಹನ್ನೆರಡು ಅಡಿ ನೀರಿದೆಯಂತೆ!, ಜಲ ಖುಷಿಗೆ ಇನ್ನೆಂಥ ಸಾಕ್ಷಿ ಬೇಕು ?

LEAVE A REPLY

Please enter your comment!
Please enter your name here